ಫ್ಯಾಕ್ಟ್‌ಚೆಕ್: ಯುವತಿಯನ್ನು ಕೊಂದು ಸೂಟ್ ಕೇಸ್‌ನಲ್ಲಿ ತುಂಬಿದ ಭಗ್ನ ಪ್ರೇಮಿ ಪ್ರಕರಣ ಲವ್ ಜಿಹಾದ್ ಎಂಬುದು ಸುಳ್ಳು

ಯುವತಿಯೊಬ್ಬಳನ್ನು ಕೊಲೆ ಮಾಡಿ ಶವವನ್ನು ಸೂಟ್‌ಕೇಸ್‌ನಲ್ಲಿ ಹಾಕಿ ಯಾರಿಗೂ ಗೊತ್ತಾಗದ ಹಾಗೆ ಎಸ್ಕೇಪ್ ಆಗಲು ಯತ್ನಿಸುತ್ತಿದ್ದ  ಎಂದು ಆರೋಪಿಸಿ ಯುವಕನೊಬ್ಬನನ್ನು ಸಾರ್ವಜನಿಕರು ಹಿಡಿದು ಬಂಧಿಸಿರುವ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಆತನ ಬಗ್ಗೆ ಜನರು ವಿಚಾರಿಸಿದಾಗ ಯುವಕನು ತನ್ನ ಹೆಸರು ‘ಅಯಾನ್’ ಎಂದು ಹೇಳಿದ್ದಾನೆ. ಇದನ್ನು ‘ಲವ್ ಜಿಹಾದ್’ ಘಟನೆ ಎಂಬಂತೆ ಈ ವಿಡಿಯೋ ಹರಿದಾಡುತ್ತಿದೆ. ಇದರ ಕುರಿತಾಗಿ ಸಾಮಾಜಿಕ ಮಾಧ್ಯಮಗಳಲ್ಲಿ ವಿಡಿಯೊ ವೈರಲ್ ಆಗುತ್ತಿದ್ದು ”  ‘ಲವ್ ಜಿಹಾದ್ ‘ ಅಂತಿಮ ಹಂತ ಇದು ಎಂಬ ಹೇಳಿಕೆಯೊಂದಿಗೆ ವಿಡಿಯೊ ವೈರಲ್ ಆಗಿದೆ.

@BhagwaHindu21 ಹೆಸರಿನ ಟ್ವಿಟರ್ ಅಕೌಂಟ್‌ನಿಂದ ಟೀಟ್ ಮಾಡಲಾಗಿದ್ದು’ಲವ್ ಜಿಹಾದ್’  ಎಂಬ ಪ್ರತಿಪಾದನೆಯೊಂದಿಗೆ  ವೀಡಿಯೊವನ್ನು ಹಂಚಿಕೊಂಡಿದೆ. (ಆರ್ಕೈವ್ ಲಿಂಕ್)

ಇನ್ನೊಂದು ಲವ್ ಜಿಹಾದ್ (ಮೇರಾ ವಾಲಾ ಅಚ್ಚಾ ಹೈ ಪ್ಯಾರ್ ಹೈ ಕರೇಗಾ) “ನಾನು ಚೆನ್ನಾಗಿ ಇರ್ತೀನಿ ಅವನು ನನ್ನನ್ನು ತುಂಬಾ ಪ್ರೀತಿ ಮಾಡ್ತಾನೆ” ಅನ್ನೋ ಹುಡುಗಿಯರ ದೇಹ ಹೆಚ್ಚಾಗಿ ಸೂಟ್‌ಕೇಸ್‌ಗಳಲ್ಲಿ ಇರುತ್ತದೆ, ಅಥವಾ ಉಳಿದದ್ದನ್ನು ಮಾರುಕಟ್ಟೆಯಲ್ಲಿ ಮಾರಾಟ ಮಾಡಲಾಗುತ್ತದೆ. ಹಿಂದೂ ಹುಡುಗಿಯರು ತಮ್ಮ ಹೆತ್ತವರ ಬಗ್ಗೆ ಯಾವಾಗ ಕಾಳಜಿ ವಹಿಸುತ್ತಾರೆಂದು ಯಾವಾಗ ಅರ್ಥಮಾಡಿಕೊಳ್ಳುತ್ತಾರೆ? ಉತ್ತರಾಖಂಡದಲ್ಲಿ ಈ ಲವ್ ಜಿಹಾದ್ ಅತ್ಯಂತ ವೇಗವಾಗಿ ನಡೆಯುತ್ತಿದೆ. ಎಂದು ಟ್ವೀಟ್ ಮಾಡಿದ್ದಾರೆ.

ಹರಿದ್ವಾರದಲ್ಲಿರುವ ಕಲಿಯಾರ್ ಗೆಸ್ಟ್ ಹೌಸ್‌ನಲ್ಲಿ ವಿಡಿಯೋ ರೆಕಾರ್ಡ್ ಮಾಡಲಾಗಿದೆ ಎಂದು ಕೆಲವು ಬಳಕೆದಾರರು ಹೇಳಿದ್ದಾರೆ.  @ashu_nauty’   ಎಂಬ ಟ್ವಿಟರ್ ಹ್ಯಾಂಡಲ್ ಕೂಡ ಕ್ಲಿಪ್ ಅನ್ನು ಪೋಸ್ಟ್ ಮಾಡಿದ್ದು, ಯುವತಿಯನ್ನು ‘ಕಾಜಲ್’ ಮತ್ತು  ಹಂತಕನನ್ನು ‘ಗುಲ್ಶರ್’ ಎಂದು ಗುರುತಿಸಲಾಗಿದೆ. (ಆರ್ಕೈವ್ ಲಿಂಕ್)

ಫೇಸ್‌ಬುಕ್ ಮತ್ತು ಟ್ವಿಟ್ಟರ್‌ ನಲ್ಲಿ ಅದೇ ಪ್ರತಿಪಾದನೆಯೊಂದಿಗೆ ಹಲವು ವೀಡಿಯೊಗಳನ್ನು ಶೇರ್ ಮಾಡಿಕೊಂಡಿವೆ.

“ಅಬ್ದುಲ್‌ನೊಂದಿಗೆ ಪ್ರೀತಿಯಲ್ಲಿ ಬೀಳುವುದು ಎಂದರೆ ಸೂಟ್‌ಕೇಸ್‌ನಲ್ಲಿ ಕೊನೆಗೊಳ್ಳುವುದು” ಎಂದು ಬರೆದು ಇನ್‌ಸ್ಟಾಗ್ರಾಮ್ ಬಳಕೆದಾರರು ವೀಡಿಯೊವನ್ನು ಹಂಚಿಕೊಂಡಿದ್ದಾರೆ.

ಇಂತಹ ಪ್ರಕರಣಗಳು ಬೆಳಕಿಗೆ ಬಂದ ತಕ್ಷಣ “ಲವ್ ಜಿಹಾದ್” ಆರೋಪಗಳು ಕೇಳಿ ಬರುತ್ತಿರುತ್ತವೆ, ಹಾಗಾಗಿ ಈ ಕೊಲೆ ನಿಜವಾಗಿಯೂ ಲವ್ ಜಿಹಾದ್ ಕಾರಣಕ್ಕೆ ನಡೆದಿದೆಯಾ ಎಂದು ಘಟನೆಯ ಸತ್ಯಾಸತ್ಯತೆಗಳನ್ನು ಪರಿಶೀಲಿಸೋಣ.

ಫ್ಯಾಕ್ಟ್‌ಚೆಕ್:

ಘಟನೆಯ ವಿವರ:

ಘಟನೆಗೆ ಸಂಬಂಧಿಸಿದಂತೆ ಗೂಗಲ್‌ನಲ್ಲಿ ಕೀವರ್ಡ್ ಸಹಾಯ ಪಡೆದು ಸರ್ಚ್ ಮಾಡಿದಾಗ  ಘಟನೆಯನ್ನು ವರದಿ ಮಾಡಲಾದ ಕೆಲವು  ಲೇಖನಗಳು ಲಭ್ಯವಾಗಿದ್ದು, ದೈನಿಕ್ ಜಾಗರಣ್ ಪ್ರಕಾರ, ಈ ಘಟನೆ ಉತ್ತರಾಖಂಡದ ರೂರ್ಕಿಯಲ್ಲಿ ನಡೆದಿದೆ. ಯುವತಿ ಮದುವೆಯಾಗಲು ನಿರಾಕರಿಸಿದ ಹಿನ್ನೆಲೆಯಲ್ಲಿ ಯುವಕನೊಬ್ಬ ತಾನು ಪ್ರೀತಿಸಿದ ಹುಡುಗಿಯನ್ನು ಕೊಂದಿದ್ದಾನೆ. ಸಂಜೆ 5 ಗಂಟೆ ಸುಮಾರಿಗೆ ಇಬ್ಬರೂ ಕಲಿಯಾರ್‌ನಲ್ಲಿರುವ ಹೋಟೆಲ್‌ಗೆ ಬಂದಿದ್ದರು. ಮೂರು ಗಂಟೆಗಳ ನಂತರ ವ್ಯಕ್ತಿ ಸೂಟ್‌ಕೇಸ್‌ನೊಂದಿಗೆ ಹೊಟೇಲ್‌ನಿಂದ ಹೊರಟಿದ್ದನ್ನು ನೋಡಿದ ಸಿಬ್ಬಂದಿಗೆ ಅನುಮಾನ ಬಂದಿತು. ಬಲವಂತವಾಗಿ ಸೂಟ್‌ಕೇಸ್ ತೆರೆದಾಗ ಮಹಿಳೆಯ ಶವ ಪತ್ತೆಯಾಗಿದೆ.

ಆರಂಭದಲ್ಲಿ ಆರೋಪಿ ಗುಲ್ಜೇಬ್ ಹೋಟೆಲ್ ಸಿಬ್ಬಂದಿಗೆ ಸಿಕ್ಕಿಬಿದ್ದಾಗ ಆತ ಹೇಳಿದ್ದು ಬೇರೆಯದೇ ಕಥೆ. ಇಬ್ಬರೂ ಆತ್ಮಹತ್ಯೆ ಮಾಡಿಕೊಳ್ಳಲು ಬಂದಿದ್ದೇವೆ ಎಂದು ಹೇಳಿದ್ದಾನೆ. ಆದರೆ, ಆಕೆ ಮೊದಲೇ ವಿಷ ಸೇವಿಸಿ ಸಾವನ್ನಪ್ಪಿದ್ದಾಳೆ. ಆಕೆಯ ಶವವನ್ನು ಗಂಗ್ನಾಹರ್‌ನಲ್ಲಿ ವಿಲೇವಾರಿ ಮಾಡಿದ ನಂತರ ತಾನೂ ಆತ್ಮಹತ್ಯೆ ಮಾಡಿಕೊಳ್ಳುತ್ತೇನೆ ಎಂದು ಹೇಳಿದ್ದ. ಇನ್ನು ಗುಲ್ಜೇಬ್ ಸಂಪೂರ್ಣ ಪ್ಲಾನ್ ಮಾಡಿಕೊಂಡೇ ಕೃತ್ಯ ನಡೆಸಿದ್ದ ಎಂದು ಪೊಲೀಸರು ತಿಳಿಸಿದ್ದಾರೆ. ಸೂಟ್‌ಕೇಸ್ ಅನ್ನು ಈ ಕಾರಣಕ್ಕಾಗಿಯೇ ರೆಡಿ ಮಾಡಿ ಇಟ್ಟುಕೊಂಡಿದ್ದನಂತೆ ಎಂದು ಈ ಟಿವಿ ಭಾರತ್ ಕನ್ನಡ ವರದಿ ಮಾಡಿದೆ.

ಘೋಷಿಯನ್ ಜ್ವಾಲಾಪುರದ ನಿವಾಸಿ ಸನ್ನವರ್ ಅವರ ಪುತ್ರ ಗುಲ್ಜೆಬ್ ಎಂಬಾತ ರೂರ್ಕಿಯ ಪಿರಾನ್ ಕಲಿಯಾರ್‌ನಲ್ಲಿರುವ ಅತಿಥಿ ಗೃಹದಲ್ಲಿ ಕೊಠಡಿ ತೆಗೆದುಕೊಂಡಿದ್ದ. ಗೆಸ್ಟ್ ಹೌಸ್ ಗೆ ತನ್ನ ಗೆಳತಿ ರಂಷಾ ಜೊತೆ ಆತ ಬಂದಿದ್ದಾನೆ. ಕೆಲವು ಗಂಟೆಗಳ ನಂತರ ಗುಲ್ಜೆಬ್ ಭಾರವಾದ ಸೂಟ್‌ಕೇಸ್‌ನೊಂದಿಗೆ ಹೋಟೆಲ್‌ನಿಂದ ಹೊರಬಂದಿದ್ದಾನೆ. ಹೋಟೆಲ್ ಸಿಬ್ಬಂದಿ ಅವನ ವರ್ತನೆ ನೋಡಿ ಶಂಕಿಸಿದ್ದಾರೆ. ಬಳಿಕ ಆತನನ್ನು ಹಿಡಿದು ಸೂಟ್‌ಕೇಸ್ ತೆರೆದು ನೋಡಿದಾಗ ಅದರಲ್ಲಿ ಯುವತಿಯ ಶವ ಪತ್ತೆಯಾಗಿದೆ.

ಹೋಟೆಲ್ ಸಿಬ್ಬಂದಿ ಆರೋಪಿಯನ್ನು ಹಿಡಿದು ಪೊಲೀಸರಿಗೆ ಕರೆ ಮಾಡಿ ಮಾಹಿತಿ ನೀಡಿದ್ದಾರೆ. ಮಾಹಿತಿ ಮೇರೆಗೆ ಪೊಲೀಸರು ಆತನನ್ನು ವಶಕ್ಕೆ ಪಡೆದು ಯುವತಿಯ ಶವವನ್ನು ಮರಣೋತ್ತರ ಪರೀಕ್ಷೆಗೆ ಕಳುಹಿಸಿದ್ದಾರೆ. ಮರುದಿನ ರೂರ್ಕಿ ಪೊಲೀಸರು ಘಟನೆಯ ಬಗ್ಗೆ ಸತ್ಯಾಂಶ ಕಂಡುಕೊಂಡಿದ್ದಾರೆ. ಆರೋಪಿ ಗುಲ್ಜೆಬ್ ಯುವತಿಯನ್ನು ಕೊಂದಿದ್ದಾನೆ ಎಂದು ಗ್ರಾಮಾಂತರ ಎಸ್ಪಿ ಪ್ರಮೇಂದ್ರ ದೋಭಾಲ್ ತಿಳಿಸಿದ್ದಾರೆ.

ಯುವತಿಯ ಕುಟುಂಬಸ್ಥರು ಆರೋಪಿ ಜೊತೆ ಮದುವೆಗೆ ವಿರೋಧ ವ್ಯಕ್ತಪಡಿಸಿದ್ದರಂತೆ. ಯುವತಿ ಕೂಡ ಆಕೆಯ ಕುಟುಂಬದ ನಿರ್ಧಾರಕ್ಕೆ ಬೆಂಬಲ ಸೂಚಿಸಿದ್ದಳಂತೆ. ಇದರಿಂದ ಕೋಪಗೊಂಡ ಪ್ರೇಮಿ, ಗೆಳತಿಯನ್ನು ಕೊಲೆ ಮಾಡಿ, ಶವವನ್ನು ಸೂಟ್‌ಕೇಸ್‌ನಲ್ಲಿ ಹಾಕಿ, ವಿಲೇವಾರಿ ಮಾಡಲು ಮುಂದಾದ ವೇಳೆ ಸಿಕ್ಕಿಬಿದ್ದಿದ್ದಾನೆ.

ಹೆಚ್ಚಿನ ಮಾಹಿತಿಗಾಗಿ ಆಲ್ಟ್ ನ್ಯೂಸ್ ಕಲಿಯಾರ್ ಪೊಲೀಸ್ ಠಾಣೆಯ ಪೊಲೀಸ್ ಅಧಿಕಾರಿಗಳನ್ನು ಸಂಪರ್ಕಿಸಿದ್ದು. ಇವರಿಬ್ಬರು ಒಂದೇ ಸಮುದಾಯದವರಾಗಿದ್ದು, ಹಲವು ವರ್ಷಗಳಿಂದ ಸಂಬಂಧ ಹೊಂದಿದ್ದರು ಎಂದು ಎಸ್‌ಒ ಧರ್ಮೇಂದ್ರ ರಾಠಿ ತಿಳಿಸಿದ್ದಾರೆ. ಯುವತಿ ತಂದೆ ನೀಡಿದ ಮಾಹಿತಿ ಮೇರೆಗೆ  ಪ್ರಕರಣವನ್ನು ದಾಖಲಿಸಿ  ಆರೋಪಿಯನ್ನು ಬಂಧಿಸಿ ಜೈಲಿಗೆ ಕಳುಹಿಸಲಾಗಿದೆ ಎಂದು ಮಾಹಿತಿ ನೀಡಿದ್ದಾರೆ.

ಒಟ್ಟಾರೆಯಾಗಿ ಹೇಳುವುದಾದರೆ ಒಂದೇ ಸಮುದಾಯದ ಯುವತಿ ಮತ್ತು ಆಕೆಯನ್ನು ಕೊಲೆ ಮಡಿದ ಆರೋಪಿ ಇಬ್ಬರು ಒಂದೇ ಸಮುದಾಯಕ್ಕೆ ಸೇರಿದ್ದವರಾಗಿದ್ದು, ದೂರದ ಸಂಬಂಧಿಯೂ ಆಗಿದ್ದರು ಆದರೆ ಯುವತಿ ಮತ್ತು ಯುವತಿಯ ಕುಟುಂಬದವರು ಮದುವೆಗೆ ಸಮ್ಮತಿ ಸೂಚಿಸದ ಕಾರಣ ಕೋಪಗೊಂಡ ಯುವಕ ಯುವತಿಯನ್ನು ಕೊಲೆ ಮಾಡಿದ್ದಾನೆ. ಆದರೆ ಇದನ್ನು ಲವ್ ಜಿಹಾದ್ ಎಂದು ತಪ್ಪಾಗಿ ಕೋಮು ದ್ವೇಷ ಹರಡುವ ದುರುದ್ದೇಶದಿಂದ ಹಂಚಿಕೊಂಡಿದ್ದಾರೆ. ಹಾಗಾಗಿ ವಿಡಿಯೊ ಪೋಸ್ಟ್‌ನಲ್ಲಿ ಮಾಡಲಾದ ಪ್ರತಿಪಾದನೆ ಸುಳ್ಳಾಗಿದೆ.

ಕೃಪೆ: ಆಲ್ಟ್‌ನ್ಯೂಸ್


ಇದನ್ನು ಓದಿರಿ: ಫ್ಯಾಕ್ಟ್‌ಚೆಕ್: ನೃತ್ಯ ಮಾಡುತ್ತಿರುವ ಮಹಿಳೆ ರಾಜಸ್ಥಾನದ ಶ್ರೀಗಂಗಾನಗರದ ಜಿಲ್ಲಾಧಿಕಾರಿಯಲ್ಲ!


 

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights