Fact check: ಮಂಡ್ಯದ ವಿದ್ಯಾರ್ಥಿನಿ ‘ಮುಸ್ಕಾನ್’ ರಾಹುಲ್ ಗಾಂಧಿಯೊಂದಿಗೆ ಫೋಟೋ ತೆಗೆಸಿಕೊಂಡಿರುವುದು ನಿಜವೆ?

ವಿದ್ಯಾರ್ಥಿಗಳು ಹಿಜಾಬ್ ಧರಿಸಿ ತರಗತಿಗಳಿಗೆ ಹಾಜರಾಗುವುದನ್ನು ನಿಷೇಧಿಸಿದ ಬಳಿಕ ಕರ್ನಾಟಕ ಗೊಂದಲದ ಗೂಡಾಗಿದೆ. ಮುಸ್ಲಿಂ ವಿದ್ಯಾರ್ಥಿಗಳ ಸಾಂವಿಧಾನಿಕ ಪ್ರತಿಭಟನೆಯನ್ನು ಹತ್ತಿಕ್ಕಲು ಬಲಪಂಥೀಯ ಸಂಘಟನೆಗಳು ವಿದ್ಯಾರ್ಥಿಗಳನ್ನು ಪ್ರಚೋದಿಸಿದವು. ಉನ್ಮಾದಿತರಾದ ವಿದ್ಯಾರ್ಥಿಗಳು ಹಿಜಾ‌ಬ್ ವಿರೋಧಿಸಿ ಕೇಸರಿ ಶಾಲು ಧರಿಸಿ ಬಂದಿದ್ದು ಪ್ರಕರಣ ತೀವ್ರಗೊಳ್ಳಲು ಕಾರಣವಾಗಿದೆ.

ಈ ಪ್ರತಿಭಟನೆಗಳ ಸಂದರ್ಭದಲ್ಲಿ ಮಂಡ್ಯದ ಪಿಇಎಸ್ ಕಾಲೇಜಿನಲ್ಲಿ ಕೇಸರಿ ಶಾಲು ಹಾಕಿದ್ದ ಯುವಕರ ಗುಂಪೊಂದು ಮುಸ್ಲಿಂ ವಿದ್ಯಾರ್ಥಿಯ ಮೇಲೆರಗಲು ಬಂದರು. ಜೈ ಶ್ರೀರಾಮ್ ಎಂದು ಬಂದವರ ಎದುರು ತಿರುಗಿಬಿದ್ದ ಏಕಾಂಗಿ ವಿದ್ಯಾರ್ಥಿನಿಯ ವಿಡಿಯೊ ವೈರಲ್ ಆಗಿದೆ.

ಬಲಪಂಥೀಯರಿಂದ ಪ್ರೇರೇಪಿತರಾದ ಹುಡುಗರು ‘ಜೈ ಶ್ರೀ ರಾಮ್’ ಘೋಷಣೆಗಳನ್ನು ಕೂಗುತ್ತ ನುಗ್ಗಿದಾಗ ವಿದ್ಯಾರ್ಥಿನಿಯು ‘ಅಲ್ಲಾ-ಹು-ಅಕ್ಬರ್’ ಎಂದು ಕೂಗಿದ ವಿಡಿಯೊ ಭಾರಿ ಸಂಚಲನ ಮೂಡಿಸಿತು. ಈ ವಿದ್ಯಾರ್ಥಿನಿಯನ್ನು ಬೀಬಿ ಮುಸ್ಕಾನ್ ಖಾನ್ ಎಂದು ಗುರುತಿಸಲಾಗಿದೆ. ಮುಸ್ಕಾನ್‌ ಘೋಷಣೆಯ ವಿಡಿಯೊ ಟ್ವಿಟರ್‌ನಲ್ಲಿ #Sherni (ಸಿಂಹಿಣಿ) ಎಂಬ ಹ್ಯಾಶ್‌ಟ್ಯಾಗ್‌ನೊಂದಿಗೆ ಟ್ರೆಂಡ್ ಆಗಿದೆ.

ಈ ಹಿನ್ನೆಲೆಯಲ್ಲಿ, ರಾಹುಲ್ ಗಾಂಧಿ ಅವರ ಪಕ್ಕದಲ್ಲಿ ನಿಂತಿರುವ ಮಹಿಳೆಯ ಚಿತ್ರವನ್ನು ಸಾಮಾಜಿಕ ಮಾಧ್ಯಮ ವೇದಿಕೆಗಳಲ್ಲಿ ವ್ಯಾಪಕವಾಗಿ ಹಂಚಿಕೊಳ್ಳಲಾಗುತ್ತಿದ್ದು, ಈಕೆ “ಹಿಜಾಬ್ ಧರಿಸಿರುವ ಸಿಂಹಿಣಿ” ಎಂದು ಬಿಂಬಿಸಲಾಗಿದೆ. ಕರ್ನಾಟಕದಾದ್ಯಂತ ನಡೆಯುತ್ತಿರುವ ವ್ಯಾಪಕ ಪ್ರತಿಭಟನೆಗಳು ಕಾಂಗ್ರೆಸ್ ಪಕ್ಷದ ಯೋಜಿತ ಪಿತೂರಿ ಎಂದು ಪ್ರಕರಣವನ್ನು ತಿರುಚಲಾಗುತ್ತಿದೆ.

ಈ ಫೋಟೋ ಫೇಸ್‌ಬುಕ್‌ನಲ್ಲಿ ಹೆಚ್ಚು ವೈರಲ್ ಆಗಿದೆ. #ToolKitInAction ಎಂಬ ಹ್ಯಾಶ್‌ಟ್ಯಾಗ್‌ ಹಂಚಿಕೊಳ್ಳಲಾಗುತ್ತಿದೆ. ಆದರೆ ಈ ಫೋಟೋದ ಸತ್ಯಾಸತ್ಯತೆಯನ್ನು ಆಲ್ಟ್‌ ನ್ಯೂಸ್‌ ಬಯಲಿಗೆಳೆದಿದೆ.

ಫೋಟೋದಲ್ಲಿ ಇರುವವರು ಯಾರು?

ವೈರಲ್ ಚಿತ್ರವನ್ನು ಗೂಗಲ್ ರಿವರ್ಸ್ ಇಮೇಜ್ ಮಾಡಿದಾಗ ಈ ಫೋಟೋ ಅಂಬಾ ಪ್ರಸಾದ್ ಅವರ ಅಧಿಕೃತ ಫೇಸ್‌ಬುಕ್ ಪುಟದಲ್ಲಿ ಅಪ್‌ಲೋಡ್ ಆಗಿರುವುದು ಕಂಡುಬಂದಿದೆ. ಅಂಬಾ ಪ್ರಸಾದ್ ಅವರು ಜಾರ್ಖಂಡ್‌ನ ಬರ್ಕಗಾಂವ್‌ನ ಕಾಂಗ್ರೆಸ್ ಶಾಸಕರಾಗಿದ್ದಾರೆ. ಫೆಬ್ರವರಿ 2022ರಲ್ಲಿ ಅಂಬಾ ಪ್ರಸಾದ್ ಅವರು ಜಾರ್ಖಂಡ್‌ನ ಇತರ ಕಾಂಗ್ರೆಸ್ ಶಾಸಕರೊಂದಿಗೆ ರಾಹುಲ್ ಗಾಂಧಿಯನ್ನು ಭೇಟಿಯಾದಾಗ ತೆಗೆಸಿಕೊಂಡಿರುವ ಫೋಟೋವನ್ನು ತಪ್ಪಾಗಿ ಹರಿಬಿಡಲಾಗಿದೆ. ಈ ಭೇಟಿಯ ಫೋಟೋಗಳನ್ನು ಕಾಂಗ್ರೆಸ್‌ನ ಅಧಿಕೃತ ಟ್ವಿಟರ್ ಹ್ಯಾಂಡಲ್‌ನಲ್ಲಿಯೂ ಕಾಣಬಹುದು.

ನಾವು ಅಂಬಾ ಪ್ರಸಾದ್ ಅವರ ಟ್ವಿಟರ್ ಹ್ಯಾಂಡಲ್ ಅನ್ನು ಸಹ ಪರಿಶೀಲಿಸಿದ್ದೇವೆ. ವೈರಲ್‌ ಫೋಟೋದ ಕುರಿತು ಅವರು ಫೆಬ್ರವರಿ 10ರಂದು ಸ್ಪಷ್ಟನೆಯನ್ನೂ ನೀಡಿ ಟ್ವೀಟ್ ಮಾಡಿದ್ದಾರೆ. ಈ ಬಗ್ಗೆ ತನಿಖೆ ನಡೆಸಲು ಜಾರ್ಖಂಡ್ ಪೊಲೀಸರನ್ನು ಟ್ಯಾಗ್ ಮಾಡಿದ್ದಾರೆ.

ಕಾಂಗ್ರೆಸ್ ಶಾಸಕಿ ಅಂಬಾ ಪ್ರಸಾದ್ ಅವರ ಫೋಟೋವನ್ನು ಮುಸ್ಕಾನ್ ಖಾನ್ ಎಂದು ಬಿಂಬಿಸಿ ದಾರಿತಪ್ಪಿಸಲಾಗುತ್ತಿದೆ. ಜನತಾ ದಳ (ಜಾತ್ಯತೀತ) ಸದಸ್ಯೆ ನಜ್ಮಾ ನಜೀರ್ ಅವರ ಫೋಟೋವನ್ನು ಮುಸ್ಕಾನ್‌ ಎಂದು ತಪ್ಪಾಗಿ ಬಿಂಬಿಸಿ ವೈರಲ್ ಮಾಡಲಾಗಿತ್ತು. ಇದೆಲ್ಲವೂ ಬಲಪಂಥಿಯ ಪ್ರತಿಪಾದಕರು ಹಬ್ಬಿಸುತ್ತಿರುವ ಸುಳ್ಳು ಸುದ್ದಿಗಳು.


ಇದನ್ನು ಓದಿರಿ: Fact check: ಸಾಮಾಜಿಕ ಕಾರ್ಯಕರ್ತೆ ನಜ್ಮಾ ನಜೀರ್ ಫೋಟೊ ಎಡಿಟ್ ಮಾಡಿ ಸುಳ್ಳು ಸುದ್ದಿ ಹಂಚಿಕೆ


 

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights