POST CARD ಪ್ರತಿಪಾದಿಸಿದಂತೆ PSI ಪರೀಕ್ಷೆ ಅಕ್ರಮದಲ್ಲಿ ಆರೋಪಿ ದಿವ್ಯಾ ಜೊತೆ ಡಿಕೆಶಿ ನಂಟಿದೆಯೇ?

ಪಿಎಸ್‌ಐ ನೇಮಕಾತಿ ಹಗರಣದ ತನಿಖೆ ನಡೆಸುತ್ತಿರುವ ಸಿಐಡಿ ಪೊಲೀಸರು ದಿವ್ಯಾ ಹಾಗರಗಿಗಾಗಿ ಹುಡುಕಾಟ ನಡೆಸುತ್ತಿದ್ದಾರೆ. ಇನ್ನೊಂದೆಡೆ  BJP ಟ್ವಿಟರ್‌ ಖಾತೆ ಮತ್ತು ಬಲಪಂಥೀಯ ವಿಚಾರಗಳನ್ನು ಪ್ರತಿಪಾದಿಸುವ POSTCARD ಕನ್ನಡ ಫೇಸ್‌ಬುಕ್‌ ಪೇಜ್‌ ನಲ್ಲಿ ಕಾಂಗ್ರೆಸ್‌ ನಾಯಕ ಡಿ.ಕೆ.ಶಿವಕುಮಾರ್‌ ಅವರ ಹೆಸರನ್ನು ಎಳೆದು ತರಲಾಗಿದೆ.

ಕೆಪಿಸಿಸಿ ಅಧ್ಯಕ್ಷರಾದ ಡಿ.ಕೆ.ಶಿವಕುಮಾರ್ ಮತ್ತು ಆರೋಪಿ ದಿವ್ಯಾ ಹಾಗರಗಿ ಜೊತೆಯಲ್ಲಿ ಇರುವ ಫೋಟೋವನ್ನು ಸಾಮಾಜಿಕ ಮಾಧ್ಯಮಗಳಲ್ಲಿ ವ್ಯಾಪಕವಾಗಿ ಹಂಚಿಕೊಳ್ಳುವ ಮೂಲಕ ಪಿಎಸ್‌ಐ ಹಗರಣದಲ್ಲಿ ಡಿಕೆ ಶಿವಕುಮಾರ್ ಅವರ ನಂಟಿದೆ ಎಂಬ ಪೋಸ್ಟರ್ ಅನ್ನು ಹಂಚಿಕೊಳ್ಳಲಾಗುತ್ತಿದೆ.

” ಪ್ರತಿಯೊಂದು ಹಗರಣ, ಕೊಲೆ ಆರೋಪಿಗಳು, ಅನುಮಾಸ್ಪದ ಸಾವು ಇದೆಲ್ಲದರ ಹಿಂದೆ ಡಿಕೆಶಿ ಜೊತೆಗೆ ಏನಾದರೂ ನಂಟು ಇದ್ದೇ ಇರುತ್ತದೆ ಯಾಕೆ ? ಕಾಂಗ್ರೆಸ್ಸಿಗರೇ ಇದಕ್ಕೆ ನಿಮ್ಮಲ್ಲಿ ಉತ್ತರವಿದೆಯೇ” ಎಂದು ಪೋಸ್ಟರ್‌ವೊಂದನ್ನು POSTCARD ಹಂಚಿಕೊಂಡಿದೆ.

ಹಾಗೆಯೇ BJP ತನ್ನ ಟ್ವಿಟರ್ ಹ್ಯಾಂಡಲ್‌ನಿಂದ ಡಿಕೆ ಶಿವಕುಮಾರ್ ಅವರ ಫೋಟೋವನ್ನು ಪೋಸ್ಟ್‌ ಮಾಡಲಾಗಿದ್ದು, “ಪಿಎಸ್‌ಐ ಹಗರಣದ ಹಿಂದೆ ಕಾಂಗ್ರೆಸ್ ಕೈವಾಡ ಇದೆ” ಎಂದು ಆರೋಪಿಸಲಾಗಿದೆ.

BJP  ಮತ್ತು `ಪೋಸ್ಟ್ ಕಾರ್ಡ್ ಕನ್ನಡ’ ಮಾಡಿರುವ ಪೋಸ್ಟ್‌ನಲ್ಲಿ ಪಿಎಸ್‌ಐ ಹಗರಣದ ಪ್ರಮುಖ ಆರೋಪಿ ದಿವ್ಯಾ ಹಾಗರಗಿ ಜೊತೆ ಡಿಕೆ ಶಿವಕುಮಾರ್ ಮತ್ತು ಕಾಂಗ್ರೆಸ್ ಪಕ್ಷದ ನಂಟು ಇರುವುದು ನಿಜವೇ ? ಮತ್ತು ವ್ಯಾಪಕವಾಗಿ ಹಂಚಿಕೆಯಾಗಿರುವ ಫೋಟೋ ಇತ್ತೀಚಿನದ್ದೆ ಎಂದು ಪರಿಶೀಲಿಸೋಣ.
ಏನ್‌ಸುದ್ದಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ
100 ₹200 ₹500 ₹1000 Others

ಏನಿದು ಹಗರಣ?

ಅಕ್ಟೋಬರ್ 2021 ರಲ್ಲಿ 545 ಪೊಲೀಸ್ ಸಬ್ ಇನ್ಸ್‌ಪೆಕ್ಟರ್ (ಪಿಎಸ್‌ಐ) ನೇಮಕಾತಿಗಾಗಿ ರಾಜ್ಯಾದ್ಯಂತ ಹಲವು ಕೇಂದ್ರಗಳಲ್ಲಿ ಲಿಖಿತ ಪರೀಕ್ಷೆ ನಡೆಸಲಾಗಿತ್ತು. ಸುಮಾರು 54,041 ವಿದ್ಯಾರ್ಥಿಗಳು ಹಾಜರಾಗಿದ್ದರು.  ಈ ಪರೀಕ್ಷೆಯಲ್ಲಿ ಅಭ್ಯರ್ಥಿಗಳಿಂದ ಕೋಟಿ ಕೋಟಿ ಹಣ ಪಡೆದು, ಕೆಲವೊಂದು ಪರೀಕ್ಷಾ ಕೇಂದ್ರದಲ್ಲಿ ಅಭ್ಯರ್ಥಿಗಳಿಗೆ ಪರೀಕ್ಷೆ ಬರೆಯಲು ಸಹಾಯ ಮಾಡಲಾಗಿದೆ ಎಂಬ ಆರೋಪ ಕೇಳಿ ಬಂದಿದೆ.

ಹಗರಣದ ಪ್ರಮುಖ ಆರೋಪಿ ದಿವ್ಯಾ ಹಾಗರಗಿ
ಹಗರಣದ ಪ್ರಮುಖ ಆರೋಪಿ ದಿವ್ಯಾ ಹಾಗರಗಿ

ಈ ಅಕ್ರಮದಲ್ಲಿ ಬಿಜೆಪಿ ನಾಯಕಿ ದಿವ್ಯಾ ಹಾಗರಗಿ ಎಂಬವರು ಶಾಮೀಲಾಗಿರೋ ಆರೋಪ ಕೇಳಿ ಬಂದಿದೆ. ಇವರು ಕಲಬುರಗಿ ಜ್ಞಾನಜ್ಯೋತಿ ಆಂಗ್ಲಮಾಧ್ಯಮ ಶಾಲೆಯ ಒಡತಿ, ಪಿಎಸ್ಐ ನೇಮಕಾತಿ ಪರೀಕ್ಷೆಯ ಅಕ್ರಮದ ಕಿಂಗ್‌ಪಿನ್ ಎಂಬುದು ಸಿಐಡಿ ತನಿಖೆಯಲ್ಲಿ ಬಯಲಾಗಿದೆ. ಇದೀಗ ದಿವ್ಯಾ ಪಿಎಸ್ಐ ನೇಮಕಾತಿ ಅಕ್ರಮ ಪ್ರಕರಣದಲ್ಲಿ ತಲೆ ಮರೆಸಿಕೊಂಡಿದ್ದಾರೆ. ಅವರ ಪತಿಯನ್ನು ಈಗಾಗಲೇ ಸಿಐಡಿ ಪೊಲೀಸರು ಬಂಧಿಸಿದ್ದಾರೆ.

ಫ್ಯಾಕ್ಟ್‌ಚೆಕ್:

ಡಿ.ಕೆ.ಶಿವಕುಮಾರ್ ಜೊತೆಯಲ್ಲಿ ದಿವ್ಯಾ: ಫೋಟೋ ವಾಸ್ತವವೇನು?

ಡಿ.ಕೆ ಶಿವಕುಮಾರ್ ದಿವ್ಯಾ ಹಾಗರಿಗಿಯೊಂದಿಗೆ ಇರುವ ಪೋಟೋವನ್ನು BJP ಮತ್ತು ಪೋಸ್ಟ್‌ ಕಾರ್ಡ್ ತಮ್ಮ ಸೋಶಿಯಲ್ ಮೀಡಿಯಾಗಳಲ್ಲಿ ವ್ಯಾಪಕವಾಗಿ ಹಂಚಿಕೊಳ್ಳುತ್ತಿದ್ದಂತೆ  ಕಾಂಗ್ರೆಸ್ ಪಕ್ಷವು ವೈರಲ್ ಫೋಟೊ ಕುರಿತು ಪ್ರತಿಕ್ರಿಯೆ ನೀಡಿದೆ ಮತ್ತು ಡಿಕೆ ಶಿವಕುಮಾರ್ ಕೂಡ ಪ್ರತಿಕ್ರಿಯಿಸಿದ್ದಾರೆ.

“ನಾನು ಮಂತ್ರಿಯಾಗಿದ್ದಾಗ ನನ್ನನ್ನು ಭೇಟಿಯಾಗಲು ತುಂಬ ಜನ ಬರುತ್ತಿದ್ದರು. 2018 ರಲ್ಲಿ ನಾನು ಮಂತ್ರಿಯಾಗಿದ್ದಾಗ ನರ್ಸಿಂಗ್ ಕಾಲೇಜು ಮಾಲೀಕರ ಸಂಘದ ನಿಯೋಗ ನನ್ನನ್ನು ಭೇಟಿ ಮಾಡಲು ಬಂದಿತ್ತು. ಅದರಲ್ಲಿ ಇವರೂ ಇದ್ದರು. ಇದೊಂದು ಔಪಚಾರಿಕ ಭೇಟಿಯಾಗಿತ್ತು. ಅವರು ವಿಷಯ ಏನು ಎಂದು ತಿಳಿಸಿ ಮಾತನಾಡಿ ಹೋದರು. ನನ್ನೊಂದಿಗೆ ಫೋಟೋದಲ್ಲಿ ಇದ್ದಾರೆ ಎಂಬ ಕಾರಣಕ್ಕೆ ತನಿಖೆ ನಡೆಸುವುದಾದರೆ ನಡೆಸಲಿ, ನಾನು ಎಲ್ಲೂ ಓಡಿ ಹೋಗಿಲ್ಲ. ನನಗೂ ನೋಟೀಸ್ ನೀಡಲಿ. ನಾನು ವಿಚಾರಣೆಗೆ ಹಾಜರಾಗುತ್ತೇನೆ” ಎಂದು ಪ್ರತಿಕ್ರಿಯಿಸಿದ್ದಾರೆ.

ವೈರಲ್ ಫೋಟೊ 2018 ರದ್ದು

ಸಾಮಾಜಿಕ ಮಾಧ್ಯಮಗಳಲ್ಲಿ ವೈರಲ್ ಆಗುತ್ತಿರುವ ಫೋಟೊ ಇತ್ತೀಚಿನದ್ದಲ್ಲ. ನಾಲ್ಕು ವರ್ಷಗಳ ಹಿಂದೆ 2018 ರಲ್ಲಿ ಡಿ.ಕೆ.ಶಿವಕುಮಾರ್ ಮಂತ್ರಿಯಾಗಿದ್ದ ವೇಳೆ ಭೇಟಿ ಯಾಗಲು ಬಂದಿದ್ದ ನರ್ಸಿಂಗ್ ಕಾಲೇಜು ಮಾಲೀಕರ ಸಂಘದ ನಿಯೋಗದೊಂದಿಗೆ ದಿವ್ಯಾ ಹಾಗರಗಿ ಇದ್ದರು. ಆಗ ಈ ಫೋಟೋ ಸೆರೆಹಿಡಿಯಲಾಗಿದೆ. ಈ ಫೋಟೋವನ್ನು ಕಾಂಗ್ರೆಸ್ ಪಕ್ಷದ ಸಂಯೋಜಕರಾದ D K Brijesh ಎಂಬುವವರು ನಾಲ್ಕು ವರ್ಷಗಳ ಹಿಂದೆ ತಮ್ಮ ಫೇಸ್‌ಬುಕ್‌ನಲ್ಲಿ ಪೋಸ್ಟ್‌ ಮಾಡಿದ್ದಾರೆ.

ಸಾಮಾಜಿಕ ಮಾಧ್ಯಮಗಳಲ್ಲಿ ಡಿಕೆಶಿ ಮತ್ತು ದಿವ್ಯಾ ಹಾಗರಿಗಿ ಅವರ ಫೋಟೋ ವೈರಲ್ ಆಗುತ್ತಿದಂತೆ, ಫೋಟೊ ಇತ್ತೀಚಿನದಲ್ಲ ಮತ್ತು ಪಿಎಸ್‌ಐ ಪರೀಕ್ಷಾ ಅಕ್ರಮದ ಸಂದರ್ಭದಲ್ಲಿ ಸರ್ಕಾರ ತನಿಖೆಯ ದಿಕ್ಕು ತಪ್ಪಿಸಲು ಈ ರೀತಿ ಮಾಡಲಾಗುತ್ತಿದೆ. ದಿವ್ಯಾ ಹಾಗರಗಿ ಅವರು BJP ಮಹಿಳಾ ಮೋರ್ಚಾದ ಮಾಜಿ ನಾಯಕಿ ಆಗಿದ್ದು. ಈ ಹಗರಣಕ್ಕೂ BJP ನಾಯಕರಿಗೂ ಸಂಬಂಧ ಇದೆ ಎಂದು ಕಾಂಗ್ರೆಸ್ ಪ್ರತಿಕ್ರಿಯೆ ನೀಡಿದೆ.

ದಿವ್ಯಾ ಹಾಗರಗಿ BJP ಸಚಿವರೊಂದಿಗೆ

ದಿವ್ಯಾ ಹಾಗರಗಿ ಆರೋಗ್ಯ ಸಚಿವ ಸುಧಾಕರ್ ಅವರೊಂದಿಗೆ
ದಿವ್ಯಾ ಹಾಗರಗಿ ಅವರು ಆರೋಗ್ಯ ಸಚಿವ ಸುಧಾಕರ್ ಅವರೊಂದಿಗೆ
ದಿವ್ಯಾ ಹಾಗರಗಿ ಸಂಸದೆ ಶೋಭಾ ಕರಂದಾಜ್ಲೆ
ದಿವ್ಯಾ ಹಾಗರಗಿ ಮತ್ತು ಸಂಸದೆ ಶೋಭಾ ಕರಂದ್ಲಾಜೆ

 

ದಿವ್ಯಾ ಹಾಗರಗಿ ಮಾಜಿ ಮುಖ್ಯಮಂತ್ರಿ ಯಡ್ಡಿಯೂರಪ್ಪ ಅವರೊಂದಿಗೆ
ದಿವ್ಯಾ ಹಾಗರಗಿ ಅವರು ಮಾಜಿ ಮುಖ್ಯಮಂತ್ರಿ ಯಡ್ಡಿಯೂರಪ್ಪ ಅವರೊಂದಿಗೆ
ದಿವ್ಯಾ ಹಾಗರಗಿ ಸಾರಿಗೆ ಸಚಿವ ಶ್ರೀರಾಮಲು ಅವರೊಂದಿಗೆ
ದಿವ್ಯಾ ಹಾಗರಗಿ ಅವರು ಸಾರಿಗೆ ಸಚಿವ ಶ್ರೀರಾಮಲು ಅವರೊಂದಿಗೆ

ಈಗ ರಾಜ್ಯದ ಗೃಹ ಸಚಿವರಾದ ಆರಗ ಜ್ಞಾನೇಂದ್ರ ಸಹ ದಿವ್ಯಾ ಹಾಗರಗಿ ಮನೆಗೆ ಹೋಗಿ ಆತಿಥ್ಯ ಸ್ವೀಕರಿಸಿ ಬಂದಿದ್ದಾರೆ ಎಂದು ಹಲವರು ಪೋಸ್ಟ್‌ಅನ್ನು ಹಂಚಿಕೊಳ್ಳುತ್ತಿದ್ದು ಇದರಿಂದ ಸರ್ಕಾರಕ್ಕೆ ಭಾರಿ ಮುಜುಗರ ಉಂಟಾಗಿದೆ.

ಪಿಎಸ್‌ಐ ಪರೀಕ್ಷಾ ಅಕ್ರಮದ ರೂವಾರಿ ದಿವ್ಯಾ ಹಾಗರಗಿ ಅವರೊಂದಿಗೆ ಇದ್ದ ಪೋಟೋವನ್ನು ಅಸ್ತ್ರವಾಗಿ ಬಳಸಿಕೊಂಡು ಮಾಡಿದ್ದ ಆರೋಪವನ್ನು ತಳ್ಳಿ ಹಾಕಿರುವ ಡಿ.ಕೆ ಶಿವಕುಮಾರ್, `ನನ್ನ ಮೇಲೆ ತನಿಖೆ ನಡೆಸಲಿ’ ಎಂದು ಸವಾಲು ಹಾಕಿದ್ದಾರೆ.  ಈಗ ಸಚಿವರಾದಿಯಾಗಿ ದಿವ್ಯಾ ಹಾಗರಗಿ ಅವರೊಂದಿಗೆ ಇರುವ ಫೋಟೋಗಳು ವೈರಲ್ ಆಗುತ್ತಿದ್ದು, ಫೋಟೋಗಳ ಕುರಿತು ಈಗ ಮಾತನಾಡಬೇಕಿರುವುದು BJPಯ ಸರದಿ.

ಒಟ್ಟಾರೆಯಾಗಿ ಹೇಳುವುದಾದರೆ BJP ಟ್ವಿಟರ್‌ ಖಾತೆ ಮತ್ತು ಪೋಸ್ಟ್‌ ಕಾರ್ಡ್ ಕನ್ನಡ ಫೇಸ್‌ಬುಕ್‌ ಪೇಜ್‌ ನಲ್ಲಿ ಡಿ.ಕೆ.ಶಿವಕುಮಾರ್ ಮತ್ತು ದಿವ್ಯಾ ಹಾಗರಗಿ ಅವರ ಹಳೆಯ ಫೋಟೋವನ್ನು ಬಳಸಿ ಪಿಎಸ್‌ಐ ಅಕ್ರಮದಲ್ಲಿ ಡಿಕೆಶಿ ಅವರ ಪಾತ್ರ ಇದೆ ಎಂದು ಬಿಂಬಿಸಲು ಯತ್ನಿಸಲಾಗಿದೆ. 2018ರ ಫೋಟೋವನ್ನು ಈ ಆರೋಪಕ್ಕೆ ಬಳಸಿಕೊಳ್ಳಲಾಗಿದೆ.


ಇದನ್ನು ಓದಿರಿ: ಫ್ಯಾಕ್ಟ್‌ಚೆಕ್: ಡಾಲಿ ಧನಂಜಯ್ JDS ನಿಂದ ಚುನಾವಣಾ ಅಖಾಡಕ್ಕೆ ಎಂಬುದು ಸುಳ್ಳು ಸುದ್ದಿ


 

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights