ಫ್ಯಾಕ್ಟ್‌ಚೆಕ್: ರಂಜಾನ್ ಆಚರಣೆ ವೇಳೆ ಮುಸ್ಲಿಮರು ಮುಂಬೈನ ನಡುರಸ್ತೆಯಲ್ಲಿ ಪ್ರಾರ್ಥನೆ ಸಲ್ಲಿಸಿದ್ದು ಹಳೆಯ ಘಟನೆ

ದೇಶದಾದ್ಯಂತ ಪವಿತ್ರ ರಂಜಾನ್‌  ಮಾಸ ಪೂರ್ಣಗೊಳಿಸಿ ಸಂಭ್ರಮದ ಈದ್ ಆಚರಿಸಿರುವ ಮುಸ್ಲಿಮರು ಶಾಂತಿ, ಸಹಬಾಳ್ವೆ ಮತ್ತು ಸಾಮರಸ್ಯಕ್ಕಾಗಿ ಪ್ರಾರ್ಥಿಸಿದ್ದಾರೆ. ಆದರೆ ರಂಜಾನ್ ಸಂದರ್ಭದಲ್ಲಿ ಮುಸ್ಲಿಮರು ಮುಂಬೈನಲ್ಲಿ ರಸ್ತೆಯಲ್ಲಿ ನಮಾಜ್ ಮಾಡಿದ್ದಾರೆ ಎಂದು ಪ್ರತಿಪಾದಿಸಿ ಪೋಸ್ಟ್ ಒಂದನ್ನು ಹಂಚಿಕೊಳ್ಳಲಾಗುತ್ತಿದೆ.

ಇತ್ತೀಚೆಗೆ ಮುಂಬೈನ ಬಾಂದ್ರಾ ರೈಲ್ವೆ ನಿಲ್ದಾಣದಲ್ಲಿ (ಪಶ್ಚಿಮ) ರಂಜಾನ್‌ನಲ್ಲಿ ರಸ್ತೆಯಲ್ಲೆ ನಮಾಜ್ ಸಲ್ಲಿಸಲಾಗಿದೆ ಎಂಬ ಹೇಳಿಕೆಯೊಂದಿಗೆ ಮುಸ್ಲಿಮರು ರಸ್ತೆಯಲ್ಲಿ ನಮಾಜ್ (ಪ್ರಾರ್ಥನೆ) ಸಲ್ಲಿಸುತ್ತಿರುವ ಫೋಟೋವನ್ನು ಸಾಮಾಜಿಕ ಮಾಧ್ಯಮದಲ್ಲಿ ಹಂಚಿಕೊಳ್ಳಲಾಗುತ್ತಿದೆ.

ಮಹಾರಾಷ್ಟ್ರದ ಉದ್ಧವ್ ಠಾಕ್ರೆ ನೇತೃತ್ವದ ಮಹಾ ವಿಕಾಸ್ ಅಘಾಡಿ (ಎಂವಿಎ) ಸರ್ಕಾರವು ರಸ್ತೆಯಲ್ಲಿ ನಮಾಜ್ ಮಾಡಲು ಅವಕಾಶ ನೀಡುತ್ತಿದೆ ಆದರೆ ಧ್ವನಿವರ್ಧಕಗಳಲ್ಲಿ ಹನುಮಾನ್ ಚಾಲೀಸ್‌ಅನ್ನು (ಹನುಮಾನ್ ದೇವರ ಪ್ರಾರ್ಥನೆ ಪದ್ಯಗಳು) ಪಠಿಸಲು ಅನುಮತಿ ನೀಡುವುದಿಲ್ಲ ಎಂಬ ಹೇಳಿಕೆಯೊಂದಿಗೆ ಫೋಟೋವನ್ನು ಹಂಚಿಕೊಳ್ಳಲಾಗುತ್ತಿದೆ. ಹಾಗಿದ್ದರೆ ಪೋಸ್ಟ್‌ನಲ್ಲಿ ಮಾಡಲಾದ ಪ್ರತಿಪಾದನೆಯನ್ನು ಪರಿಶೀಲಿಸೋಣ.
ಏನ್‌ಸುದ್ದಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ
100 ₹200 ₹500 ₹1000 Others

ಫ್ಯಾಕ್ಟ್‌ಚೆಕ್:

ಫೋಟೋವನ್ನು ಗೂಗಲ್ ರಿವರ್ಸ್ ಇಮೇಜ್ ಮತ್ತು ಯಾಂಡೆಕ್ಸ್ ಸರ್ಚ್ ಮಾಡಲಾಗಿದ್ದು ಗೆಟ್ಟಿ ಇಮೇಜಸ್‌ನಲ್ಲಿ ಘಟನೆಗೆ ಸಂಬಂಧಿಸಿದ ಫೋಟೋಗಳು ಲಭ್ಯವಾಗಿದೆ.

ಈ ಚಿತ್ರವನ್ನು 17 ಆಗಸ್ಟ್ 2012 ರಂದು ಸೆರೆಹಿಡಿಲಾಗಿದ್ದು ಮತ್ತು ಶೀರ್ಷಿಕೆಯು, “ಭಾರತದ ಮುಸ್ಲಿಮರು ಆಗಸ್ಟ್ 17, 2012 ರಂದು ಮುಂಬೈನ ಬಾಂದ್ರಾ ರೈಲು ನಿಲ್ದಾಣದ ಹೊರಗೆ ರಂಜಾನ್ ಕೊನೆಯ ಶುಕ್ರವಾರದಂದು ಪ್ರಾರ್ಥನೆ ಸಲ್ಲಿಸುತ್ತಿದ್ದಾರೆ. ಪ್ರಪಂಚದಾದ್ಯಂತದ ಮುಸ್ಲಿಮರು ಈದ್ ಅಲ್-ಫಿತರ್ ಅನ್ನು ಆಚರಿಸಲು ತಯಾರಿ ನಡೆಸುತ್ತಿದ್ದಾರೆ ಎಂದು ವರದಿಯಾಗಿದೆ.

ರಾಜ್ಯದಲ್ಲಿ ನಡೆಯುತ್ತಿರುವ ಧ್ವನಿವರ್ಧಕದ ವಿವಾದದ ಹಿನ್ನೆಲೆಯಲ್ಲಿ ಮಹಾರಾಷ್ಟ್ರ ನವನಿರ್ಮಾಣ ಸೇನೆ (ಎಂಎನ್‌ಎಸ್) ಪಕ್ಷದ ನಾಯಕ ರಾಜ್ ಠಾಕ್ರೆ ಅವರು ಮಸೀದಿಗಳಲ್ಲಿ ಧ್ವನಿವರ್ಧಕದಲ್ಲಿ ಅಝಾನ್ ನುಡಿಸಿದ್ದಕ್ಕೆ ಪ್ರತೀಕಾರವಾಗಿ ಧ್ವನಿವರ್ಧಕಗಳಲ್ಲಿ ಹನುಮಾನ್ ಚಾಲೀಸಾ ನುಡಿಸುವುದಾಗಿ ಬೆದರಿಕೆ ಹಾಕಿದ್ದರು.

ಆದರೂ ಫೋಟೋ 2012 ರದ್ದು ಮತ್ತು ರಾಜ್ಯದಲ್ಲಿ ನಡೆಯುತ್ತಿರುವ ಧ್ವನಿವರ್ಧಕ ವಿವಾದ ನಡೆಯುತ್ತಿರುವುದರಿಂದ ತಪ್ಪಾಗಿ ಲಿಂಕ್ ಮಾಡಲಾಗುತ್ತಿದೆ ಎಂದು ಕಂಡುಬಂದಿದೆ. ಇದಲ್ಲದೆ, 2012 ರಲ್ಲಿ ಕಾಂಗ್ರೆಸ್ ಪಕ್ಷದ ಪೃಥ್ವಿರಾಜ್ ಚೌವಾಣ್ ರಾಜ್ಯವನ್ನು ಮುನ್ನಡೆಸುತ್ತಿದ್ದರು ಎಂದು ವರದಿಯಲ್ಲಿದೆ.

ಒಟ್ಟಾರೆಯಾಗಿ ಹೇಳುವುದಾದರೆ 2012 ರಲ್ಲಿ  ಮುಸ್ಲಿಮರು ಮುಂಬೈನ ರಸ್ತೆಯಲ್ಲಿ ನಮಾಜ್ ಮಾಡಿರುವ  ಹಳೆಯ ಫೋಟೋವನ್ನು ಪ್ರಸ್ತುತ ಸಂದರ್ಭಕ್ಕೆ ಸಂಬಂಧಿಸಿದೆ ಎಂಬಂತೆ ಬಿಂಬಿಸಿ ಸಾಮಾಜಿಕ ಮಾಧ್ಯಮದಲ್ಲಿ ಹಂಚಿಕೊಳ್ಳಲಾಗುತ್ತಿದೆ. ಹಾಗಾಗಿ ಪೋಸ್ಟ್‌ನಲ್ಲಿ ಮಾಡಲಾದ ಪ್ರತಿಪಾದನೆ ತಪ್ಪುದಾರಿಗೆಳಿಯುವಂತಿದೆ.

ಇದೇ ರೀತಿ ಹಳೆಯ ಮತ್ತು ಸಂಬಂಧವಿಲ್ಲದ ಫೋಟೋ ಮತ್ತು ವಿಡಿಯೊಗಳನ್ನು ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಳ್ಳುವ ಮೂಲಕ ಕೋಮು ಸಾಮರಸ್ಯಕ್ಕೆ ಧಕ್ಕೆ ತರುವಂತಹ ಪೋಸ್ಟ್‌ಗಳನ್ನು ಮಾಡುವವರ ಬಗ್ಗೆ ಎಚ್ಚರದಿಂದ ಇರಬೇಕಾಗಿದೆ.

ಕೃಪೆ: ದಿ ಕ್ವಿಂಟ್

ನಿಮ್ಮ ಸುತ್ತಮುತ್ತ ಮತ್ತು  ಸಾಮಾಜಿಕ ಜಾಲತಾಣಗಳಲ್ಲಿ ಯಾವುದೇ ಸುದ್ದಿಯು ಸುಳ್ಳು ಎಂದು ನಿಮಗೆ ಸಂದೇಹ ಬಂದಿದ್ದರೆ ಅದನ್ನು Ensuddi.com ವಾಟ್ಸಾಪ್  ನಂ 9108969301 ಗೆ ತಲುಪಿಸಿ. ನಾವು ಫ್ಯಾಕ್ಟ್‌ಚೆಕ್ ಮಾಡಿ ಸತ್ಯ ನಿಮ್ಮೆದುರು ಇಡುತ್ತೇವೆ.


ಇದನ್ನು ಓದಿರಿ: ಫ್ಯಾಕ್ಟ್‌ಚೆಕ್: ರಾಜಸ್ಥಾನದಲ್ಲಿ ಈದ್ ದಿನ ಮುಸ್ಲಿಮರು ಭಾರತದ ರಾಷ್ಟ್ರ ಧ್ವಜ ತೆಗೆದು ಇಸ್ಲಾಮಿಕ್ ಧ್ವಜ ಹಾರಿಸಿದ್ದು ನಿಜವಲ್ಲ.


 

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.