ಫ್ಯಾಕ್ಟ್‌ಚೆಕ್ : ಮನೆಯಿಂದಲೇ ಕೆಲಸ ಮಾಡಿ 35,000 ಹಣ ಸಂಪಾದಿಸಿ ಎಂಬ ಜಾಹೀರಾತು ನಕಲಿ
ಮನೆಯಲ್ಲೆ ಕೂತು ಕೆಲಸ ಮಾಡಿದ್ರೆ ಸಂಬಳ ಕೊಡ್ತಾರೆ ಅಂದ್ರೆ ಯಾರುತಾನೆ ಬೇಡ ಅಂತಾರೆ, ಈಗ ಅಂತಹದ್ದೆ ಒಂದು ಜಾಹೀರಾತು ವೈರಲ್ ಆಗಿದೆ. ದೇಶದ ಪ್ರಮುಖ ಪೆನ್ಸಿಲ್ ತಯಾರಿಕಾ ಸಂಸ್ಥೆಯಾದ ಹಿಂದೂಸ್ಥಾನ್ ಪೆನ್ಸಿಲ್ಸ್ ಪ್ರೈವೇಟ್ ಲಿಮಿಟೆಡ್ ಹೊರಡಿಸಿದೆ ಎನ್ನಲಾದ ಜಾಹೀರಾತುಗಳು ಸಾಮಾಜಿಕ ಜಾಲತಾಣಗಳಲ್ಲಿ ಭಾರಿ ವೈರಲ್ ಆಗಿವೆ, ಮನೆಯಿಂದಲೇ ಕೆಲಸ ಮಾಡಿ 35,000 ಹಣ ಸಂಪಾದಿಸಿ’ ಎಂದು ಹೇಳಲಾಗಿದೆ. ಈ ಜಾಹೀರಾತುಗಳ ವಿಶ್ವಾಸಾರ್ಹತೆಯನ್ನು ಪರಿಶೀಲಿಸೋಣ.

ಫ್ಯಾಕ್ಟ್‌ಚೆಕ್ :
ನಟರಾಜ್ ಪೆನ್ಸಿಲ್ ಸಂಸ್ಥೆಯಲ್ಲಿ ಪೆನ್ಸಿಲ್ ಪ್ಯಾಕ್ ಮಾಡುವ ಉದ್ಯೋಗಗಳು ಖಾಲಿ ಇವೆ. ಮನೆಯಲ್ಲಿಯೇ ಕುಳಿತು ₹35,000ದ ವರೆಗೆ ಹಣ ಸಂಪಾದಿಸಬಹುದು ಎಂದು ಹಲವಾರು ಜಾಹೀರಾತುಗಳನ್ನು ನೀಡಲಾಗಿದೆ. ಜೊತೆಗೆ, ಸಂಪರ್ಕಕ್ಕಾಗಿ ದೂರವಾಣಿ ಸಂಖ್ಯೆಗಳನ್ನೂ ನೀಡಲಾಗಿದೆ. ಸಂಸ್ಥೆಯ ‘ಅಪ್ಸರಾ ಪೆನ್ಸಿಲ್’ ಪೊಟ್ಟಣಕ್ಕೆ ಪೆನ್ಸಿಲ್‌ಗಳನ್ನು ತುಂಬುತ್ತಿರುವ ವಿಡಿಯೊ ಜೊತೆ ಈ ಮಾಹಿತಿ ಹರಿಬಿಡಲಾಗಿದೆ.
ವೈರಲ್ ಆಗಿರುವ ಜಾಹೀರಾತುಗಳು ನಕಲಿ ಎಂದು ಹಿಂದೂಸ್ಥಾನ್ ಪೆನ್ಸಿಲ್ಸ್ ಪ್ರೈವೇಟ್ ಲಿಮಿಟೆಡ್ ಸಂಸ್ಥೆಯೇ ತನ್ನ ಅಧಿಕೃತ ವೆಬ್‌ಸೈಟ್‌ನಲ್ಲಿ ಮಾಹಿತಿ ನೀಡಿದೆ. ನಟರಾಜ್ ಪೆನ್ಸಿಲ್‌ಗಳನ್ನು ಪ್ಯಾಕ್ ಮಾಡುವ ಕೆಲಸ ಲಭ್ಯ ಇದೆ ಎಂಬಂತ ಜಾಹೀರಾತುಗಳು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿವೆ. ಇವು ನಕಲಿ ಜಾಹೀರಾತುಗಳಾಗಿದ್ದು, ಹಿಂದೂಸ್ಥಾನ್ ಪೆನ್ಸಿಲ್ಸ್ ಸಂಸ್ಥೆಗೆ ಸಂಬಂಧಿಸಿಲ್ಲ. ಸಂಸ್ಥೆಯ ಪೆನ್ಸಿಲ್‌ಗಳ ತಯಾರಿ ಮತ್ತು ಪ್ಯಾಕಿಂಗ್ ಸಂಪೂರ್ಣವಾಗಿ ಯಂತ್ರಗಳ ಮೂಲಕ ನಡೆಯುತ್ತದೆ. ಈ ಪ್ರಕ್ರಿಯೆಗೆ ಜನರ ಅಗತ್ಯವಿಲ್ಲ ಎಂದು ತಿಳಿಸಿದೆ.
ಈ ರೀತಿ ನಕಲಿ ಜಾಹೀರಾತು ನೀಡುವವರ ಉದ್ದೇಶ ಮುಗ್ದ ಜನರನ್ನು ಮೋಸಗೊಳಿಸುವುದೇ ಆಗಿರುತ್ತದೆ. ಜಾಹೀರಾತಿನೊಂದಿಗೆ ಮೊಬೈಲ್ ಸಂಖ್ಯೆಯನ್ನು ನೀಡಿರುತ್ತಾರೆ, ಒಂದು ವೇಳೆ ಆ ಸಂಖ್ಯೆಗೆ ಕರೆ ಮಾಡಿದರೆ ಕೊನೆಗೆ ಒಂದೇ ಅವಕಾಶ ಇರುವುದು ತಕ್ಷಣಕ್ಕೆ ಒಂದಷ್ಟು ಹಣವನ್ನು ಡೆಪಾಸಿಟ್ ಇಡುವಂತೆ ಸೂಚಿಸುತ್ತಾರೆ, ಮಾಸಿಕ 35 ಸಾವಿರ ವೇತನದ ಆಸೆಗೆ ಒಂದಷ್ಟು ಹಣವನ್ನು ಅವರ ಖಾತೆಗೆ ವರ್ಗಾವಣೆ ಮಾಡುತ್ತಾರೆ. ಅಲ್ಲಿಗೆ ಅವರ ಫೋನ್ ನಂ ಸ್ವಿಚ್ ಆಫ್ ಆಗುತ್ತದೆ ಅಥವ ಕರೆ ಸ್ವೀಕರಿಸದೆ ಮತ್ತಷ್ಟು ಹಣ ಕೀಳಲು ಪ್ರಯತ್ನಿಸುತ್ತಾರೆ. ಇವರ ಗುರಿ ಸದಾ ಮುಗ್ದ ಜನರೇ ಆಗಿರುತ್ತಾರೆ. ಹಾಗಾಗಿ ಇಂತಹ ನಕಲಿ ಜಾಹೀರಾತನ್ನು ನಂಬಿ ಮೋಸ ಹೋಗುವ ಮುನ್ನ ಎಚ್ಚರವಿರಲಿ.
ನಿಮ್ಮ ಸುತ್ತಮುತ್ತ ಮತ್ತು ಸಾಮಾಜಿಕ ಜಾಲತಾಣಗಳಲ್ಲಿ ಯಾವುದೇ ಸುದ್ದಿಯು ಸುಳ್ಳು ಎಂದು ನಿಮಗೆ ಸಂದೇಹ ಬಂದಿದ್ದರೆ ಅದನ್ನು Ensuddi.com ವಾಟ್ಸಾಪ್ ನಂ 9108969301 ಗೆ ತಲುಪಿಸಿ. ನಾವು ಫ್ಯಾಕ್ಟ್‌ಚೆಕ್ ಮಾಡಿ ಸತ್ಯ ನಿಮ್ಮೆದುರು ಇಡುತ್ತೇವೆ
ಇದನ್ನು ಓದಿರಿ : ಫ್ಯಾಕ್ಟ್‌ಚೆಕ್ : ಚರಂಡಿಗೆ ಬಿದ್ದು ವ್ಯಕ್ತಿ ನಾಪತ್ತೆ! ಅಸಲೀಯತ್ತೇನು?

