ಫ್ಯಾಕ್ಟ್‌ಚೆಕ್: ಕೇಕ್‌ ಪ್ಯಾಕೆಟ್‌ನಲ್ಲಿ ಮಾತ್ರೆಗಳಿದ್ದವೆ? ತಿಂದರೆ ಮಕ್ಕಳಿಗೆ ಪಾರ್ಶ್ವವಾಯು ತಗುಲುವುದೆ?

“ಹೊಸ ಕೇಕ್ ಮಾರುಕಟ್ಟೆಗೆ ಬಂದಿದೆ. ಇದರಲ್ಲಿ ಮಕ್ಕಳನ್ನು ಪಾರ್ಶ್ವವಾಯುವಿಗೆ ತಳ್ಳುವ ಲುಪೋ ಕಂಪನಿಯ ಟ್ಯಾಬ್ಲೆಟ್ ಇದೆ, ದಯವಿಟ್ಟು ಈ ವೀಡಿಯೊವನ್ನು ನಿಮ್ಮ ಸ್ನೇಹಿತರಿಗೆ ಫಾರ್ವರ್ಡ್ ಮಾಡಿ ಇದನ್ನು ಹಿಂದೂ ಪ್ರದೇಶದಲ್ಲಿ ಪ್ರತ್ಯೇಕವಾಗಿ ಮಾರಾಟ ಮಾಡಲಾಗುತ್ತದೆ. ನಿಮ್ಮ ಮಕ್ಕಳ ಬಗ್ಗೆ ಎಚ್ಚರದಿಂದಿರಿ ಮತ್ತು ನೀವುಗಳು ಕೂಡ  ಎಚ್ಚರವಿರಲಿ” ಎಂಬ ಬರಹದೊಂದಿಗೆ ಈ ವಿಡಿಯೋವನ್ನು ವ್ಯಾಪಕವಾಗಿ ಹಂಚಲಾಗುತ್ತಿದೆ. 

ಇದೇ ರೀತಿಯ ಹಲವು ಪೋಸ್ಟ್‌ಗಳು ಸಾಮಾಜಿಕ ಮಾಧ್ಯಮಗಳಾದ ಫೇಸ್‌ಬುಕ್, ಟ್ವಿಟರ್ ಮತ್ತು ವಾಟ್ಸಾಪ್‌ಗಳಲ್ಲಿಯೂ ವ್ಯಾಪಕವಾಗಿ ಹಂಚಿಕೊಳ್ಳಲಾಗಿದೆ.

ಇದೇ  ಹೇಳಿಕೆಯೊಂದಿಗೆ ಫೇಸ್‌ಬುಕ್‌ ನಲ್ಲಿ ವೈರಲ್‌ ಆದ ಪೋಸ್ಟ್‌

ವಾಟ್ಸಾಪ್‌ನಲ್ಲಿ ಹಲವು ಗುಂಪುಗಳಲ್ಲಿ ಹರಿದಾಡುತ್ತಿರುವ ಸಂದೇಶ.

ಮಕ್ಕಳನ್ನು ಪಾರ್ಶ್ವವಾಯುವಿಗೆ ತಳ್ಳುವ ಲುಪೋ ಕಂಪನಿಯ ಟ್ಯಾಬ್ಲೆಟ್ ಇದೆʼ ಎಂಬ ಶೀರ್ಷಿಕೆಯೊಂದಿಗೆ ಕೇಕ್ ಉತ್ಪನ್ನದ ವೀಡಿಯೊ ಸಾಮಾಜಿಕ ಮಾಧ್ಯಮಗಳಲ್ಲಿ ಸದ್ಯ ವೈರಲ್ ಆಗುತ್ತಿದೆ. ವ್ಯಕ್ತಿಯೊಬ್ಬರು ಕೇಕ್‌ ಅನ್ನು ತೆರೆದು ಹುಡಿ ಮಾಡಿ ಅದರೊಳಗಿನಿಂದ ಮಾತ್ರೆ ತರಹದ ವಸ್ತುವನ್ನು ತೆಗೆಯುವುದು ವೈರಲ್‌ ಆಗುತ್ತಿರುವ ವಿಡಿಯೋದಲ್ಲಿ ಕಂಡು ಬಂದಿದೆ. ಈ ಪೋಸ್ಟ್‌ನಲ್ಲಿರುವ ಸಾಲುಗಳು ಒಂದು ಸಮುದಾಯವನ್ನು ಗುರಿಯಾಗಿಸಿಕೊಂಡು ಹಂಚಿಕೊಳ್ಳಲಾಗಿದೆ ಎಂದು ಕೆಲವರು ಕಮೆಂಟ್‌ ಮಾಡಿದ್ದಾರೆ.

ಈ ವಿಡಿಯೊ ಸಂದೇಶವನ್ನು ಕೆಲ ಓದುಗರು ನಮ್ಮ ಏನ್‌ಸುದ್ದಿ.ಕಾಂ ವಾಟ್ಸಾಪ್‌ ಗೆ ಕಳುಹಿಸಿ ಪರಿಶೀಲಿಸುವಂತೆ ಮನವಿ ಮಾಡಿದ್ದರು. ಹಾಗಾಗಿ ಈ ವಿಡಿಯೊ ಪೋಸ್ಟ್‌ನಲ್ಲಿ ಮಾಡಲಾದ ಪ್ರತಿಪಾದನೆಯ ವಾಸ್ತವ ಏನೆಂದು ಪರಿಶೀಲಿಸೋಣ.

ಫ್ಯಾಕ್ಟ್‌ಚೆಕ್ :

ಸಾಮಾಜಿಕ ಮಾಧ್ಯಮಗಳಲ್ಲಿ ವ್ಯಾಪಕವಾಗಿ ಹಂಚಿಕೆಯಾದ ಲುಪೋ ಕಂಪನಿಯ ಟ್ಯಾಬ್ಲೆಟ್ ವಿಡಿಯೊದ ಸತ್ಯಾಸತ್ಯತೆಯನ್ನು ತಿಳಿಯಲು ಪರಿಶೀಲಿಸಿದಾಗ, ವಿಡಿಯೋವನ್ನು 2019, 2020 ರಿಂದಲ್ಲೂ ಫೇಸ್‌ಬುಕ್‌ ಮೊದಲಾದ ಸೋಶಿಯಲ್‌ ಮೀಡಿಯಾಗಳಲ್ಲಿ ವ್ಯಾಪಕವಾಗಿ ಶೇರ್‌ ಮಾಡಲಾಗಿತ್ತು. “ಚೀನೀ ಕಂಪನಿ, ಲುಪ್ಪೋ, ಕೇಕ್ ಅನ್ನು ಬಿಡುಗಡೆ ಮಾಡಿದೆ, ಒಳಗೆ ಟ್ಯಾಬ್ಲೆಟ್ ಅನ್ನು ಕಾಣದಂತಿರಿಸಿದೆ, ಅದು ಮಕ್ಕಳಿಗೆ ಪಾರ್ಶ್ವವಾಯುವಿಗೆ ಕಾರಣವಾಗುತ್ತದೆ. ದಯವಿಟ್ಟು ಈ ಸಂದೇಶವನ್ನು ಎಲ್ಲಾ ಗುಂಪುಗಳಲ್ಲಿ ಹಂಚಿಕೊಳ್ಳಿ” ಎಂದು ಹಂಚಿಕೊಂಡಿರುವುದು ಕಂಡುಬಂದಿದೆ.

ಆದರೆ, ವಿಡಿಯೋದಲ್ಲಿ ಇರುವ ಕೇಕ್‌ ಉತ್ಪನ್ನ ಬ್ರ್ಯಾಂಡ್ ಭಾರತದಲ್ಲಿ ಲಭ್ಯವಿಲ್ಲ ಮತ್ತು ಇದು ಹಳೆಯ ವಿಡಿಯೋ ಆಗಿದೆ ಎಂದು Factly ಹಾಗೂ  boomlive  ನ ವರದಿಗಳು ಲಭ್ಯವಾಗಿವೆ. ‘ಲುಪ್ಪೊ’ ಬ್ರಾಂಡ್‌ನ ಕೇಕ್ ಇಸ್ತಾನ್‌ಬುಲ್‌ನಲ್ಲಿರುವ Şölen ಕಂಪನಿಯ ಟರ್ಕಿಶ್ ಉತ್ಪನ್ನವಾಗಿದೆಯೇ ಹೊರತು ಚೀನೀ ಬ್ರ್ಯಾಂಡ್ ಅಲ್ಲ. ʼಅಮೇರಿಕಾ ಮತ್ತು ಇಸ್ರೇಲ್‌ನಲ್ಲಿ ಉತ್ಪನ್ನವು ಲಭ್ಯವಿದೆʼ ಎಂದು ಪ್ರತಿಪಾದಿಸಿ ಇದೇ ವೀಡಿಯೊ ಅಮೇರಿಕಾದಲ್ಲೂ ವೈರಲ್‌ ಆಗಿತ್ತು ಎಂದು BHOOMLIVE ವರದಿ ಮಾಡಿದೆ.

ಮಾತ್ರೆ ಮೂಲಕ ತೆಗೆದುಕೊಳ್ಳುವ ಯಾವುದೇ ಔಷಧಗಳಿಂದ ಪಾರ್ಶ್ವವಾಯುವನ್ನು ಉಂಟುಮಾಡಲು ವೈದ್ಯಕೀಯವಾಗಿ ಸಾಧ್ಯವಿಲ್ಲವಾದರೂ, ಈ ಮಾತ್ರೆಗಳನ್ನು ಯಾರು ಮತ್ತು ಯಾವಾಗ ಕೇಕ್‌ ಒಳಗೆ ಸೇರಿಸಲಾಯಿತು ಎಂಬುದು ವೀಡಿಯೊದಿಂದ ಸ್ಪಷ್ಟವಾಗಿಲ್ಲ. ಸೋಲೆನ್‌ನ ವಕ್ತಾರರು ಟೆಯಿಟ್‌ನೊಂದಿಗೆ ಮಾತನಾಡುತ್ತಾ, ಲುಪ್ಪೊ ತೆಂಗಿನಕಾಯಿ ಕ್ರೀಮ್ ಕೇಕ್ ಉತ್ಪನ್ನವನ್ನು ಇರಾಕ್‌ನಲ್ಲಿ ಮಾತ್ರ ಮಾರಾಟ ಮಾಡಲಾಗುತ್ತದೆ ಎಂದು ದೃಢಪಡಿಸಿದ್ದಾರೆ. ಕಂಪನಿಯು ವೈರಲ್ ವೀಡಿಯೊದ ಪ್ರತಿಪಾದನೆಯನ್ನು ದೃಢವಾಗಿ ತಿರಸ್ಕರಿಸಿದ್ದು, ಇದು ಸಂಪೂರ್ಣ ಆಧಾರರಹಿತ ಮತ್ತು ಸುಳ್ಳು ಎಂದು ಕಂಪನಿಯ ವಕ್ತಾರರು ತಿಳಿಸಿರುವುದಾಗಿ ಫ್ಯಾಕ್ಟ್‌ಲಿ ಮತ್ತು ಬೂಮ್‌ ವರದಿ ಹೇಳಿದೆ. 

ಕಂಪೆನಿಯು ಈಗಾಗಲೇ ತಪ್ಪಿತಸ್ಥರ ವಿರುದ್ಧ ಕಾನೂನು ಕ್ರಮ ಜರುಗಿಸಲು ಕೋರುತ್ತಿದೆ ಎಂದು ವಕ್ತಾರರು ತಿಳಿಸಿದ್ದರು. ಲುಪ್ಪೊ ಕೇಕ್ ಅನ್ನು ತಯಾರಿಸಿದ ಉತ್ಪಾದನಾ ಪ್ರಕ್ರಿಯೆಯ ಸುರಕ್ಷತಾ ಮಾನದಂಡಗಳು ಮತ್ತು ಪ್ರಮಾಣೀಕರಣಕ್ಕೆ ಸಂಬಂಧಿಸಿದ ದಾಖಲಾತಿಗಳನ್ನು ಸಹ ಕಂಪೆನಿಯು ಬಿಡುಗಡೆ ಮಾಡಿತ್ತು. ಟರ್ಕಿಯ ಮಾಧ್ಯಮ ಕಂಪನಿ ‘ಟೆಯಿಟ್’ ಬರೆದ ಲೇಖನದಿಂದ, ಕೇಕ್ ಪ್ಯಾಕ್ ಅನ್ನು ಮೊದಲೇ ತೆರೆದು ಅದರಲ್ಲಿ ಮಾತ್ರೆಗಳನ್ನು ಇರಿಸಿ ಮತ್ತೆ ಹೊಸದಾಗಿ ತೆರೆಯುವಂತೆ ವಿಡಿಯೊವನ್ನು ಮಾಡಲಾಗಿದೆ ಎಂದು ವರದಿಯಲ್ಲಿ ತಿಳಿಸಿದೆ.

ಉತ್ತರ ಸಿರಿಯಾದಲ್ಲಿ ಟರ್ಕಿಯ ಪೀಸ್ ಸ್ಪ್ರಿಂಗ್ ಕಾರ್ಯಾಚರಣೆಯ ನಂತರ ಉತ್ತರ ಇರಾಕ್‌ನಲ್ಲಿ ಪ್ರಾರಂಭವಾದ ಟರ್ಕಿಶ್ ಸರಕುಗಳ ವಿರುದ್ಧ ಬಹಿಷ್ಕಾರದ ಪ್ರಯತ್ನದ ಬಳಿಕ ಕಂಪೆನಿಯ ಹೆಸರನ್ನು ಹಾಳುಗೆಡವಲು ಈ ವಿಡಿಯೋ ಹರಿಬಿಟ್ಟಿರಬಹುದು ಎಂದು ಅಂದಾಜಿಸಲಾಗಿದ್ದು, ಸದ್ಯ ಭಾರತದಲ್ಲಿ ಸೇರಿದಂತೆ ವಿಶ್ವದ ಇತರೆಡೆಯಲ್ಲಿ ವೈರಲ್‌ ಆಗುತ್ತಿರುವ ಸಂದೇಶವು ಸುಳ್ಳು ಎಂದು ಸಾಬೀತಾಗಿದೆ. ಬಹಿಷ್ಕಾರದ ಭಾಗವಾಗಿಯೇ ಇಂತಹ ವಿಡಿಯೋಗಳನ್ನು ಹರಿಯಬಿಟ್ಟಿರಬಹುದು ಎಂದು ಹಲವು ಮಾಧ್ಯಮಗಳ ವರದಿಗಳು ಉಲ್ಲೇಖಿಸಿವೆ.

ಮಕ್ಕಳಿಗೆ ಹೊರಗಿನ ಜಂಕ್‌ ಫುಡ್‌ಗಳನ್ನು ಕೊಡಿಸದೆ, ಆದಷ್ಟು ಮನೆಯಲ್ಲಿ ತಯಾರಿಸಿದ ಪೌಷ್ಠಿಕ ಆಹಾರವನ್ನು ನೀಡಬೇಕು ಇದು ಅವರ ಆರೋಗ್ಯಕ್ಕೆ ಉತ್ತಮವೂ ಹೌದು.  2019 ರಲ್ಲಿ ವಿಡಿಯೊವನ್ನು ಚೀನಾ ಉತ್ಪನ್ನಗಳನ್ನು ಬಹಿಷ್ಕರಿಸುವ ಸಂದರ್ಭದೊಂದಿದೆ ಹಂಚಿಕೊಂಡಿದ್ದರೆ ಈಗ ಕೋಮು ನಿರೂಪಣೆಯೊಂದಿಗೆ ವೈರಲ್ ಮಾಡಲಾಗಿದೆ. ಹಾಗಾಗಿ ಪೋಸ್ಟ್‌ನಲ್ಲಿ ಮಾಡಲಾದ ಪ್ರತಿಪಾದನೆ ತಪ್ಪಾಗಿದೆ.

ನಿಮ್ಮ ಸುತ್ತಮುತ್ತ ಮತ್ತು  ಸಾಮಾಜಿಕ ಜಾಲತಾಣಗಳಲ್ಲಿ ಯಾವುದೇ ಸುದ್ದಿಯು ಸುಳ್ಳು ಎಂದು ನಿಮಗೆ ಸಂದೇಹ ಬಂದಿದ್ದರೆ ಅದನ್ನು Ensuddi.com ವಾಟ್ಸಾಪ್  ನಂ 9108969301 ಗೆ ತಲುಪಿಸಿ. ನಾವು ಫ್ಯಾಕ್ಟ್‌ಚೆಕ್ ಮಾಡಿ ಸತ್ಯ ನಿಮ್ಮೆದುರು ಇಡುತ್ತೇವೆ


ಇದನ್ನು ಓದಿರಿ : ಫ್ಯಾಕ್ಟ್‌ಚೆಕ್ : ಚಿನ್ನದ ಹಾವು ಇರುವುದು ನಿಜವೇ?


 

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights