ಫ್ಯಾಕ್ಟ್‌ಚೆಕ್: ಸರ್ವಧರ್ಮ ಸಮನ್ವಯದ ನಾಟಕದಲ್ಲಿ ಮುಸ್ಲಿಂ ಪ್ರಾರ್ಥನೆಯನ್ನಷ್ಟೆ ಎಡಿಟ್ ಮಾಡಿ ತೋರಿಸಿದ ಸುದರ್ಶನ್ ಟಿವಿ

ದೇಶದ್ಯಾಂತ 76ನೇ ಸ್ವಾತಂತ್ರ್ಯೋತ್ಸವವನ್ನು ಅದ್ಧೂರಿಯಾಗಿ ಆಚರಿಸಲಾಗಿದೆ. ಈ ಬಾರಿಯ ಸ್ವಾತಂತ್ರ್ಯೋತ್ಸವ ಆಚರಣೆ ಬಹಳ ವಿಶೇಷದಿಂದ ಕೂಡಿತ್ತು. ಶಾಲಾ ವಿದ್ಯಾರ್ಥಿಗಳು ದೇಶಾಭಿಮಾನ ಮೆರೆಯುವ ಕಾರ್ಯಕ್ರಮಗಳನ್ನು ಮಾಡುವ ಮೂಲಕ ದೇಶಕ್ಕೆ ಸ್ವಾತಂತ್ರ್ಯ ತಂದುಕೊಟ್ಟ ಮಹನೀಯರುಗಳನ್ನ ಸ್ಮರಿಸಿದ್ದಾರೆ. ಮತ್ತೊಂದು ಕಡೆ ಉತ್ತರ ಪ್ರದೇಶದ ಲಕ್ನೋದಲ್ಲಿ ಶಾಲಾ ವಿದ್ಯಾರ್ಥಿಗಳು ಪ್ರಸ್ತುತಪಡಿಸಿದ ನಾಟಕವೊಂದರಲ್ಲಿ “ಭಾರತ ಮಾತೆಗೆ” ಹಿಜಾಬ್ ತೊಡಿಸಿ ನಮಾಝ್ ಮಾಡಿಸಲಾಗಿದೆ ಎಂದು ಪ್ರತಿಪಾದಿಸಿ ವಿಡಿಯೊ ವೈರಲ್ ಮಾಡಲಾಗುತ್ತಿದೆ.

ಕೆಲವರು ಇದನ್ನೇ ಸಹೋದರತ್ವ ಎಂದು ಹೇಳುತ್ತಿದ್ದಾರೆ. ಎಲ್ಲಾ ಧರ್ಮದ ಪ್ರಕಾರ ಪೂಜೆ ನಡೆಯುತ್ತದೆ. ಹಾಗಾದರೆ ಭಾರತಮಾತೆಯ ಕಿರೀಟವನ್ನು ಕಳಚಿ ಹಿಜಾಬ್‌ಅನ್ನು ಏಕೆ ಧರಿಸಿದರು ಎಂದು ಅವರು ಹೇಳಬೇಕು? ಭಾರತ ಮಾತೆ ಮಂಡಿಯೂರಿ ಏಕೆ ಕುಳಿತಳು? ಅಂದರೆ ಮುಸ್ಲಿಮರು ಅದರ ಮೂಲ ಸ್ವರೂಪವನ್ನು ಬದಲಾಯಿಸುತ್ತಾರೆಯೇ? ಎಂದು ಸುದರ್ಶನ್‌ ನ್ಯೂಸ್‌ ತನ್ನ ಟ್ವಿಟರ್‌ ಹ್ಯಾಂಡಲ್‌ನಿಂದ ಟ್ವೀಟ್‌ ಮಾಡಿದೆ. BJP ಮುಖಂಡ ಅಭಿಜತ್ ಮಿಶ್ರಾ ಅವರು ಈ ವಿಡಿಯೋವನ್ನು ಹಂಚಿಕೊಂಡಿದ್ದು, ಉತ್ತರ ಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಅವರನ್ನು ಟ್ಯಾಗ್ ಮಾಡಿ, ಈ ವಿಷಯದ ಬಗ್ಗೆ ಗಮನಿಸುವಂತೆ ಕೋರಿದ್ದಾರೆ. ಇದಾದ ಬಳಿಕ ಅವರು ತಮ್ಮ ಟ್ವೀಟ್ ಅನ್ನು ಡಿಲೀಟ್ ಮಾಡಿದ್ದಾರೆ. ಹಾಗಿದ್ದರೆ ಈ ಪೋಸ್ಟ್‌ನಲ್ಲಿ ಮಾಡಲಾದ ಪ್ರತಿಪಾದನೆಯನ್ನು ಪರಿಶೀಲಿಸೋಣ.

ಫ್ಯಾಕ್ಟ್‌ಚೆಕ್ : 

ಸಾಮಾಜಿಕ ಮಾಧ್ಯಮಗಳಲ್ಲಿ ವೈರಲ್ ಆಗಿರುವ ವೀಡಿಯೊವನ್ನು ಸುಳ್ಳು ಮತ್ತು ಕೋಮು ನಿರೂಪಣೆಯೊಂದಿಗೆ ಬಿಂಬಿಸಲು ವಿಡಿಯೊವನ್ನು ಟ್ರಿಮ್ ಮಾಡಲಾಗಿದೆ ಎಂದು ಇಂಡಿಯಾ ಟುಡೇ ವರದಿ ಮಾಡಿದೆ.

ಹಿಂದೂ, ಮುಸ್ಲಿಂ, ಸಿಖ್ ಮತ್ತು ಕ್ರಿಶ್ಚಿಯನ್ ಸಂಪ್ರದಾಯಗಳ ಪ್ರಕಾರ ಪ್ರಾರ್ಥನೆ ಸಲ್ಲಿಸುವ ವಿವಿಧ ಧಾರ್ಮಿಕ ಆಚರಣೆಗಳನ್ನು ಸೂಚಿಸುವ ಅಭಿನಯಗಳನ್ನು ಮಕ್ಕಳು ಮಾಡಿದ್ದಾರೆ. ಆದರೆ ಭಾರತ ಮಾತೆಯ ಪಾತ್ರದಾರಿಯು ನಮಾಝ್ ಮಾಡಿಸಲಾದ ದೃಶ್ಯಗಳನ್ನಷ್ಟೆ ಎಡಿಟ್‌ ಮಾಡಿ ವೈರಲ್ ಮಾಡಲಾಗಿದೆ. ಅರವಿಂದ್‌ ಚೌಹಾಣ್ ಎಂಬುವವರು ಪೂರ್ಣ ವಿಡಿಯೊವನ್ನು ಹಂಚಿಕೊಂಡಿದ್ದಾರೆ.

 

ಇಂಟಿಯಾ ಟುಡೇ ಫ್ಯಾಕ್ಟ್‌ಚೆಕ್ ತಂಡವು ಲಕ್ನೋ ಪೊಲೀಸ್ ಕಮಿಷನರೇಟ್‌ನಲ್ಲಿ ಹೆಚ್ಚುವರಿ ಸಿಪಿ ಸುನಿಲ್ ಶರ್ಮಾ ಅವರನ್ನು ಸಂಪರ್ಕಿಸಿ ಮಾಹಿತಿ ಪಡೆದಿದ್ದು ‘‘ಸ್ವಾತಂತ್ರ್ಯ ದಿನಾಚರಣೆಯಂದು ಸರ್ವ ಧರ್ಮಗಳ ಪ್ರಾರ್ಥನೆ ಮಾಡುವ ದೃಶ್ಯಗಳನ್ನು ಮಕ್ಕಳು ತಮ್ಮ ನಾಟಕದಲ್ಲಿ ಪ್ರದರ್ಶಿಸಿರುವುದು ತನಿಖೆಯ ನಂತರ ಕಂಡುಬಂದಿದೆ. ಆದರೆ ಯಾರೋ ಒಬ್ಬರು ಎಡಿಟ್ ಮಾಡಿದ ವೀಡಿಯೋವನ್ನು ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಂಡಿದ್ದಾರೆ. ಈ ಬಗ್ಗೆ ನಾವು ಗಮನ ಹರಿಸುತ್ತಿದ್ದೇವೆ. ಮತ್ತು ಕ್ರಮ ಕೈಗೊಳ್ಳತ್ತೇವೆ” ಎಂದು ತಿಳಿಸಿದ್ದಾರೆ.

ಒಟ್ಟಾರೆಯಾಗಿ ಹೇಳುವುದಾದರೆ ಸ್ವಾತಂತ್ರ್ಯದ ಅಮೃತ ಮಹೋತ್ಸವದ ಅಂಗವಾಗಿ ಶಾಲಾ ಮಕ್ಕಳು ಅಭಿನಯಿಸಿದ್ದ ನಾಟಕದಲ್ಲಿ ಭಾರತ ಮಾತೆ ಪಾತ್ರಧಾರಿಯು ಕೇವಲ ನಮಾಝ್ ಮಾಡಿದಂತೆ ಬಿಂಬಿಸಿ ಕೋಮು ಸಾಮರಸ್ಯವನ್ನು ಕದಡುವ ನಿರೂಪಣೆಯೊಂದಿಗೆ ವಿಡಿಯೊವನ್ನು ವೈರಲ್ ಮಾಡಲಾಗಿದೆ. ಆದರೆ ಪೂರ್ಣ ವಿಡಿಯೋದಲ್ಲಿ ಸರ್ವ ಧರ್ಮ ಸಮನ್ವಯವನ್ನು ಸಾರುವ ಸಂದೇಶವನ್ನು ಶಾಲಾ ಮಕ್ಕಳು ತಮ್ಮ ನಾಟಕದ ಪ್ರದರ್ಶನದಲ್ಲಿ ಅಭಿನಯಿಸಿರುವುದು ಸಾಭೀತಾಗಿದೆ. ಹಾಗಾಗಿ ಪೋಸ್ಟ್‌ನಲ್ಲಿ ಮಾಡಲಾದ ಪ್ರತಿಪಾದನೆ ತಪ್ಪಾಗಿದೆ.

ನಿಮ್ಮ ಸುತ್ತಮುತ್ತ ಮತ್ತು  ಸಾಮಾಜಿಕ ಜಾಲತಾಣಗಳಲ್ಲಿ ಯಾವುದೇ ಸುದ್ದಿಯು ಸುಳ್ಳು ಎಂದು ನಿಮಗೆ ಸಂದೇಹ ಬಂದಿದ್ದರೆ ಅದನ್ನು Ensuddi.com ವಾಟ್ಸಾಪ್  ನಂ 9108969301 ಗೆ ತಲುಪಿಸಿ. ನಾವು ಫ್ಯಾಕ್ಟ್‌ಚೆಕ್ ಮಾಡಿ ಸತ್ಯ ನಿಮ್ಮೆದುರು ಇಡುತ್ತೇವೆ


ಇದನ್ನು ಓದಿರಿ : ಫ್ಯಾಕ್ಟ್‌ಚೆಕ್: ವೈರಲ್ ವಿಡಿಯೋ ರಾಜಸ್ತಾನದ ದಲಿತ ವಿದ್ಯಾರ್ಥಿಯ ಸಾವಿನ ಘಟನೆಗೆ ಸಂಬಂಧಿಸಿದ್ದಲ್ಲ

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights