ಫ್ಯಾಕ್ಟ್‌ಚೆಕ್: ಸಾಮಾಜಿಕ ಬಹಿಷ್ಕಾರ ಹಾಕಿದ್ದಕ್ಕೆ ಕರ್ನಾಟಕದಲ್ಲಿ ದಲಿತ ಕುಟುಂಬ ಬೆತ್ತಲೆ ಪ್ರತಿಭಟನೆ ನಡೆಸಿಲ್ಲ

ಕೋಲಾರ ಜಿಲ್ಲೆ ಮಾಲೂರು ತಾಲ್ಲೂಕಿನ ಉಳ್ಳೇರಹಳ್ಳಿಯಲ್ಲಿ ಗ್ರಾಮದೇವತೆಯ ಮೆರವಣಿಗೆಯ ವೇಳೆ ದಲಿತ ಬಾಲಕ ದೇವರಿಗೆ ಸಂಬಂಧಿಸಿದ ಕೋಲನ್ನು ಮುಟ್ಟಿದನೆಂದು ಆರೋಪಿಸಿ ಸವರ್ಣೀಯರು ಸಾಮಾಜಿಕ ಬಹಿಷ್ಕಾರ ಜೊತೆಗೆ 60 ಸಾವಿರ ದಂಡ ವಿಧಿಸಿದ್ದ ಸುದ್ದಿ ಇತ್ತೀಚೆಗೆ ಭಾರಿ ಸದ್ದು ಮಾಡಿತ್ತು. 

ಈ ಹಿನ್ನೆಲೆಯಲ್ಲಿ “ಕರ್ನಾಟಕದಲ್ಲಿ ದಲಿತ ಕುಟುಂಬವೊಂದು ದೇವಾಲಯಕ್ಕೆ ಪ್ರವೇಶಿಸಿ ಮತ್ತು ವಿಗ್ರಹವನ್ನು ಮುಟ್ಟಿದ್ದಕ್ಕಾಗಿ ದಂಡ ವಿಧಿಸಿ, ಬೆತ್ತಲೆಯಾಗಿಸಿ ಹಿಂಸಿಸಲಾಯಿತು ಎಂಬುದನ್ನು ತಿಳಿದು ನಾಚಿಕೆಪಡುತ್ತೇನೆ. ನಾವು ಮನುಷ್ಯರೇ? ಎಂಬ ಹೇಳಿಕೆಯೊಂದಿಗೆ ಪೋಸ್ಟ್‌ಅನ್ನು ಹಂಚಿಕೊಳ್ಳಲಾಗಿದೆ.

ದಲಿತ ಕುಟುಂಬದ ಸದಸ್ಯರನ್ನು ಈ ರೀತಿ ಹಿಂಸಿಸಲಾಯಿತೆ, ಬೆತ್ತಲೆಗೊಳಿಸಿದ ಅಮಾನವೀಯ ಘಟನೆ ನಡೆದಿರುವುದು ನಿಜವೇ ಎಂದು ಪೋಸ್ಟ್‌ನಲ್ಲಿ ಮಾಡಲಾದ ಪ್ರತಿಪಾದನೆಯನ್ನು ಪರಿಶೀಲಿಸೊಣ.

ಫ್ಯಾಕ್ಟ್‌ಚೆಕ್ :

ವೈರಲ್ ಫೋಟೋವನ್ನು ಗೂಗಲ್ ರಿವರ್ಸ್ ಇಮೇಜ್‌ ಸರ್ಚ್ ಮಾಡಿದಾಗ, 2015 ರಲ್ಲಿ ಇಂಡಿಯಾ ಟುಡೇ ಮಾಡಿದ್ದ ವರದಿಯೊಂದು ಲಭ್ಯವಾಗಿದೆ. ಆ ವರದಿಯಲ್ಲಿ ಕರ್ನಾಟಕದ ದಲಿತ ಕುಟುಂಬವನ್ನು ವಿವಸ್ತ್ರಗೊಳಿಸಿ ಸಾರ್ವಜನಿಕವಾಗಿ ಅವಮಾನಿಸಲಾಗಿದೆ ಎಂದು ಎಲ್ಲಿಯೂ ಉಲ್ಲೇಖಿಸಿಲ್ಲ.

ಫೋಟೋ ಕೃಪೆ: ಇಂಡಿಯಾ ಟುಡೇ
ಫೋಟೋ ಕೃಪೆ: ಇಂಡಿಯಾ ಟುಡೇ

ವರದಿಯ ಪ್ರಕಾರ, ಅಕ್ಟೋಬರ್ 2015 ರಲ್ಲಿ ಉತ್ತರ ಪ್ರದೇಶದ ಗೌತಮ್ ಬುಧ್ ನಗರದ ಡಂಕೌರ್‌ನ ಮಾರುಕಟ್ಟೆಯಲ್ಲಿ ದರೋಡೆ ಪ್ರಕರಣದ ದೂರು ದಾಖಲಿಸಲು ಪೊಲೀಸರು ನಿರಾಕರಿಸಿದ್ದರು. ಇದರಿಂದ ರೊಚ್ಚಿಗೆದ್ದ ಕುಟುಂಬ ಬೆತ್ತಲೆಯಾಗಿ ಪ್ರತಿಭಟಿಸಿತು, ತಕ್ಷಣ ಪೊಲೀಸರು ದಲಿತ ಕುಟುಂಬದ  ಮೂವರು  ಮಹಿಳೆಯರು ಸೇರಿದಂತೆ ಐದು ಸದಸ್ಯರನ್ನು ಬಂಧಿಸಿದ್ದರು ವರದಿಯಾಗಿದೆ.

ಮತ್ತಷ್ಟು ಪರಿಶೀಲನೆ ನಡೆಸಿದಾಗ NMF ಸುದ್ದಿಯ YouTube ಚಾನಲ್‌ಗೆ ಅಪ್‌ಲೋಡ್ ಮಾಡಿದ ಅದೇ ಘಟನೆಯ ವೀಡಿಯೊ ವರದಿಯು ಲಭ್ಯವಾಗಿದೆ. ಈ ವಿಡಿಯೋದಲ್ಲಿ ಪೊಲೀಸರು ಹಾಗೂ ಕುಟುಂಬದವರ ನಡುವೆ ಮಾತಿನ ಚಕಮಕಿ ನಡೆಯುತ್ತಿರುವ ವರದಿಯಾಗಿದೆ.

ಪೊಲೀಸರೊಂದಿಗೆ ತೀವ್ರ ವಾಗ್ವಾದ ನಡೆದ ನಂತರ, ಕುಟುಂಬದ ಸದಸ್ಯರು ಗ್ರೇಟರ್ ನೋಯ್ಡಾ ಪೊಲೀಸ್ ಠಾಣೆಯಿಂದ ಹೊರಬಂದು ಬೆತ್ತಲಾಗಿ ಪ್ರತಿಭಟನೆ ನಡೆಸಿ, ಪೊಲೀಸರು ಆರೋಪಿಗಳ ರಕ್ಷಣೆಗೆ ಯತ್ನಿಸುತ್ತಿದ್ದಾರೆ ಎಂದು ಆರೋಪಿಸಿದರು ಎಂದು ವರದಿಯಾಗಿದೆ. ಹಾಗಾಗಿ ಇದು ಕರ್ನಾಟಕದ ಕೋಲಾರ ಜಿಲ್ಲೆಯ ಮಾಲೂರಿನಲ್ಲಿ ನಡೆದ ದಲಿತ ಕುಟುಂಬಕ್ಕೆ ಹಾಕಿದ ಬಹಿಷ್ಕಾರದ ಪ್ರಕರಣಕ್ಕೆ ಸಂಬಂಧಿಸಿಲ್ಲ ಎಂದು ಸ್ಪಷ್ಟವಾಗಿದೆ.

ಮಾಲೂರಿನ ಘಟನೆ ಏನು ? :

ಕೋಲಾರ ಜಿಲ್ಲೆ ಮಾಲೂರು ತಾಲ್ಲೂಕಿನ ಉಳ್ಳೇರಹಳ್ಳಿಯಲ್ಲಿ ಗ್ರಾಮದೇವತೆ ಭೂತಮ್ಮನ ಮೆರವಣಿಗೆಯ ವೇಳೆ ದಲಿತ ಬಾಲಕ ದೇವರಿಗೆ ಸಂಬಂಧಿಸಿದ ಗುಜ್ಜಕೋಲನ್ನು ಮುಟ್ಟಿದನೆಂದು ಆರೋಪಿಸಿ ಸವರ್ಣೀಯರು ಸಾಮಾಜಿಕ ಬಹಿಷ್ಕಾರ ಹಾಕಿದ ಘಟನೆ ನಡೆದಿತ್ತು.

ಮಾಲೂರಿನಲ್ಲಿ ಬಹಿಷ್ಕಾರಕ್ಕೆ ಒಳಗಾಗಿದ್ದ ದಲಿತ ಕುಟುಂಬ
ಮಾಲೂರಿನಲ್ಲಿ ಬಹಿಷ್ಕಾರಕ್ಕೆ ಒಳಗಾಗಿದ್ದ ದಲಿತ ಕುಟುಂಬ

ಬಹಿಷ್ಕಾರದ ಸುದ್ದಿ ತಿಳಿದು ಸ್ಥಳಕ್ಕೆ ಧಾವಿಸಿದ್ದ ಮಾಸ್ತಿ ಪೊಲೀಸರು, ಉಳ್ಳೇರಹಳ್ಳಿಯಲ್ಲಿ ಗ್ರಾಮದ ಎಂಟು ಜನರ ವಿರುದ್ಧ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡಗಳ (ದೌರ್ಜನ್ಯ ತಡೆ ಕಾಯ್ದೆ) ವಿವಿಧ ಸೆಕ್ಷನ್‌ಗಳ ಅಡಿಯಲ್ಲಿ ಪ್ರಕರಣ ದಾಖಲಿಸಿದ್ದಾರೆ ಎಂದು ವರದಿಯಾಗಿದೆ.

ಗ್ರಾಮದ ಸವರ್ಣೀಯ ಸಮುದಾಯಕ್ಕೆ ಸೇರಿದ ಜಿ.ನಾರಾಯಣಸ್ವಾಮಿ ಬಿನ್ ಗೋಪಾಲಪ್ಪ, ಜಿ.ರಮೇಶ್, ಗೋಪಾಲಪ್ಪ, ವೆಂಕಟೇಶಪ್ಪ, ಕೋಟೆಪ್ಪ, ನಾರಾಯಣಸ್ವಾಮಿ, ಚಲಪತಿ, ಮೋಹನ್ ರಾವ್‌, ಚಿನ್ನಯ್ಯ ವಿರುದ್ಧ ಪರಿಶಿಷ್ಟ ಜಾತಿ ಪರಿಶಿಷ್ಟ ಪಂಗಡ ದೌರ್ಜನ್ಯ ತಡೆಯ ಕಾಯ್ದೆ 1989 ಅಡಿ ಹಾಗೂ ಐಪಿಸಿ ಕಲಂ 143, 147, 148, 149 504, 506 ಅಡಿಯಲ್ಲಿ ಎಫ್‌ಐಆರ್ ದಾಖಲಾಗಿದೆ.

ಒಟ್ಟಾರೆಯಾಗಿ ಹೇಳುವುದಾದರೆ, ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿರುವ ಸುದ್ದಿಕೋಲಾರ ಜಿಲ್ಲೆ ಮಾಲೂರು ತಾಲ್ಲೂಕಿನ ಉಳ್ಳೇರಹಳ್ಳಿಯಲ್ಲಿ ಗ್ರಾಮಕ್ಕೆ ಸಂಬಂಧಿಸಿದ್ದಲ್ಲ. ಅಲ್ಲಿ ಯಾರೂ ಕೂಡ ಬೆತ್ತಲೆ ಪ್ರತಿಭಟನೆಯನ್ನು ಮಾಡಿಲ್ಲ ಮತ್ತು ಪ್ರಕರಣದಲ್ಲಿ ಭಾಗಿಯಾಗಿರುವ ಎಲ್ಲರ ಮೇಲೂ ಪ್ರಕರಣ ದಾಖಲಾಗಿದೆ.

ಟ್ವಿಟರ್‌ನಲ್ಲಿ ಹಂಚಿಕೊಳ್ಳಲಾಗಿರುವ ಪೋಸ್ಟ್‌ನಲ್ಲಿ ಇರುವ ಫೋಟೋ ಅಕ್ಟೋಬರ್ 2015 ರಲ್ಲಿ ಉತ್ತರ ಪ್ರದೇಶದ ಗೌತಮ್ ಬುದ್ ನಗರದಲ್ಲಿ ನಡೆದ ಘಟನೆಗೆ ಸಂಬಂಧಿಸಿದ್ದಾಗಿದೆ. ದರೋಡೆಯ ದೂರು ದಾಖಲಿಸಲು ನಿರಾಕರಿಸಿದ ಪೊಲೀಸರ ಕ್ರಮವನ್ನು ವಿರೋಧಿಸಿ ದಲಿತ ಕುಟುಂಬವು ಬೆತ್ತಲೆ ಪ್ರತಿಭಟನೆಗೆ ಮುಂದಾಗಿತ್ತು. ಹಾಗಾಗಿ ಪೋಸ್ಟ್‌ನಲ್ಲಿ ಮಾಡಲಾದ ಪ್ರತಿಪಾದನೆ ತಪ್ಪಾಗಿದೆ.

ಕೃಪೆ : ಇಂಡಿಯಾ ಟುಡೇ

ನಿಮ್ಮ ಸುತ್ತಮುತ್ತ ಮತ್ತು  ಸಾಮಾಜಿಕ ಜಾಲತಾಣಗಳಲ್ಲಿ ಯಾವುದೇ ಸುದ್ದಿಯು ಸುಳ್ಳು ಎಂದು ನಿಮಗೆ ಸಂದೇಹ ಬಂದಿದ್ದರೆ ಅದನ್ನು Ensuddi.com ವಾಟ್ಸಾಪ್  ನಂ 9108969301 ಗೆ ತಲುಪಿಸಿ. ನಾವು ಫ್ಯಾಕ್ಟ್‌ಚೆಕ್ ಮಾಡಿ ಸತ್ಯ ನಿಮ್ಮೆದುರು ಇಡುತ್ತೇವೆ


ಇದನ್ನು ಓದಿರಿ : ಫ್ಯಾಕ್ಟ್‌ಚೆಕ್: ಭಾರತದ ಮದರಸಾದಲ್ಲಿ ಅಪ್ರಾಪ್ತೆಯ ಮೇಲೆ ಲೈಂಗಿಕ ದೌರ್ಜನ್ಯ ಎಂದು ಪಾಕ್ ವಿಡಿಯೋ ಹಂಚಿಕೆ


 

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights