ಫ್ಯಾಕ್ಟ್‌ಚೆಕ್: ಭಾರತದ ಮದರಸಾದಲ್ಲಿ ಅಪ್ರಾಪ್ತೆಯ ಮೇಲೆ ಲೈಂಗಿಕ ದೌರ್ಜನ್ಯ ಎಂದು ಪಾಕ್ ವಿಡಿಯೋ ಹಂಚಿಕೆ

ಭಾರತದ ಮದರಸವೊಂದರಲ್ಲಿ ಅಪ್ರಾಪ್ತೆಯ ಮೇಲೆ ಲೈಂಗಿಕ ದೌರ್ಜನ್ಯ ನಡೆಸಲಾಗಿದೆ ಎಂದು ಹೇಳಿಕೊಂಡು ಸಾಮಾಜಿಕ ಮಾಧ್ಯಮಗಳಲ್ಲಿ ವಿಡಿಯೋವನ್ನು ಹಂಚಿಕೊಳ್ಳಲಾಗಿದೆ. ಉತ್ತರ ಪ್ರದೇಶದ ಮದರಸಾದಲ್ಲಿ ಈ ಘಟನೆ ನಡೆದಿದೆ ಎಂದು ಪೋಸ್ಟ್‌ನಲ್ಲಿ ಹೇಳಲಾಗಿದೆ.

https://twitter.com/brijeshchaodhry/status/1571761130162524160

” ಮದರಸಗಳಲ್ಲಿ ಎಂತಹ ಗುಣಮಟ್ಟದ ಶಿಕ್ಷಣ ಕೊಡುತ್ತಿದ್ದಾರೆ ಎಂದು ಈಗ ಎಲ್ಲರಿಗೂ ಗೊತ್ತಾಗಿದೆ. ಮಹರಾಜ್ ಜೀ ಸರಿಯಾದ ನಿರ್ಧಾರ ತೆಗೆದುಕೊಂಡಿದ್ದೀರಿ, ಮತ್ತಷ್ಟು ಮದರಸಾಗಳ ಮೇಲೆ ದಾಳಿ ಮಾಡಿದರೆ ಇನ್ನಷ್ಟು ಬಂಡವಾಳ ಹೊರಗೆ ಬರುತ್ತದೆ” ಎಂಬ ಒಕ್ಕಣೆಯೊಂದಿಗೆ ವಿಡಿಯೋವನ್ನು ಹಂಚಿಕೊಳ್ಳಲಾಗಿದೆ. ವೈರಲ್ ಆಗಿರುವ ವಿಡಿಯೊ ಹೆಚ್ಚಿನ ಗುಣಮಟ್ಟವನ್ನು ಹೊಂದಿಲ್ಲದೆ, ಗಡ್ಡದಾರಿಯೊಬ್ಬ ಬಾಲಕಿಯೊಂದಿಗೆ ತಪ್ಪಾಗಿ ವರ್ತಿಸುತ್ತಿರುವಂತೆ ಕಾಣುತ್ತಿದೆ.

ಟ್ವಿಟರ್ ಮತ್ತು ಫೇಸ್‌ಬುಕ್‌ನಲ್ಲಿ ವೈರಲ್ ಆಗಿರುವ ವಿಡಿಯೋ ದೃಶ್ಯಾವಳಿಗಳು ಎಲ್ಲಿಂದ ಬಂದಿವೆ ಇದರ ಮೂಲ ಯಾವುದು ? ಎಂದು ವಿಡಿಯೋ ಪೋಸ್ಟ್‌ನಲ್ಲಿ ಮಾಡಲಾದ ಪ್ರತಿಪಾದನೆಯನ್ನು ಪರಿಶೀಲಿಸೋಣ.

ಫ್ಯಾಕ್ಟ್‌ಚೆಕ್ :

ವೈರಲ್ ವಿಡಿಯೋದ ಕೀ ಪ್ರೇಮ್‌ಗಳನ್ನು ಬಳಸಿಕೊಂಡು ಗೂಗಲ್ ರಿವರ್ಸ್ ಇಮೇಜ್‌ ಸರ್ಚ್ ಮಾಡಿದಾಗ, 2018ರಲ್ಲಿ 2018 ರಲ್ಲಿ  ಪಾಕಿಸ್ತಾನಿ ಪೋರ್ಟಲ್‌ಗಳಲ್ಲಿ ಪ್ರಕಟವಾದ ಹಲವಾರು ಸುದ್ದಿ ವರದಿಗಳು ಲಭ್ಯವಾಗಿದ್ದು, ವರದಿಗಳ ಪ್ರಕಾರ ಅಕ್ಟೋಬರ್ 2018 ರಲ್ಲಿ ಪಾಕಿಸ್ತಾನದ ಪಂಜಾಬ್ ಪ್ರಾಂತ್ಯದ ಜಾಂಗ್‌ನಲ್ಲಿ ಈ ಘಟನೆ ಸಂಭವಿಸಿದೆ. ಶಾಲಾ ಶಿಕ್ಷಕ ಅನ್ವರ್-ಉಲ್-ಕಮರ್ 13 ವರ್ಷದ ವಿದ್ಯಾರ್ಥಿಯ ಮೇಲೆ ಲೈಂಗಿಕ ದೌರ್ಜನ್ಯ ನಡೆಸಿದ್ದನು ಎಂದು ವರದಿಯಾಗಿದೆ.

ಅಲ್ಲದೆ ಘಟನೆಯನ್ನು ಆತನ ಸ್ನೇಹಿತ ಮೊಬೈಲ್‌ನಲ್ಲಿ ವಿಡಿಯೋದಲ್ಲಿ ರೆಕಾರ್ಡ್ ಮಾಡಿ ಅದನ್ನು ಸಾಮಾಜಿಕ ಮಾಧ್ಯಮದಲ್ಲಿ ಅಪ್‌ಲೋಡ್ ಮಾಡಿದ್ದಾನೆ. ಘಟನೆಗೆ ಸಂಬಂಧಿಸಿದಂತೆ ಆರೋಪಿ ಶಿಕ್ಷಕ ಅನ್ವರ್-ಉಲ್-ಕಮರ್‌ನನ್ನು ಬಂಧಿಸಲಾಗಿದ್ದು, ವಿಡಿಯೋವನ್ನು ಹಂಚಿಕೊಂಡಿದ್ದ ವ್ಯಕ್ತಿಯು ನಾಪತ್ತೆಯಾಗಿದ್ದಾನೆ ಎಂದು ವರದಿ ಮಾಡಲಾಗಿತ್ತು.

ಆಗಿನ ಪಾಕಿಸ್ತಾನದ ಮಾನವ ಹಕ್ಕುಗಳ ಸಚಿವೆ ಶಿರೀನ್ ಮಜಾರಿ ಅವರು ಸಾಮಾಜಿಕ ಮಾಧ್ಯಮದಲ್ಲಿ ಪ್ರಕರಣದ ಬಗ್ಗೆ ಮಾತನಾಡಿ, ಘಟನೆಯ ಬಗ್ಗೆ ತಮ್ಮ ಸಚಿವಾಲಯದಿಂದ ವರದಿ ಕೇಳಲಾಗಿದೆ ಎಂದು ಹೇಳಿದ್ದರು. ಆರೋಪಿ ಶಿಕ್ಷಕ ಜಾಂಗ್‌ನಿಂದ ಪರಾರಿಯಾಗಿದ್ದನು  ನಂತರ ಅವನನ್ನು ಲಾಹೋರ್‌ನಲ್ಲಿ ಬಂಧಿಸಲಾಗಿತ್ತು, ನಂತರ ಆರೋಪಿ ಶಿಕ್ಷಕ ಪೊಲೀಸರ ಮುಂದೆ ತನ್ನ ಅಪರಾಧವನ್ನು ಒಪ್ಪಿಕೊಂಡಿದ್ದ ಎಂದು ವರದಿಯಾಗಿದೆ. ಹಾಗಾಗಿ ಈ ಘಟನೆ 2018ರಲ್ಲಿ ಪಾಕಿಸ್ತಾದಲ್ಲಿ ನಡೆದ ಹಳೆಯ ಘಟನೆಯಾಗಿದೆ ಎಂಬುದು ಸ್ಪಷ್ಟವಾಗಿದೆ.

ಭಾರತದ ಮದರಸಾಗಳಲ್ಲಿಯೂ ಮಕ್ಕಳ ಮೇಲಿನ ದೌರ್ಜನ್ಯ ಪ್ರಕರಣಗಳು ನಡೆದಿರುವುದು ಗಮನಾರ್ಹ. ಜೂನ್‌ನಲ್ಲಿ, ಉತ್ತರ ಪ್ರದೇಶದ ಆಗ್ರಾ ಜಿಲ್ಲೆಯ ಮದ್ರಸಾವೊಂದರ 50 ವರ್ಷದ ಮೌಲಾನಾ ವಿರುದ್ಧ ಸಂಸ್ಥೆಯಲ್ಲಿ ತಂಗಿದ್ದ 12 ವರ್ಷದ ಬಾಲಕಿಯ ಮೇಲೆ ಅತ್ಯಾಚಾರ ಎಸಗಿದ ಆರೋಪದ ಮೇಲೆ ಪ್ರಕರಣ ದಾಖಲಾಗಿತ್ತು. ಆದರೂ, ಸಾಮಾಜಿಕ ಮಾಧ್ಯಮಗಳಲ್ಲಿ ಹಂಚಿಕೊಳ್ಳಲಾಗುತ್ತಿರುವ ವೀಡಿಯೊ ಇತ್ತೀಚಿನದ್ದ ಅಲ್ಲ ಭಾರತದ್ದು ಅಲ್ಲ.

ಸೆಪ್ಟೆಂಬರ್‌ನಲ್ಲಿ ಉತ್ತರ ಪ್ರದೇಶ ಸರ್ಕಾರವು ಮಾನ್ಯತೆ ಪಡೆಯದ ಮದರಸಾಗಳ ಸಮೀಕ್ಷೆಯನ್ನು ನಡೆಸುವುದಾಗಿ ಘೋಷಿಸಿತು, ಅಲ್ಲಿ ಲಭ್ಯವಿರುವ ಶಿಕ್ಷಕರ ಸಂಖ್ಯೆ, ಪಠ್ಯಕ್ರಮ, ಮೂಲ ಸೌಕರ್ಯಗಳು ಮತ್ತು ಯಾವುದೇ ಸರ್ಕಾರೇತರ ಸಂಸ್ಥೆಗಳೊಂದಿಗೆ ಅವರ ಸಂಬಂಧದ ಬಗ್ಗೆ ಮಾಹಿತಿ ಸಂಗ್ರಹಿಸುವುದಾಗಿ ತಿಳಿಸಿತ್ತು. ಮದರಸಾಗಳಲ್ಲಿ ವಿದ್ಯಾರ್ಥಿಗಳಿಗೆ ಮೂಲ ಸೌಕರ್ಯಗಳ ಲಭ್ಯತೆಗೆ ಸಂಬಂಧಿಸಿದಂತೆ ರಾಷ್ಟ್ರೀಯ ಮಕ್ಕಳ ಹಕ್ಕುಗಳ ರಕ್ಷಣಾ ಆಯೋಗದ ಅಗತ್ಯಕ್ಕೆ ಅನುಗುಣವಾಗಿ ಸಮೀಕ್ಷೆ ನಡೆಸಲಾಗುವುದು ಎಂದು ಸರ್ಕಾರ ತಿಳಿಸಿತ್ತು.

ಈ ಹಿನ್ನಲೆಯಲ್ಲಿ ಹಳೆಯ ಮತ್ತು ಪಾಕಿಸ್ತಾನದಲ್ಲಿ ನಡೆದ ಘಟನೆಯನ್ನು ಭಾರತದ್ದು ಎಂದು ತಪ್ಪಾಗಿ ಹಂಚಿಕೊಳ್ಳಲಾಗಿದೆ. ಹಾಗಾಗಿ ಪೋಸ್ಟ್‌ನಲ್ಲಿ ಮಾಡಲಾದ ಪ್ರತಿಪಾದನೆ ತಪ್ಪಾಗಿದೆ.

ನಿಮ್ಮ ಸುತ್ತಮುತ್ತ ಮತ್ತು  ಸಾಮಾಜಿಕ ಜಾಲತಾಣಗಳಲ್ಲಿ ಯಾವುದೇ ಸುದ್ದಿಯು ಸುಳ್ಳು ಎಂದು ನಿಮಗೆ ಸಂದೇಹ ಬಂದಿದ್ದರೆ ಅದನ್ನು Ensuddi.com ವಾಟ್ಸಾಪ್  ನಂ 9108969301 ಗೆ ತಲುಪಿಸಿ. ನಾವು ಫ್ಯಾಕ್ಟ್‌ಚೆಕ್ ಮಾಡಿ ಸತ್ಯ ನಿಮ್ಮೆದುರು ಇಡುತ್ತೇವೆ


ಇದನ್ನು ಓದಿರಿ : ಫ್ಯಾಕ್ಟ್‌ಚೆಕ್ : ನಾನು ಪಾಕಿಸ್ತಾನಿ ಎಂದು ಹೇಳಲು ಹೆಮ್ಮೆ ಪಡುತ್ತೇನೆ ಎಂದು ಶಾರುಖ್ ಖಾನ್ ಹೇಳಿದ್ದು ನಿಜವೇ ?


 

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights