ಫ್ಯಾಕ್ಟ್‌ಚೆಕ್: ನಮಗೆ ಕಾಶ್ಮೀರದ ಬದಲು ವಿರಾಟ್ ಕೊಹ್ಲಿ ಕೊಡಿ ಎಂದು ಕೇಳಿದ್ದು ನಿಜವೇ?

ಪಾಕಿಸ್ತಾನದ ಕ್ರಿಕೆಟ್ ಅಭಿಮಾನಿಗಳು ‘ನಮಗೆ ಕಾಶ್ಮೀರ ಬೇಡ, ವಿರಾಟ್ ಕೊಹ್ಲಿಯನ್ನು ನಮಗೆ ಕೊಡಿ’ ಎಂಬ ಬ್ಯಾನರ್‌ಗಳನ್ನು ಹಿಡಿದು ಒತ್ತಾಯಿಸುತ್ತಿದ್ದಾರೆ. ಪಾಕಿಸ್ತಾನದ ಅಭಿಮಾನಿಗಳು ಕಾಶ್ಮೀರದ ಬದಲಿಗೆ ಭಾರತೀಯ ಕ್ರಿಕೆಟ್ ತಂಡದ ಮಾಜಿ ನಾಯಕ ಕೊಹ್ಲಿಯನ್ನು ಬಯಸುತ್ತಾರೆ ಎಂಬ ಪೋಸ್ಟ್‌ಅನ್ನು ಹಂಚಿಕೊಳ್ಳಲಾಗುತ್ತಿದೆ. ಹಾಗಿದ್ದರೆ ಈ ಪೋಸ್ಟ್‌ ನಿಜವೇ ಎಂದು ಪೋಸ್ಟ್‌ನಲ್ಲಿ ಮಾಡಲಾದ ಪ್ರತಿಪಾದನೆಯನ್ನು ಪರಿಶೀಲಿಸೋಣ.

ಫ್ಯಾಕ್ಟ್‌ಚೆಕ್:

ಸಾಮಾಜಿಕ ಮಾಧ್ಯಮಗಳಲ್ಲಿ ವೈರಲ್ ಆಗುತ್ತಿರುವ ಫೋಟೋವನ್ನು ಗೂಗಲ್ ರಿವರ್ಸ್  ಇಮೇಜ್‌ ಸರ್ಚ್ ಮಾಡಿದಾಗ, ಇಂಡಿಯಾ ಟುಡೆಯ 2016 ರ ಲೇಖನವನ್ನು ಕಂಡುಕೊಂಡಿದ್ದೇವೆ. ಇದರಲ್ಲಿ ವೈರಲ್ ಚಿತ್ರವಿರುವ ಬ್ಯಾನರ್‌ನ ಎರಡು ಕಡೆಗಳಿಂದ ತೆಗೆದ ಚಿತ್ರಗಳನ್ನು ಹಂಚಿಕೊಳ್ಳಲಾಗಿದೆ. ವರದಿಯ ಪ್ರಕಾರ, 2016 ರಲ್ಲಿ ಕೆಲವು ಕಾಶ್ಮೀರಿ ಯುವಕರು ತಮ್ಮ ಕೈಯಲ್ಲಿ ಪಾಕಿಸ್ತಾನದ ಧ್ವಜವನ್ನು ಹಿಡಿದು ಪಾಕಿಸ್ತಾನವನ್ನು ಬೆಂಬಲಿಸಿ ಘೋಷಣೆಗಳನ್ನು ಕೂಗುತ್ತಿರುವುದು ವರದಿಯಾಗಿದೆ. ಇದರೊಂದಿಗೆ ಹಿಜ್ಬುಲ್ ಮುಜಾಹಿದ್ದೀನ್ ಕಮಾಂಡರ್ ಬುರ್ಹಾನ್ ವಾನಿ, ಪ್ರತ್ಯೇಕತಾವಾದಿ ನಾಯಕ ಸೈಯದ್ ಅಲಿ ಗಿಲಾನಿ ಅವರನ್ನು ಬೆಂಬಲಿಸಿ ಅವರು ಸ್ವಾತಂತ್ರ್ಯದ ಘೋಷಣೆಗಳನ್ನು ಕೂಗಿದ್ದಾರೆ.

ವಾಸ್ತವವಾಗಿ, ಪಾಕಿಸ್ತಾನದ ಧ್ವಜವಿರುವ ಬ್ಯಾನರ್‌ನಲ್ಲಿ ಬರೆದಿರುವುದು ವಿರಾಟ್ ಕೊಹ್ಲಿ ಬಗ್ಗೆ ಅಲ್ಲ, “ನಮಗೆ ಸ್ವಾತಂತ್ರ್ಯ ಬೇಕು” ಎಂದು ಬರೆಯಲಾಗಿದೆ ಎಂಬುದು ಗಮನಿಸಬೇಕಾದ ಸಂಗತಿ. ನಮಗೆ ಸ್ವಾತಂತ್ರಯ ಬೇಕು ಎಂದು ಬರೆದಿರುವ ಬ್ಯಾನರ್‌ಅನ್ನು  ‘ನಮಗೆ ಕಾಶ್ಮೀರ ಬೇಡ, ವಿರಾಟ್ ಕೊಹ್ಲಿಯನ್ನು ನಮಗೆ ಕೊಡಿ” ಎಂದು ಬ್ಯಾನರ್‌ನಲ್ಲಿ ಬರೆಯಲಾಗಿದೆ ಎಂದು ಎಡಿಟ್ ಮಾಡಲಾದ ಫೋಟೋವನ್ನು ಹಂಚಿಕೊಳ್ಳಲಾಗಿದೆ.

ಟಿ-20 ವಿಶ್ವಕಪ್ ಕ್ರಿಕೆಟ್‌ನಲ್ಲಿ ಪಾಕಿಸ್ತಾನ ತಂಡದ ವಿರುದ್ದ ಭಾರತ  ತಂಡ ವಿರೋಚಿತ ಗೆಲುವು ಸಾಧಿಸಲು ಕಾರಣರಾದ ವಿರಾಟ್‌ ಕೊಹ್ಲಿ ಅವರ ಅಬ್ಬರದ ಬ್ಯಾಟಿಂಗ್ ಪ್ರದರ್ಶನದ ನಂತರ ಸಾಮಾಜಿಕ ಮಾಧ್ಯಮಗಳಲ್ಲಿ ಪೋಸ್ಟ್‌ಅನ್ನು ಹಂಚಿಕೊಂಡಿದ್ದಾರೆ. ಆದರೆ ಈ ಪೋಸ್ಟ್‌ಅನ್ನು 2019ರಿಂದಲೂ ಹಂಚಿಕೊಳ್ಳಲಾಗುತ್ತಿದೆ.

ಒಟ್ಟಾರೆಯಾಗಿ ಹೇಳುವುದಾದರೆ, ಹಲವು ವರ್ಷಗಳಿಂದ ಇದೇ ಪ್ರತಿಪಾದನೆಯೊಂದಿಗೆ ಸಾಮಾಜಿಕ ಮಾಧ್ಯಮಗಳಲ್ಲಿ ಪೋಸ್ಟ್‌ಅನ್ನು ಹಂಚಿಕೊಳ್ಳಲಾಗುತ್ತಿದ್ದು, ನಮಗೆ ಸ್ವಾತಂತ್ರ ಬೇಕು ಎಂದು ಕಾಶ್ಮೀರಿ ಮುಸ್ಲಿಮರು, ಪಾಕಿಸ್ತಾನದ ಬಾವುಟ ಹಿಡಿದು We want Azaadi ಎಂಬ ಬ್ಯಾನರ್‌ಅನ್ನು ಹಿಡಿದಿರುವ ಫೋಟೋವನ್ನು ಎಡಿಟ್ ಮಾಡಿ ನಮಗೆ ಕಾಶ್ಮೀರ ಬೇಡ ವಿರಾಟ್ ಕೊಹ್ಲಿ ಕೊಡಿ ಎಂದು ಬರೆದಿರುವಂತೆ ಮಾಡಿ ಸಾಮಾಜಿಕ ಮಾಧ್ಯಮಗಳಲ್ಲಿ ಹಂಚಿಕೊಳ್ಳಲಾಗುತ್ತದೆ. ಹಾಗಾಗಿ ಪೋಸ್ಟ್‌ನಲ್ಲಿ ಮಾಡಲಾದ ಪ್ರತಿಪಾದನೆ ತಪ್ಪಾಗಿದೆ.

ನಿಮ್ಮ ಸುತ್ತಮುತ್ತ ಮತ್ತು  ಸಾಮಾಜಿಕ ಜಾಲತಾಣಗಳಲ್ಲಿ ಯಾವುದೇ ಸುದ್ದಿಯು ಸುಳ್ಳು ಎಂದು ನಿಮಗೆ ಸಂದೇಹ ಬಂದಿದ್ದರೆ ಅದನ್ನು Ensuddi.com ವಾಟ್ಸಾಪ್  ನಂ 9108969301 ಗೆ ತಲುಪಿಸಿ. ನಾವು ಫ್ಯಾಕ್ಟ್‌ಚೆಕ್ ಮಾಡಿ ಸತ್ಯ ನಿಮ್ಮೆದುರು ಇಡುತ್ತೇವೆ


ಇದನ್ನು ಓದಿರಿ: ಫ್ಯಾಕ್ಟ್‌ಚೆಕ್: ಕಾಂಗ್ರೆಸ್‌ ಪಕ್ಷದ ಹಸ್ತದ ಚಿನ್ಹೆ ಮುಸ್ಲಿಂ ಧರ್ಮದಿಂದ ಬಂದಿದೆಯೇ?


 

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights