ಫ್ಯಾಕ್ಟ್‌ಚೆಕ್: ಇಂಡೋನೇಷ್ಯಾದಲ್ಲಿ ಲಕ್ಷ್ಮಿ, ಗಣಪತಿ ಚಿತ್ರಗಳಿರುವ ನೋಟುಗಳು ಚಲಾವಣೆಯಲ್ಲಿರುವುದು ನಿಜವೇ?

ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಅವರು ಮಹಾತ್ಮಾ ಗಾಂಧಿಯವರ ಭಾವಚಿತ್ರದೊಂದಿಗೆ ಗಣೇಶ ಮತ್ತು ಲಕ್ಷ್ಮಿ ದೇವಿಯ ಫೋಟೋಗಳನ್ನು ನೋಟುಗಳಲ್ಲಿ ಮುದ್ರಿಸುವಂತೆ ಒಕ್ಕೂಟ ಸರ್ಕಾರಕ್ಕೆ ಮನವಿ ಮಾಡಿದ್ದರು. ನೋಟುಗಳ ಮೇಲೆ ದೇವರುಗಳ ಫೋಟೋಗಳನ್ನು ಮುದ್ರಿಸುವುದರಿಂದ ದೇಶದ ಜನರು ಆರ್ಥಿಕತೆಯನ್ನು ಸುಧಾರಿಸುವ ಪ್ರಯತ್ನದಲ್ಲಿ ಆಶೀರ್ವಾದ ಪಡೆಯುತ್ತಾರೆ ಎಂದು ಮಾಧ್ಯಮಗಳಿಗೆ ಹೇಳಿಕೆಯನ್ನು ನೀಡಿದ್ದರು.

ಇಂಡೋನೇಷ್ಯಾದ 20,000 ರೂಪಾಯಿ ನೋಟಿನ ಮೇಲೆ ಗಣೇಶನ ಫೋಟೋ ಇದೆ.  ಇಂಡೋನೇಷ್ಯಾ ಅದನ್ನು ಮಾಡಲು ಸಾಧ್ಯವಾದರೆ, ನಾವೂ ಕೂಡ ಯಾಕೆ ಮಾಡಬಾರದು. ದೇಶದ ಆರ್ಥಿಕ ಪರಿಸ್ಥಿತಿಯನ್ನು ಪರಿಹರಿಸುವ ಪ್ರಯತ್ನಗಳ ಹೊರತಾಗಿ ನಮಗೆ ಸರ್ವಶಕ್ತನ ಆಶೀರ್ವಾದ ಬೇಕು. ಆದ್ದರಿಂದ ಕೇಂದ್ರಕ್ಕೆ ಪತ್ರ ಬರೆದು ಮನವಿ ಮಾಡುವುದಾಗಿ ಅವರು ತಿಳಿಸಿದ್ದಾರೆ.

 

ಅರವಿಂದ್ ಕೇಜ್ರಿವಾಲ್ ಹೇಳಿಕೆಯನ್ನು ಆಮ್ ಆದ್ಮಿ ಪಕ್ಷದ ಬೆಂಬಲಿಗರು ಸಮರ್ಥಿಸಿ ಸಾಮಾಜಿಕ ಮಾಧ್ಯಮಗಳಲ್ಲಿ ಪೋಸ್ಟ್‌ಅನ್ನು ಹಂಚಿಕೊಂಡಿದ್ದಾರೆ.

ಇಂಡೋನೇಷ್ಯಾದಲ್ಲಿ ಮುಸ್ಲಿಮರ ಸಂಖ್ಯೆ ಅಧಿಕವಾಗಿದ್ದರೂ  ಅಲ್ಲಿ ಮುದ್ರಣವಾಗುವ ನೋಟುಗಳ ಮೇಲೆ ಹಿಂದೂ ದೇವರ ಚಿತ್ರಗಳೊಂದಿಗೆ ಮುದ್ರಿಸಲಾಗುತ್ತಿದೆ. ಎಂದು ಸಾಮಾಜಿಕ ಮಾಧ್ಯಮಗಳಲ್ಲಿ ಹಂಚಿಕೊಂಡಿದ್ದಾರೆ.

ಈ ಹಿಂದೆಯೂ ದೇವರ ಚಿತ್ರಗಳಿರುವ ನೋಟು ಚಲಾವಣೆಯಲ್ಲಿದೆ ಎಂಬ ಹೇಳಿಕೆಗಳು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದ್ದವು.

ಹಾಗಿದ್ದರೆ ಇಂಡೋನೇಷ್ಯಾದಲ್ಲಿ ದೇವರ ಚಿತ್ರಗಳಿರುವ ನೋಟುಗಳನ್ನು ಮುದ್ರಿಸುತ್ತಿರುವುದು ನಿಜವೇ? ದೇವರ ಫೋಟೊಗಳ ನೋಟುಗಳ ಮುದ್ರಣದಿಂದಾಗಿ ಅಲ್ಲಿಯ ಆರ್ಥಿಕತೆ ಉತ್ತಮವಾಗಿದೆಯೇ ಎಂದು ಪರಿಶೀಲಿಸೋಣ.

ಫ್ಯಾಕ್ಟ್‌ಚೆಕ್:

ಇಂಡೋನೇಷ್ಯಾದಲ್ಲಿ 1998ರಲ್ಲಿ 20 ಸಾವಿರದ ನೋಟನ್ನು ಜಾರಿಗೆ ತರಲಾಯಿತು. ಆ ನೋಟಿನ ಮೇಲೆ ಗಣೇಶನ ಚಿತ್ರವನ್ನು ಮುದ್ರಿಸಲಾಗಿತ್ತು.  ಜನವರಿ 23, 1998 ರಂದು ಪರಿಚಯಿಸಲಾದ ನೋಟುಗಳಲ್ಲಿ ಗಣೇಶನ ಫೋಟೋ ಪಕ್ಕದಲ್ಲಿ ಇಂಡೋನೇಷ್ಯಾದ ಸ್ವಾತಂತ್ರ್ಯ ಹೋರಾಟಗಾರ ಕೀ ಹಾಜಾರ್ ದೇವಂತರಾರ ಫೋಟೋವನ್ನು ಸೇರಿಸಲಾಗಿತ್ತು. ಹಾಜಾರ್ ದೇವಂತರಾರ ಜನ್ಮದಿನವನ್ನು ಇಂಡೋನೇಷ್ಯಾದ ರಾಷ್ಟ್ರೀಯ ಶಿಕ್ಷಣ ದಿನವನ್ನಾಗಿ ಆಚರಿಸಲಾಗುತ್ತದೆ.

ಈ ಸರಣಿಯ  20,000 ನೋಟುಗಳ ಚಲಾವಣೆಯನ್ನು ಹತ್ತು ವರ್ಷಗಳವರೆಗೆ ಮಾತ್ರ ಅನುಮೋದಿಸಿ ಜಾರಿಗೆ ತರಲಾಗಿತ್ತು, ಅದು ಡಿಸೆಂಬರ್ 31, 2008ರ ವರಗೆ ಮಾತ್ರವೇ ಚಲಾವಣೆಯಲ್ಲಿತ್ತು, ನಂತರ ದೇವರ ಚಿತ್ರವಿರುವ ನೋಟುಗಳನ್ನು ಇಂಡೋನೇಷ್ಯಾ ಬ್ಯಾಂಕ್ ರದ್ದುಗೊಳಿಸಿತ್ತು. ಇಂಡೋನೇಷ್ಯಾ ಬ್ಯಾಂಕ್ ನವೆಂಬರ್ 2008 ರಲ್ಲಿ ಈ ನೋಟು ಅಮಾನ್ಯೀಕರಣವನ್ನು ಘೋಷಿಸುವ ಅಧಿಸೂಚನೆಯನ್ನು ಇಲ್ಲಿ ಕಾಣಬಹುದು. ಇತರ 3 ಬ್ಯಾಂಕ್‌ನೋಟ್ ಸರಣಿಗಳನ್ನು ರದ್ದುಪಡಿಸಿತ್ತು.

ಜೂನ್ 2018 ರಲ್ಲಿ, ಬ್ಯಾಂಕ್ ಇಂಡೋನೇಷ್ಯಾ ಈ ಕೆಳಗಿನ ಪತ್ರಿಕಾ ಪ್ರಕಟಣೆಯನ್ನು ಬಿಡುಗಡೆ ಮಾಡಿದ್ದು, ಅಮಾನ್ಯಗೊಳಿಸಲಾದ IDR 50,000 ಬ್ಯಾಂಕ್ ನೋಟಿನ ಚಿತ್ರವನ್ನು ಒಳಗೊಂಡಿದೆ. ಬಿಡುಗಡೆಯನ್ನು ಇಲ್ಲಿ ಕಾಣಬಹುದು.

The graphic in Bank Indonesias June 2018 press release

ಭದ್ರತೆಯ ಕಾರಣಕ್ಕೆ ಈ ನೋಟುಗಳ ಚಲಾವಣೆಯನ್ನು ದೀರ್ಘಾವಧಿಯ ಬದಲಿಗೆ ಒಂದು ನಿರ್ಧಿಷ್ಟ ಸಮಯವನ್ನು ನಿಗದಿಗೊಳಿಸಿಕೊಳ್ಳಲಾಗಿದೆ. “ಬ್ಯಾಂಕ್ ಇಂಡೋನೇಷ್ಯಾ ನಿಯಮಿತವಾಗಿ ರುಪಿಯಾ ಬ್ಯಾಂಕ್ ನೋಟುಗಳನ್ನು ಹಿಂಪಡೆಯುತ್ತದೆ ಮತ್ತು ಹಣದ ಮೇಲಿನ ಚಲಾವಣೆ ಮತ್ತು ಭದ್ರತಾ ವೈಶಿಷ್ಟ್ಯಗಳ ಅಭಿವೃದ್ಧಿಯ ಅವಧಿಯನ್ನು ಗಣನೆಗೆ ತೆಗೆದುಕೊಂಡು ಹಿಂಪಡೆಯುತ್ತದೆ” ಎಂದು ಹಣದ ಚಲಾವಣೆಯಲ್ಲಿರುವ ಡೆಪ್ಯುಟಿ ಗವರ್ನರ್ ಎಸ್ ಬುಡಿ ರೋಚಾಡಿ ಹೇಳಿಕೆಯಲ್ಲಿ ತಿಳಿಸಿದ್ದಾರೆ. ಪ್ರಸ್ತುತವಾಗಿ ಇಂಡೋನೇಷ್ಯಾದಲ್ಲಿ ಯಾವುದೇ ದೇವರ ಚಿತ್ರವಿರುವ ನೋಟುಗಳ ಚಲಾವಣೆ ಇಲ್ಲ. ಮತ್ತು ಅರವಿಂದ್ ಕೇಜ್ರಿವಾಲ್ ಹೇಳಿರುವಂತೆ ಲಕ್ಷ್ಮಿ ಚಿತ್ರ ಇಲ್ಲವೇ ಇಲ್ಲ.

ಒಟ್ಟಾರೆಯಾಗಿ ಹೇಳುವುದಾರೆ, ಇಂಡೋನೇಷ್ಯಾದಲ್ಲಿ 1998ರಲ್ಲಿ ಬಾಂಕ್ ಇಂಡೋನೇಷ್ಯಾ ಜಾರಿಗೆ ತಂದ 20,000 ಮುಖಬೆಲೆಯ ನೋಟಿನ ಮೇಲೆ ಗಣೇಶನ ಚಿತ್ರದೊಂದಿಗೆ ಸ್ವಾತಂತ್ರ್ಯ ಹೋರಾಟಗಾರ ಕೀ ಹಾಜಾರ್ ದೇವಂತರಾರ ಫೋಟೋ ಇರುವ ನೋಟುಗಳನ್ನು ಮುದ್ರಿಸಲಾಗಿತ್ತು. ನಂತರ ಭದ್ರತೆಯ ಕಾರಣಕ್ಕೆ 2008ರಲ್ಲಿ ಈ ನೋಟುಗಳನ್ನು ರದ್ದುಗೊಳಿಸಿ ಆದೇಶಿಸಲಾಯಿತು. ಹಾಗಾಗಿ ಸದ್ಯ  ಅರವಿಂದ್ ಕೇಜ್ರಿವಾಲ್ ಹೇಳಿರುವಂತೆ ಇಂಡೋನೇಷ್ಯಾದ್ಲೂ ಲಕ್ಷ್ಮಿ, ಗಣೇಶ ಚಿತ್ರವಿರುವ ನೋಟುಗಳು ಚಲಾವಣೆಯಲ್ಲಿ ಇಲ್ಲ. ಹಾಗಾಗಿ AAP ಬೆಂಬಲಿಗರು ಹಂಚಿಕೊಂಡಿರುವ ಪೋಸ್ಟ್‌ನಲ್ಲಿ ಮಾಡಲಾದ ಪ್ರತಿಪಾದನೆ ತಪ್ಪಾಗಿದೆ.

ಕೃಪೆ: ಬೂಮ್

ನಿಮ್ಮ ಸುತ್ತಮುತ್ತ ಮತ್ತು  ಸಾಮಾಜಿಕ ಜಾಲತಾಣಗಳಲ್ಲಿ ಯಾವುದೇ ಸುದ್ದಿಯು ಸುಳ್ಳು ಎಂದು ನಿಮಗೆ ಸಂದೇಹ ಬಂದಿದ್ದರೆ ಅದನ್ನು Ensuddi.com ವಾಟ್ಸಾಪ್  ನಂ 9108969301 ಗೆ ತಲುಪಿಸಿ. ನಾವು ಫ್ಯಾಕ್ಟ್‌ಚೆಕ್ ಮಾಡಿ ಸತ್ಯ ನಿಮ್ಮೆದುರು ಇಡುತ್ತೇವೆ


ಇದನ್ನು ಓದಿರಿ: ಫ್ಯಾಕ್ಟ್‌ಚೆಕ್: ರಿಷಿ ಸುನಕ್ ಹಳೆಯ ವಿಡಿಯೋವನ್ನು ತಪ್ಪಾಗಿ ಹಂಚಿಕೊಂಡ ಇಂಡಿಯಾ ಟುಡೇ


 

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

One thought on “ಫ್ಯಾಕ್ಟ್‌ಚೆಕ್: ಇಂಡೋನೇಷ್ಯಾದಲ್ಲಿ ಲಕ್ಷ್ಮಿ, ಗಣಪತಿ ಚಿತ್ರಗಳಿರುವ ನೋಟುಗಳು ಚಲಾವಣೆಯಲ್ಲಿರುವುದು ನಿಜವೇ?

  • October 30, 2022 at 2:23 pm
    Permalink

    ಇಂಡೋನೇಷ್ಯಾದಲ್ಲಿ ನೋಟಿನಲ್ಲಿ ಲಕ್ಷ್ಮಿ ಗಣಪತಿಯ ಚಿತ್ರ ಇದೆ ಅಂತ ನಮ್ಮ ಇಂಡಿಯಾ ನೇಷನ್ ಗೆ ತರೋದು ಬೇಡ ಹಾಗಂತ ನೋಟಿನಲ್ಲಿ ಇರುವ ಫೋಟೋ ಚೇಂಜ್ ಮಾಡಬೇಕು ಅಂತ ಅನಿಸಿದ್ರೆ ಟೆನಿಸ್ ಕೃಷ್ಣ ಅವರ ಫೋಟೋ ಹಾಕಿ ಅಂತ ನನ್ನ ಅಭಿಪ್ರಾಯ ಎಲ್ಲರೂ ಖುಷಿ ಪಡೆಯಬೇಕು

    Reply

Leave a Reply

Your email address will not be published.

Verified by MonsterInsights