ಫ್ಯಾಕ್ಟ್‌ಚೆಕ್: ಹರಿವ ನೀರಿನ ವಿರುದ್ದ ದಿಕ್ಕಿಗೆ ಈಜುವ ಗರುಡ ಸಂಜೀವಿನಿ! ವಾಸ್ತವವೇನು?
ರಾಮಾಯಣದಲ್ಲಿ ಬರುವ ಸಂಜೀವಿನಿ ಸಸ್ಯದ ಬಗ್ಗೆ ಕೇಳಿದ್ದೇವೆ. ರಾಮನ ಮಹಾ ಭಕ್ತನಾದ ಹನುಮಂತ ಲಕ್ಷ್ಮಣನನ್ನು ಉಳಿಸಿಕೊಳ್ಳಲು ಹಿಮಾಲಯ ಪರ್ವತದಲ್ಲಿ ಸಿಗುವ ಸಂಜೀವಿನಿ ಸಸ್ಯವನ್ನು ತರಲು ಹೊರಟ ಹನುಮಂತನ ಬೆಟ್ಟವನ್ನೆ ತಂದ ಕಥೆ ನಮಗೆಲ್ಲ ಗೊತ್ತೇ ಇದೆ.
“ನೀರಿನ ವಿರುದ್ಧ ಚಲಿಸುವ ಗರುಡ ಸಂಜೀವಿನಿ ಬೇರು.. ಗರುಡ ಸಂಜೀವನಿ ಹಿಮಾಲಯ ಪರ್ವತ ಶ್ರೇಣಿಯ ತಪ್ಪಲಿನಲ್ಲಿರುವ ದಟ್ಟ ಅರಣ್ಯಗಳಲ್ಲಿ ಕಂಡುಬರುವ ಅಪರೂಪದ ಗಿಡಮೂಲಿಕೆಯಾಗಿದೆ. ಇದು ಔಷಧೀಯ ಮೂಲಿಕೆಯಾಗಿದ್ದು, ಆಯುರ್ವೇದದಲ್ಲಿ ಪ್ರಧಾನವಾಗಿ ಮಾರಣಾಂತಿಕ ಹಾವು ಕಡಿತಗಳು ಮತ್ತು ಇತರ ಗಂಭೀರ ಒಳಹರಿವುಗಳಿಗೆ ಚಿಕಿತ್ಸೆ ನೀಡಲು ಬಳಸಲಾಗುತ್ತದೆ” ಎಂಬ ಪ್ರತಿಪಾದನೆಯೊಂದಿಗೆ ಹಲವು ಸಾಮಾಜಿಕ ಬಳಕೆದಾರರು ಪೋಸ್ಟ್‌ಅನ್ನು ಹಂಚಿಕೊಂಡಿದ್ದಾರೆ.
ಪುರಾಣದ ಕಥೆಗಳಲ್ಲಿ ಉಲ್ಲೇಖವಿದ್ದ ಸಂಜೀವಿನಿ ಸಸ್ಯದ ಬೇರು ಈಗ ಆಧುನಿಕ ಯುಗದಲ್ಲೂ ಭಾರೀ ಸದ್ದು ಮಾಡುತ್ತಿದೆ. ಹೌದು ಸಾಮಾಜಿಕ ಮಾಧ್ಯಮಗಳಲ್ಲಿ ಗರುಡ ಸಂಜೀವಿನಿ ಬೇರು ನೀರಿನ ವಿರುದ್ಧ ದಿಕ್ಕಿನಲ್ಲಿ ಚಲಿಸುತ್ತದೆ ಎನ್ನಲಾದ ವಿಡಿಯೋ ಒಂದು ವೈರಲ್ ಆಗಿದೆ. ಹಾವಿನಂತೆ ಸುರಳಿಯಾಕಾದಲ್ಲಿ ಕಂಡುಬರುವ ಗೇಣು ಉದ್ದದ ಕಡ್ಡಿಯನ್ನು ನೀರಿನ ವಿರುದ್ದ ದಿಕ್ಕಿನಲ್ಲಿ ಬಿಟ್ಟಾಗ ಅದು ಚಲಿಸುವಂತೆ ಈ ವೈರಲ್ ದೃಶ್ಯಗಳಲ್ಲಿ ಕಂಡುಬರುತ್ತದೆ. ಈ ದೃಶ್ಯಗಳನ್ನು ನೋಡಿದ ಸಾಮಾಜಿಕ ಮಾಧ್ಯಮದ ಬಳಕೆದಾರರು ಇದೊಂದು ಪವಾಡ, ಅದ್ಭುತ ಶಕ್ತಿ ಎಂದೆಲ್ಲಾ ಕಮೆಂಟ್ ಮಾಡಿದ್ದಾರೆ.
यह संजीवनी सर्प की तरह लंबी घुमावदार होती है और पानी के प्रवाह के विपरीत बहने का अनोखा गुण होता है ! pic.twitter.com/M02jJeGJ6M
— Virender Sehwag (@virendersehwag) August 23, 2018
ಗರುಡ ಸಂಜೀವಿನಿಯು ನೀರಿನ ದಿಕ್ಕಿಗೆ ವಿರುದ್ಧವಾಗಿ ಚಲಿಸುವ ಸಸ್ಯವಾಗಿದೆ. ಅದ್ಭುತ! ಎಂದು ಭಾರತದ ಕ್ರಿಕೆಟ್‌ನ ಮಾಜಿ ಆಟಗಾರ ವಿರೇಂದ್ರ ಸೆವ್ವಾಗ್ ಅವರು 2018ರಲ್ಲಿ ತಮ್ಮ ಟ್ವಿಟರ್‌ನಲ್ಲಿ ವಿಡಿಯೋವನ್ನು ಹಂಚಿಕೊಂಡಿದ್ದಾರೆ.
ಗರುಡ ಸಂಜೀವಿನಿಯು ಇಂತಹ ಶಕ್ತಿಯನ್ನು ಹೊಂದಿದೆಯೇ ಎಂದು ಮತ್ತಷ್ಟು ಸರ್ಚ್ ಮಾಡಿದಾಗ, ಗರುಡ ಸಂಜೀವಿನಿಯ ಬೇರು ಎಂದು ಸಾಮಾಜಿಕ ಮಾಧ್ಯಮಗಳಲ್ಲಿ ಹಂಚಿಕೊಂಡಿರುವ ವಸ್ತು ತೇಲುತ್ತಿರುವುದು ಪವಾಡಗಳಿಂದಲ್ಲ, ಬದಲಿಗೆ ಬಾಗಿದ ಆಕಾರದಿಂದಾಗಿ ಇದು ನೀರಿನಲ್ಲಿ ತೇಲುತ್ತದೆ. ಈ ಮರವು ಒಳಗಿನಿಂದ ಟೊಳ್ಳಾಗಿದೆ ಎಂದು ವಿಜ್ಞಾನಿ ಡೆಕ್ಸ್ಟರ್ ತಮ್ಮ ಸಂಶೋಧನೆಯಲ್ಲಿ ಹೇಳಿದ್ದಾರೆ.
ವಿಜ್ಞಾನ ಏನು ಹೇಳುತ್ತದೆ:
ಗರುಡ ಸಂಜೀವನಿ ವಿಜ್ಞಾನಿಗಳಿಗೆ ಸಂಶೋಧನೆಯ ವಿಷಯವಾಗಿದೆ. ಇದು ಹಾವಿನಂತೆ ಆಕಾರದಲ್ಲಿ ಇರುವುದರಿಂದ, ನೀರಿನ ವಿರುದ್ಧ ದಿಕ್ಕಿನಲ್ಲಿ ಹರಿಯುವ ಗುಣ ಹೊಂದಿದೆ. ನೀರು ತುಂಬಿದ ಪಾತ್ರೆಯಲ್ಲಿ ಗರುಡ ಸಂಜೀವಿನಿ ಎಂಬ ಹೆಸರಿನ ಕಡ್ಡಿಯನ್ನು ಇಟ್ಟುಕೊಂಡು ಮೇಲಿನಿಂದ ಪ್ರತ್ಯೇಕವಾಗಿ ನೀರನ್ನು ಸುರಿದರೆ, ಅದು ನೀರು ಬೀಳುವ ವಿರುದ್ದ ದಿಕ್ಕಿಗೆ ಅಂದರೆ ಮೇಲಕ್ಕೆ ಏರಲು ಪ್ರಾರಂಭಿಸುತ್ತದೆ.
ನಾವು “ಗರುಡ ಸಂಜೀವಿನಿ” ಎಂದು ಕರೆಯುವ ವಸ್ತವನ್ನು ವಾಸ್ತವವಾಗಿ ಮರದ ತುಂಡು ಎಂದು ವಿಜ್ಞಾನ ಹೇಳುತ್ತದೆ. ಇದು ಮರದ ಮೇಲೆ ಹಬ್ಬುವುದರಿಂದ, ಅದರ ಆಕಾರವು ಹಾವಿನಂತಿದೆ. ಇದು ಹಗುರವಾದ ಕಾರಣ ನೀರಿನಲ್ಲಿ ಮುಳುಗುವುದಿಲ್ಲ. ಮತ್ತು ನೀರಿನ ವಿರುದ್ಧ ಹರಿಯುವ ಅದರ ಗುಣಲಕ್ಷಣವನ್ನು ವಿವರಿಸಲು 2 ಕಾರಣಗಳನ್ನು ನೀಡಲಾಗಿದೆ.
- ನ್ಯೂಟನ್ನನ ಮೂರನೇ ನಿಯಮ, ಪ್ರಕೃತಿಯಲ್ಲಿ ಪ್ರತಿ ಕ್ರಿಯೆಗೆ (ಬಲ) ಸಮಾನ ಮತ್ತು ವಿರುದ್ಧವಾದ ಪ್ರತಿಕ್ರಿಯೆ ಇರುತ್ತದೆ.
- ನಟ್ ಮತ್ತು ಬೋಲ್ಟ್ ಪರಿಕಲ್ಪನೆ.
ನ್ಯೂಟನ್ನನ ಮೂರನೇ ನಿಯಮದ ಪ್ರಕಾರ, ಕ್ರಿಯೆ ಮತ್ತು ಪ್ರತಿಕ್ರಿಯೆಗಳು ಪರಸ್ಪರ ಸಮ ಮತ್ತು ವಿರುದ್ಧವಾಗಿರುತ್ತವೆ. ಇಲ್ಲಿ ಗಮನಿಸಬೇಕಾದ ಮುಖ್ಯ ಅಂಶವೆಂದರೆ, ಕ್ರಿಯೆ ಮತ್ತು ಪ್ರತಿಕ್ರಿಯೆಗಳು ಬೇರೆ ಬೇರೆ ವಸ್ತುಗಳ ಮೇಲೆ ಪ್ರಯೋಗವಾಗುತ್ತವೆ. ಒಂದು ವಸ್ತುವು ಮತ್ತೊಂದರ ಮೇಲೆ ಬಲ ಪ್ರಯೋಗಿಸಿದರೆ ತಕ್ಷಣವೇ ಮತ್ತೊಂದು ವಸ್ತುವು ಪ್ರತಕ್ರಿಯೆಯಾಗಿ ಮೊದಲನೇ ವಸ್ತುವಿನ ಮೇಲೆ ಅಷ್ಟೇ ಪ್ರಮಾಣದ ಬಲವನ್ನು ಪ್ರಯೋಗಿಸುತ್ತದೆ. ಈ ಎರಡೂ ಬಲಗಳು ಸಮವಾಗಿದ್ದರೂ ಪರಸ್ಪರ ವಿರುದ್ಧ ದಿಕ್ಕಿನಲ್ಲಿರುತ್ತವೆ.
ಈ ಎರಡು ನಿಯಮಗಳು ಒಟ್ಟಿಗೆ ಕೆಲಸ ಮಾಡುವ ವಿಧಾನವೇ ಗರುಡ ಸಂಜೀವನಿಯ ಅಸಾಧಾರಣ ನಡವಳಿಕೆಯ ಹಿಂದಿನ ಕಾರಣವಾಗಿದೆ. ನೀರಿನ ಅಲೆಗಳು ಕೆಳಗಿನಿಂದ ಮರವನ್ನು ಹೊಡೆದಾಗ ಅದು ತೇಲಲು ಸಹಾಯ ಮಾಡುತ್ತದೆ. ಅಲೆಗಳ ಮೂಲಕ ಕಡ್ಡಿಗೆ ಬಲವನ್ನು ಅನ್ವಯಿಸಿದಾಗ, ಅದರ ಸ್ಪ್ರಿಂಗ್-ರೀತಿಯ ಆಕಾರದಿಂದಾಗಿ ವಿರುದ್ಧ ಬಲವು ಪ್ರಯೋಗವಾಗುತ್ತದೆ. ಮತ್ತು ಅದು ನೀರಿನ ದಿಕ್ಕಿಗೆ ವಿರುದ್ಧವಾಗಿ ಹರಿಯುತ್ತದೆ.
ಅ ಕಡ್ಡಿ ನುಲಿದ ಆಕಾರದಲ್ಲಿದೆ. ಇದರಿಂದ ಯಾವುದೇ ಕಡ್ಡಿಯನ್ನು ಹರಿವ ನೀರಿನ ವಿರುದ್ಧವಾಗಿ ಬಿಟ್ಟಾಗ ಆರಾಮಾಗಿ ಚಲಿಸಬಲ್ಲದು. ಇದು ಯಾವುದೇ ಸಂಜೀವಿನಿ ಬೇರಲ್ಲ, ಇದರಲ್ಲಿ ಯಾವುದೇ ಶಕ್ತಿ ಇಲ್ಲ.
ಗರುಡ ಸಂಜೀವಿನಿ ಬಗ್ಗೆ ಇರುವ ಮೂಡನಂಬಿಕೆಗಳು :
ಈ ಗರುಡ ಸಂಜೀವಿನಿ ಎಂಬ ಹೆಸರನ್ನು ಬಳಸಿಕೊಂಡು ಇದಕ್ಕೆ ಅಪಾರವಾದ ಶಕ್ತಿ ಇದೆ ಎಂದು ಸಾಮಾನ್ಯ ಜನರನ್ನು ವಂಚಿಸುವುದು ನಡೆಯುತ್ತದೆ. ನಿಧಿಯನ್ನು ಹುಡುಕಿಕೊಡುತ್ತೇವೆ ಎಂದು ನಂಬಿಸಿ ವಂಚಿಸುವ ಪ್ರಕರಣಗಳು ನಡೆದಿವೆ. ಹಾಗಾಗಿ ಗರುಡ ಸಂಜೀವಿನಿ ಎಂಬ ವಸ್ತು ನೀರಿನಲ್ಲಿ ವಿರುದ್ದ ದಿಕ್ಕಿನಲ್ಲಿ ತೇಲಲು ಇರುವುದು ವೈಜ್ಞಾನಿಕ ಕಾರಣವೇ ಹೊರತು ಪವಾಡವೂ ಅಲ್ಲ, ಅತಿಮಾನುಷ ಶಕ್ತಿಯೂ ಅಲ್ಲ.
ಹಲವು ವರ್ಷಗಳಿಂದ ಸಾಮಾಜಿಕ ಮಾಧ್ಯಮಗಳಲ್ಲಿ ಈ ವಿಡಿಯೊ ಹರಿದಾಡುತ್ತಿದೆ. ಹಾಗಾಗಿ ಈ ಸಂಜೀವಿನಿ ಬೇರಿಗೆ ಏನೇನೋ ಶಕ್ತಿ ಇದೆ ಎಂದು ಹೇಳಿ ವಂಚಿಸುವು ಜನ ಮತ್ತು ಇದನ್ನು ಸಾಮಾಜಿಕ ಮಾಧ್ಯಮಗಳಲ್ಲಿ ಹಂಚಿಕೊಂಡು ಸುಳ್ಳು ಸುದ್ದಿ ಹರಡುವವರ ಬಗ್ಗೆ ಎಚ್ಚರವಿರಲಿ.
ನಿಮ್ಮ ಸುತ್ತಮುತ್ತ ಮತ್ತು ಸಾಮಾಜಿಕ ಜಾಲತಾಣಗಳಲ್ಲಿ ಯಾವುದೇ ಸುದ್ದಿಯು ಸುಳ್ಳು ಎಂದು ನಿಮಗೆ ಸಂದೇಹ ಬಂದಿದ್ದರೆ ಅದನ್ನು Ensuddi.com ವಾಟ್ಸಾಪ್ ನಂ 9108969301 ಗೆ ತಲುಪಿಸಿ. ನಾವು ಫ್ಯಾಕ್ಟ್‌ಚೆಕ್ ಮಾಡಿ ಸತ್ಯ ನಿಮ್ಮೆದುರು ಇಡುತ್ತೇವೆ
ಇದನ್ನು ಓದಿರಿ: ಫ್ಯಾಕ್ಟ್‌ಚೆಕ್: ಬರೆದಿರುವ, ಗೀಚಿದ ನೋಟುಗಳನ ಬ್ಯಾನ್ ಮಾಡಿದೆಯೇ RBI?