ಫ್ಯಾಕ್ಟ್‌ಚೆಕ್: ಕಾಂತಾರ ಚಿತ್ರ ಆಸ್ಕರ್‌ಗೆ ನಾಮನಿರ್ದೇಶನಗೊಂಡಿದೆ ಎಂದು ತಪ್ಪು ವರದಿ ಮಾಡಿದ ಕನ್ನಡ ಮಾಧ್ಯಮಗಳು!

2022ರಲ್ಲಿ KFI ನ ಬಾಕ್ಸ್‌ ಆಫೀಸ್‌ನಲ್ಲಿ ಸಖತ್ ಸೌಂಡ್ ಮಾಡಿದ್ದ ‘ಕಾಂತಾರ’ ಸಿನಿಮಾವು ಪ್ರತಿಷ್ಠಿತ ಆಸ್ಕರ್‌ ಪ್ರಶಸ್ತಿ ರೇಸ್‌ಗೆ ಎಂಟ್ರಿ ಪಡೆದುಕೊಂಡಿದೆ. ಈ ಸಿನಿಮಾದ ನಿರ್ಮಾಪಕರಾದ ಹೊಂಬಾಳೆ ಫಿಲ್ಮ್ಸ್, ಟ್ವಿಟರ್‌ನಲ್ಲಿ ಈ ವಿಚಾರವನ್ನು ಹಂಚಿಕೊಂಡಿದೆ. ‘ಕಾಂತಾರ ಚಿತ್ರವು ಎರಡು ಆಸ್ಕರ್ ವಿಭಾಗದಲ್ಲಿ ಭಾಗಿಯಾಗಲು ಅರ್ಹತೆ ಪಡೆದುಕೊಂಡಿದೆ ಎಂದು ಹಂಚಿಕೊಳ್ಳಲು ನಮಗೆ ಅತೀವ ಸಂತಸವಾಗುತ್ತಿದೆ..’ ಎಂದು ಹೊಂಬಾಳೆ ಫಿಲ್ಮ್ಸ್ ಹೇಳಿಕೊಂಡಿದೆ.

ಕನ್ನಡದ ಹಲವು ಮುಖ್ಯವಾಹಿನಿ ಮಾಧ್ಯಮಗಳು ಕಾಂತಾರ ಸಿನಿಮಾದ ಆಸ್ಕರ್ ಪ್ರಶಸ್ತಿಯನ್ನೆ ಪಡೆದುಕೊಂಡಿದೆ ಎನ್ನುವಂತೆ ಬಿಗ್ ಬ್ರೇಕಿಂಗ್ ನ್ಯೂಸ್‌ ಅನ್ನು ಪ್ರಸಾರ ಮಾಡುತ್ತಿವೆ. ‘ಕಾಂತಾರ’ ಚಿತ್ರಕ್ಕೆ 2 ಆಸ್ಕರ್ ಅರ್ಹತೆ ಸಿಕ್ಕಿದೆ ಎಂದು ಪ್ರತಿಪಾದಿಸಿ ಸುದ್ದಿಯನ್ನು ಪ್ರಸಾರ ಮಾಡಿವೆ.

ಹೊಂಬಾಳೆ ಫಿಲ್ಮ್ಸ್ ನೀಡಿರುವ ಅಪ್ಟೇಡ್‌ ಪ್ರಕಾರ 2 ವಿಭಾಗದಲ್ಲಿ ಅರ್ಹತೆ ಪಡೆದುಕೊಂಡಿದೆ ಎಂದು ಹೇಳಿದೆ ಮಾಧ್ಯಮಗಳೂ ಅದೇ ದಾಟಿಯಲ್ಲಿ ಸುದ್ದಿಯನ್ನು ಪ್ರಸಾರ ಮಾಡುತ್ತಿವೆ. ಹಾಗಿದ್ದರೆ ಈ ಎರಡು ವಿಭಾಗದ ಅರ್ಹತೆ ಎಂದರೆ ಯಾವುದು? ಎಂದು ಹಲವು ಓದುಗರು ಪ್ರಶ್ನಿಸುತ್ತಿದ್ದಾರೆ.

ಫ್ಯಾಕ್ಟ್‌ಚೆಕ್:

ಕಾಂತಾರ ಚಿತ್ರ ಬಿಡುಗಡೆ ಆದಾಗಲೇ ಸಾಕಷ್ಟು ವಿವಾದಗಳನ್ನು ಹುಟ್ಟುಹಾಕಿತ್ತು, ಚಿತ್ರದಲ್ಲಿ ಭೂತಕೋಲವನ್ನು ಹಣ ಮಾಡುವ ಉದ್ದೇಶಕ್ಕೆ ಬಳಸಿಕೊಳ್ಳಲಾಗಿದೆ ಮತ್ತು ಚಿತ್ರಕ್ಕೆ ನೀಡಲಾದ ಸಂಗೀತವನ್ನು ಬೇರೆ ಚಿತ್ರಗಳಿಂದ ನಿರ್ಮಾಪಕರ ಅನುಮತಿ ಇಲ್ಲದೆ ತಗೆದುಕೊಳ್ಳಲಾಗಿದೆ ಎಂದು ಆರೋಪಗಳು ವ್ಯಕ್ತವಾಗಿದ್ದವು.

ಕಾಂತಾರ ಚಿತ್ರ ಆಸ್ಕರ್ ಗೆ ನಾಮನಿರ್ದೇಶನ ಪಡೆದುಕೊಂಡಿದೆ ಎಂದು ಸುಳ್ಳು ಸುದ್ದಿಗಳನ್ನು ಕನ್ನಡದ ಮುಖ್ಯವಾಹಿನಿಗಳು ಪ್ರಸಾರ ಮಾಡುತ್ತಿವೆ.

ಅರ್ಹತೆಗೂ ನಾಮನಿರ್ದೇಶನಕ್ಕೂ ವ್ಯತ್ಯಾಸ ಇಲ್ಲವೇ?

ಆಸ್ಕರ್ ಅಕಾಡೆಮಿಯು (Academy of Motion Picture Arts and Sciences)  95 ನೇ ಅಕಾಡೆಮಿ ಅವಾರ್ಡಿಗೆ ಅರ್ಹತೆ ಪಡೆದಿರುವ ಮುನ್ನೂರ ಒಂದು ಚಿತ್ರಗಳ ಹೆಸರನ್ನು ಬಿಡುಗಡೆ ಮಾಡಿದೆ. ಇದು ಪ್ರಾಥಮಿಕ ಹಂತ. ಸದ್ಯ ಕಾಂತಾರ ಚಿತ್ರ ಈ ಪಟ್ಟಿಯಲ್ಲಿ ಅರ್ಹತೆ ಪಡೆದಿದೆ. ಆ ಪಟ್ಟಿ ಇಲ್ಲಿದೆ.

ಈ ಅರ್ಹತೆ ಪಡೆಯಲು, ಆ ಸಿನಿಮಾ ಅಮೆರಿಕದ ಆರು ಮೆಟ್ರೊಪಾಲಿಟನ್ ನಗರಗಳಲ್ಲಿ (Los Angeles County; the City of New York; the Bay Area; Chicago, Illinois; Miami, Florida; and Atlanta, Georgia) ಎಲ್ಲಾದರೂ ಕನಿಷ್ಟ ಒಂದು ಕಡೆ, ಜನವರಿ 1, 2022, ಮತ್ತು ಡಿಸೆಂಬರ್ 31, 2022ರ ನಡುವೆ ಸತತ ಏಳು ದಿನ ಒಂದು ಜಾಗದಲ್ಲಿ ಪ್ರದರ್ಶನ ಕಂಡಿರಬೇಕು. ಈ ಪೂರೈಸಿರುವುದಕ್ಕಾಗಿ ಕಾಂತಾರ, ಈ ಬಾರಿ ಆಸ್ಕರ್‌ಗೆ ಸ್ಪರ್ಧಿಸಲು ಅರ್ಹತೆ ಪಡೆದಿದೆ. ಹಾಗಾಗಿ ಕಾಂತಾರಕ್ಕೆ ಸಿಕ್ಕಿರುವುದು ಇನ್ನು ಅರ್ಹತೆ ಮಾತ್ರ.

ಮುಖ್ಯವಾಹಿನಿಗಳು ಮಧ್ಯಮಗಳು ಪ್ರಸಾರ ಮಾಡುತ್ತಿರುವ ಸುಳ್ಳು ಸುದ್ದಿಗೆ ಪ್ರತಿಕ್ರಿಸಿರುವ ಚಿಂತಕರಾದ ರಾಜಾರಾಮ್ ತಲ್ಲೂರ್‌ ಅವರು ತಮ್ಮ ಫೇಸ್‌ಬುಕ್‌ನಲ್ಲಿ ಕಾಂತಾರ ಚಿತ್ರದ ಅರ್ಹತೆ ಕುರಿತು ಒಂದು ಪೋಸ್ಟ್‌ ಹಾಕಿದ್ದಾರೆ.

https://press.oscars.org/

95 ನೇ ಆಸ್ಕರ್‌ ಪ್ರದರ್ಶನಗಳು ಮಾರ್ಚ್ 12, 2023 ರಂದು Ovation ಹಾಲಿವುಡ್‌ನಲ್ಲಿರುವ Dolby® ಥಿಯೇಟರ್‌ನಲ್ಲಿ ನಡೆಯಲಿದೆ ಮತ್ತು ಪ್ರಪಂಚದಾದ್ಯಂತ 200 ಕ್ಕೂ ಹೆಚ್ಚು ಪ್ರದೇಶಗಳಲ್ಲಿ ನೇರ ಪ್ರಸಾರ ಮಾಡಲಾಗುವುದು ಎಂದು ಪ್ರಕಟಣೆಯಲ್ಲಿ ತಿಳಿಸಿದೆ.

ಕನ್ನಡ ಹೋರಾಟಗಾರರಾದ ದಿನೇಶ್‌ ಕುಮಾರ್ ಮಾಧ್ಯಮಗಳು ಪ್ರಸಾರ ಮಾಡುತ್ತಿರುವ ಸುದ್ದಿಗಳ ಬಗ್ಗೆ ಬೇಸರ ವ್ಯಕ್ತಪಡಿಸಿ ಪೋಸ್ಟ್‌ಅನ್ನು ಹಂಚಿಕೊಂಡಿದ್ದಾರೆ.

95ನೇ ಅಕಾಡೆಮಿ ಅವಾರ್ಡ್‌ ಗಳ ನಾಮನಿರ್ದೇಶನಗಳನ್ನು 2023ರ ಜನವರಿ 24ರಂದು ಘೋಷಿಸಲಾಗುವುದು. ಪ್ರತಿಷ್ಠಿತ ಆಸ್ಕರ್‌ ಪ್ರಶಸ್ತಿಗಳನ್ನು ನೀಡುವ the Academy of Motion Picture Arts and Sciences ನೀಡಿರುವ ಅಧಿಕೃತ ಹೇಳಿಕೆ. ನಮ್ಮ ಮಾಧ್ಯಮಗಳಿಗೆ ಯಾಕಿಷ್ಟು ಆತುರ? ವಿಷಯ ಏನು ಅಂದ್ರೆ ಆಸ್ಕರ್‌ ಅರ್ಹತೆ ಪಟ್ಟಿಯಲ್ಲಿ 301 ಸಿನಿಮಾಗಳು ಕಾಣಿಸಿಕೊಂಡಿವೆ. ಅವುಗಳಲ್ಲಿ ಕಾಂತಾರವೂ ಇದೆ, ವಿಕ್ರಾಂತ್‌ ರೋಣವೂ ಇದೆ. ಕನ್ನಡ ಸಿನಿಮಾಗಳಿಗೆ ಆಸ್ಕರ್‌ ಸಿಗಲಿ, ಅದು ನಮ್ಮ ಆಸೆಯೂ ಕೂಡ ಹೌದು. ಆದರೆ ಹೀಗೆ ಆತುರಗೇಡಿಗಳಾದರೆ ಹೇಗೆ? ಎಂದು ಬೇಸರ ವ್ಯಕ್ತಪಡಿಸಿ ಪೋಸ್ಟ್‌ ಮಾಡಿದ್ದಾರೆ.

ಒಟ್ಟಾರೆಯಾಗಿ ಹೇಳುವುದಾರೆ, 301 ಚಿತ್ರಗಳ ಸಾಲಿಗೆ ಅರ್ಹತೆ ಪಡೆದಿರುವ ಕಾಂತಾರ ಚಿತ್ರವು ನಟ-ನಟಿ ವಿಭಾಗದಲ್ಲಿ ಪ್ರಶಸ್ತಿಗೆ ನಾಮ ನಿರ್ದೇಶನಗೊಂಡಿದೆ ಎಂದು  ಕನ್ನಡದ ಮುಖ್ಯವಾಹಿನಿ ಮಾಧ್ಯಮಗಳು ತಪ್ಪಾಗಿ ಸುದ್ದಿ ಪ್ರಸಾರ ಮಾಡಿವೆ.

ನಿಮ್ಮ ಸುತ್ತಮುತ್ತ ಮತ್ತು  ಸಾಮಾಜಿಕ ಜಾಲತಾಣಗಳಲ್ಲಿ ಯಾವುದೇ ಸುದ್ದಿಯು ಸುಳ್ಳು ಎಂದು ನಿಮಗೆ ಸಂದೇಹ ಬಂದಿದ್ದರೆ ಅದನ್ನು Ensuddi.com ವಾಟ್ಸಾಪ್  ನಂ 9108969301 ಗೆ ತಲುಪಿಸಿ. ನಾವು ಫ್ಯಾಕ್ಟ್‌ಚೆಕ್ ಮಾಡಿ ಸತ್ಯ ನಿಮ್ಮೆದುರು ಇಡುತ್ತೇವೆ


ಇದನ್ನು ಓದಿರಿ: ಫ್ಯಾಕ್ಟ್‌ಚೆಕ್: ಬರೆದಿರುವ, ಗೀಚಿದ ನೋಟುಗಳನ ಬ್ಯಾನ್ ಮಾಡಿದೆಯೇ RBI?


 

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights