ಫ್ಯಾಕ್ಟ್‌ಚೆಕ್: ಪೊಲೀಸ್ ಅಧಿಕಾರಿಗೆ ಚಾಕುವಿನಿಂದ ಇರಿದ ವ್ಯಕ್ತಿ ಮುಸ್ಲಿಂ ಎಂದು ಸುಳ್ಳು ಸುದ್ದಿ ಮಾಡಿದ ಸುದರ್ಶನ್ ನ್ಯೂಸ್
ದೆಹಲಿಯಲ್ಲಿ ಶಂಭು ದಯಾಳ್ ಎಂಬ ಪೊಲೀಸ್ ಅಧಿಕಾರಿಗೆ (ASI) ಅನಿಶ್ ಖಾನ್ ಎಂಬ ಮೊಬೈಲ್ ಸ್ನ್ಯಾಚರ್ ಚಾಕುವಿನಿಂದ ಇರಿದು ಕೊಂದಿದ್ದಾನೆ. 10 ರಿಂದ 12 ಬಾರಿ ಚಾಕುವಿನಿಂದ ಇರಿದಿರುವ ದೃಶ್ಯಗಳು ಸಾಮಾಜಿಕ ಮಾಧ್ಯಮಗಳಲ್ಲಿ ವೈರಲ್ ಆಗುತ್ತಿವೆ. ವೈರಲ್ ಪೋಸ್ಟ್ ನಲ್ಲಿ ಶಂಭು ದಯಾಳ್ ಅವರ ಮೇಲೆ ದಾಳಿ ಮಾಡಿದ ಆರೋಪಿ ಅನೀಶ್ ಖಾನ್, ಮುಸ್ಲಿಂ ಸಮುದಾಯಕ್ಕೆ ಸೇರಿದ ಮೊಬೈಲ್ ಸ್ನ್ಯಾಚರ್ ಎಂಬ ಹೇಳಿಕೆಯೊಂದಿಗೆ ಹಂಚಿಕೊಳ್ಳಲಾಗಿದೆ.
ಮೊಬೈಲ್ ಕಳ್ಳತನ ಮಾಡಲು ಯತ್ನಿಸಿದ ಅನಿಶ್ ಖಾನ್‌ನನ್ನು ಶಂಭು ದಯಾಳ್ ಹಿಡಿಯಲು ಯತ್ನಿಸಿದಾಗ ವಾಕುವಿನಿಂದ ಸತತ 12 ಬಾರಿ ಚುಚ್ಚಿದ ಖಾನ್ ಎಂಬ ಹೇಳಿಕೆಯೊಂದಿಗೆ ಪೋಸ್ಟ್‌ಅನ್ನು ಸಾಮಾಜಿಕ ಮಾಧ್ಯಮಗಳಲ್ಲಿ ಹಂಚಿಕೊಳ್ಳಲಾಗಿದೆ. ಹಾಗಿದ್ದರೆ ಆರೋಪಿ ಮುಸ್ಲಿಂ ಸಮುದಾಯಕ್ಕೆ ಸೇರಿದವನೇ ಎಂದು ಪೋಸ್ಟ್‌ನಲ್ಲಿ ಮಾಡಲಾದ ಪ್ರತಿಪಾದನೆಯನ್ನು ಪರಿಶೀಲಿಸೋಣ.
ಫ್ಯಾಕ್ಟ್‌ಚೆಕ್:
ಸಾಮಾಜಿಕ ಮಾಧ್ಯಮಗಳಲ್ಲಿ ವೈರಲ್ ಆಗಿರುವ ದೃಶ್ಯಗಳನ್ನು ಪರಿಶೀಲಿಸಲು ಹಲವು ಮಾಧ್ಯಮಗಳ ವರದಿಯನ್ನು ಪರಿಶೀಲಿಸದಾಗ, ‘ದಿ ಎಕನಾಮಿಕ್ ಟೈಮ್ಸ್‘ ಸುದ್ದಿ ವಾಹಿನಿ ಯೂಟ್ಯೂಬ್ ಚಾನೆಲ್ ಪ್ರಕಟಿಸಿದ ಇದೇ ರೀತಿಯ ದೃಶ್ಯಗಳೊಂದಿಗೆ ವೀಡಿಯೊ ಕಂಡುಬಂದಿದೆ. ಪಶ್ಚಿಮ ದೆಹಲಿಯ ಮಾಯಾಪುರಿಯಲ್ಲಿ ಮೊಬೈಲ್ ಫೋನ್ ಕಳ್ಳತನದ ಆರೋಪದಲ್ಲಿ ಬಂಧಿಸಲ್ಪಟ್ಟ ವ್ಯಕ್ತಿಯೊಬ್ಬರು ಸಹಾಯಕ ಸಬ್-ಇನ್ಸ್‌ಪೆಕ್ಟರ್ (ASI) ಶಂಭು ದಯಾಳ್ ಅವರನ್ನು ಇರಿದಿರುವುದನ್ನು ತೋರಿಸುವ ಸಿಸಿಟಿವಿ ದೃಶ್ಯಗಳನ್ನು ಈ ಸುದ್ದಿ ವಾಹಿನಿ ವರದಿ ಮಾಡಿದೆ.
04 ಜನವರಿ 2023 ರಂದು ನಡೆದ ಈ ಘಟನೆಯ ವಿವರಗಳನ್ನು ವರದಿ ಮಾಡುವ ಹಲವು ಸುದ್ದಿ ವೆಬ್‌ಸೈಟ್‌ಗಳು ಲೇಖನಗಳನ್ನು ಪ್ರಕಟಿಸಿವೆ. ವರದಿಗಳ ಪ್ರಕಾರ, ಪಶ್ಚಿಮ ದೆಹಲಿಯ ಮಾಯಪುರಿಯಲ್ಲಿ ಪೊಲೀಸ್ ಅಧಿಕಾರಿ ನಡೆದುಕೊಂಡು ಹೋಗುತ್ತಿದ್ದಾಗ ಕಳ್ಳ ಅನೀಶ್ ರಾಜ್ ಅವರಿಗೆ ಎದುರಾಗಿದ್ದು, ಅವರು ಆತನನ್ನು ಹಿಡಿಯಲು ಪ್ರಯತ್ನಿಸಿದ್ದಾರೆ. ಈ ವೇಳೆ ಅನೀಶ್ ರಾಜ್ ಪೊಲೀಸ್ ಅಧಿಕಾರಿಗೆ ಚಾಕುವಿನಿಂದ 12 ಬಾರಿ ಇರಿದಿದ್ದಾನೆ.
ಇದಕ್ಕೂ ಮೊದಲು ಮಹಿಳೆಯೊಬ್ಬರು ಕಳ್ಳ ಅನೀಶ್ ರಾಜ್ ತನ್ನ ಗಂಡನ ಮೊಬೈಲ್ ಫೋನ್ ಕಸಿದುಕೊಂಡು ಹೋಗಿದ್ದಲ್ಲದೇ ಅವರಿಗೆ ಬೆದರಿಸಿದ್ದಾಗಿ ಪೊಲೀಸರಿಗೆ ಮಾಹಿತಿ ನೀಡಿದ್ದರು. ಈ ಹಿನ್ನೆಲೆಯಲ್ಲಿ ಘಟನಾ ಸ್ಥಳಕ್ಕೆ ಪೊಲೀಸ್ ಪೇದೆ ಶಂಭು ದಯಾಳ್ ಆಗಮಿಸಿದ್ದು, ಈ ವೇಳೆ ಮಹಿಳೆ ಆರೋಪಿ ಅನೀಶ್‌ನತ್ತ ಕೈ ತೋರಿಸಿದ್ದಾರೆ. ಈ ವೇಳೆ ಪೊಲೀಸ್ ಶಂಭು ದಯಾಳ್ ಅವರಿಗೆ ಆತನ ಕೈಯಲ್ಲಿ ಕದ್ದಿರುವ ಮೊಬೈಲ್ ಫೋನ್ ಕಾಣಿಸಿದ್ದು, ಅನೀಶ್‌ನನ್ನು ಪೊಲೀಸ್ ಠಾಣೆಗೆ ಕರೆದೊಯ್ಯಲು ಮುಂದಾಗುತ್ತಿದ್ದಂತೆ ಆತ ತನ್ನ ಬಳಿ ಅಡಗಿಸಿಟ್ಟಿದ್ದ ಚಾಕುವನ್ನು ತೆಗೆದು ಪೊಲೀಸ್ ಪೇದೆಗೆ ಚಾಕುವಿನಿಂದ ಇರಿಯಲು ಶುರು ಮಾಡಿದ್ದಾನೆ. ದೆಹಲಿಯ BLK ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ASI ಶಂಭು ದಯಾಳ್ 08 ಜನವರಿ 2023 ರಂದು ನಿಧನರಾಗಿದ್ದಾರೆ ಎಂದು ವರದಿಯಾಗಿದೆ.
ASI ಶಂಬು ದಯಾಳ್ ಹತ್ಯೆಗೆ ಸಂಬಂಧಿಸಿದಂತೆ FIR ದಾಖಲಾಗಿದ್ದು, ಆರೋಪಿಯು ನವದೆಹಲಿಯ ಮಾಯಾಪುರಿ ಪ್ರದೇಶದ ನಿವಾಸಿ ಪ್ರಹ್ಲಾದ್ ರಾಜ್ ಅವರ ಪುತ್ರ 24 ವರ್ಷದ ಅನೀಶ್ ರಾಜ್ ಎಂದು ಹೇಳಲಾಗಿದೆ.
ಒಟ್ಟಾರೆಯಾಗಿ ಹೇಳುವುದಾದರೆ, ದೆಹಲಿಯಲ್ಲಿ ASI ಶಂಭು ದಯಾಳ್‌ಗೆ ಇರಿದಿರುವ ಸಿಸಿಟಿವಿ ದೃಶ್ಯಾವಳಿಗಳನ್ನು ಸುದರ್ಶನ್ ನ್ಯೂಸ್ ಮತ್ತು ಅದರ ಪತ್ರಕರ್ತರು ಆರೋಪಿಗಳನ್ನು ‘ಜಿಹಾದಿ’ ಎಂದು ಬಣ್ಣಿಸುವ ಮೂಲಕ ಅಪರಾಧವನ್ನು ಸುಳ್ಳು ಕೋಮು ನಿರೂಪಣೆಯೊಂದಿಗೆ ಹಂಚಿಕೊಳ್ಳಲಾಗಿದೆ ಆದರೆ ಆರೋಪಿ ಮುಸ್ಲಿಂ ಸಮುದಾಯಕ್ಕೆ ಸೇರಿಲ್ಲ. ಹಾಗಾಗಿ ಪೋಸ್ಟ್‌ನಲ್ಲಿ ಮಾಡಲಾದ ಪ್ರತಿಪಾದನೆ ತಪ್ಪಾಗಿದೆ.
ನಿಮ್ಮ ಸುತ್ತಮುತ್ತ ಮತ್ತು ಸಾಮಾಜಿಕ ಜಾಲತಾಣಗಳಲ್ಲಿ ಯಾವುದೇ ಸುದ್ದಿಯು ಸುಳ್ಳು ಎಂದು ನಿಮಗೆ ಸಂದೇಹ ಬಂದಿದ್ದರೆ ಅದನ್ನು Ensuddi.com ವಾಟ್ಸಾಪ್ ನಂ 9108969301 ಗೆ ತಲುಪಿಸಿ. ನಾವು ಫ್ಯಾಕ್ಟ್‌ಚೆಕ್ ಮಾಡಿ ಸತ್ಯ ನಿಮ್ಮೆದುರು ಇಡುತ್ತೇವೆ
ಇದನ್ನೂ ಓದಿರಿ: ಫ್ಯಾಕ್ಟ್‌ಚೆಕ್: ಹಿಮಾಲಯನ್ ಗ್ರಿಫನ್ ರಣಹದ್ದು ಪತ್ತೆಯಾಗಿದ್ದು ಇದೇ ಮೊದಲಲ್ಲ