ಫ್ಯಾಕ್ಟ್‌ಚೆಕ್ : ಮಸೀದಿಗೆ ನುಗ್ಗಿ ಪ್ರಾರ್ಥನೆಗೆ ಅಡ್ಡಿಪಡಿಸಿದ್ದು ಹಿಂದೂ ಮಹಿಳೆಯಲ್ಲ! ಮತ್ತ್ಯಾರು?

ಅಮೆರಿಕಾದ ವರ್ಜೀನಿಯಾದ ಮಸೀದಿಯೊಂದರಲ್ಲಿ ಹಿಂದೂ ಮಹಿಳೆಯೊಬ್ಬರು ಈದ್ ಪ್ರಾರ್ಥನೆಗೆ ಅಡ್ಡಿಪಡಿಸುತ್ತಿರುವ ವೇಳೆ ಪೊಲೀಸರು ಮಧ್ಯಪ್ರವೇಶಿಸಿ ಮಹಿಳೆಯನ್ನು ಹೊರಗೆ ಕರೆದೊಯ್ಯೂವ ವಿಡಿಯೋ ಸಾಮಾಜಿಕ ಮಾಧ್ಯಮಗಳಲ್ಲಿ ವೈರಲ್ ಆಗಿದೆ. ಕೆಲವು ಪರಿಶೀಲಿಸಿದ ಹ್ಯಾಂಡಲ್‌ಗಳು ಸೇರಿದಂತೆ ಹಲವಾರು ಸಾಮಾಜಿಕ ಮಾಧ್ಯಮ ಬಳಕೆದಾರರು ವಿಡಿಯೋವನ್ನು ಹಂಚಿಕೊಂಡಿದ್ದಾರೆ.

ಅಮೇರಿಕಾದ ವೆರ್ಜೇನಿಯಾದಲ್ಲಿ ಸಂಘಿ ಮಹಿಳೆಯೊಬ್ಬಳು ಇಂದು ಈದ್ ಪ್ರಾರ್ಥನೆ ನಡೆಯುತ್ತಿದ್ದ ಮಸೀದಿಯೊಳಕ್ಕೆ ನುಗ್ಗಿ ಧಾಂಧಲೆ ಎಬ್ಬಿಸಿದ ವಿಡಿಯೋ ವೈರಲ್ ಆಗುತ್ತಾ ಇದೆ. ಅಲ್ಲಿ ಕೇವಲ ಭಾರತೀಯರೇ ಅಲ್ಲ, ಜಗತ್ತಿನ ಬೇರೆ ಬೇರೆ ದೇಶಗಳ ಮುಸ್ಲಿಮರು ಪ್ರಾರ್ಥನೆಗಾಗಿ ನೆರೆದಿದ್ದರು. ಆ ಹೆಂಗಸು ಅವರೆಲ್ಲರ ಮುಂದೆ ಭಾರತದ ಸಂಘೀ ಹಿಂದುತ್ವದ ಅನಾವರಣ ಮಾಡಿದಳು. ಇದು ನಿಜಕ್ಕೂ ನಾಚಿಕೆಗೇಡು. ಪೋಲೀಸರಲ್ಲದೆ ಅಲ್ಲಿದ್ದ ಯಾರೂ ಆಕೆಯ ಮೈ ಮುಟ್ಟಲಿಲ್ಲ. ಅವರ ಸಂಯಮಕ್ಕೊಂದು ಹ್ಯಾಟ್ಸಪ್!

ಈದ್ ನಮಾಝ್ ನಿರ್ವಹಿಸುತ್ತಿದ್ದ ವೇಳೆ ಭಾರತೀಯ ಮೂಲದ ಹಿಂದೂ ಮಹಿಳೆಯೊಬ್ಬರು ಮಸೀದಿಗೆ ನುಗ್ಗಿ ದಾಂಧಲೆ ಎಬ್ಬಿಸಿದ ಘಟನೆ ಅಮೆರಿಕಾದ ವರ್ಜೀನಿಯಾದ ಆಡಮ್ಸ್ ಸೆಂಟರ್’ನಲ್ಲಿ ನಡೆದಿದೆ.

ಮಹಿಳೆಯೊಬ್ಬಳು ಮಸೀದಿಗೆ ಪ್ರವೇಶಿಸಿ ಮಿಂಬರ್ (ಪ್ರವಚನ ನೀಡುವ ಸ್ಥಳ) ಮೇಲೆ ಹತ್ತಿ ಇಸ್ಲಾಮಿಕ್ ವಿರೋಧಿ ಘೋಷಣೆಗಳನ್ನು ಕೂಗಿದ್ದಾಳೆ.  ಈದ್ ನಮಾಝ್’ಗಾಗಿ ಒಟ್ಟು ಸೇರಿದವರು ಒಂದು ಕ್ಷಣ ವಿಚಲಿತರಾದರೂ ಯಾವುದೇ ಪ್ರತಿರೋಧ ತೋರದೆ ಸಂಯಮ ಪಾಲಿಸಿ ಪೊಲೀಸರಿಗೆ ಮಾಹಿತಿ ನೀಡಿದರು. ಪೊಲೀಸರು ಮಸೀದಿಯೊಳಗೆ ಆಗಮಿಸಿ ಮಹಿಳೆಯನ್ನು ಹೊರಗೆ ಹೋಗುವಂತೆ ಸೂಚಿಸಿದರು. ಆದರೆ ಮಹಿಳೆ ಹೊರಹೋಗಲು ಒಪ್ಪದಿದ್ದಾಗ  ಮಹಿಳೆಯನ್ನು ಭದ್ರತಾ ಸಿಬ್ಬಂದಿ ಬಲವಂತವಾಗಿ ಬಂಧಿಸಿ ಕರೆದೊಯ್ದರು.

ಆಕೆ ಮತ ಕೇಳಲು ಬಂದವರು ಎಂದು ಮೊದಲು ಮಸೀದಿಯಲ್ಲಿದ್ದವರು ಭಾವಿಸಿದ್ದರು. ಆದರೆ ಆಕೆ ನೇರವಾಗಿ ಮಿಂಬರ್’ಗೆ ಹತ್ತಿ ಅನುಚಿತವಾಗಿ ವರ್ತಿಸಿದ ನಂತರ ಪೊಲೀಸರಿಗೆ ಮಾಹಿತಿ ನೀಡಲಾಯಿತು ಎಂದು ತಿಳಿದುಬಂದಿದೆ. ಆಕೆಯ ಹೆಸರು ತಿಳಿದುಬಂದಿಲ್ಲ. ಆಕೆಯ ವಿರುದ್ಧ ಪ್ರಕರಣ ದಾಖಲಿಸಿರುವ ಪೊಲೀಸರು ತೀವ್ರ ವಿಚಾರಣೆಗೆ ಒಳಪಡಿಸಿದ್ದಾರೆ.

ಹಾಗಿದ್ದರೆ ಈ ಪೋಸ್ಟ್‌ನಲ್ಲಿ ಮಾಡಲಾದ ಪ್ರತಿಪಾದನೆಯಂತೆ ಮಹಿಳೆ ಹಿಂದೂ ಧರ್ಮಕ್ಕೆ ಸೇರಿದ್ದಳೇ ಎಂಬುದು ನಿಜವೇ ಎಂದು ಪರಿಶೀಲಿಸೋಣ.

ಫ್ಯಾಕ್ಟ್‌ಚೆಕ್ :

ಸಾಮಾಜಿಕ ಮಾಧ್ಯಮಗಳಲ್ಲಿ ಹಂಚಿಕೊಳ್ಳಲಾದ ವಿಡಿಯೋದಲ್ಲಿ ಮಸೀದಿಯೊಂದರಲ್ಲಿ ಮಹಿಳೆಯೊಬ್ಬರು ರಂಪಾಟ ಮಾಡುತ್ತಿರುವುದನ್ನು ಕಾಣಬಹುದು, ಈ ವಿಡಿಯೋವನ್ನು ಹಂಚಿಕೊಂಡಿರುವ ಕೆಲವು ಸಾಮಾಜಿಕ ಮಾಧ್ಯಮಗಳ ಬಳಕೆದಾರರು ಮಹಿಳೆಯನ್ನು ಹಿಂದೂ ಎಂದು ಪ್ರತಿಪಾದಿಸಿ ಪೋಸ್ಟ್‌ಅನ್ನು ಹಂಚಿಕೊಂಡಿದ್ದಾರೆ. ಈ ಫೊಸ್ಟ್‌ಅನ್ನು ಪರಿಶೀಲಿಸಿದಾಗ ಘಟನೆಗೆ ಸಂಬಂಧಿಸಿದ ಟ್ವೀಟ್‌ಗಳು ಲಭ್ಯವಾಗಿವೆ.

ಮಸೀದಿಯಲ್ಲಿ ಹಿಂದೂ ಮಹಿಳೆ ದಾಂಧಲೆ ನಡೆಸಿದ್ದಾರೆ ಎಂದು ಹಲವಾರು ಸಾಮಾಜಿಕ ಜಾಲತಾಣ ಬಳಕೆದಾರರು ಪ್ರತಿಪಾದಿಸಿದ್ದರು. ಆದರೆ ವಾಸ್ತವದಲ್ಲಿ ಆಕೆ ಹಿಂದೂ ಮಹಿಳೆ ಅಲ್ಲ, ಮುಸ್ಲಿಮ್‌ ಸಮುದಾಯಕ್ಕೆ ಸೇರಿದ ಮಹಿಳೆ ಎಂದು ಮಸೀದಿ ಆಡಳಿತ ಮಂಡಳಿ ತಿಳಿಸಿದೆ. ಮಾನಸಿಕ ಅಸ್ವಸ್ಥತೆಯಿಂದ ಬಳಲುತ್ತಿರುವ ಮಹಿಳೆಯಾಗಿದ್ದು, ಮಹಿಳೆಯ ವಿಡಿಯೋವನ್ನು ತಪ್ಪಾಗಿ ಬಳಸದಂತೆ ಮಂಡಳಿಯು ಕೋರಿಕೊಂಡಿದೆ.

 

ಈ ಕುರಿತು ತನ್ನ ಅಧಿಕೃತ ಫೇಸ್‌ಬುಕ್‌ ಪೇಜ್‌ನಲ್ಲಿ ಪೋಸ್ಟ್‌ ಹಾಕಿರುವ ಆಡಮ್ಸ್‌ ಮಂಡಳಿ, “ವರ್ಜೀನಿಯಾದ ADAMS ಮಸೀದಿಯಲ್ಲಿ, ಈದ್ ಪ್ರಾರ್ಥನೆಯ ಸಮಯದಲ್ಲಿ ಶುಕ್ರವಾರ, ಎ. 21 ರಂದು ನಡೆದ ಇತ್ತೀಚಿನ ಘಟನೆಯು ಮಾನಸಿಕ ಆರೋಗ್ಯ ಸಮಸ್ಯೆಗಳೊಂದಿಗೆ ಹೋರಾಡುತ್ತಿರುವ ಮುಸ್ಲಿಂ ಸಮುದಾಯದ ಮಹಿಳೆಯಿಂದ ನಡೆದಿದೆ” ಎಂದು ಆಡಳಿತ ಮಂಡಳಿ ಸ್ಪಷ್ಟನೆ ನೀಡಿದೆ.

ಹೆಚ್ಚುವರಿ ಸಹಾಯವನ್ನು ಒದಗಿಸಲು ADAMS ಮಂಡಳಿಯು ಮಹಿಳೆಯ ಕುಟುಂಬವನನು ಭೇಟಿಯಾಗಿ ಕಾರ್ಯನಿರ್ವಹಿಸುತ್ತಿವೆ. ಈದ್ ಪ್ರಾರ್ಥನೆಯ ಸಮಯದಲ್ಲಿ ಬೆಳಿಗ್ಗೆ ನಡೆದ ಘಟನೆಗಾಗಿ ಕುಟುಂಬವು ಪ್ರಾಮಾಣಿಕವಾಗಿ ಕ್ಷಮೆ ಕೇಳಿದೆ. ಕುಟುಂಬದ ಗೌಪ್ಯತೆಯನ್ನು ಕಾಪಾಡಲು ವಿಡಿಯೋವನ್ನು ಸಾಮಾಜಿಕ ಮಾಧ್ಯಮದಿಂದ ತೆಗೆದುಹಾಕುವಂತೆ ಕುಟುಂಬವು ವಿನಂತಿಸಿದೆ ಎಂದು ಮಂಡಳಿಯು ಹೇಳಿದೆ.

ಒಟ್ಟಾರೆಯಾಗಿ ಹೇಳುವುದಾದರೆ, ಅಮೇರಿಕಾದ ವರ್ಜೀನಿಯಾದ ಮಸೀದಿಯೊಂದರಲ್ಲಿ ಈದ್ ಪ್ರಾರ್ಥನೆಗೆ ಅಡ್ಡಿಪಡಿಸುವ ವೈರಲ್ ವಿಡಿಯೊದಲ್ಲಿ ಕಾಣಿಸಿಕೊಂಡಿರುವ ಮಹಿಳೆ ಮುಸ್ಲಿಂ ಸಮುದಾಯಕ್ಕೆ ಸೇರಿದ್ದಾರೆ ಎಂದು ಹಲವು ಮೂಲಗಳು ದೃಢಪಡಿಸಿದೆ. ಆದರೆ ಆಕೆ ಮಾನಸಿಕ ಆರೋಗ್ಯ ಸಮಸ್ಯೆಯಿಂದ ಬಳಲುತ್ತಿದ್ದ ಕಾರಣ ಆಕೆಯನ್ನು ಅಗತ್ಯ ಚಿಕಿತ್ಸೆಗೆಂದು ಆಸ್ಪತ್ರೆಗೆ ದಾಖಲಿಸಲಾಗಿದೆ ಎಂದು ನ್ಯೂಸ್‌ ಚೆಕ್ಕರ್ ವರದಿ ಮಾಡಿದೆ. ಹಾಗಾಗಿ ಪೋಸ್ಟ್‌ನಲ್ಲಿ ಮಾಡಲಾದ ಪ್ರತಿಪಾದನೆ ತಪ್ಪಾಗಿದೆ.

ಕೃಪೆ: ನ್ಯೂಸ್ ಚೆಕ್ಕರ್

ನಿಮ್ಮ ಸುತ್ತಮುತ್ತ ಮತ್ತು  ಸಾಮಾಜಿಕ ಜಾಲತಾಣಗಳಲ್ಲಿ ಯಾವುದೇ ಸುದ್ದಿಯು ಸುಳ್ಳು ಎಂದು ನಿಮಗೆ ಸಂದೇಹ ಬಂದಿದ್ದರೆ ಅದನ್ನು Ensuddi.com ವಾಟ್ಸಾಪ್  ನಂ 9108969301 ಗೆ ತಲುಪಿಸಿ. ನಾವು ಫ್ಯಾಕ್ಟ್‌ಚೆಕ್ ಮಾಡಿ ಸತ್ಯ ನಿಮ್ಮೆದುರು ಇಡುತ್ತೇವೆ


ಇದನ್ನು ಓದಿರಿ : ಫ್ಯಾಕ್ಟ್‌ಚೆಕ್ : ಅತಿಕ್ ಹತ್ಯೆಯ ನಂತರ ಹಂತಕರು ‘ಜೈ ಶ್ರೀ ರಾಮ್’ ಘೋಷಣೆ ಕೂಗಿದ್ದು ಸುಳ್ಳೆ? ಈ ಸ್ಟೋರಿ ಓದಿ


 

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights