ಫ್ಯಾಕ್ಟ್‌ಚೆಕ್: ಮಣಿಪುರ ಹಿಂಸಾಚಾರದ ಕಾರಣ ಕರ್ನಾಟಕದಲ್ಲಿ ಅಮಿತ್ ಶಾ ಚುನಾವಣಾ ಪ್ರಚಾರ ರದ್ದು ಎಂದು ಸುಳ್ಳು ಸುದ್ದಿ ಹರಡಿದ ANI

ಹಿಂಸಾಚಾರ ಪೀಡಿತ ಮಣಿಪುರದ ಪರಿಸ್ಥಿತಿಯನ್ನು ಅವಲೋಕಿಸಲು ತೆರಳಿದ್ದರಿಂದ ಕೇಂದ್ರ ಗೃಹ ಸಚಿವ ಅಮಿತ್ ಶಾ ಕರ್ನಾಟಕ ಚುನಾವಣಾ ಪ್ರಚಾರದ ಕಾರ್ಯಕ್ರಮಗಳನ್ನು ರದ್ದುಪಡಿಸಿದ್ದಾರೆ ಎಂದು ಪ್ರತಿಪಾದಿಸಿ ANI ತನ್ನ ಟ್ವಿಟರ್‌ನಲ್ಲಿ ಪ್ರಸಾರ ಮಾಡಿದೆ. ಹಲವು ಮಾಧ್ಯಮಗಳು ಇದೇ ಪ್ರತಿಪಾದನೆಯೊಂದಿಗೆ ಸುದ್ದಿಯನ್ನು ಬಿತ್ತರಿಸಿ ವರದಿ ಮಾಡಿವೆ.

ಕೇಂದ್ರ ಗೃಹ ಸಚಿವ ಅಮಿತ್ ಶಾ, ಕರ್ನಾಟಕ ಚುನಾವಣಾ ಕಾರ್ಯಕ್ರಮಗಳನ್ನು ರದ್ದುಗೊಳಿಸಿದ್ದು, ಮಣಿಪುರದಲ್ಲಿನ ಪರಿಸ್ಥಿತಿಯನ್ನು ಸೂಕ್ಷ್ಮವಾಗಿ ಗಮನಿಸುತ್ತಿದ್ದಾರೆ. ಈಶಾನ್ಯ ರಾಜ್ಯದಲ್ಲಿ ಪರಿಸ್ಥಿತಿಯನ್ನು ಸಹಜ ಸ್ಥಿತಿಗೆ ತರಲು ಹೆಚ್ಚುವರಿ ಪೊಲೀಸ್ ಮಹಾನಿರ್ದೇಶಕ  (ಗುಪ್ತಚರ) ಅಶುತೋಷ್ ಸಿನ್ಹಾ ಎಲ್ಲಾ ಕಾರ್ಯಾಚರಣೆಗಳ ಕಮಾಂಡರ್ ಆಗಿ ರಾಜ್ಯ ಸರ್ಕಾರ ನೇಮಿಸಿದೆ. ಅವರು  ಭದ್ರತಾ ಸಲಹೆಗಾರರಾಗಿ ನೇಮಕಗೊಂಡಿರುವ ಮಾಜಿ ಸಿಆರ್‌ಪಿಎಫ್ ಮುಖ್ಯಸ್ಥ ಕುಲದೀಪ್ ಸಿಂಗ್ ಅವರಿಗೆ ವರದಿ ಮಾಡುತ್ತಾರೆ ಎಂದು ಸುದ್ದಿ ಮಾಡಿವೆ. ನಿಜವಾಗಿಯೂ ಅಮಿತ್ ಶಾ ಮಣಿಪುರದ ಪರಿಸ್ಥಿತಿಯನ್ನು ಅವಲೋಕಿಸಲು ತಮ್ಮ ಎಲ್ಲಾ ಕಾರ್ಯಕ್ರಮಗಳನ್ನು ರದ್ದು ಪಡಿಸಿದ್ದಾರೆಯೇ ಎಂದು ಪರಿಶಿಲಿಸಿದಾಗ ವಾಸ್ತವವಾಗಿ ಇದು ಸುಳ್ಳು ಎಂದು ತಿಳಿದುಬಂದಿದೆ.

ವಾಸ್ತವವೇನು?

ಮಣಿಪುರದ ಕೆಲವು ಭಾಗಗಳಲ್ಲಿ ಹಿಂಸಾಚಾರ ಆರಂಭಗೊಂಡಿರುವುದರಿಂದ ಶಾಂತಿ ಮತ್ತು ಸುವ್ಯವಸ್ಥೆ ಸ್ಥಾಪಿಸುವ ನಿಟ್ಟಿನಲ್ಲಿ ಅಮಿತ್‌ ಶಾ ವಿವಿಧ ಸಭೆಗಳನ್ನು ನಡೆಸುತ್ತಿದ್ದಾರೆ. ಹೀಗಾಗಿ, ಕರ್ನಾಟಕ ವಿಧಾನಸಭೆ ಚುನಾವಣೆಯ ಪ್ರಚಾರಕ್ಕೆ ಸಂಬಂಧಪಟ್ಟಂತೆ ಕೇಂದ್ರ ಗೃಹ ಸಚಿವ ಮುಂಬರುವ ಎಲ್ಲಾ ಕಾರ್ಯಕ್ರಮಗಳನ್ನು ರದ್ದುಗೊಳಿಸಿದ್ದಾರೆ ಎಂದು ANI, ಕನ್ನಡ ಪ್ರಭ ಸೇರಿದಂತೆ ಹಲವು ಮಾಧ್ಯಮಗಳು ಒಂದು ಕಡೆ ಸುದ್ದಿಯನ್ನು ಪ್ರಸಾರ ಮಾಡಿದ್ದಾರೆ. ಆದರೆ ಇನ್ನೊಂದು ಕಡೆ ಸ್ವತಃ ಕೇಂದ್ರ ಗೃಹ ಸಚಿವರ  ಮೇ 6 ಕಾರ್ಯಕ್ರಮದ ವೇಳಾ ಪಟ್ಟಿಯನ್ನು BJP ಹಂಚಿಕೊಂಡಿದೆ. ಅದರಲ್ಲಿ ಅಮಿತ್ ಶಾ ಹಲವು ಚುನಾವಣಾ ರ್ಯಾಲಿಗಳಲ್ಲಿ ಭಾಗವಹಿಸುತ್ತಿರುವುದು ಕಂಡು ಬಂದಿದೆ.

 

ಸದ್ಯ ಅಮಿತ್ ಶಾ ಕರ್ನಾಟಕದ ವಿಧಾನಸಬಾ ಚುನಾವಣಾ ಪ್ರಚಾರ ಕಾರ್ಯಕ್ರಮದಲ್ಲಿ ಭಾಗವಹಿಸುತ್ತಿದ್ದು, ಮಣಿಪುರ ಹಿಂಸಾಚಾರಕ್ಕೆ ಸಂಬಂಧಿಸಿದಂತೆ ಕಾರ್ಯಕ್ರಮಗಳು ರದ್ದಾಗಿವೆ ಎಂಬುದು ಸುಳ್ಳು.  ಸವದತ್ತಿ ಯಲ್ಲಮ್ಮ ವಿಧಾನಸಭಾ ಕ್ಷೇತ್ರದಲ್ಲಿ ಸಾರ್ವಜನಿಕ ಸಮಾವೇಶದಲ್ಲಿ ಭಾಗವಹಿಸಿ BJP ಅಭ್ಯರ್ಥಿ ರತ್ನ ವಿಶ್ವನಾಥ್ ಮಾಮನಿ ಪರವಾಗಿ ಪ್ರಚಾರ ನಡೆಸುತ್ತಿರುವ ಫೋಟೊಗಳನ್ನು ಸ್ವತಃ ಅಮಿತ್ ಶಾ ಅವರೇ ಹಂಚಿಕೊಂಡಿದ್ದಾರೆ.

ಒಂದು ಕಡೆ ಪ್ರಧಾನಿ ನರೇಂದ್ರ ಮೋದಿ ಬೆಂಗಳೂರಿನಲ್ಲಿ ರೋಡ್‌ ಶೋ ನಡೆಸುತ್ತಿದ್ದರೆ, ಮತ್ತೊಂದು ಕಡೆ ಅಮಿತ್ ಶಾ ಸವದತ್ತಿ, ರಾಯ್‌ಬಾಗ್ ಮತ್ತು ಚಿಕ್ಕೋಡಿಯಲ್ಲಿ ಪ್ರಚಾರ ಕಾರ್ಯಕ್ರಮದಲ್ಲಿ ಬ್ಯುಸಿಯಾಗಿದ್ದಾರೆ. ಹಾಗಾಗಿ ಮಣಿಪುರ ಹಿಂಸಾಚಾರದ ಹಿನ್ನೆಲೆಯಲ್ಲಿ ಅಮಿತ್ ಶಾ ಚುನಾವಣಾ ಪ್ರಚಾರ ಕಾರ್ಯಕ್ರಮಗಳನ್ನು ರದ್ದುಗೊಳಿಸಿದ್ದಾರೆ ಎಂದು ಮಾಧ್ಯಮಗಳು ಮಾಡಿರುವ ವರದಿ ಸುಳ್ಳು.

ನಿಮ್ಮ ಸುತ್ತಮುತ್ತ ಮತ್ತು ಸಾಮಾಜಿಕ ಜಾಲತಾಣಗಳಲ್ಲಿ ಯಾವುದೇ ಸುದ್ದಿಯು ಸುಳ್ಳು ಎಂದು ನಿಮಗೆ ಸಂದೇಹ ಬಂದಿದ್ದರೆ ಅದನ್ನು Ensuddi.com ವಾಟ್ಸಾಪ್  ನಂ 9108969301 ಗೆ ತಲುಪಿಸಿ. ನಾವು ಫ್ಯಾಕ್ಟ್‌ಚೆಕ್ ಮಾಡಿ ಸತ್ಯ ನಿಮ್ಮೆದುರು ಇಡುತ್ತೇವೆ


ಇದನ್ನು ಓದಿರಿ : ಫ್ಯಾಕ್ಟ್‌ಚೆಕ್ : ರಾಹುಲ್ ಗಾಂಧಿಯನ್ನು ವ್ಯಂಗ್ಯ ಮಾಡಲು ಕರಾವಳಿ ಭಾಗದಲ್ಲಿ ಹರಿದಾಡುತ್ತಿದೆ ಎಡಿಟ್ ಮಾಡಿದ ವಿಡಿಯೋ!


 

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights