ಫ್ಯಾಕ್ಟ್‌ಚೆಕ್ : ದಲಿತರು ನದಿಯಲ್ಲಿ ಸ್ನಾನ ಮಾಡಿದಕ್ಕೆ ಪೂಜಾರಿ ಬೆತ್ತದಿಂದ ಹೊಡೆದನೇ? ಈ ಸ್ಟೋರಿ ಓದಿ

ಗಂಗಾ ನದಿಯಲ್ಲಿ ಸ್ನಾನ ಮಾಡಿದ್ದಕ್ಕಾಗಿ ಬ್ರಾಹ್ಮಣ ಪುರೋಹಿತ ಕೆಲವು ಕೆಳಜಾತಿಯ ಯುವಕರನ್ನು ಥಳಿಸಿದ ಘಟನೆ ಉತ್ತರ ಪ್ರದೇಶದಲ್ಲಿ ನಡೆದಿದೆ ಎಂದು ಪ್ರತಿಪಾದಿಸಿ ಸಾಮಾಜಿಕ ಮಾಧ್ಯಮಗಳಲ್ಲಿ ಪೋಸ್ಟ್‌ಅನ್ನು ಹಂಚಿಕೊಳ್ಳಲಾಗುತ್ತಿದೆ.

ದೇಶದಲ್ಲಿ  ಜಾತಿ ತಾರತಮ್ಯ ನಿರ್ಮೂಲನೆಯಾಗಿದೆ ಎಂದು ಬೊಬ್ಬೆ ಹೊಡೆಯುವವರು ಈ ವಿಡಿಯೋವನ್ನು ನೋಡಿ ಎಂಬ ಹೇಳಿಕೆಯೊಂದಿಗೆ ಹಂಚಿಕೊಳ್ಳುತ್ತಾ, ನದಿ ನೀರಿನಲ್ಲಿ ಸ್ನಾನ ಮಾಡಬೇಕೆಂದರೂ ದಲಿತರು (ಕೆಳ ಜಾತಿಯ) ಸವರ್ಣೀಯರ  (ಮೇಲ್ಜಾತಿ)  ಅನುಮತಿ ಪಡೆಯಬೇಕು ಎಂಬ ಅಲಿಖಿತ ಕಾನೂನು ಈ ದೇಶದಲ್ಲಿ ಇನ್ನೂ ಜಾರಿಯಲ್ಲಿದೆ ಎಂದು ಪ್ರತಿಪಾದಿಸಿ ಪೋಸ್ಟ್‌ಅನ್ನು ಹಂಚಿಕೊಳ್ಳಲಾಗಿದೆ. ಹಾಗಿದ್ದರೆ ಈ ಫೋಸ್ಟ್‌ನಲ್ಲಿ ಮಾಡಲಾದ ಪ್ರತಿಪಾದನೆ ನಿಜವೇ ಎಂದು ಪರಿಶೀಲಿಸೋಣ.

ಫ್ಯಾಕ್ಟ್‌ಚೆಕ್ :

ಸಾಮಾಜಿಕ ಮಾಧ್ಯಮಗಳಲ್ಲಿ ವೈರಲ್ ಆಗಿರುವ ವಿಡಿಯೋವನ್ನು ಪರಿಶೀಲಿಸಲು ಗೂಗಲ್ ರಿವರ್ಸ್ ಇಮೇಜಸ್‌ನಲ್ಲಿ ಸರ್ಚ್‌ ಮಾಡಿದಾಗ, 17 ಮೇ 2022 ರಂದು ‘NMF ನ್ಯೂಸ್’ ಎಂಬ ಸುದ್ದಿ ವಾಹಿನಿ ತನ್ನ ಯೂಟ್ಯೂಬ್‌ನಲ್ಲಿ ಪ್ರಕಟಿಸಿದೆ ಎಂದು ತಿಳಿದುಬಂದಿದೆ. ವಿಡಿಯೋದ ವಿವರಣೆಯ ಪ್ರಕಾರ,  ಉತ್ತರಾಖಂಡದ ರಿಷಿಕೇಶದಲ್ಲಿರುವ ಗಂಗಾ ಘಾಟ್ ಬಳಿ ಮದ್ಯ ಸೇವಿಸಿ ನದಿಯ ತಪ್ಪಲಿನಲ್ಲಿ ಬಾಟಲಿ ಮತ್ತು ತ್ಯಾಜ್ಯಗಳನ್ನು  ಎಸೆದು ಗಲೀಜು ಮಾಡುತ್ತ  ಮೋಜು ಮಸ್ತಿ ಮಾಡುತ್ತಿದ್ದ ಕೆಲ ಯುವಕರನ್ನು ಪೂಜಾರಿ ಥಳಿಸುತ್ತಿದ್ದಾನೆ ಎಂಬ ವಿವರಣೆಯನ್ನು ನೀಡಲಾಗಿದೆ.

ರಿಷಿಕೇಶದ ಗಂಗಾ ಘಾಟ್ ಬಳಿ ಕೆಲವು ಪ್ರವಾಸಿಗರು ಮದ್ಯ ಸೇವಿಸಿ ನದಿಯನ್ನು ಅನೈರ್ಮಲೀಕರಣ ಮಾಡುತ್ತಿರುವುದನ್ನು ಕಂಡು ಕೋಪಗೊಂಡ ಅರ್ಚಕರೊಬ್ಬರು ಪ್ರವಾಸಿಗರನ್ನು ಬೆತ್ತದಿಂದ ಥಳಿಸಿದ್ದಾರೆ ಎಂದು ಹಲವು ಸುದ್ದಿ ಸಂಸ್ಥೆಗಳು ಈ ವೀಡಿಯೊವನ್ನು ಹಂಚಿಕೊಂಡಿವೆ ಮತ್ತು ಲೇಖನಗಳನ್ನು ಪ್ರಕಟಿಸಿವೆ. ಅವುಗಳನ್ನು ಇಲ್ಲಿ, ಇಲ್ಲಿ ಮತ್ತು ಇಲ್ಲಿ ಕಾಣಬಹುದು. ವಿಡಿಯೋದಲ್ಲಿ ಥಳಿಸಲ್ಪಡುತ್ತಿರುವ ಯುವಕರು ಕೆಳಜಾತಿಗೆ ಸೇರಿದವರು ಎಂದು ಒಂದೇ ಒಂದು ಸುದ್ದಿ ಸಂಸ್ಥೆ ವರದಿ ಮಾಡಿಲ್ಲ.ಮೇಲಿನ ವಿವರಗಳ ಆಧಾರದ ಮೇಲೆ ಈ ಘಟನೆಯಲ್ಲಿ ಜಾತಿ ತಾರತಮ್ಯದ ಹಿನ್ನೆಲೆ ಇಲ್ಲ ಎಂದು ಖಂಡಿತಾ ಹೇಳಬಹುದು.

ಒಟ್ಠಾರೆಯಾಗಿ ಹೇಳುವುದಾದರೆ, ಉತ್ತರಾಖಂಡದ ಋಷಿಕೇಶದ ಗಂಗಾ ಘಾಟ್ ಬಳಿ ಮದ್ಯ ಸೇವಿಸಿ ಬಾಟಲಿ ಮತ್ತು ತ್ಯಾಜ್ಯ ವಸ್ತುಗಳನ್ನು ನದಿ ತಪ್ಪಲಿನಲ್ಲಿ ಎಸೆದಿದ್ದರಿಂದ ಕೋಪಗೊಂಡ ಪೂಜಾರಿಯೊಬ್ಬರು ನದಿ ನೀರಿಗೆ ಇಳಿದಿದ್ದ ಯುವಕರನ್ನು ಬೆತ್ತದಿಂದ ಥಳಿಸಿದ ಘಟನೆ 2022 ಮೇ ನಲ್ಲಿ ನಡೆದಿದೆ. ಆದರೆ ಈ ಘಟನೆಯನ್ನು ಉತ್ತರ ಪ್ರದೇಶದಲ್ಲಿ ಜಾತಿ ತಾರತಮ್ಯ ಮಾಡಲಾಗಿದೆ ಎಂಬ ತಪ್ಪು ಸಂದೇಶದೊಂದಿಗೆ ಹಂಚಿಕೊಳ್ಳಲಾಗಿದೆ. ಹಾಗಾಗಿ ಪೋಸ್ಟ್‌ನಲ್ಲಿ ಮಾಡಿದ ಪ್ರತಿಪಾದನೆ ತಪ್ಪಾಗಿದೆ.

ಕೃಪೆ: ಫ್ಯಾಕ್ಟ್‌ಲಿ

ನಿಮ್ಮ ಸುತ್ತಮುತ್ತ ಮತ್ತು ಸಾಮಾಜಿಕ ಜಾಲತಾಣಗಳಲ್ಲಿ ಯಾವುದೇ ಸುದ್ದಿಯು ಸುಳ್ಳು ಎಂದು ನಿಮಗೆ ಸಂದೇಹ ಬಂದಿದ್ದರೆ ಅದನ್ನು Ensuddi.com ವಾಟ್ಸಾಪ್  ನಂ 9108969301 ಗೆ ತಲುಪಿಸಿ. ನಾವು ಫ್ಯಾಕ್ಟ್‌ಚೆಕ್ ಮಾಡಿ ಸತ್ಯ ನಿಮ್ಮೆದುರು ಇಡುತ್ತೇವೆ


ಇದನ್ನು ಓದಿರಿ : ಫ್ಯಾಕ್ಟ್‌ಚೆಕ್ : ಸೊಸೆಯನ್ನೇ ಮದುವೆಯಾದ ಮಾವ ಎಂದು ಸ್ಕ್ರಿಪ್ಟೆಡ್ ವಿಡಿಯೋ ಹಂಚಿಕೆ


 

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights