ಫ್ಯಾಕ್ಟ್‌ಚೆಕ್ : ಕಾಂಗ್ರೆಸ್‌ಗೆ ಮತ ಹಾಕಬೇಡಿ ಎಂದು ಪ್ರಕಾಶ್ ರಾಜ್ ಹೇಳಿದ್ದು ಯಾವಾಗ ಗೊತ್ತೇ?

2023  ಕರ್ನಾಟಕ ವಿಧಾನಸಭಾ ಚುನಾವಣೆ ಸಂದರ್ಭದಲ್ಲಿ, ನಟ ಪ್ರಕಾಶ್ ರಾಜ್ ಪ್ರಧಾನಿ ನರೇಂದ್ರ ಮೋದಿ ಮತ್ತು ಅಡಾಲ್ಫ್ ಹಿಟ್ಲರ್ ಇಬ್ಬರ ಫೋಟೋಗಳನ್ನು ಹೋಲಿಕೆ ಮಾಡಿ ಹಂಚಿಕೊಂಡಿದ್ದು ಭಾರೀ ಚರ್ಚೆಗೆ ಕಾರಣವಾಗಿತ್ತು. ಈ ಚರ್ಚೆ ಮಾಸುವ ಮುನ್ನವೇ ಪ್ರಕಾಶ್ ರಾಜ್ ಕಾಂಗ್ರೆಸ್ ಬಗ್ಗೆ ನೀಡಿರುವ ಹೇಳಿಕೆ ಮತ್ತೊಂದು ವಿವಾದವೆಬ್ಬಿಸಿದೆ.

ಪ್ರಕಾಶ್ ರಾಜ್ ಕಾಂಗ್ರೆಸ್ ಪಕ್ಷದ ವಿರುದ್ಧ ವಾಗ್ದಾಳಿ ನಡೆಸಿದ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವ್ಯಾಪಕವಾಗಿ ಹರಿದಾಡುತ್ತಿದೆ. ಕಾಂಗ್ರೆಸ್‌ ಪಕ್ಷ, ಕೊಳಕು ರಾಜಕೀಯ ಮಾಡುತ್ತಿದೆ ಹಾಗಾಗಿ ಆ ಪಕ್ಷಕ್ಕೆ ಮತಹಾಕಬೇಡಿ ಎಂದು ಪ್ರಕಾಶ್ ರಾಜ್ ಹೇಳುತ್ತಿರುವ ವಿಡಿಯೋ ವೈರಲ್ ಆಗಿದೆ.

“ಪ್ರಿಯ ಕರ್ನಾಟಕ ಮತದಾರರೇ, ನಿಮ್ಮ ಮತಗಳನ್ನು ಕಾಂಗ್ರೆಸ್‌ಗೆ ಹಾಕಿ ವ್ಯರ್ಥ ಮಾಡಬೇಡಿ ಎಂದು ಪ್ರಕಾಶ್ ರಾಜ್ ಅವರು ಉತ್ತಮ ಸಂದೇಶ ಕೊಟ್ಟಿದ್ದಾರೆ. ಅವರು ಕಾಂಗ್ರೆಸ್ ಪಕ್ಷದ ಕೊಳಕು ರಾಜಕೀಯದಿಂದ ಮನನೊಂದಿದ್ದಾರೆ. ಆದ್ದರಿಂದ ದಯವಿಟ್ಟು ಕಾಂಗ್ರೆಸ್ ಬದಲು BJPಗೆ ಮತ ನೀಡಿ” ಎಂದು ಹಲವು BJP ಬೆಂಬಲಿಗರು ಸಾಮಾಜಿಕ ಮಾಧ್ಯಮಗಳಲ್ಲಿ ಪ್ರಕಾಶ್ ರಾಜ್ ಅವರ ವಿಡಿಯೋವನ್ನು ಹಂಚಿಕೊಂಡಿದ್ದಾರೆ.

ಹಾಗಿದ್ದರೆ ಈ ಪೋಸ್ಟ್‌ನಲ್ಲಿ ಮಾಡಿದ ಪ್ರತಿಪಾದನೆ ನಿಜವೇ ಎಂದು ಪರಿಶೀಲಿಸೊಣ.

ಫ್ಯಾಕ್ಟ್‌ಚೆಕ್:

ಸಾಮಾಜಿಕ ಮಾಧ್ಯಮಗಳಲ್ಲಿ ವೈರಲ್ ಆಗಿರುವ ವಿಡಿಯೋ ಪೋಸ್ಟ್‌ನಲ್ಲಿ ಪ್ರಕಾಶ್ ರಾಜ್ ಕಾಂಗ್ರೆಸ್‌ಗೆ ಮತ ಹಾಕಬೇಡಿ ಎಂದು ನೀಡಿದ್ದಾರೆ ಎನ್ನಲಾದ ಹೇಳಿಕೆಯನ್ನು ಪರಿಶೀಲಿಸಲು ವಿಡಿಯೋದ ಕೀ ಫ್ರೀಮ್‌ಗಳನ್ನು ಬಳಸಿಕೊಂಡು ಗೂಗಲ್ ರಿವರ್ಸ್ ಇಮೇಜಸ್‌ನಲ್ಲಿ ಸರ್ಚ್ ಮಾಡಿದಾಗ, ನಟ ಪ್ರಕಾಶ್ ರಾಜ್ ತಮ್ಮ ಟ್ವಿಟರ್ ಖಾತೆಯಲ್ಲಿ ಇದೇ ವಿಡಿಯೋದ ದೀರ್ಘ ಆವೃತ್ತಿಯನ್ನು ಏಪ್ರಿಲ್ 17, 2019 ರಂದು ಹಂಚಿಕೊಳ್ಳಲಾದ ಪೋಸ್ಟ್‌ ಲಭ್ಯವಾಗಿದೆ.

2019ರಲ್ಲಿ ನಡೆದ ಲೋಕಸಭಾ ಚುನಾವಣೆಯಲ್ಲಿ ಸ್ವತಂತ್ರ ಅಭ್ಯರ್ಥಿಯಾಗಿ ಸ್ಪರ್ಧಿಸಿದ್ದ ಪ್ರಕಾಶ್ ವಿರುದ್ದ ಕಾಂಗ್ರೆಸ್ ಪಕ್ಷ ಅಪಪ್ರಚಾರ ನಡಸಿತ್ತು. ಇದರಿಂದ ಬೇಸರಗೊಂಡಿದ್ದ ಪ್ರಕಾಶ್ ರಾಜ್ ಕಾಂಗ್ರೆಸ್ ಪಕ್ಷದ ವಿರುದ್ದ ಚುನಾವಣಾ ಆಯೋಗಕ್ಕೆ ದೂರು ನೀಡಿದ್ದರು. ನಂತರ ತಮ್ಮ ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದರು.

ಕಾಂಗ್ರೆಸ್ ತನ್ನ ಬಗ್ಗೆ ತಪ್ಪು ಮಾಹಿತಿ ಹರಡುತ್ತಿದೆ, ಈ ಪಕ್ಷದ ಕೊಳಕು ರಾಜಕೀಯವನ್ನ ನಾನು ಸಮರ್ಥವಾಗಿ ಎದುರಿಸುತ್ತೇನೆ, ಹಾಗಾಗಿ ದಾಖಲೆ ಸಮೇತ ಚುನಾವಣಾ ಆಯೋಗಕ್ಕೆ ಕಾಂಗ್ರೆಸ್ ವಿರುದ್ದ ದೂರು ನೀಡಿದ್ದಾಗಿ ತಿಳಿಸಿದ್ದರು. ಈ ಸಂದರ್ಭದಲ್ಲಿ ಬೆಂಗಳೂರು ಸೆಂಟ್ರಲ್ ಲೋಕಸಭಾ ಕ್ಷೇತ್ರದಿಂದ ಸ್ವತಂತ್ರ ಅಭ್ಯರ್ಥಿಯಾಗಿ ಪ್ರಕಾಶ್ ರಾಜ್ ಕಣದಲ್ಲಿದ್ದರು.

2019 ರಲ್ಲಿ ಸೆಂಟ್ರಲ್ ಕ್ಷೇತ್ರದಿಂದ ಕಾಂಗ್ರೆಸ್‌ನಿಂದ ಸ್ಪರ್ಧಿಸಿದ್ದ ರಿಜ್ವಾನ್ ಮತ್ತು ಪ್ರಕಾಶ್ ರಾಜ್ ಇಬ್ಬರು ಒಂದೇ ವೇದಿಕೆಯಲ್ಲಿ ಸಂವಾದ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು, ಈ ಕಾರ್ಯಕ್ರಮದ ಫೋಟೊವನ್ನು ಬಳಸಿಕೊಂಡ ಕಾಂಗ್ರೆಸ್ ಬೆಂಬಲಿಗರು ಪ್ರಕಾಶ್ ರಾಜ್ ಕಾಂಗ್ರೆಸ್ ಪಕ್ಷಕ್ಕೆ ಬೆಂಬಲ ಸೂಚಿಸಿದ್ದಾರೆ ಎಂದು ಅಪಪ್ರಚಾರ ಮಾಡುತ್ತಿದ್ದರು.  ಕಾಂಗ್ರೆಸ್ ಪಕ್ಷ ಮತ್ತು ರಿಜ್ವಾನ್ ಅವರ ಈ ಕೊಳಕು ರಾಜಕೀಯವನ್ನು ನಾನು ಗಂಭೀರವಾಗಿ ಪರಿಗಣಿಸಿ ಚುನಾವಣಾ ಆಯೋಗಕ್ಕೆ ದೂರು ನೀಡಿದ್ದೇನೆ. ದಯವಿಟ್ಟು ಇಂತಹ ವದಂತಿಗಳನ್ನು ನಂಬಬೇಡಿ” ಎಂದು ಹೇಳಿದ್ದರು.

ಡೆಕ್ಕನ್ ಹೆರಾಲ್ಡ್ ಮತ್ತು ಜಾಗರಣ ಎಂಬ ಸುದ್ದಿ ಮಾಧ್ಯಮಗಳು ಈ ಬಗ್ಗೆ ವರದಿ ಮಾಡಿದ್ದವು. ಪ್ರಕಾಶ್ ರಾಜ್ 2019 ರ ಲೋಕಸಭಾ ಚುನಾವಣೆಯಲ್ಲಿ ಬೆಂಗಳೂರು ಸೆಂಟ್ರಲ್ ಕ್ಷೇತ್ರದಿಂದ ಸ್ವತಂತ್ರ ಅಭ್ಯರ್ಥಿಯಾಗಿ ಸ್ಪರ್ಧಿಸಿದ್ದರೆ, ರಿಜ್ವಾನ್ ಅರ್ಷದ್ ಕಾಂಗ್ರೆಸ್ ಪಕ್ಷದ ಅಭ್ಯರ್ಥಿಯಾಗಿದ್ದರು.

ಒಟ್ಟಾರೆಯಾಗಿ ಹೇಳುವುದಾದರೆ, 2019ರಲ್ಲಿ ಬೆಂಗಳೂರು ಸೆಂಟ್ರಲ್ ಲೋಕಸಭಾ ಕ್ಷೇತ್ರದಿಂದ ಪ್ರಕಾಶ್ ರಾಜ್, ತಮ್ಮ ವಿರುದ್ದ ಕಾಂಗ್ರೆಸ್‌ ನಡೆಸುತ್ತಿದ್ದ ಅಪಪ್ರಚಾರವನ್ನು ಉಲ್ಲೇಖಿಸಿ ಕಾಂಗ್ರೆಸ್ ಕೊಳಕು ರಾಜಕೀಯವನ್ನು ಮಾಡುತ್ತಿದೆ, ಕಾಂಗ್ರೆಸ್‌ಗೆ ಮತ ಹಾಕಬೇಡಿ ಎಂದು ಹೇಳಿದ್ದ ವಿಡಿಯೋವನ್ನು ಎಡಿಟ್ ಮಾಡಿ 2023ರ ಚುನಾವಣೆಯಲ್ಲಿ ಕಾಂಗ್ರೆಸ್‌ ಗೆ ಮತ ಹಾಕಬೇಡಿ ಎಂದು ಪ್ರಕಾಶ್ ರಾಜ್ ಹೇಳಿದ್ದಾರೆ ಎಂಬ ಸುಳ್ಳು ಮತ್ತು ಸಂಬಂಧವಿಲ್ಲದ ಹಳೆಯ ವಿಡಿಯೋವನ್ನು BJP ಯವರು ಹಂಚಿಕೊಂಡಿದ್ದಾರೆ. ಹಾಗಾಗಿ ಪೋಸ್ಟ್‌ನಲ್ಲಿ ಮಾಡಿದ ಪ್ರತಿಪಾದನೆ ತಪ್ಪಾಗಿದೆ.

ಕೃಪೆ: ಇಂಡಿಯಾ ಟುಡೇ

ನಿಮ್ಮ ಸುತ್ತಮುತ್ತ ಮತ್ತು ಸಾಮಾಜಿಕ ಜಾಲತಾಣಗಳಲ್ಲಿ ಯಾವುದೇ ಸುದ್ದಿಯು ಸುಳ್ಳು ಎಂದು ನಿಮಗೆ ಸಂದೇಹ ಬಂದಿದ್ದರೆ ಅದನ್ನು Ensuddi.com ವಾಟ್ಸಾಪ್  ನಂ 9108969301 ಗೆ ತಲುಪಿಸಿ. ನಾವು ಫ್ಯಾಕ್ಟ್‌ಚೆಕ್ ಮಾಡಿ ಸತ್ಯ ನಿಮ್ಮೆದುರು ಇಡುತ್ತೇವೆ


ಇದ್ದನ್ನು ಓದಿರಿ : ಫ್ಯಾಕ್ಟ್‌ಚೆಕ್ : ದಲಿತರು ನದಿಯಲ್ಲಿ ಸ್ನಾನ ಮಾಡಿದಕ್ಕೆ ಪೂಜಾರಿ ಬೆತ್ತದಿಂದ ಹೊಡೆದನೇ? ಈ ಸ್ಟೋರಿ ಓದಿ


 

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights