ಫ್ಯಾಕ್ಟ್‌ಚೆಕ್ : ಡಿ.ಕೆ.ಶಿವಕುಮಾರ್ ಪ್ರಮಾಣ ವಚನ ಸ್ವೀಕರಿಸುವ ಮುನ್ನ ಟಿಪ್ಪು ಸಮಾಧಿಗೆ ನಮಸ್ಕರಿಸಿ ಮುಸ್ಲಿಮರನ್ನು ಓಲೈಕೆ ಮಾಡಿದ್ದು ನಿಜವೇ?

ಇತ್ತೀಚೆಗೆ ನಡೆದ 2023ರ ಕರ್ನಾಟಕ ವಿಧಾನಸಭಾ ಚುನಾವಣೆಯಲ್ಲಿ ಕಾಂಗ್ರೆಸ್ 135 ಸ್ಥಾನಗಳನ್ನು ಪಡೆದು ರಾಜ್ಯದ ಅಧಿಕಾರದ ಚುಕ್ಕಾಣಿ ಹಿಡಿದಿದೆ. ಮುಖ್ಯಮಂತ್ರಿ ಸ್ಥಾನದ ಆಕಾಂಕ್ಷಿಗಳಾಗಿದ್ದ ಸಿದ್ದರಾಮಯ್ಯ ಮತ್ತು ಡಿ.ಕೆ.ಶಿವಕುಮಾರ್ ಅವರ ಮನವೊಲಿಸಲು ಕಾಂಗ್ರೆಸ್ ಹೈಕಮಾಂಡ್ ಯಶಸ್ವಿಯಾಗಿತ್ತು. ಇದರ ಪರಿಣಾಮ ಸಿದ್ದರಾಮಯ್ಯ ಮುಖ್ಯಮಂತ್ರಿಯಾಗಿ ಡಿ.ಕೆ.ಶಿವಕುಮಾರ್ ಉಪಮುಖ್ಯಮಂತ್ರಿಯಾಗಿ ಅಧಿಕಾರ ವಹಿಸಿಕೊಂಡು 8 ಮಂದಿ ಸಚಿವರಾಗಿ ಪ್ರಮಾಣವಚನ ಸ್ವೀಕರಿಸಿದ್ದರು.

ಈಗ ವಿಧಾನಸಭಾ ಅಧಿವೇಶನ ನಡೆಯುತ್ತಿದ್ದು ಯು.ಟಿ.ಖಾದರ್ ವಿಧಾನಸಭೆಯ ಸಭಾಧ್ಯಕ್ಷರಾಗಿ ಆಯ್ಕೆಯಾಗಿದ್ದಾರೆ. ಈ ಎಲ್ಲ ಬೆಳವಣಿಗೆಗಳ ನಡುವೆ. 2023ರ ಮೇ 20 ರಂದು ಉಪಮುಖ್ಯಮಂತ್ರಿಯಾಗಿ ಆಯ್ಕೆಯಾಗಿರುವ ಡಿ.ಕೆ.ಶಿವಕುಮಾರ್ ಪ್ರಮಾಣವಚನ ಸ್ವೀಕರಿಸುವ ಮುನ್ನ ಟಿಪ್ಪು ಸಮಾಧಿಗೆ ಭೇಟಿ ನೀಡಿ ನಮಸ್ಕರಿಸಿದ್ದಾರೆ ಎಂದು ಪ್ರತಿಪಾದಿಸಿ ಪೋಸ್ಟ್‌ಅನ್ನು ಹಂಚಿಕೊಂಡಿದ್ದಾರೆ.

ಉಪಮುಖ್ಯಮಂತ್ರಿಯಾಗಿ ಪದಗ್ರಹಣಕ್ಕೆ ಮುಂಚೆ ಟಿಪ್ಪುವಿನ ಸಮಾಧಿಗೆ ಕೈ ಮುಗಿದು ನಮಸ್ಕರಿಸಿದ ಡಿ ಕೆ ಶಿವಕುಮಾರ್!!! ಇಸ್ಲಾಂ ನಲ್ಲಿ ಸಮಾಧಿಗೆ ಕೈ ಮುಗಿಯುವುದು ನಿಷಿದ್ಧ! ಓರ್ವ ಅಪ್ಪಟ ಮುಸಲ್ಮಾನ ಸಮಾಧಿಗೆ ಕೈ ಮುಗಿಯುವುದಿಲ್ಲ! ಯಾವುದೇ ಮೌಲಾನಾ ಕೂಡ ಸಮಾಧಿಗೆ ಕೈ ಮುಗಿಯುವುದಿಲ್ಲ!

ಇದು ರಾಜಕಾರಣಿಗಳು ಮುಸ್ಲಿಮರ ಓಲೈಕೆಯಲ್ಲಿ ಇದನ್ನೆಲ್ಲಾ ಮಾಡುತ್ತಿದ್ದಾರೆ! ಮುಸ್ಲಿಮರ ತುಷ್ಟಿಕರಣದ ರಾಜಕೀಯ ಅಷ್ಟೇ.. ಅಂದಮೇಲೆ ಡಿ.ಕೆ. ಶಿವಕುಮಾರ್ ಟಿಪ್ಪುವಿನ ಸಮಾಧಿಗೆ ಕೈ ಮುಗಿದು ಜೋಕರ್ ಎನಿಸಿಕೊಂಡಿದ್ದಾರೆ! ಹಿರಿಯರ ಮೇಲೆ ಅಷ್ಟೊಂದು ಗೌರವ ಇದ್ದಿದ್ದರೆ ತನ್ನದೇ ಹಿರಿಯರು ಯಾರಾದರೂ ಸತ್ತವರು ಇದ್ದರೇ, ಅವರ ಸಮಾಧಿಗೆ ಕೈ ಮುಗಿದು ಹೋಗಬಹುದಿತ್ತು!

ತಮ್ಮ ಬ್ರದರ್ಸ್ ಗಳನ್ನು ಖುಷಿ ಪಡಿಸಲು ಇಸ್ಲಾಂನಲ್ಲಿ ಇಲ್ಲದ ಆಚರಣೆಗಳನ್ನು ಮಾಡಿ ನಗೆ ಪಾಟಲಿಗೆ ಈಡಾಗಿದ್ದಾರೆ! ಅವರನ್ನು ಖುಷಿ ಪಡಿಸುತ್ತಾ ಹಿಂದೂಗಳನ್ನು ಎಷ್ಟು ಕೇವಲವಾಗಿ ನಡೆಸಿಕೊಳ್ಳುತ್ತಿದ್ದಾರೆ ಅನ್ನೋದು ಹಿಂದೂಗಳಿಗೆ ಅರ್ಥವಾದರೆ ಸಾಕು ಎಂದು ಪ್ರತಿಪಾದಿಸಿ ವಾಟ್ಸಾಪ್‌ಗಳಲ್ಲಿ ಸಂದೇಶಗಳನ್ನು ಹಂಚಿಕೊಳ್ಳಲಾಗುತ್ತಿದೆ. ಹಾಗಿದ್ದರೆ ಈ ವಾಟ್ಸಾಪ್‌ನಲ್ಲಿ ಹಂಚಿಕೊಳ್ಳಲಾಗುತ್ತಿರುವ ಸಂದೇಶ ನಿಜವೇ ಎಂದು ಪರಿಶೀಲಿಸೋಣ.

ಫ್ಯಾಕ್ಟ್‌ಚೆಕ್ :

ಸಾಮಾಜಿಕ ಮಾಧ್ಯಮ ಮತ್ತು ವಾಟ್ಸಾಪ್‌ಗಳಲ್ಲಿ ಹಂಚಿಕೊಳ್ಳಲಾಗುತ್ತಿರುವ ಡಿ.ಕೆ.ಶಿವಕುಮಾರ್ ಅವರು ಟಿಪ್ಪು ಸಮಾಧಿಗೆ ತೆರಳಿ ನಮಸ್ಕರಿಸಿ ನಂತರ ಬಂದು ಡಿಸಿಎಂ ಆಗಿ ಪ್ರಮಾಣವಚನ ಸ್ವೀಕರಿಸಿದ್ದಾರೆ ಎಂದು ಮಾಡಲಾಗಿರುವ ಪ್ರತಿಪಾದನೆಯನ್ನು ಪರಿಶೀಲಿಸಿದಾಗ, ವೈರಲ್ ಆಗಿರುವ ಡಿ.ಕೆ.ಶಿವಕುಮಾರ್ ಅವರು ಟಿಪ್ಪು ಸಮಾಧಿಗೆ ನಮಸ್ಕರಿಸುತ್ತಿರುವ ಫೋಟೊ 2019ರಲ್ಲಿ ಡಿ.ಕೆ.ಶಿವಕುಮಾರ್ ಮೈಸೂರು ಮತ್ತು ಮಂಡ್ಯ ಜಿಲ್ಲಾ ಪ್ರವಾಸವನ್ನು ಕೈಗೊಂಡ ಸಂದರ್ಭದಲ್ಲಿ ತೆಗೆದ ಚಿತ್ರ ಎಂದು ತಿಳಿದುಬಂದಿದೆ.

2019ರಲ್ಲಿ ಟಿಪ್ಪು ಜಯಂತಿ ರದ್ದು ಹಾಗೂ ಪಠ್ಯ ಪುಸ್ತಕದಿಂದ ಟಿಪ್ಪು ಇತಿಹಾಸ ತೆಗೆದುಹಾಕುವ ರಾಜ್ಯ ಸರಕಾರದ ನಡೆಗಳು ರಾಜಕೀಯ ಚರ್ಚೆಗೆ ಗ್ರಾಸವಾಗಿತ್ತು. ಇದೇ ಸಂದರ್ಭದಲ್ಲಿ ಮಂಡ್ಯದ ಜಿಲ್ಲೆಯ ಶ್ರೀರಂಗಪಟ್ಟಣದಲ್ಲಿರುವ ಟಿಪ್ಪು ಸಮಾಧಿ ಇರುವ ಸ್ಥಳಕ್ಕೆ ತೆರಳಿದ ಡಿ.ಕೆ. ಶಿವಕುಮಾರ್ ಸಮಾಧಿಗೆ ನಮಸ್ಕರಿಸಿ ಟಿಪ್ಪು ಪೇಟ ತೊಟ್ಟು ಕೈಯಲ್ಲಿ ಖಡ್ಗವನ್ನಿಟ್ಟುಕೊಂಡು ಫೋಸ್ ನೀಡಿದ್ದರು. ಇದು ಹಲವು ಮಾಧ್ಯಮಗಳಲ್ಲಿ ವರದಿಯಾಗಿತ್ತು.

2019 ನವೆಂಬರ್‌ನಲ್ಲಿ ಮೈಸೂರು ಹಾಗೂ ಮಂಡ್ಯ ಜಿಲ್ಲಾ ಪ್ರವಾಸ ಕೈಗೊಂಡಿದ್ದ ಡಿ.ಕೆ. ಶಿವಕುಮಾರ್  ಹಲವಾರು ದೇವಸ್ಥಾನಗಳಿಗೆ ಭೇಟಿ ನೀಡಿ ಪೂಜೆ ಸಲ್ಲಿಸಿದ್ದರು. ಮೈಸೂರಿನ ಚಾಮುಂಡೇಶ್ವರಿ ದೇವಿಗೆ ಪೂಜೆ ಸಲ್ಲಿಸಿದ ಬಳಿಕ ಶ್ರೀರಂಗಪಟ್ಟಣದ ಶ್ರೀರಂಗನಾಥಸ್ವಾಮಿ ದೇಗುಲಕ್ಕೂ ಡಿಕೆಶಿ ಭೇಟಿ ನೀಡಿ ಪೂಜೆ ಸಲ್ಲಿಸಿದರು.

ಡಿ.ಕೆ.ಶಿವಕುಮಾರ್ 2019ರಲ್ಲಿ ಟಿಪ್ಪು ಸಮಾಧಿಗೆ ಭೇಟಿ ನೀಡಿದ್ದ ಸಂದರ್ಭದ ಚಿತ್ರ
ಡಿ.ಕೆ.ಶಿವಕುಮಾರ್ 2019ರಲ್ಲಿ ಟಿಪ್ಪು ಸಮಾಧಿಗೆ ಭೇಟಿ ನೀಡಿದ್ದ ಸಂದರ್ಭದ ಚಿತ್ರ

ಇದಾದ ಬಳಿಕ ಮಂಡ್ಯದ ಶ್ರೀರಂಗಪಟ್ಟಣದಲ್ಲಿರುವ ಟಿಪ್ಪು ಸಮಾಧಿಗೆ ಶಾಸಕ ರವೀಂದ್ರ ಶ್ರೀಕಂಠಯ್ಯ ಜೊತೆಗೆ ಭೇಟಿ ನೀಡಿದ ಡಿಕೆ ಶಿವಕುಮಾರ್ ಸಮಾಧಿಗೆ ನಮಸ್ಕರಿಸಿ ಬಳಿಕ ಅಭಿಮಾನಿಗಳು ನೀಡಿದ ಟಿಪ್ಪು ಪೇಟ ಹಾಗೂ ಖಡ್ಗವನ್ನು ತೊಟ್ಟರು ಎಂದು ವಿಜಯ ಕರ್ನಾಟಕ ಸೇರಿದಂತೆ ಹಲವು ಮಾಧ್ಯಮಗಳು ವರದಿ ಮಾಡಿವೆ.

ಸಾಮಾಜಿಕ ಮಾಧ್ಯಮಗಳಲ್ಲಿ ವೈರಲ್ ಆಗಿರುವ ಫೋಟೊ ಮತ್ತು 2019ರ ಫೋಟೊವನ್ನು ಹೋಲಿಕೆ ಮಾಡಿ ನೋಡಿದಾಗ ಎರಡೂ ಚಿತ್ರ ಒಂದೇ ಆಗಿದ್ದು, ಫೋಟೊದಲ್ಲಿರುವ ಬಾಲಕನ ಚಿತ್ರ ಒಂದೇ ತೆರೆನಾಗಿದೆ ಎಂಬುದು ನಮ್ಮ ಪರಿಶೀಲಿನೆಯ ಸಂದರ್ಭದಲ್ಲಿ ಸ್ಪಷ್ಟವಾಗಿದೆ. 2019ರ ಚಿತ್ರವನ್ನು ಇತ್ತೀಚೆಗೆ ಡಿ.ಕೆ.ಶಿವಕುಮಾರ್ ಉಪಮುಖ್ಯಮಂತ್ರಿಯಾಗಿ ಪ್ರಮಾಣವಚನ ಸ್ವೀಕರಿಸುವ ಮುನ್ನ ಟಿಪ್ಪು ಸಮಾಧಿಗೆ ನಮಿಸಿ ಮುಸ್ಲಿಮರನ್ನು ಓಲೈಕೆ ಮಾಡಲು ಸಜ್ಜಾಗುತ್ತಿದ್ದಾರೆ ಎಂದು 2019ರ ಚಿತ್ರವನ್ನು ಇತ್ತೀಚಿನದ್ದು ಎಂದು ತಪ್ಪಾಗಿ ಹಂಚಿಕೊಳ್ಳಲಾಗಿದೆ. ಹಾಗಾಗಿ ಪೋಸ್ಟ್‌ನಲ್ಲಿ ಮಾಡಿದ ಪ್ರತಿಪಾದನೆ ತಪ್ಪಾಗಿದೆ.

ಒಟ್ಟಾರೆಯಗಿ ಹೇಳುವುದಾದರೆ, ರಾಜ್ಯದಲ್ಲಿ ಕಾಂಗ್ರೆಸ್ ಅಧಿಕಾರಕ್ಕೆ ಬರುತ್ತಿದಂತೆ, ಬಲಪಂಥೀಯ ಸಿದ್ದಾಂತ ಹೊಂದಿರುವ ಸಾಮಾಜಿಕ ಮಾಧ್ಯಮಗಳ ಬಳಕೆದಾರರು, ಮುಸ್ಲಿಂ, ಪಾಕಿಸ್ತಾನ, ಇಸ್ಲಾಮಿಕ್ ಧ್ವಜ, ಗೋ ಹತ್ಯೆ ಎಂಬ ಸುಳ್ಳು ಪೋಸ್ಟ್‌ಗಳನ್ನು ಹಂಚಿಕೊಳ್ಳುತ್ತ ಕೋಮು ಸಾಮರಸ್ಯವನ್ನು ಹಾಳು ಮಾಡವ ಕೆಲಸ ಮಾಡುತ್ತಿದ್ದಾರೆ. ಒಂದು ವೇಳೆ ಟಿಪ್ಪು ಸುಲ್ತಾನ್ ಸಮಾಧಿಗೆ ಡಿ.ಕೆ.ಶಿವಕುಮಾರ್ ನಮಸ್ಕರಿಸಿ ಬಂದು ಡಿ.ಸಿ.ಎಂ ಆಗಿ ಪ್ರಮಾಣ ವಚನ ಸ್ವೀಕರಿಸುವುದು ಅಪರಾಧವೇನಲ್ಲ. ಆದರೆ ಇಂತಹ ಯಾವುದೇ ವರದಿಗಳಿಲ್ಲ. ಇಂತಹ ಸುಳ್ಳುಸುದ್ದಿಗಳನ್ನು ಸಾಮಾಜಿಕ ಮಾಧ್ಯಮಗಳಲ್ಲಿ ಹಂಚಿಕೊಂಡು ಜನರ ಮನಸ್ಸಿನಲ್ಲಿ ಕೋಮು ದ್ವೇಷ ಹರಡುವವರ ಬಗ್ಗೆ ಎಚ್ಚರವಿರಲಿ.

ನಿಮ್ಮ ಸುತ್ತಮುತ್ತ ಮತ್ತು ಸಾಮಾಜಿಕ ಜಾಲತಾಣಗಳಲ್ಲಿ ಯಾವುದೇ ಸುದ್ದಿಯು ಸುಳ್ಳು ಎಂದು ನಿಮಗೆ ಸಂದೇಹ ಬಂದಿದ್ದರೆ ಅದನ್ನು Ensuddi.com ವಾಟ್ಸಾಪ್  ನಂ 9108969301 ಗೆ ತಲುಪಿಸಿ. ನಾವು ಫ್ಯಾಕ್ಟ್‌ಚೆಕ್ ಮಾಡಿ ಸತ್ಯ ನಿಮ್ಮೆದುರು ಇಡುತ್ತೇವೆ


ಇದನ್ನು ಓದಿರಿ: ಫ್ಯಾಕ್ಟ್‌ಚೆಕ್ : ತಮಿಳುನಾಡಿನ ಪ್ರಾಚೀನ ಹಿಂದೂ ದೇವಾಲಯವನ್ನು ಧ್ವಂಸಗೊಳಿಸಿದ್ದು ಯಾರು ಗೊತ್ತೆ?


 

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights