ಫ್ಯಾಕ್ಟ್‌ಚೆಕ್ : ಜೆಸ್ಕಾಂ ಸಿಬ್ಬಂದಿ ಮೇಲಾದ ಹಲ್ಲೆಗೆ ಕಾಂಗ್ರೆಸ್ ನೀಡಿದ ಗ್ಯಾರೆಂಟಿ ಕಾರಣವೇ?

ಕರ್ನಾಟಕದ ಕೊಪ್ಪಳ ಜಿಲ್ಲೆ ಕೂಕನಪಳ್ಳಿ ಗ್ರಾಮದಲ್ಲಿ ಜೆಸ್ಕಾಂ ಸಿಬ್ಬಂದಿ ವಿದ್ಯುತ್ ಬಿಲ್ ನೀಡಲು ಹೋಗಿದ್ದಾಗ, ಕಾಂಗ್ರೆಸ್ ನಿಂದ ಇನ್ನೂರು ಯೂನಿಟ್ ವಿದ್ಯುತ್ ಉಚಿತ ಎಂದು ಘೋಷಣೆ ಮಾಡಲಾಗಿದೆ. ಆದ್ದರಿಂದ ಬಿಲ್ ಪಾವತಿಸುವುದಿಲ್ಲ ಎಂದು ಇಲಾಖೆ ಸಿಬ್ಬಂದಿ ಮೇಲೆ ವ್ಯಕ್ತಿಯೊಬ್ಬರು ಹಲ್ಲೆ ನಡೆಸಿದ್ದಾರೆ ಎಂದು ಪ್ರತಿಪಾದಿಸಿ ಸಾಮಾಜಿಕ ಮಾಧ್ಯಮಗಳಲ್ಲಿ ಹಂಚಿಕೊಳ್ಳಲಾಗಿದೆ.

ಈ ಬಗ್ಗೆ ರಿಶಿ ಬಗ್ರಿ ಎಂಬ BJP ಬೆಂಬಲಿತ ಸಾಮಾಜಿಕ ಮಧ್ಯಮ ಬಳಕೆದಾರರು ಟ್ವೀಟ್ ಮಾಡಿದ್ದು, ಕರ್ನಾಟಕದಲ್ಲಿ ಮೀಟರ್‌ ರೀಡಿಂಗ್‌ಗೆಂದು ಬಂದಿದ್ದ ವಿದ್ಯುತ್‌ ಅಧಿಕಾರಿಗಳ ಮೇಲೆ ಸ್ಥಳೀಯರು ಹಲ್ಲೆ ನಡೆಸಿದ್ದಾರೆ. ಇದು ಕಾಂಗ್ರೆಸ್ ನೀಡಿರುವ ಗ್ಯಾರಂಟಿ ಪ್ರಭಾವದಿಂದ ಜನರು ಇನ್ನು ಮುಂದೆ ವಿದ್ಯುತ್ ಬಿಲ್ ಪಾವತಿಸುವುದಿಲ್ಲ ಎನ್ನುತ್ತಿದ್ದಾರೆ ಎಂಬ ಪೋಸ್ಟ್‌ಅನ್ನು ಹಂಚಿಕೊಂಡಿದ್ದಾರೆ. ಅಲ್ಲದೆ, ಹಲವರು ಇದೇ ಪ್ರತಿಪಾದನೆಯೊಂದಿಗೆ ಪೋಸ್ಟ್‌ಅನ್ನು ಹಂಚಿಕೊಳ್ಳುತ್ತಿದ್ದಾರೆ. ಹಾಗಿದ್ದರೆ ಈ ಪ್ರತಿಪಾದನೆ ನಿಜವೇ ಎಂದು ಪರಿಶೀಲಿಸೋಣ.

ಫ್ಯಾಕ್ಟ್‌ಚೆಕ್ :

ಘಟನಾ ವಿವರ

ವಿದ್ಯುತ್ ಬಿಲ್ ಬಾಕಿ ವಸೂಲಾತಿಗೆ ತೆರಳಿದ್ದ ಜೆಸ್ಕಾಂ ಸಿಬ್ಬಂದಿಗೆ ಗ್ರಾಹಕರೊಬ್ಬರು ಚಪ್ಪಲಿಯಿಂದ ಹೊಡೆದು ಹಲ್ಲೆ ಮಾಡಿರುವ ಘಟನೆ ಇತ್ತೀಚೆಗೆ ಮುನಿರಾಬಾದ್ ಸಮೀಪದ ಕೂಕನಪಳ್ಳಿ ಗ್ರಾಮದಲ್ಲಿ ನಡೆದಿತ್ತು.

ಕೊಪ್ಪಳ ಜಿಲ್ಲೆಯ ಕೂಕನಪಳ್ಳಿ ಗ್ರಾಮದಲ್ಲಿ ಚಂದ್ರಶೇಖರ ಈರಯ್ಯ ಹಿರೇಮಠ ಎಂಬ ವ್ಯಕ್ತಿ ಜೆಸ್ಕಾಂಗೆ 9000 ರೂಪಾಯಿ ಬಾಕಿ ಉಳಿಸಿಕೊಂಡಿದ್ದ. ಆ ಕಾರಣಕ್ಕೆ ಚಂದ್ರಶೇಖರ ಅರವ ಮನೆಯ ಗೃಹಬಳಕೆಯ ವಿದ್ಯುತ್ ಸಂಪರ್ಕವನ್ನು ಜೆಸ್ಕಾಂ ಸಿಬ್ಬಂದಿ ಕಡಿತಗೊಳಿಸಿದ್ದರು. ಅನಧಿಕೃತವಾಗಿ ಮತ್ತೆ ಸಂಪರ್ಕ ಪಡೆದುಕೊಂಡಿದ್ದಲ್ಲದೆ, ಕುಪಿತಗೊಂಡು ಸಿಬ್ಬಂದಿಗೆ ದೂರವಾಣಿ ಕರೆ ಮಾಡಿ, ನಾವು ಮನೆಯಲ್ಲಿ ಇಲ್ಲದ ವೇಳೆ ಸಂಪರ್ಕ ಏಕೆ ಕಡಿತಗೊಳಿಸಿದ್ದೀರಿ ಎಂದು ಅವಾಚ್ಯ ಶಬ್ದಗಳಿಂದ ನಿಂದಿಸಿದ್ದಾರೆ.

ಮನೆಗೆ ಹೋದ ಜೆಸ್ಕಾಂ ಸಿಬ್ಬಂದಿ ಕಪಾಳಕ್ಕೆ ಹೊಡೆದು ಹಲ್ಲೆ ಮಾಡಿದ್ದಾರೆ’ ಎಂದು ಇಲ್ಲಿನ ಠಾಣೆಗೆ ದೂರು ನೀಡಲಾಗಿದೆ. ಆರೋಪಿ ಚಂದ್ರಶೇಖರ ವಿರುದ್ಧ ಇಲ್ಲಿನ ಠಾಣೆಯಲ್ಲಿ ಎಫ್‌ಐಆರ್ ದಾಖಲಿಸಲಾಗಿದೆ’ ಎಂದು ಪೊಲೀಸರು ತಿಳಿಸಿದ್ದಾರೆ. ಕಾಂಗ್ರೆಸ್ ಗ್ಯಾರಂಟಿಗೂ ಜೆಸ್ಕಾಂ ಸಿಬ್ಬಂದಿ ಮೇಲಿನ ಹಲ್ಲೆಗೂ ಏನೂ ಸಂಬಂಧ ಇಲ್ಲ ಎಂಬುದು ಸ್ಪಷ್ಟವಾಗಿದೆ.

ಕಾಂಗ್ರೆಸ್ ಗ್ಯಾರಂಟಿ ನೀಡಿದೆ, ಆದ್ದರಿಂದ ವಿದ್ಯುತ್ ಬಿಲ್ ಕಟ್ಟಲ್ಲ ಎಂದು ಕೊಪ್ಪಳ ಜಿಲ್ಲೆಯ ಗ್ರಾಮವೊಂದರಲ್ಲಿ ಜೆಸ್ಕಾಂ ಸಿಬ್ಬಂದಿ ಮೇಲೆ ಹಲ್ಲೆ ಆಗಿದೆ ಎಂಬುದು ಸಂಪೂರ್ಣ ಸುಳ್ಳು ಮಾಹಿತಿ. ಇದಕ್ಕೆ ಪೂರಕ ಸಾಕ್ಷ್ಯವಾಗಿ ಕೊಪ್ಪಳ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಯಶೋದಾ ವಂಟಗೋಡಿ ಅವರ ಹೇಳಿಕೆ, ಪ್ರಜಾವಾಣಿಯ ವೆಬ್ ಸೈಟ್ ನಲ್ಲಿ ಪ್ರಕಟವಾಗಿರುವ ಸುದ್ದಿ ಇದೆ. ಪತ್ರಕರ್ತೆ ಅನುಷಾ ಸೂದ್ ಅವರು ಎಸ್ಪಿ ಯಶೋದಾ ಅವರ ಹೇಳಿಕೆಯ ವಿಡಿಯೋ ಪೋಸ್ಟ್ ಮಾಡಿದ್ದಾರೆ.

ಒಟ್ಟಾರೆಯಾಗಿ ಹೇಳುವುದಾದರೆ, ಕಾಂಗ್ರೆಸ್ ಚುನಾವಣೆ ಸಂದರ್ಭದಲ್ಲಿ ನೀಡಿರುವ 5 ಗ್ಯಾರೆಂಟಿ ಭರವಸೆಗಳ ಪ್ರಕಾರ ಪ್ರತಿ ಮನೆಗೆ 200 ಯೂನಿಟ್ ಉಚಿತ ವಿದ್ಯುತ್ ನೀಡುವ ಗ್ಯಾರೆಂಟಿಯೂ ಒಂದು. ಹಾಗಾಗಿ ಕೊಪ್ಪಳದಲ್ಲಿ ಜೆಸ್ಕಾಂ ಸಿಬ್ಬಂದಿ ಮೇಲೆ ನಡೆದ ಹಲ್ಲೆಯನ್ನು ಕಾಂಗ್ರೆಸ್ ಗ್ಯಾರೆಂಟಿಗೆ ಸಂಬಂಧ ಕಲ್ಪಿಸಿ ಹಂಚಿಕೊಳ್ಳಲಾಗಿದೆ. ಆದರೆ ಈ ಘಟನೆಗೂ ಕಾಂಗ್ರೆಸ್‌ನ ಗ್ಯಾರೆಂಟಿ ಘೋಷಣೆಗೂ ಸಂಬಂಧವಿಲ್ಲ.

ನಿಮ್ಮ ಸುತ್ತಮುತ್ತ ಮತ್ತು ಸಾಮಾಜಿಕ ಜಾಲತಾಣಗಳಲ್ಲಿ ಯಾವುದೇ ಸುದ್ದಿಯು ಸುಳ್ಳು ಎಂದು ನಿಮಗೆ ಸಂದೇಹ ಬಂದಿದ್ದರೆ ಅದನ್ನು Ensuddi.com ವಾಟ್ಸಾಪ್  ನಂ 9108969301 ಗೆ ತಲುಪಿಸಿ. ನಾವು ಫ್ಯಾಕ್ಟ್‌ಚೆಕ್ ಮಾಡಿ ಸತ್ಯ ನಿಮ್ಮೆದುರು ಇಡುತ್ತೇವೆ


ಇದನ್ನು ಓದಿರಿ : ಫ್ಯಾಕ್ಟ್‌ಚೆಕ್ : ಮಾಜಿ ಹಣಕಾಸು ಸಚಿವ ಪಿ. ಚಿದಂಬರಂ ತಮ್ಮ ಪತ್ನಿ ಒಡೆತನದ ಖಾಸಗಿ ನಿವಾಸಕ್ಕೆ ಸರ್ಕಾರದಿಂದ ಬಾಡಿಗೆ ಭತ್ಯೆ ಪಡೆದರೆ?


 

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights