ಫ್ಯಾಕ್ಟ್‌ಚೆಕ್ : ಬಾಡಿಗೆ ಹಣ ಕೈತಪ್ಪಲಿದೆ ಎಂಬ ಕಾರಣಕ್ಕೆ ಹೊಸ ಸಂಸತ್ ಭವನದ ಉದ್ಘಾಟನೆಯನ್ನು ಕಾಂಗ್ರೆಸ್ ಮತ್ತು ಎಡಪಕ್ಷಗಳು ವಿರೋಧಿಸಿವೆಯೇ?

ದೆಹಲಿಯಲ್ಲಿರುವ ಸರಕಾರದ ವಿವಿಧ ಇಲಾಖಾ ಕಚೇರಿಗಳು ಬಾಡಿಗೆ ಕಟ್ಟಡಗಳಲ್ಲಿವೆ. ವರ್ಷಕ್ಕೆ ಅಂದಾಜು 600 ಕೋಟಿ ಬಾಡಿಗೆಯನ್ನು ಸರ್ಕಾರ ಕಟ್ಟುತ್ತದೆ. ಈ ಎಲ್ಲಾ ಕಟ್ಟಡಗಳ ಮಾಲಿಕರುಗಳು ಕಾಂಗ್ರೆಸಿಗರು ಎಡಪಂಥೀಯರು ಮತ್ತು ಕೆಲ ಪತ್ರಕರ್ತರುಗಳಾಗಿದ್ದಾರೆ. ಮೋದಿಜಿ ಈಗ ಎಲ್ಲಾ ಇಲಾಖೆಗಳನ್ನು ಹೊಸ ಸಂಸತ್ ಕಟ್ಟಡಕ್ಕೆ ಸ್ಥಾಳಾಂತರಿಸಲು ಪ್ಲಾನ್ ಮಾಡಿದ್ದಾರೆ.

ವರ್ಷಕ್ಕೆ 600 ಕೋಟಿ ಉಳಿಯಿತು. ಒಂದೂವರೆ ವರ್ಷದ ಬಾಡಿಗೆಯಲ್ಲಿ ಮೋದಿ ಹೊಸ ಸಂಸತ್ ಕಟ್ಟಡವನ್ನೆ ನಿರ್ಮಿಸಿ ಬಿಟ್ಟರು. ತಮಗೆ ಬರುವ ಬಾಡಿಗೆ ಹೋಗುತ್ತಲ್ಲಾ ಎಂದು ಸಹಜವಾಗಿ ವಿರೋಧಿಗಳಿಗೆ ಉರಿ ಎದ್ದಿದೆ ಎಂಬ ಪ್ರತಿಪಾದನೆಯೊಂದಿಗೆ ಪೋಸ್ಟ್‌ಅನ್ನು ವಾಟ್ಸಾಪ್‌ಗಳಲ್ಲಿ ಹಂಚಿಕೊಂಡಿದ್ದಾರೆ.

ಈ ಪೋಸ್ಟ್‌ನಲ್ಲಿ ಮಾಡಲಾದ ಪ್ರತಿಪಾದನೆಯ ಸತ್ಯಾಸತ್ಯತೆಗಳನ್ನು ತಿಳಿಸುವಂತೆ ಹಲವು ಸಾಮಾಜಿಕ ಮಾಧ್ಯಮಗಳ ಬಳಕೆದಾರರು ಏನ್‌ಸುದ್ದಿ.ಕಾಂಗೆ ವಾಟ್ಸಾಪ್‌ ಮೂಲಕ ವಿನಂತಿಸಿದ್ದಾರೆ.

ಫ್ಯಾಕ್ಟ್‌ಚೆಕ್ :

ಸಾಮಾಜಿಕ ಮಾಧ್ಯಮಗಳಲ್ಲಿ ವೈರಲ್ ಆಗಿರುವ ಪೋಸ್ಟ್‌ನಲ್ಲಿ ಮಾಡಿದ ಪ್ರತಿಪಾದನೆಯನ್ನು ಪರಿಶೀಲಿಸಲು ಕೇಂದ್ರ ಸರ್ಕಾರದ ವಿವಿಧ ಇಲಾಖೆಗಳು ಹೇಗೆ ಮತ್ತು ಯಾವ ಕಟ್ಟಡಗಳಲ್ಲಿ ಕಾರ್ಯ ನಿರ್ವಹಿಸುತ್ತಿವೆ ಎಂದು ಪರಿಶೀಲಿಸಲು ಸರ್ಕಾರದ ಅಧಿಕೃತ ವೆಬ್‌ಸೈಟ್‌ಅನ್ನು ಪರಿಶೀಲಿಸಿದಾಗ ಅದರಲ್ಲಿ ಯಾವುದೇ ರೀತಿಯ ಮಾಹಿತಿಗಳು ಲಭ್ಯವಿಲ್ಲ.

ವಿವಿಧ ಸಚಿವಾಲಯಗಳ ಹೆಚ್ಚಿನ ಕಾರ್ಯದರ್ಶಿಗಳು ಕಾಂಗ್ರೆಸ್ ಮತ್ತು ಕಮ್ಯುನಿಸ್ಟ್ ನಾಯಕರ ಒಡೆತನದ ಬಾಡಿಗೆ ವಸತಿಗಳಲ್ಲಿ ಕೆಲಸ ಮಾಡುತ್ತಿವೆ ಎಂದು ಪೋಸ್ಟ್ ಹೇಳಲಾಗಿದ್ದು ಇದಕ್ಕೆ ಯಾವುದೇ ಆಧಾರವಿಲ್ಲ. ಆದರೆ, ಇದನ್ನು ದೃಢಪಡಿಸುವ ಯಾವುದೇ ಅಧಿಕೃತ ಮಾಹಿತಿ ಅಥವಾ ಸುದ್ದಿ ವರದಿಗಳಿಲ್ಲ.

ಇದಲ್ಲದೆ, ವಸತಿ ಮತ್ತು ನಗರ ವ್ಯವಹಾರಗಳ ರಾಜ್ಯ ಸಚಿವ ಕೌಶಲ್ ಕಿಶೋರ್ ಈಗಾಗಲೇ ಲೋಕಸಭೆಗೆ ಮಾಹಿತಿ ನೀಡಿದ್ದು, ‘ದಿಲ್ಲಿಯಲ್ಲಿ ಕಚೇರಿ ಸ್ಥಳವನ್ನು ಬಾಡಿಗೆಗೆ ನೀಡಲು ವಿವಿಧ ಸರ್ಕಾರಿ ಸಂಸ್ಥೆಗಳು ಖರ್ಚು ಮಾಡಿದ ಮೊತ್ತದ ನಿರ್ವಹಣೆ ಕುರಿತಾದ ಕೇಂದ್ರಿಕೃತ ಡೇಟಾ ಲಭ್ಯವಿಲ್ಲ’ ಎಂದು ನಮೂದಿಸಿರುವುದು ಗಮನಾರ್ಹವಾಗಿದೆ. ಈ ಸುದ್ದಿ ಲೇಖನಗಳ ಪ್ರಕಾರ ಕೇಂದ್ರ ಸರ್ಕಾರವು ಸುಪ್ರೀಂ ಕೋರ್ಟ್‌ನಲ್ಲಿ ಸೆಂಟ್ರಲ್ ವಿಸ್ಟಾ ಯೋಜನೆಯನ್ನು ಸಮರ್ಥಿಸಿಕೊಂಡಿದ್ದು, ಯೋಜನೆಯು ಸೆಕ್ರೆಟರಿಯೇಟ್‌ಗಳ ವಾರ್ಷಿಕ ಬಾಡಿಗೆ ವೆಚ್ಚ 1000 ಕೋಟಿಗಳನ್ನು ಉಳಿಸುತ್ತದೆ ಎಂದು ಪ್ರತಿಪಾದಿಸಿತ್ತು.

ಕಾಂಗ್ರೆಸ್ ಮತ್ತು ಇತರೆ ವಿರೋಧ ಪಕ್ಷಗಳು ನೂತನ ಸಂಸತ್ ಭವನಕ್ಕೆ ಇಲಾಖಾ ಕಚೇರಿಗಳನ್ನು ಸ್ಥಾಳಾತರಿಸುವುದನ್ನು ವಿರೋಧಿಸಿವೆ ಎಂದು ಸುಳ್ಳು ಪ್ರತಿಪಾದನೆಯೊಂದಿಗೆ ಪೋಸ್ಟ್‌ ಮಾಡಲಾಗಿದೆ.

ವಾಸ್ತವವಾಗಿ ವಿರೋಧ ಪಕ್ಷಗಳು ಏನನ್ನು ವಿರೋಧ ಮಾಡುತ್ತಿವೆ?

ಹಳೆಯ ಸಂಸತ್ ಕಟ್ಟಡವನ್ನು 1927ರಲ್ಲಿ ನಿರ್ಮಿಸಲಾಗಿದ್ದು, ಅದಕ್ಕೆ ಈಗ 96 ವರ್ಷ. ಹಳೆಯದಾಗಿರುವ ಕಟ್ಟಡದಲ್ಲಿ ಈಗಿನ ಅವಶ್ಯಕತೆಗಳಿಗೆ ಸಾಕಷ್ಟು ಸ್ಥಳಾವಕಾಶ ಇಲ್ಲದ ಕಾರಣ ಹಲವು ದಶಕಗಳ ಹಿಂದೆಯೇ ಹೊಸ ಕಟ್ಟಡ ನಿರ್ಮಾಣಕ್ಕೆ ಪ್ರಸ್ತಾವನೆ ಮಾಡಲಾಗಿತ್ತು.  ನೂತನ ಕಟ್ಟಡದಲ್ಲಿ 888 ಲೋಕಸಭಾ ಸದಸ್ಯರು, 300 ರಾಜ್ಯಸಭಾ ಸಂಸದರು ಕೂರಲು ಸ್ಥಳಾವಕಾಶವಿದೆ. ಲೋಕಸಭೆ ಚೇಂಬರ್‌ನಲ್ಲಿ ಜಂಟಿ ಅಧಿವೇನದಲ್ಲಿ ಒಟ್ಟಿಗೆ 1280 ಸಂಸದರು ಕೂರುವಷ್ಟು ಜಾಗವಿದೆ.

ಇಂದಿನ ನೂತನ ಸಂಸತ್ ಕಟ್ಟಡವನ್ನು ರಾಷ್ಟ್ರಪತಿ ದ್ರೌಪದಿ ಮುರ್ಮುರವರು ಉದ್ಘಾಟಿಸಬೇಕೆ ಹೊರತು ಪ್ರಧಾನಿ ಮೋದಿಯಲ್ಲ ಎಂದು ಕಾಂಗ್ರೆಸ್ ಸೇರಿ ಹಲವು ವಿರೋಧ ಪಕ್ಷಗಳು ಕಾರ್ಯಕ್ರಮ ಬಹಿಷ್ಕರಿಸಿವೆ. ರಾಷ್ಟ್ರಾಧ್ಯಕ್ಷರು ದೇಶದ ಮುಖ್ಯಸ್ಥರಾಗಿ ಉದ್ಘಾಟಿಸುವ ಗೌರವ ಪಡೆಯಬೇಕಿತ್ತು. ಆದರೆ ಅವರನ್ನು ಆಹ್ವಾನಿಸದ ಕಾರಣ, ನರೇಂದ್ರ ಮೋದಿ ಸರ್ಕಾರವು ಅಧ್ಯಕ್ಷರ ಕುರ್ಚಿಗೆ ಅಗೌರವ ತೋರುತ್ತಿದೆ ಎಂದು ಈ ಪಕ್ಷಗಳು ಆರೋಪಿಸಿವೆ.

ಕಾಂಗ್ರೆಸ್, ದ್ರಾವಿಡ ಮುನ್ನೇತ್ರ ಕಳಗಂ (ಡಿಎಂಕೆ), ಆಮ್ ಆದ್ಮಿ ಪಕ್ಷ (ಎಎಪಿ), ಶಿವಸೇನೆ (ಯುಬಿಟಿ), ಸಮಾಜವಾದಿ ಪಕ್ಷ (ಎಸ್‌ಪಿ), ಕಮ್ಯುನಿಸ್ಟ್ ಪಾರ್ಟಿ ಆಫ್ ಇಂಡಿಯಾ (ಸಿಪಿಐ), ಸಿಪಿಐ(ಎಂ), ಜಾರ್ಖಂಡ್ ಮುಕ್ತಿ ಮೋರ್ಚಾ (ಜೆಎಂಎಂ), ಕೇರಳ ಕಾಂಗ್ರೆಸ್ (ಮಣಿ), ವಿಡುತಲೈ ಚಿರುತೈಗಲ್ ಕಚ್ಚಿ (ವಿಸಿಕೆ), ರಾಷ್ಟ್ರೀಯ ಲೋಕದಳ (ಆರ್‌ಎಲ್‌ಡಿ), ರಾಷ್ಟ್ರೀಯ ಜನತಾ ದಳ (ಆರ್‌ಜೆಡಿ), ತೃಣಮೂಲ ಕಾಂಗ್ರೆಸ್ (ಟಿಎಂಸಿ), ಜನತಾ ದಳ (ಯುನೈಟೆಡ್), ನ್ಯಾಶನಲಿಸ್ಟ್ ಕಾಂಗ್ರೆಸ್ ಪಾರ್ಟಿ (ಎನ್‌ಸಿಪಿ), ಇಂಡಿಯನ್ ಯೂನಿಯನ್ ಮುಸ್ಲಿಂ ಲೀಗ್ (IUML), ನ್ಯಾಷನಲ್ ಕಾನ್ಫರೆನ್ಸ್ (NC), ಕ್ರಾಂತಿಕಾರಿ ಸಮಾಜವಾದಿ ಪಕ್ಷ (RSP), ಭಾರತ ರಾಷ್ಟ್ರ ಸಮಿತಿ (BRS), ಮತ್ತು ಮರುಮಲಾರ್ಚಿ ದ್ರಾವಿಡ ಮುನ್ನೇತ್ರ ಕಳಗಂ (MDMK) ಪಕ್ಷಗಳು ಕಾರ್ಯಕ್ರಮದಿಂದ ದೂರ ಉಳಿದಿವೆ.

ಇಂದಿನ ಕಾರ್ಯಕ್ರಮದಲ್ಲಿ 382 ಲೋಕಸಭಾ ಸದಸ್ಯರು, 131 ರಾಜ್ಯಸಭಾ ಸದಸ್ಯರು ಭಾಗಿಯಾದರೆ, ವಿರೋಧ ಪಕ್ಷಗಳ 156 ಲೋಕಸಭಾ ಸದಸ್ಯರು ಮತ್ತು 104 ರಾಜ್ಯಸಭಾ ಸದಸ್ಯರು ಕಾರ್ಯಕ್ರಮ ಬಹಿಷ್ಕರಿಸಿದ್ದಾರೆ.

ಒಟ್ಟಾರೆಯಾಗಿ ಹೇಳುವುದಾದರೆ,  ಕೇಂದ್ರ ಸರ್ಕಾರದಿಂದ ಬರುತ್ತಿರುವ ಬಾಡಿಗೆಯ ಹಣ ಇನ್ನು ಮುಂದೆ ಕೈ ತಪ್ಪುತ್ತದೆ ಎನ್ನುವ ಕಾರಣಕ್ಕೆ ಹೊಸ ಸಂಸತ್ ಭವನಕ್ಕೆ ವಿವಿಧ ಇಲಾಖೆಗಳ ಕಚೇರಿಗಳನ್ನು ಸ್ಥಳಾಂತರಿಸಲು ಕಾಂಗ್ರೆಸ್ ಮತ್ತು ಎಡಪಂಥೀಯರು ವಿರೋಧಿಸುತ್ತಿದ್ದಾರೆ ಎಂಬುದು ಆಧಾರ ರಹಿತವಾಗಿದ್ದು ಸುಳ್ಳು ಪ್ರತಿಪಾದನೆಯೊಂದಿಗೆ ಹಂಚಿಕೊಳ್ಳಲಾಗಿದೆ.

ನಿಮ್ಮ ಸುತ್ತಮುತ್ತ ಮತ್ತು ಸಾಮಾಜಿಕ ಜಾಲತಾಣಗಳಲ್ಲಿ ಯಾವುದೇ ಸುದ್ದಿಯು ಸುಳ್ಳು ಎಂದು ನಿಮಗೆ ಸಂದೇಹ ಬಂದಿದ್ದರೆ ಅದನ್ನು Ensuddi.com ವಾಟ್ಸಾಪ್  ನಂ 9108969301 ಗೆ ತಲುಪಿಸಿ. ನಾವು ಫ್ಯಾಕ್ಟ್‌ಚೆಕ್ ಮಾಡಿ ಸತ್ಯ ನಿಮ್ಮೆದುರು ಇಡುತ್ತೇವೆ


ಇದನ್ನು ಓದಿರಿ : ಫ್ಯಾಕ್ಟ್‌ಚೆಕ್ : ಜೆಸ್ಕಾಂ ಸಿಬ್ಬಂದಿ ಮೇಲಾದ ಹಲ್ಲೆಗೆ ಕಾಂಗ್ರೆಸ್ ನೀಡಿದ ಗ್ಯಾರೆಂಟಿ ಕಾರಣವೇ?


 

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights