ಫ್ಯಾಕ್ಟ್‌ಚೆಕ್ : ‘ಬಾಕಿ ವಿದ್ಯುತ್ ಬಿಲ್ ‘ ಮನ್ನಾ ಮಾಡುತ್ತೇವೆ ಎಂದು ಕಾಂಗ್ರೆಸ್ ಹೇಳಿತ್ತೇ?

ಈಗ ರಾಜ್ಯಾದ್ಯಂತ ಕಾಂಗ್ರೆಸ್‌ ಗ್ಯಾರಂಟಿಯದ್ದೇ ಸುದ್ದಿ. 200 ಯುನಿಟ್‌ ಉಚಿತ ವಿದ್ಯುತ್‌, ಮಹಿಳೆಯರಿಗೆ ಉಚಿತ ಪ್ರಯಾಣ ಸೇರಿದಂತೆ ಐದು ಗ್ಯಾರಂಟಿಯನ್ನು ಪ್ರಣಾಳಿಕೆಯಲ್ಲಿ ನೀಡಿದ್ದ ಕಾಂಗ್ರೆಸ್‌ ಈಗ ಅಧಿಕಾರಕ್ಕೆ ಬಂದಿದೆ. ಈ ವೇಳೆ ಜನರೂ ಸಹ ಆ ನಿಟ್ಟಿನಲ್ಲಿ ಬೇಡಿಕೆ ಇಟ್ಟಿದ್ದು, ಕೆಲವು ಕಡೆ ವಿದ್ಯುತ್‌ ಬಿಲ್‌ ಕಟ್ಟಲು ನಿರಾಕರಣೆ ಮಾಡುತ್ತಿದ್ದಾರೆ.

ಈ ನಡುವೆ ಕೊಪ್ಪಳ ತಾಲೂಕಿನ ಕೂಕನಪಳ್ಳಿ ಗ್ರಾಮದಲ್ಲಿ ಹಲವು ತಿಂಗಳಿನಿಂದ ಕಟ್ಟದ ಬಾಕಿ ವಿದ್ಯುತ್‌ ಬಿಲ್‌  ಅನ್ನು ಪಾವತಿ ಮಾಡುವಂತೆ ಕೇಳಿದ್ದಕ್ಕೆ ಜೆಸ್ಕಾಂ ಸಿಬ್ಬಂದಿ ಮೇಲೆ ವ್ಯಕ್ತಿಯೊಬ್ಬ ಹಲ್ಲೆ ಮಾಡಿದ ಘಟನೆ ಬೆನ್ನಲ್ಲೆ, ಕಾಂಗ್ರೆಸ್‌ ನೀಡಿರುವ ಗ್ಯಾರೆಂಟಿಗಳ ಬಗ್ಗೆಯೇ ಹೆಚ್ಚು ಚರ್ಚೆಯಾಗುತ್ತಿದ್ದು ಜನರಲ್ಲಿ ಗೊಂದಲ ಸೃಷ್ಟಿಯಾಗುವಂತಹ ಪೋಸ್ಟ್‌ಗಳು ಸಾಮಾಜಿಕ ಮಾಧ್ಯಮಗಳಲ್ಲಿ ಪ್ರಸಾರವಾಗುತ್ತಿದೆ.

“ಕರ್ನಾಟಕದ ಜನರಿಗೆ ಬಿಗ್ ಶಾ-ಕ್ ಕರೆಂಟ್ ಬಿಲ್ ಕಟ್ಟಲೇ ಬೇಕು, ಮನ್ನ ಮಾಡುವ ಪ್ರಶ್ನೆಯೇ ಇಲ್ಲ.! ಉಲ್ಟಾ ಹೊಡೆದ ಅಧಿಕಾರಿಗಳು.!” ಎಂಬ ಶೀರ್ಷಿಕೆಯೊಂದಿಗೆ ಪೋಸ್ಟ್‌ಅನ್ನು ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಳ್ಳಲಾಗಿದೆ. ಸರ್ಕಾರ ಘೋಷಿಸಿರುವ 200 ಯೂನಿಟ್ ಉಚಿತ ವಿದ್ಯುತ್ ಅನ್ನು ಉಲ್ಲೇಖಿಸಿ ಕಾಂಗ್ರೆಸ್ ಸರ್ಕಾರ ಜನರನ್ನು ವಂಚಿಸಿದೆ ಅಧಿಕಾರಿಗಳು ಯೂಟರ್ನ್ ಹೊಡೆದಿದ್ದಾರೆ ಎಂದು ಕೆಲವು ಸುದ್ದಿ ತಾಣಗಳು ವರದಿ ಮಾಡಿವೆ. ಹಾಗಿದ್ದರೆ ಕಾಂಗ್ರೆಸ್ ಅಧಿಕಾರಕ್ಕೆ ಬಂದರೆ ಬಾಕಿ ಇರುವ ವಿದ್ಯುತ್ ಬಿಲ್ ಅನ್ನು ಮನ್ನಾ ಮಾಡುತ್ತೇವೆ ಎಂದು ಹೇಳಿತ್ತೆ? ಎಂದು ಪೋಸ್ಟ್‌ನಲ್ಲಿ ಮಾಡಿರುವ ಪ್ರತಿಪಾದನೆಯನ್ನು ಪರಿಶೀಲಿಸೋಣ.

ಫ್ಯಾಕ್ಟ್‌ಚೆಕ್ :

ಸಾಮಾಜಿಕ ಮಾಧ್ಯಮಗಳಲ್ಲಿ ವೈರಲ್ ಆಗಿರುವ ಪೋಸ್ಟ್‌ನಲ್ಲಿ ಪ್ರತಿಪಾದಿಸಿದಂತೆ ಬಾಕಿ ಇರುವ ವಿದ್ಯತ್ ಬಿಲ್ ಅನ್ನು ಮನ್ನ ಮಾಡುತ್ತೇವೆ ಎಂದು ಸರ್ಕಾರ ಎಲ್ಲಿಯೂ ಹೇಳಿಲ್ಲ.

ಮೊದಲನೆಯದಾಗಿ, ಕಾಂಗ್ರೆಸ್ ಪಕ್ಷವು ಎಲ್ಲಿಯೂ ವಿದ್ಯುತ್ ಬಿಲ್ “ಮನ್ನಾ” ಎಂಬ ಪದವನ್ನು ಬಳಸಿಲ್ಲ. ಇನ್ನು ಅಧಿಕಾರಿಗಳು “ಉಲ್ಟಾ” ಹೊಡೆಯುತ್ತಿದ್ದಾರೆ ಎನ್ನುವುದಕ್ಕೆ ವಾಸ್ತವವಾಗಿ ಆದೇಶ ಇನ್ನು ಜಾರಿಯೇ ಆಗಿಲ್ಲ. ಬಾಕಿ ವಿದ್ಯುತ್ ಬಿಲ್ ಅನ್ನು ಮನ್ನಾ ಮಾಡಲಾಗುತ್ತದೆ ಎಂದು ಎಲ್ಲಿಯೂ ಘೋಷಣೆ ಮಾಡಿಲ್ಲ.

ಚುನಾವಣೆ ಪ್ರಚಾರದ ಸಂದರ್ಭದಲ್ಲಿ ಕೆಪಿಸಿಸಿ ಅಧ್ಯಕ್ಷರೂ ಹಾಗೂ ಸದ್ಯಕ್ಕೆ ಕರ್ನಾಟಕದ ಉಪಮುಖ್ಯಮಂತ್ರಿಯೂ ಆಗಿರುವ ಡಿ.ಕೆ. ಶಿವಕುಮಾರ್ ಅವರು ಹೇಳಿದ್ದೇನು ಎಂಬುದಕ್ಕೆ ಇಲ್ಲಿ ವಿಡಿಯೋವನ್ನು ನೀಡಲಾಗಿದೆ. ಅದರಲ್ಲಿ ಅವರು “ಜೂನ್ ತಿಂಗಳಿಂದ ಯಾರೂ ವಿದ್ಯುತ್ ಬಿಲ್ ಕಟ್ಟಬೇಕಾಗಿಲ್ಲ” ಎಂದು ಹೇಳಿದ್ದಾರೆ. ಅಂದರೆ ಜೂನ್ ತಿಂಗಳಿಗೆ ಬರುವುದು ಮೇ ತಿಂಗಳಿನ ವಿದ್ಯುತ್ ಬಿಲ್ ಆಗಿರುತ್ತದೆ. ಅಂದರೆ ಏಪ್ರಿಲ್ ತಿಂಗಳಿನದು ಮೇ ತಿಂಗಳಿಗೆ ಬರುತ್ತದೆ. ಎಲ್ಲಿಯೂ ಮೇ ತಿಂಗಳಲ್ಲಿ ಬರುವಂಥ ಏಪ್ರಿಲ್ ನ ವಿದ್ಯುತ್ ಬಿಲ್ ಮನ್ನಾ ಮಾಡಲಾಗುವುದು ಎಂದು ಹೇಳಿಲ್ಲ.

 

ಚುನಾವಣಾ ಪೂರ್ವದಲ್ಲಿ ಹೇಳಿದಂತೆ ಈಗಾಗಲೇ ಮೊದಲ ಸಂಪುಟ ಸಭೆಯಲ್ಲೇ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು 200 ಯೂನಿಟ್ ವಿದ್ಯುತ್ ಉಚಿತ ಎಂಬುದಕ್ಕೆ ತಾತ್ವಿಕ ಒಪ್ಪಿಗೆಯನ್ನು ಪಡೆದುಕೊಂಡಿದ್ದು, ಅದರ ಸರ್ಕಾರಿ ಆದೇಶವನ್ನು ಸಹ ಹೊರಡಿಸಿದ್ದಾರೆ. ಇನ್ನುಳಿದ ವಿವರಗಳನ್ನು ಒಂದು ವಾರದೊಳಗೆ ತಿಳಿಸುವುದಾಗಿ ಹೇಳಿದ್ದಾರೆ.

“ಚುನಾವಣಾ ಪೂರ್ವದಲ್ಲಿ ನಾವು ನಾಡಿನ ಜನರಿಗೆ 5 ಪ್ರಮುಖ ಗ್ಯಾರೆಂಟಿಗಳನ್ನು ನೀಡಿದ್ದೆವು, ಜನತೆ ನಮ್ಮ ಮೇಲೆ ನಂಬಿಕೆಯಿಟ್ಟು ಪಕ್ಷಕ್ಕೆ ಪೂರ್ಣ ಬಹುಮತ ನೀಡಿದ್ದರಿಂದ ಇಂದು ನಾನು ರಾಜ್ಯದ ಮುಖ್ಯಮಂತ್ರಿಯಾಗಿ ಪ್ರಮಾಣ ವಚನ ಸ್ವೀಕರಿಸಿದ್ದೇನೆ. ನಮ್ಮ ಸರ್ಕಾರದ ಮೊದಲ ಸಂಪುಟ ಸಭೆಯಲ್ಲಿಯೇ ಐದೂ ಗ್ಯಾರೆಂಟಿಗಳಿಗೆ ಅನುಮೋದನೆ ನೀಡುವ ವಚನ ನೀಡಿದ್ದೆ, ಇಂದು ಕೊಟ್ಟ ಮಾತಿನಂತೆ ಪ್ರಥಮ ಸಂಪುಟ ಸಭೆಯಲ್ಲೇ ನಮ್ಮ ಎಲ್ಲಾ ಗ್ಯಾರೆಂಟಿಗಳಿಗೆ ತಾತ್ವಿಕ ಅನುಮೋದನೆ ನೀಡಿ ಮತ್ತೊಮ್ಮೆ ನುಡಿದಂತೆ ನಡೆದಿದ್ದೇವೆ. ಸಮಸ್ತ ಕನ್ನಡಿಗರ ಪ್ರೀತಿ, ನಂಬಿಕೆಗೆ ನಾನು ಆಭಾರಿ. ಸದೃಢ, ಸಮೃದ್ಧ, ಸೌಹಾರ್ದ ಕರ್ನಾಟಕದ ಮರುನಿರ್ಮಾಣಕ್ಕಾಗಿ ನಾವೆಲ್ಲರೂ ಜೊತೆಗೂಡಿ ಶ್ರಮಿಸೋಣ.” ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಟ್ವೀಟ್ ಮಾಡಿದ್ದಾರೆ.

ಒಟ್ಟಾರೆಯಾಗಿ ಹೇಳುವುದಾದರೆ, ಕಾಂಗ್ರೆಸ್ ಪಕ್ಷ ಅಧಿಕಾರಕ್ಕೆ ಬಂದರೆ 200 ಯೂನಿಟ್ ಉಚಿತ ವಿದ್ಯುತ್ ಎಂದು ಹೇಳಿತ್ತೇ ವಿನಃ ಬಾಕಿ ಬಿಲ್ ಮನ್ನ ಮಾಡುತ್ತೇವೆ ಎಂದು ಎಲ್ಲಿಯೂ ಹೇಳಿಲ್ಲ. ಅಂದರೆ ಉಚಿತ ವಿದ್ಯುತ್ ಯೋಜನೆ ಘೋಷಣೆಯಾದ ತಿಂಗಳಿನಿಂದಲೇ  ಜಾರಿಗೆ ಬರುತ್ತದೆ ಎಂದು ಸ್ಪಷ್ಟವಾಗಿ ಹೇಳಿದ್ದಾರೆ. ಇನ್ನು ಥಂಬ್ ನೇಲ್ ನಲ್ಲಿ ಬಳಕೆ ಮಾಡಲಾದ ಪೋಸ್ಟ್‌ 2020ರ ಕೋವಿಡ್‌ ಸಂದರ್ಭದ್ದು ಎಂದು ಸ್ಪಷ್ಟವಾಗಿದೆ.

ಕೋವಿಡ್ ಸಂದರ್ಭದಲ್ಲಿ ಲಾಕ್‌ಡೌನ್ ಮಾಡಿದ ಪರಿಣಾಮ ಹಲವರು ಆರ್ಥಿಕ ತೊಂದರೆಗೆ ಒಳಗಾಗಿದ್ದರಿಂದ ವಿದ್ಯುತ್ ಬಿಲ್ ಮನ್ನ ಮಾಡಬೇಕು ಎಂದು ವಿನಂತಿಸಿದರೂ ಸರ್ಕಾರವಾಗಲಿ ಅಧಿಕಾರಿಗಳಲಾಗಲಿ ಅದಕ್ಕೆ ಸ್ಪಂದಿಸಿರಲಿಲ್ಲ. ಹಳೆಯ ವಿಡಿಯೋವನ್ನು ಈಗಿನ ಕಾಂಗ್ರೆಸ್ ನೀಡಿರುವ ಗ್ಯಾರೆಂಟಿಗಳಿಗೆ ತಪ್ಪಾಗಿ ಲಿಂಕ್ ಮಾಡಲಾಗಿದೆ. ಹಾಗಾಗಿ ಪೋಸ್ಟ್‌ನಲ್ಲಿ ಮಾಡಲಾದ ಪ್ರತಿಪಾದನೆ ತಪ್ಪಾಗಿದೆ.

ನಿಮ್ಮ ಸುತ್ತಮುತ್ತ ಮತ್ತು ಸಾಮಾಜಿಕ ಜಾಲತಾಣಗಳಲ್ಲಿ ಯಾವುದೇ ಸುದ್ದಿಯು ಸುಳ್ಳು ಎಂದು ನಿಮಗೆ ಸಂದೇಹ ಬಂದಿದ್ದರೆ ಅದನ್ನು Ensuddi.com ವಾಟ್ಸಾಪ್  ನಂ 9108969301 ಗೆ ತಲುಪಿಸಿ. ನಾವು ಫ್ಯಾಕ್ಟ್‌ಚೆಕ್ ಮಾಡಿ ಸತ್ಯ ನಿಮ್ಮೆದುರು ಇಡುತ್ತೇವೆ


ಇದನ್ನು ಓದಿರಿ : ಫ್ಯಾಕ್ಟ್‌ಚೆಕ್ : ಜೆಸ್ಕಾಂ ಸಿಬ್ಬಂದಿ ಮೇಲಾದ ಹಲ್ಲೆಗೆ ಕಾಂಗ್ರೆಸ್ ನೀಡಿದ ಗ್ಯಾರೆಂಟಿ ಕಾರಣವೇ?


 

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights