ಫ್ಯಾಕ್ಟ್‌ಚೆಕ್ : ಮಸೀದಿಯೊಂದರಲ್ಲಿ ಕಾಣಿಕೆ ಹಣ ಎಣಿಸುತ್ತಿರುವ ದೃಶ್ಯಗಳು ಭಾರತದಲ್ಲ! ಎಲ್ಲಿಯದು ಗೊತ್ತೆ?
ಮಸೀದಿಯೊಂದರಲ್ಲಿ ಚೀಲಕ್ಕೆ ಹಣ ತುಂಬುತ್ತಿರುವ ವಿಡಿಯೋವೊಂದು ಸಾಮಾಜಿಕ ಮಾಧ್ಯಮಗಳಲ್ಲಿ ವೈರಲ್ ಆಗುತ್ತಿದೆ. ಮಸೀದಿಗಳಲ್ಲಿ ಸಂಗ್ರಹವಾಗುವ ಹಣಕ್ಕೆ ತೆರಿಗೆ ಇಲ್ಲ. ಈ ಹಣವನ್ನು ಮತಾಂತರ, ಭಯೋತ್ಪಾದನೆ ಮತ್ತು ‘ಲವ್ ಜಿಹಾದ್’ ಮಾಡಲು ಬಳಸಲಾಗುತ್ತದೆ. ದೇವಸ್ಥಾನಗಳಂತೆ ಧಾರ್ಮಿಕ ಸಂಸ್ಥೆಗಳಿಗೆ ತೆರಿಗೆ ವಿಧಿಸದೆ 70 ವರ್ಷಗಳಿಂದ ಕಾಂಗ್ರೆಸ್ ಪಕ್ಷವು ಈ ಸಮುದಾಯಕ್ಕೆ ರಕ್ಷಣೆ ನೀಡಿದೆ ಎಂಬ ಬರಹದೊಂದಿಗೆ ಈ ವಿಡಿಯೋವನ್ನು ಹಂಚಿಕೊಳ್ಳಲಾಗುತ್ತಿದೆ.
‘ನೋಡಿ, ಮಸೀದಿಗಳಲ್ಲಿ ಮತ್ತು ಪೀರ್ ದರ್ಗಾಗಳಲ್ಲಿ ಎಷ್ಟು ದೇಣಿಗೆ ಹಣ ಬರುತ್ತದೆ. ಸಹಸ್ರಾರು ಹಿಂದೂಗಳು ಸಹ ಅದರಲ್ಲಿ ಕೊಡುಗೆ ನೀಡುತ್ತಾರೆ. ಮಸೀದಿ ದೇಣಿಗೆಗೆ ಸರ್ಕಾರ ತೆರಿಗೆ ವಿಧಿಸುವುದಿಲ್ಲ. ಆದರೆ, ಹಿಂದೂ ದೇವಾಲಯದ ದೇಣಿಗೆಗೆ ತೆರಿಗೆ ವಿಧಿಸಲಾಗುತ್ತದೆ. ದೇವಸ್ಥಾನದ ಹಣದಿಂದ ಧರ್ಮಗುರುಗಳಿಗೆ ಸರ್ಕಾರ ಸಂಬಳ ಮತ್ತು ಪಿಂಚಣಿ ನೀಡುತ್ತದೆ. ಆದರೆ, ಮಸೀದಿಗೆ ನೀಡುವ ದೇಣಿಗೆಯನ್ನು ಯಾವ ರೀತಿಯ ಕಾರ್ಯಗಳಿಗೆ ಬಳಸುತ್ತಾರೆ ಎಂಬುದು ನಮಗೆಲ್ಲರಿಗೂ ಚೆನ್ನಾಗಿ ತಿಳಿದಿದೆ. ಹಿಂದುಗಳು ಕಣ್ಣು ಮುಚ್ಚಿ ಜಾತಿವಾದದಲ್ಲಿ ಬದುಕುತ್ತಿದ್ದಾರೆ. ತಡವಾಗುವ ಮೊದಲು ಈ ವಿಡಿಯೊ ನಿಮ್ಮ ಕಣ್ಣು ತೆರೆಸುವಂತೆ ಮಾಡಲಿ’ ಎಂಬ ಹೆಳಿಕೆಯೊಂದಿಗೆ ವಿಡಿಯೋವನ್ನು ವ್ಯಾಪಕವಾಗಿ ಹಂಚಿಕೊಳ್ಳಲಾಗಿದೆ.
ಮುಸ್ಲಿಂ ವ್ಯಕ್ತಿಗಳು ಹುಂಡಿಯೊಂದನ್ನು ತೆಗೆದು, ಅದರಲ್ಲಿರುವ ಹಣವನ್ನು ಚೀಲದಲ್ಲಿ ತುಂಬಿಕೊಂಡು, ಮಸೀದಿಯೊಂದರ ಪ್ರಾಂಗಣದಲ್ಲಿ ಸುರಿಯುತ್ತಿರುವ ಹಾಗೂ ಮಕ್ಕಳೂ ಸೇರಿದಂತೆ ಹಲವರು ಹಾಗೆ ಸುರಿದ ಹಣವನ್ನು ಎಣಿಸುತ್ತಿರುವ ವಿಡಿಯೊವೊಂದು ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದೆ. ‘ನಮ್ಮ ಹಿಂದೂಗಳು ಶಿರಡಿ ಸಾಯಿಬಾಬಾನಿಗೆ ಹಾಕಿದ ಹಣ ಎಲ್ಲಿಗೆ ಹೋಗುತ್ತೆ ಅಂತಾ ನೋಡಿ. ಇನ್ನಾದರೂ ಹಿಂದೂಗಳು ಎಚ್ಚೆತ್ತುಕೊಳ್ಳಿ’ ಹಾಗೂ ‘ಅಯೋಧ್ಯೆಯಲ್ಲಿ ನಿರ್ಮಿಸಲಾಗುತ್ತಿರುವ ರಾಮ ಮಂದಿರಕ್ಕೆ ಶಿರಡಿ ದೇವಸ್ಥಾನವು ದೇಣಿಗೆ ನೀಡುತ್ತಿಲ್ಲ’ ಎಂಬಂಥ ವಿವರಣೆಯನ್ನೂ ಈ ವಿಡಿಯೊಗಳಿಗೆ ನೀಡಲಾಗಿದೆ. ಆದರೆ, ಈ ವಿಡಿಯೊವನ್ನು ತಪ್ಪು ಅರ್ಥ ಬರುವಂತೆ ಬಳಸಿಕೊಳ್ಳಲಾಗುತ್ತಿದೆ
ಫ್ಯಾಕ್ಟ್‌ಚೆಕ್ :
ಸಾಮಾಜಿಕ ಮಾಧ್ಯಮಗಳಲ್ಲಿ ವೈರಲ್ ಆಗಿರುವ ವಿಡಿಯೋವನ್ನು ಗೂಗಲ್ ರಿವರ್ಸ್ ಇಮೇಜಸ್‌ನಲ್ಲಿ ಸರ್ಚ್ ಮಾಡಿದಾಗ, ವಿಡಿಯೊ ಮಸೀದಿಯದ್ದಾಗಿದ್ದರೂ ಇದು ಭಾರತದ್ದು ಅಲ್ಲ. ಇದು ಬಾಂಗ್ಲಾದೇಶದ ಕಿಶೋರ್‌ಗಂಜ್‌ನಲ್ಲಿರುವ ಪಾಗ್ಲಾ ಮಸೀದಿ (ಮಸ್ಜಿದ್). ಹಣದ ಎಣಿಕೆಗಾಗಿ ಪ್ರತಿ ಮೂರು ತಿಂಗಳಿಗೊಮ್ಮೆ ಇಲ್ಲಿನ ಕಾಣಿಕೆ ಪೆಟ್ಟಿಗೆಯನ್ನು ತೆರೆಯಲಾಗುತ್ತದೆ. ಎಂದು ಕ್ವಿಂಟ್ ವರದಿ ಮಾಡಿದೆ. ಅಲ್ಲದೆ ಪೆಟ್ಟಿಗೆಯಿಂದ ಚೀಲಕ್ಕೆ ಹಾಕುತ್ತಿರುವ ನೋಟುಗಳು ಬಾಂಗ್ಲಾ ಕರೆನ್ಸಿ ಎಂಬುದು ತಿಳಿಯುತ್ತದೆ.
ವೈರಲ್ ವಿಡಿಯೊದಲ್ಲಿ ಪ್ಲಾಸ್ಟಿಕ್ ಬ್ಯಾಗ್‌ಗಳಲ್ಲಿ ಹಣ ತುಂಬುತ್ತಿರುವುದನ್ನು ಕಾಣಬಹುದು. ಈ ಪ್ಲಾಸ್ಟಿಕ್ ಬ್ಯಾಗ್ ಮೇಲೆ ಬರೆದ ಪಠ್ಯವನ್ನು ಜೂಮ್ ಮಾಡಿ ನೋಡಿದರೆ ಅದು ಬಂಗಾಳಿಯಲ್ಲಿದೆ. ಅದನ್ನು ಇಂಗ್ಲಿಷ್‌ಗೆ ಅನುವಾದಿಸಿದಾಗ, ” In coal, Broiler and BG ಎಂದು ತೋರಿಸುತ್ತದೆ. ಕೀವರ್ಡ್ ಮೂಲಕ Bangla, mosque and money ಎಂದು ಗೂಗಲ್ ಸರ್ಚ್ ಮಾಡಿದಾಗ, ಮೇ 7 ರಂದು ಪ್ರಕಟವಾದ ಡೈಲಿ ಸ್ಟಾರ್ ವರದಿ ಲಭ್ಯವಾಗಿದೆ. ಈ ವರದಿಯಲ್ಲಿ ವೈರಲ್ ವಿಡಿಯೊದಲ್ಲಿರುವ ಅದೇ ಸ್ಥಳವಿದೆ.
ಅದು ಬಾಂಗ್ಲಾದೇಶದ ಕಿಶೋರ್‌ಗಂಜ್ ಪಾಗ್ಲಾ ಮಸೀದಿ. ಜನವರಿಯಲ್ಲಿ 7ರಂದು ಬಿಸಿನೆಸ್ ಸ್ಟ್ಯಾಂಡರ್ಡ್‌ನಲ್ಲಿ ಪ್ರಕಟವಾದ ಸುದ್ದಿಯಲ್ಲಿ ಪಾಗ್ಲಾ ಮಸೀದಿಯಲ್ಲಿ ಸಂಗ್ರಹಿಸಿದ ಹಣವನ್ನು ಎಣಿಸಲು ಪ್ರತಿ ಮೂರು ತಿಂಗಳಿಗೊಮ್ಮೆ ದೇಣಿಗೆ ಪೆಟ್ಟಿಗೆಗಳನ್ನು ತೆರೆಯಲಾಗುತ್ತದೆ ಎಂದು ಹೇಳಿದೆ. ಈ ಹಣವನ್ನು ಇತರ ಮಸೀದಿಗಳು, ಮದರಸಾಗಳ ಅಭಿವೃದ್ಧಿ ಮತ್ತು ಸಾಮಾಜಿಕ ಕಾರ್ಯಗಳಿಗೆ ಬಳಸಲಾಗುತ್ತದೆ ಎಂದು ವರದಿಯಲ್ಲಿ ಉಲ್ಲೇಖಿಸಲಾಗಿದೆ.
ಬಾಂಗ್ಲಾದೇಶದ ಕಿಶೋರಿಗಂಜ್ ನಗರದ ಮಸೀದಿಯೊಂದರಲ್ಲಿ ವ್ಯಕ್ತಿಗಳು ಹುಂಡಿಯನ್ನು ತೆಗೆಯುತ್ತಿರುವ ದೃಶ್ಯಗಳಿವು. ಈ ವಿಡಿಯೊವನ್ನು ಬಾಂಗ್ಲಾದೇಶದ ವ್ಯಕ್ತಿಯೊಬ್ಬರು 2023ರ ಮೇ 6ರಂದು ಮೊದಲು ಹಂಚಿಕೊಂಡಿದ್ದಾರೆ. ‘ಜಾಗೊ ನ್ಯೂಸ್’ ಎನ್ನುವ ಬಾಂಗ್ಲಾ ವಾಹಿನಿಯೊಂದು ಇದೇ ವಿಡಿಯೊ ಕುರಿತು ‘ಮಸೀದಿ ಹುಂಡಿ ಎಣಿಕೆ’ ಎನ್ನುವ ವರದಿಯೊಂದನ್ನು ಮೇ 6ರಂದೇ ಪ್ರಕಟಿಸಿದೆ. ಇನ್ನು ಹಲವು ಸುದ್ದಿ ವಾಹಿನಿಗಳೂ ಈ ವರದಿ ಪ್ರಕಟಿಸಿವೆ ಎಂದು ಕ್ವಿಂಟ್ ಫ್ಯಾಕ್ಟ್‌ಚೆಕ್ ವರದಿ ಮಾಡಿದೆ.
ಒಟ್ಟಾರೆಯಾಗಿ ಹೇಳುವುದಾದರೆ, ಬಾಂಗ್ಲಾದೇಶದ ಕಿಶೋರ್‌ಗಂಜ್‌ನಲ್ಲಿರುವ ಪಾಗ್ಲಾ ಮಸೀದಿಯಲ್ಲಿ ಮೂರು ತಿಂಗಳಿಗೊಮ್ಮೆ ಹಣದ ಎಣಿಕೆಗಾಗಿ ದೇಣಿಗೆ ಪೆಟ್ಟಿಗೆಗಳನ್ನು ತೆಗೆಯುವ ದೃಶ್ಯಗಳನ್ನು, ಭಾರತದದ್ದು ಎಂದು ತಪ್ಪಾಗಿ ಹಂಚಿಕೊಳ್ಳಲಾಗುತ್ತಿದೆ. ಈ ದೃಶ್ಯಕ್ಕೂ ಭಾರತಕ್ಕೂ ಸಂಬಂಧವಿಲ್ಲ. ಇನ್ನು ಹಿಂದೂ ದೇವಸ್ಥಾನಗಳಿಗೆ ಮಾತ್ರವೇ ತೆರಿಗೆ ವಿದಿಸಲಾಗುತ್ತದೆ, ಮಸೀದಿಗಳಿಗೆ ತೆರಿಗೆ ವಿದಿಸುವುದಿಲ್ಲ. ದೇವಾಲಯದ ಹಣದಿಂದ ಧರ್ಮಗುರುಗಳಿಗೆ ಸರ್ಕಾರ, ಸಂಬಳ ಮತ್ತು ಪಿಂಚಣಿ ನೀಡುತ್ತದೆ ಎಂಬು ಆರೋಪವು ಆಧಾರ ರಹಿತ ಎಂಬುದು ಸ್ಪಷ್ಟವಾಗಿದೆ. ಅಲ್ಲದೆ ಇದನ್ನುಕಾಂಗ್ರೆಸ್ ಸರ್ಕಾರವನ್ನು ಗುರಿಯಾಗಿಸಿಕೊಂಡು ದುರುದ್ದೇಶದಿಂದ ಮಾಡಿರುವಂತೆ ಕಾಣುತ್ತಿದೆ. ಹಾಗಾಗಿ ಪೋಸ್ಟ್‌ನಲ್ಲಿ ಮಾಡಿದ ಪ್ರತಿಪಾದನೆ ತಪ್ಪಾಗಿದೆ.
ನಿಮ್ಮ ಸುತ್ತಮುತ್ತ ಮತ್ತು ಸಾಮಾಜಿಕ ಜಾಲತಾಣಗಳಲ್ಲಿ ಯಾವುದೇ ಸುದ್ದಿಯು ಸುಳ್ಳು ಎಂದು ನಿಮಗೆ ಸಂದೇಹ ಬಂದಿದ್ದರೆ ಅದನ್ನು Ensuddi.com ವಾಟ್ಸಾಪ್ ನಂ 9108969301 ಗೆ ತಲುಪಿಸಿ. ನಾವು ಫ್ಯಾಕ್ಟ್‌ಚೆಕ್ ಮಾಡಿ ಸತ್ಯ ನಿಮ್ಮೆದುರು ಇಡುತ್ತೇವೆ
ಇದನ್ನು ಓದಿರಿ : ಫ್ಯಾಕ್ಟ್‌ಚೆಕ್ : ಹಜ್ ಭವನ ನವೀಕರಣಕ್ಕೆ 5ಸಾವಿರ ಕೋಟಿ ರೂಗಳನ್ನು ಸಿದ್ದರಾಮಯ್ಯ ನೀಡಿದ್ದಾರೆ ಎಂದು ಸುಳ್ಳು ಸುದ್ದಿ ಹಂಚಿಕೆ