ಫ್ಯಾಕ್ಟ್ಚೆಕ್ : ಶಾಸಕ ಬಿ.ಆರ್. ಪಾಟೀಲ್ ಹೆಸರಿನಲ್ಲಿ ಹರಿದಾಡುತ್ತಿರುವ ಪತ್ರ ಅಸಲಿಯೋ? ನಕಲಿಯೋ?
ಕಲಬುರಗಿ ಜಿಲ್ಲೆ ಆಳಂದ ಶಾಸಕ ಬಿ ಆರ್ ಪಾಟೀಲ್ ಮುಖ್ಯಮಂತ್ರಿ ಸಿದ್ದರಾಮಯ್ಯಗೆ ಬರೆದಿರುವ ಪತ್ರದ ಪ್ರತಿಯೊಂದು ಸಾಮಾಜಿಕ ಮಾಧ್ಯಮಗಳಲ್ಲಿ ಹರಿದಾಡುತ್ತಿದೆ. ಜುಲೈ 24ರಂದು ಬಿ ಆರ್ ಪಾಟೀಲ್ ಹೆಸರಿನಲ್ಲಿ ಮುಖ್ಯಮಂತ್ರಿಗಳಿಗೆ ಬರೆದಿರುವ ಪತ್ರದಲ್ಲಿ ಜಿಲ್ಲಾ ಉಸ್ತವಾರಿ ಸಚಿವರ ಅಸಹಕಾರ ಹಾಗೂ ಇಲಾಖೆಗೆ ಸಂಬಂಧಿಸಿದ ಅನುದಾನದ ಬೇಡಿಕೆಯ ಕುರಿತು ಪತ್ರದಲ್ಲಿ ಉಲ್ಲೇಖಿಸಲಾಗಿದೆ.

ಸೋಶಿಯಲ್ ಮೀಡಿಯಾದಲ್ಲಿ ಪ್ರಸಾರವಾಗುತ್ತಿರುವ ಬಿ.ಆರ್ ಪಾಟಿಲ್ ಹೆಸರಿನ ಪತ್ರದ ವಿವರಣೆ ಈ ಕೆಳಗಿನಂತಿದೆ.
ಮೇಲ್ಕಂಡ ವಿಷಯಕ್ಕೆ ಸಂಬಂಧಿಸಿದಂತೆ ಜನರ ವಿಶ್ವಾಸ, ಭರವಸೆ ಹಾಗೂ ಅವರ ಪ್ರೀತಿಯಿಂದ ನಾವು ಶಾಸಕರಾಗಿ ಆಯ್ಕೆಯಾಗಿದ್ದೇವೆ. ಆದರೆ, ನಮ್ಮನ್ನು ಆರಿಸಿ ಕಳುಹಿಸಿದ ಜನರ ವಿಶ್ವಾಸಕ್ಕೆ ತಕ್ಕಂತೆ ಅಭಿವೃದ್ಧಿ ಕೆಲಸ ಮಾಡಲು ಸಾಧ್ಯವಾಗುತ್ತಿಲ್ಲ. ಏಕೆಂದರೆ ವಿವಿಧ ಇಲಾಖೆಗೆ ಸಂಬಂಧಿಸಿದ 20ಕ್ಕೂ ಹೆಚ್ಚು ಸಚಿವರಿಗೆ ನಮ್ಮ ಕ್ಷೇತ್ರಕ್ಕೆ ಅನುದಾನ ನೀಡುವಂತೆ ಮನವಿ ಮಾಡಿದ್ದರೂ ಸ್ಪಂದಿಸುತ್ತಿಲ್ಲ. ಇದರಿಂದ ಜನರ ಆಶೋತ್ತರ ಈಡೇರಿಸುವುದಕ್ಕೆ ಸಾಧ್ಯವಾಗುತ್ತಿಲ್ಲ. ಅಲ್ಲದೆ ಅನುದಾನ ಬಿಡುಗಡೆ ಮಾಡುವುದಕ್ಕೂ ಸಚಿವರು ಮೂರನೇ ವ್ಯಕ್ತಿ ಮೂಲಕ ಹಣಕ್ಕಾಗಿ ಬೇಡಿಕೆ ಇಡುತ್ತಿದ್ದಾರೆ. ಸ್ಥಳೀಯ ಶಾಸಕರು ನಾವು ಆಗಿದ್ದರೂ ಅನುದಾನಕ್ಕಾಗಿ ಮೂರನೇ ವ್ಯಕ್ತಿಯ ಮೊರೆ ಹೋಗಬೇಕಾಗಿರುವುದು ಅತ್ಯಂತ ಬೇಸರ ವಿಷಯ ಎಂದಿದ್ದಾರೆ.
ಇದಲ್ಲದೆ ಸಚಿವರು ತಮಗೆ ಬೇಕಾದ ಅಧಿಕಾರಿಗಳಿಗೆ ಮಣೆ ಹಾಕಿ, ಸ್ವಜನಪಕ್ಷಪಾತ ಮಾಡುತ್ತಿದ್ದಾರೆ. ನಮ್ಮ ಯಾವುದೇ ವರ್ಗಾವಣೆ ಶಿಫಾರಸು ಪತ್ರಗಳಿಗೆ ಮಾನ್ಯತೆ ಕೊಡುತ್ತಿಲ್ಲ. ಇದರಿಂದಾಗಿ ಯಾವ ಅಧಿಕಾರಿಯೂ ನಮ್ಮ ಕೆಲಸಗಳನ್ನು ಮಾಡಿ ಕೊಡುತ್ತಿಲ್ಲ, ನಮ್ಮ ಮಾತಿಗೆ ಬೆಲೆಯೂ ನೀಡುತ್ತಿಲ್ಲ. ಆದ್ದರಿಂದ ತಾವು ತಕ್ಷಣವೇ ಮಧ್ಯಪ್ರವೇಶಿಸಿ ಸಮಸ್ಯೆ ಪರಿಹರಿಸಬೇಕು ಎಂಬುದು ನಮ್ಮ ಕೋರಿಕೆ. ನಮ್ಮ ವಿಶ್ವಾಸಕ್ಕೆ ಚ್ಯುತಿ ಬಾರದಂತೆ ತಾವು ನಡೆದುಕೊಳ್ಳುತ್ತೀರೆಂದು ಭಾವಿಸಿದ್ದೇವೆ ಎಂದು ವಿವರಿಸಿದ್ದಾರೆ. ಇದಿಷ್ಟು ಪತ್ರದಲ್ಲಿ ಕಾಣಬಹುದಾಗಿದೆ.
ಹಾಗಿದ್ದರೆ ಇಂತಹದೊಂದು ಪತ್ರವನ್ನು ನಿಜಾಗಿಯೂ ಶಾಸಕರಾದ ಬಿ.ಆರ್. ಪಾಟೀಲ್ ಬರೆದಿದ್ದಾರೆಯೇ ಎಂದು ಪರಿಶೀಲಿಸಿದಾಗ ಇದು ನಕಲಿ ಎಂದು ತಿಳಿದು ಬಂದಿದೆ.
ಫ್ಯಾಕ್ಟ್ಚೆಕ್ :
ತಮ್ಮ ಹೆಸರಿನಲ್ಲಿ ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿರುವ ಪತ್ರದ ಬಗ್ಗೆ ಸ್ಪಷ್ಟೀಕರಣ ನೀಡಿರುವ ಶಾಸಕ ಬಿ.ಆರ್ ಪಾಟೀಲ್ ಅವರು ಶಾಸಕರ ಕುಂದುಕೊರತೆಗಳನ್ನು ಆಲಿಸಲು ಮುಖ್ಯಮಂತ್ರಿಗಳಿಗೆ ಕಾಂಗ್ರೆಸ್ ಶಾಸಕಾಂಗ ಪಕ್ಷದ ಸಭೆ ಕರೆಯುವಂತೆ ಬರೆದ ಮನವಿ ಪತ್ರವನ್ನು ತಿರುಚಿ ಕಿಡಿಗೇಡಿಗಳು ನಕಲಿ ಪತ್ರವನ್ನು ಹರಿಬಿಟ್ಟಿದ್ದಾರೆ. ಈ ಪತ್ರದಲ್ಲಿ ಜಿಲ್ಲಾ ಉಸ್ತುವಾರಿ ಸಚಿವರ ಮೇಲೆ ಕೆಲ ಆರೋಪಗಳನ್ನು ಮಾಡುತ್ತಿರುವಂತೆ ಕುತಂತ್ರದಿಂದ ಸುಳ್ಳುಗಳನ್ನು ಹರಿಬಿಡಲಾಗಿದೆ ಎಂದಿದ್ದಾರೆ.
![]()
ಸಾಮಾಜಿಕ ಮಾಧ್ಯಮಗಳಲ್ಲಿ ವೈರಲ್ ಆಗುತ್ತಿರುವ ಪತ್ರ ತಮ್ಮದಲ್ಲ, ತಾವು ಕೊಟ್ಟ ಪತ್ರಕ್ಕೂ ಈ ಪತ್ರದಲ್ಲಿರುವ ವಿಷಯಕ್ಕೂ ಸಂಬಂಧವಿಲ್ಲ. ಈ ಫೇಕ್ ಲೆಟರ್ನಲ್ಲಿ ನನ್ನ ಸಹಿಯನ್ನು ಫೋಟೋ ಶಾಪ್ ಮೂಲಕ ಅಂಟಿಸಲಾಗಿದೆ. ಅಲ್ಲದೇ ಈ ನಕಲಿ ಪತ್ರದಲ್ಲಿ ನನ್ನ ಹಳೆಯ ಮನೆಯ ವಿಳಾಸ ಬರೆಯಲಾಗಿದೆ. ಪತ್ರವನ್ನು ಡಿಜಿಟಲ್ನಲ್ಲಿ ಟೈಪ್ ಮಾಡಿ, ಸಹಿಗೆ ಜೆರಾಕ್ಸ್ನಿಂದ ಸ್ಕ್ಯಾನ್ ಮಾಡಿ ಬಳಸಲಾಗಿದೆ. ಈ ಪತ್ರ ನನ್ನದಲ್ಲ. ನನ್ನ ಎಲ್ಲಾ ಅಧಿಕೃತ ಪತ್ರಗಳಲ್ಲಿ ಕ್ರಮ ಸಂಖ್ಯೆಯನ್ನು ಪೂರ್ವನಿಯೋಜಿತವಾಗಿ ಪ್ರಿಂಟ್ ಮಾಡಿರಲಾಗುತ್ತದೆ. ಇದು ಫೇಕ್ ಲೆಟರ್ ಅನ್ನಲು ಇಷ್ಟು ಸಾಕು ಎಂದು ಶಾಸಕ ಬಿ ಆರ್ ಪಾಟೀಲ್ ಸ್ಪಷ್ಟೀಕರಣ ನೀಡಿದ್ದಾರೆ.
ಇದನ್ನು ನನ್ನ ಹಾಗೂ ಸಚಿವ ಪ್ರಿಯಾಂಕ್ ಖರ್ಗೆ ನಡುವೆ ಮನಸ್ತಾಪ ಮೂಡಿಸಲು ಕುತಂತ್ರದಿಂದ ಮಾಡಿರುವಂತಿದೆ. ಇದನ್ನು ಮಾಡಿದವರ ವಿರುದ್ಧ ಕಾನೂನು ಕ್ರಮ ಜರುಗಿಸುವಂತೆ ಕೂಡ ಕಲಬುರಗಿ ಪೊಲೀಸ್ ವರಿಷ್ಠಾಧಿಕಾರಿಗೆ ದೂರು ನೀಡಲಿದ್ದೇನೆ ಎಂದು ಅವರು ತಿಳಿಸಿದ್ದಾರೆ.
ಈ ಹಿಂದೆಯೂ ಇಂತಹದ್ದೆ ನಕಲಿ ಪತ್ರವೊಂದನ್ನು ಡಿ.ಕೆ.ಶಿವಕುಮಾರ್ ವಿರುದ್ದ ಸಿದ್ದರಾಮಯ್ಯ ಅವರ ಹೆಸರಿನಲ್ಲಿ ಹೈಕಮಾಂಡ್ಗೆ ಬರೆದಂತೆ ಹಂಚಿಕೊಳ್ಳಲಾಗಿತ್ತು. ಆ ಪತ್ರವೂ ಕೂಡ ಹಲವು ದೋಷಗಳಿಂದ ಕೂಡಿತ್ತು ನಂತರ ಅದು ನಕಲಿ ಎಂದು ಸ್ವತಃ ಸಿದ್ದರಾಮಯ್ಯರವರೇ ಸ್ಪಷ್ಟನೆ ನೀಡಿದ್ದರು.
ನಿಮ್ಮ ಸುತ್ತಮುತ್ತ ಮತ್ತು ಸಾಮಾಜಿಕ ಜಾಲತಾಣಗಳಲ್ಲಿ ಯಾವುದೇ ಸುದ್ದಿಯು ಸುಳ್ಳು ಎಂದು ನಿಮಗೆ ಸಂದೇಹ ಬಂದಿದ್ದರೆ ಅದನ್ನು Ensuddi.com ವಾಟ್ಸಾಪ್ ನಂ 9108969301 ಗೆ ತಲುಪಿಸಿ. ನಾವು ಫ್ಯಾಕ್ಟ್ಚೆಕ್ ಮಾಡಿ ಸತ್ಯ ನಿಮ್ಮೆದುರು ಇಡುತ್ತೇವೆ
ಇದನ್ನು ಓದಿರಿ : ಫ್ಯಾಕ್ಟ್ಚೆಕ್: ಸಿದ್ದರಾಮಯ್ಯನವರ ಹೆಸರಿನಲ್ಲಿ ಹರಿದಾಡುತ್ತಿರುವುದು ನಕಲಿ ಪತ್ರ

