ಫ್ಯಾಕ್ಟ್‌ಚೆಕ್ : ಪಾಕ್ ಮೇಲಿನ ಪ್ರೀತಿಯಿಂದ ಅಂದಿನ ಸರ್ಕಾರ ‘ಕಾಶ್ಮೀರವನ್ನು ನಾವು ಬಿಟ್ಟು ಕೊಡಲಾರೆವು’ ಎಂಬ ಹಾಡನ್ನು ಬ್ಯಾನ್ ಮಾಡಲಾಗಿತ್ತೆ?
ಮಹಮದ್ ರಫಿ ಬರೆದಿದ್ದ ಕಾಶ್ಮಿರವನ್ನ ನಾವು ಬಿಟ್ಟು ಕೊಡಲಾರೆವು ಎಂಬ ಈ ಹಾಡನ್ನು ಭಾರತದಲ್ಲಿ ನಿಷೇಧಿಸಲಾಗಿತ್ತು. ಕಾರಣ ಪಾಕಿಸ್ತಾನ ಈ ಹಾಡನ್ನು ಭಾರತದಲ್ಲಿ ಬ್ಯಾನ್ ಮಾಡಿ ಎಂದು ಅಂದಿನ ಪ್ರಧಾನಿಗೆ ಮನವಿ ಮಾಡಿದ ಕಾರಣ ನಿಲ್ಲಿಸಲಾಗಿತ್ತು…. ಅದೆಂತ ಪ್ರೀತಿ ಪಾಕಿಸ್ತಾನದ ಮೇಲೆ ಅಂದಿನ ಪ್ರಧಾನಿಗೆ….? ಎಂದು ಪ್ರಶ್ನಿಸಿ ಹಾಡೊಂದನ್ನು ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಳ್ಳಲಾಗುತ್ತಿದೆ. ಹಾಗಿದ್ದರೆ ಈ ಪೋಸ್ಟ್‌ನಲ್ಲಿ ಮಾಡಿದ ಪ್ರತಿಪಾದನೆ ನಿಜವೇ ಎಂದು ಪರಿಶೀಲಿಸೋಣ.
ಫ್ಯಾಕ್ಟ್ ಚೆಕ್
ಈ ಹಿಂದಿ ಹಾಡಿನ ಮೊದಲ ಸಾಲು ‘ಜನ್ನತ್ ಕಿ ಹೈ ತಸ್ವೀರ್ ಯೇ’ ಎಂಬ ಕೀವರ್ಡ್ ಬಳಸಿ ಹುಡುಕಿದಾಗ ಇದು 1966ರಲ್ಲಿ ಬಿಡುಗಡೆಯಾದ ‘ಜೋಹರ್ ಇನ್ ಕಾಶ್ಮೀರ್‘ ಎಂಬ ಚಿತ್ರದ್ದು ಎಂದು ತಿಳಿದುಬಂದಿದೆ. ಈ ಚಿತ್ರ ಅಥವಾ ಹಾಡನ್ನು ನಿಷೇಧಿಸಲಾಗಿತ್ತೆ ಎಂಬುದರ ಕುರಿತು ಸರ್ಚ್ ಮಾಡಿದಾಗ ಯಾವುದೇ ವಿಶ್ವಾಸಾರ್ಹ ವರದಿಗಳು ಕಂಡುಬಂದಿಲ್ಲ.
ಆನಂತರ ಕೇಂದ್ರ ಚಲನಚಿತ್ರ ಪ್ರಮಾಣೀಕರಣ ಮಂಡಳಿಯ ಹೆಸರಿನಲ್ಲಿ ಹುಡುಕಿದಾಗ 17 ಡಿಸೆಂಬರ್ 1966 ರ ದಿನಾಂಕದ ಗೆಜೆಟ್ ಆಫ್ ಇಂಡಿಯಾ ದಾಖಲೆ ಲಭ್ಯವಾಗಿದ್ದು, ಅದರಲ್ಲಿ ಯಾವುದೇ ಭಾರತೀಯ ಅಥವಾ ಅಂತರಾಷ್ಟ್ರೀಯ ಸಿನಿಮಾಗಳಲ್ಲಿ ಆಕ್ಷೇಪಾರ್ಹ ಅಂಶಗಳಿದ್ದರೆ ಅದನ್ನು ತೆಗೆಯಲು ಸೂಚಿಸಿರುವುದನ್ನು ನೋಡಬಹುದು.
ಅಂತೆಯೇ ‘ಜೋಹರ್ ಇನ್ ಕಾಶ್ಮೀರ್’ ಚಿತ್ರದ ಐದನೇ ರೀಲ್‌ನಲ್ಲಿ ‘ಜನ್ನತ್ ಕಿ ಹೈ ತಸ್ವೀರ್ ಯೇ’ ಹಾಡಿನಲ್ಲಿ “ಹಾಜಿ ಪಿರ್” ಎಂಬ ಪದಗಳನ್ನು ತೆಗೆಯಬೇಕೆಂದು ಆದೇಶಿಸಿರುವುದು ಕಂಡುಬಂದಿದೆ. ಸದ್ಯ ಈ ಹಾಡು ಹಂಗಾಮ, ಸ್ಪಾಟಿಫೈ, ಯೂಟ್ಯೂಬ್ ಸೇರಿದಂತೆ ಹಲವೆಡೆ ಲಭ್ಯವಿದ್ದು, ಅದರಲ್ಲಿ ಹಾಜಿ ಪಿರ್ ಎಂಬ ಪದಗಳಿಲ್ಲ.
ಹಾಗಾಗಿ ಹಾಡಿನಲ್ಲಿ ಎರಡು ಪದಗಳನ್ನು ತೆಗೆಯಬೇಕೆಂದು ಕೇಂದ್ರ ಚಲನಚಿತ್ರ ಪ್ರಮಾಣೀಕರಣ ಮಂಡಳಿ ಸೂಚಿಸಿದೆಯೇ ಹೊರತು ಹಾಡನ್ನಾಗಲಿ, ಆ ಚಿತ್ರವನ್ನಾಗಲಿ ಭಾರತದಲ್ಲಿ ನಿಷೇಧಿಸಿಲ್ಲ ಎಂಬುದು ಸತ್ಯ.
ಒಟ್ಟಾರೆಯಾಗಿ ಹೇಳುವುದಾದರೆ, ಸಾಮಾಜಿಕ ಮಾಧ್ಯಮಗಳಲ್ಲಿ ಹಂಚಿಕೊಂಡಂತೆ ಕಾಶ್ಮಿರವನ್ನ ನಾವು ಬಿಟ್ಟು ಕೊಡಲಾರೆವು ಎಂಬ ಈ ಹಾಡನ್ನು ಭಾರತ ಸರ್ಕಾರ ಬ್ಯಾನ್ ಮಾಡಿಲ್ಲ. ಆ ಹಾಡು ಈಗಲೂ ಹಲವೆಡೆ ಲಭ್ಯವಿದೆ. ಹಾಗಾಗಿ ಪೋಸ್ಟ್‌ನಲ್ಲಿ ಮಾಡಿದ ಪ್ರತಿಪಾದನೆ ತಪ್ಪಾಗಿದೆ.
ನಿಮ್ಮ ಸುತ್ತಮುತ್ತ ಮತ್ತು ಸಾಮಾಜಿಕ ಜಾಲತಾಣಗಳಲ್ಲಿ ಯಾವುದೇ ಸುದ್ದಿಯು ಸುಳ್ಳು ಎಂದು ನಿಮಗೆ ಸಂದೇಹ ಬಂದಿದ್ದರೆ ಅದನ್ನು Ensuddi.com ವಾಟ್ಸಾಪ್ ನಂ 9108969301 ಗೆ ತಲುಪಿಸಿ. ನಾವು ಫ್ಯಾಕ್ಟ್‌ಚೆಕ್ ಮಾಡಿ ಸತ್ಯ ನಿಮ್ಮೆದುರು ಇಡುತ್ತೇವೆ
ಇದನ್ನು ಓದಿರಿ : ಫ್ಯಾಕ್ಟ್‌ಚೆಕ್ : ಡೀಪ್‌ಫೇಕ್ ತಂತ್ರಜ್ಞಾನಕ್ಕೆ ಗುರಿಯಾದ ನಟಿ ರಶ್ಮಿಕಾ ಮಂದಣ್ಣ