ಫ್ಯಾಕ್ಟ್‌ಚೆಕ್ : ಕಾಶ್ಮೀರ ವಿಚಾರದಲ್ಲಿ ಮೋದಿಯನ್ನು ಟೀಕಿಸಬೇಡಿ ಎಂದು ರಾಹುಲ್‌ನನ್ನು ಮಹಿಳೆಯೊಬ್ಬರು ತರಾಟೆಗೆ ತೆಗೆದುಕೊಂಡರೇ?

ವಿಮಾನದಲ್ಲಿ ಮಹಿಳೆಯೊಂದಿಗೆ ಗುಂಪೊಂದು ರಾಹುಲ್ ಗಾಂಧಿಯವರೊಂದಿಗೆ ಜೋರು ಧ್ವನಿಯಲ್ಲಿ ಮಾತನಾಡುತ್ತಿರುವ ವಿಡಿಯೋ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ. ಫೇಸ್‌ಬುಕ್ ಮತ್ತು ಟ್ವಿಟರ್‌ನಲ್ಲಿ ಹಲವರು ವಿಡಿಯೋ ಪೋಸ್ಟ್‌ಅನ್ನು ಹಂಚಿಕೊಂಡಿದ್ದು,  “ಕಾಶ್ಮೀರದ ವಿಚಾರದಲ್ಲಿ ಮೋದಿಜಿಯವರು ಮಾಡಿದ ಒಳ್ಳೆಯ ಕಾರ್ಯಗಳಿಗೆ ಏಕೆ ಅಡ್ಡಿಪಡಿಸುತ್ತಿದ್ದೀರಿ ಎಂದು ರಾಹುಲ್ ಗಾಂಧಿಯವರನ್ನು ತರಾಟೆಗೆ ತೆಗೆದುಕೊಂಡಿದ್ದಾರೆ ಎಂಬ ಹೇಳಿಕೆಯೊಂದಿಗೆ ಪೋಸ್ಟ್‌ಅನ್ನು ಹಂಚಿಕೊಂಡಿದ್ದಾರೆ.

ವಿಮಾನದಲ್ಲಿ ಪ್ರಯಾಣಿಸುತ್ತಿದ್ದ ರಾಹುಲ್ ಗಾಂಧಿಯವರನ್ನು ನೊಂದ ಕಾಶ್ಮೀರಿ ಹಿಂದೂಗಳು ಸುತ್ತುವರೆದು, ಕಾಶ್ಮೀರ ವಿಚಾರದಲ್ಲಿ ಪ್ರಧಾನಿ ಮೋದಿಯವರನ್ನು ನೀವು ಏಕೆ ವಿರೋಧಿಸುತ್ತೀರ ಎಂದು ಪ್ರಶ್ನಿಸಿದ್ದಾರೆ? ಇದಕ್ಕೆ ಯಾವುದೇ ಉತ್ತರ ನೀಡಲು ರಾಹುಲ್ ಗಾಂಧಿಗೆ ಸಾಧ್ಯವಾಗದೆ ತಬ್ಬಿಬ್ಬಾಗಿ ಕುಳಿತಿದ್ದಾರೆ. ಆದರೆ ಇದನ್ನು ಮಾಧ್ಯಮಗಳು ಮಾತ್ರ ಸುದ್ದಿ ಮಾಡುವುದಿಲ್ಲ ಎಂಬ ಹೇಳಿಕೆಯೊಂದಿಗೆ ವಿಡಿಯೋವನ್ನು ಹಂಚಿಕೊಳ್ಳಲಾಗಿದೆ. 

ಹಾಗಿದ್ದರೆ ವಿಡಿಯೋ ಪೋಸ್ಟ್‌ನಲ್ಲಿ ಮಾಡಿದ ಪ್ರತಿಪಾದನೆ ನಿಜವೇ ? ಕಾಶ್ಮೀರಿ ಮಹಿಳೆಯರು ಮೋದಿಯನ್ನು ಏಕೆ ವಿರೋಧಿಸುತ್ತೀರಿ ಎಂದು ರಾಹುಲ್ ಗಾಂಧಿಯನ್ನು ಪ್ರಶ್ನಿಸಿರುವುದು ನಿಜವೇ ಎಂದು ಪರಿಶೀಲಿಸೋಣ.

ಫ್ಯಾಕ್ಟ್‌ಚೆಕ್ :

ಸಾಮಾಜಿಕ ಮಾಧ್ಯಮಗಳಲ್ಲಿ ಹಂಚಿಕೊಳ್ಳಲಾಗಿರುವ ಪೋಸ್ಟ್‌ನಲ್ಲಿ ಮಾಡಿದ ಪ್ರತಿಪಾದನೆಯನ್ನು ಪರಿಶೀಲಿಸಲು ಗೂಗಲ್ ರಿವರ್ಸ್ ಇಮೇಜಸ್‌ನಲ್ಲಿ ಸರ್ಚ್ ಮಾಡಿದಾಗ, ವಿಮಾನವೊಂದರಲ್ಲಿ ರಾಹುಲ್ ಗಾಂಧಿಯೊಂದಿಗೆ ಮಾತನಾಡುತ್ತಿರುವ ವಿಡಿಯೋ 2019ರಂದು ಎಂದು ತಿಳಿದುಬಂದಿದೆ.

ರಾಹುಲ್ ಗಾಂಧಿಯೊಂದಿಗೆ ಮಹಿಳೆಯೊಬ್ಬರು ಮಾತನಾಡುತ್ತಿರುವ ವಿಡಿಯೋ 2019 ರದ್ದು. ಹಳೆಯ ವಿಡಿಯೋವನ್ನು ಇತ್ತೀಚಿನದ್ದು ಎಂದು ಹಂಚಿಕೊಳ್ಳುತ್ತಿದ್ದಾರೆ, ಮತ್ತು ರಾಹುಲ್ ಗಾಂಧಿಗೆ ಮಹಿಳೆ ಬಯ್ಯುತ್ತಿದ್ದಾರೆ ಎಂಬ ಸುಳ್ಳು ಹೇಳಿಕೆಯೊಂದಿಗೆ  ಹಂಚಿಕೊಳ್ಳುತ್ತಿದ್ದಾರೆ.

ವಾಸ್ತವವಾಗಿ ಮಹಿಳೆ ರಾಹುಲ್ ಗಾಂಧಿ ಮುಂದೆ ತಮ್ಮ ಅಳಲನ್ನು ತೋಡಿಕೊಂಡಿದ್ದಾರೆ:

2019ರಲ್ಲಿ ಕೇಂದ್ರ ಸರ್ಕಾರ 370ನೇ ವಿಧಿಯನ್ನು ರದ್ದುಪಡಿಸಿ ಇಂಟರ್‌ನೆಟ್ ಸೌಲಭ್ಯ ಸ್ಥಗಿತಗೊಳಿಸಿ ಲಾಕ್ಡೌನ್ ಹೇರಿದ ಸಂದರ್ಭದಲ್ಲಿ ಕಾಶ್ಮೀರದ ಪರಿಸ್ಥಿತಿಯನ್ನು ಅವಲೋಕಿಸಲು ನಿಯೋಗದೊಂದಿಗೆ ರಾಹುಲ್ ಗಾಂಧಿ ಕಣಿವೆ ರಾಜ್ಯಕ್ಕೆ ಭೇಟಿ ನೀಡಿದಾಗ ಮಹಿಳೆಯೊಬ್ಬರು ತಮ್ಮ ಅಳಲನ್ನು ತೋಡಿಕೊಂಡ ಸಂದರ್ಭದ ವಿಡಿಯೊವನ್ನು ಸುಳ್ಳು ಹೇಳಿಕೆಯೊಂದಿಗೆ ಹಂಚಿಕೊಂಡಿದ್ದಾರೆ.

20 ಆಗಸ್ಟ್‌ 2019ರಲ್ಲಿ ಜಮ್ಮು ಮತ್ತು ಕಾಶ್ಮೀರಕ್ಕೆ ಭೇಟಿ ನೀಡಿ ಅಲ್ಲಿನ ಪರಿಸ್ಥಿತಿ ಅವಲೋಕಿಸಲು ತೆರಳಿದ್ದ ಕಾಂಗ್ರೆಸ್ ಮಾಜಿ ಅಧ್ಯಕ್ಷ ರಾಹುಲ್ ಗಾಂಧಿ ನೇತೃತ್ವದ ಪ್ರತಿಪಕ್ಷಗಳ ನಿಯೋಗವನ್ನು ಕಾಶ್ಮೀರ ಸರ್ಕಾರ ವಾಪಸ್ ದೆಹಲಿಗೆ ಕಳುಹಿಸಿತ್ತು. ಆದರೆ ವಾಪಸ್ ತೆರಳುವ ವೇಳೆ ವಿಮಾನದಲ್ಲಿ ಕಾಶ್ಮೀರಿ ಮಹಿಳೆಯೊಬ್ಬರು ರಾಹುಲ್ ಗಾಂಧಿ ಮುಂದೆ ತಮ್ಮ ಅಳಲು ತೋಡಿಕೊಂಡಿದ್ದು, ವಿಡಿಯೋ ವೈರಲ್ ಆಗಿದೆ ಎಂದು ಕನ್ನಡಫ್ರಭ ದಿನ ಪತ್ರಿಕೆ ವರದಿ ಮಾಡಿದೆ.

ಕಾಂಗ್ರೆಸ್ ವಕ್ತಾರೆ ರಾಧಿಕಾ ಖೇರ್ ಅವರು ಮಹಿಳೆಯ ವಿಡಿಯೋವನ್ನು ಟ್ವಿಟ್ಟರ್ ನಲ್ಲಿ ಷೇರ್ ಮಾಡಿದ್ದು, ಕೇಂದ್ರ ಸರ್ಕಾರ ಕಾಶ್ಮೀರಕ್ಕೆ ನೀಡಿದ್ದ ವಿಶೇಷ ಸ್ಥಾನಮಾನ ರದ್ದುಗೊಳಿಸಿದ ನಂತರ ಅಲ್ಲಿನ ಜನ ಹೇಗೆ ಬದುಕುತ್ತಿದ್ದಾರೆ ಎಂಬುದನ್ನು ಮಹಿಳೆ ವಿವರಿಸಿದ್ದಾರೆ ಎಂದು ಟ್ವೀಟ್ ಮಾಡಿದ್ದಾರೆ.

ರಾಹುಲ್ ಗಾಂಧಿ ಅವರು ಎದ್ದು ನಿಂತು ಮಹಿಳೆಯನ್ನು ಸಮಾಧಾನಪಡಿಸಲು ಯತ್ನಿಸುತ್ತಿದ್ದರೆ, ಇತರೆ ಕಾಂಗ್ರೆಸ್ ನಾಯಕರಾದ ಗುಲಾಮ್ ನಬಿ ಆಜಾದ್, ಆನಂದ್ ಶರ್ಮಾ ಹಾಗೂ ಕೆ ಸಿ ವೇಣುಗೋಪಾಲ್ ಅವರು ಸಮಾಧಾನದಿಂದ ಮಹಿಳೆಯ ಅಳಲನ್ನು ಆಲಿಸುತ್ತಿದ್ದಾರೆ. ರಾಹುಲ್ ಗಾಂಧಿ ನೇತೃತ್ವದ 12 ಪ್ರತಿಪಕ್ಷಗಳ ನಾಯಕರ ನಿಯೋಗ 2019ರಲ್ಲಿ ಜಮ್ಮು ಮತ್ತು ಕಾಶ್ಮೀರ ಭೇಟಿಗಾಗಿ ಶ್ರೀನಗರಕ್ಕೆ ತೆರಳಿತ್ತು. ಆದರೆ ಪ್ರತಿಪಕ್ಷಗಳ ನಿಯೋಗವನ್ನು ಶ್ರೀನಗರ ವಿಮಾನ ನಿಲ್ದಾಣದಲ್ಲಿಯೇ ತಡೆದ ಭದ್ರತಾ ಸಿಬ್ಬಂದಿ, ಅವರನ್ನು ವಾಪಸ್ ದೆಹಲಿಗೆ ಕಳುಹಿಸಿತ್ತು.

ಒಟ್ಟಾರೆಯಾಗಿ ಹೇಳುವುದಾದರೆ, 2019 ರಲ್ಲಿ ಕೇಂದ್ರ ಸರ್ಕಾರ 370 ವಿಧಿಯನ್ನು ರದ್ದುಪಡಿಸಿ, ಇಂಟರ್‌ನೆಟ್ ಸ್ಥಗಿತಗೊಳಿಸಿ, ದಿಗ್ಭಂಧನ ಹೇರಿದ್ದ ಕ್ರಮವನ್ನು ಖಂಡಿಸಿ ಮಹಿಳೆಯೊಬ್ಬರು ರಾಹುಲ್ ಗಾಂಧಿಯೊಂದಿಗೆ ತಮ್ಮ ಅಳಲನ್ನು ತೋಡಿಕೊಳ್ಳುತ್ತಿರುವ ಹಳೆಯ ವಿಡಿಯೋವನ್ನು, ವಿಮಾನದಲ್ಲಿ ಮಹಿಳೆಯೊಬ್ಬರು ರಾಹುಲ್ ಗಾಂಧಿಗೆ ತರಾಟೆ ತೆಗೆದುಕೊಂಡಿದ್ದಾರೆ ಎಂಬ ಸುಳ್ಳು ಹೇಳಿಕೆಯನ್ನು ಬಲಪಂಥೀಯ ಮತ್ತು BJP ಬೆಂಬಲಿಗರು ಹಂಚಿಕೊಂಡಿದ್ದಾರೆ. ಹಾಗಾಗಿ ಪೋಸ್ಟ್‌ನಲ್ಲಿ ಮಾಡಿದ ಪ್ರತಿಪಾದನೆ ತಪ್ಪಾಗಿದೆ.

ನಿಮ್ಮ ಸುತ್ತಮುತ್ತ ಮತ್ತು  ಸಾಮಾಜಿಕ ಜಾಲತಾಣಗಳಲ್ಲಿ ಯಾವುದೇ ಸುದ್ದಿಯು ಸುಳ್ಳು ಎಂದು ನಿಮಗೆ ಸಂದೇಹ ಬಂದಿದ್ದರೆ ಅದನ್ನು Ensuddi.com ವಾಟ್ಸಾಪ್  ನಂ 9108969301 ಗೆ ತಲುಪಿಸಿ. ನಾವು ಫ್ಯಾಕ್ಟ್‌ಚೆಕ್ ಮಾಡಿ ಸತ್ಯ ನಿಮ್ಮೆದುರು ಇಡುತ್ತೇವೆ


ಇದನ್ನು ಓದಿರಿ : ಫ್ಯಾಕ್ಟ್‌ಚೆಕ್ : ಜಪಾನ್‌ನಲ್ಲಿ ಮುಸ್ಲಿಮರಿಗೆ ಬಾಡಿಗೆಗೆ ಮನೆಯನ್ನು ಕೊಡುವುದಿಲ್ಲವೇ?


 

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights