ಫ್ಯಾಕ್ಟ್‌ಚೆಕ್ : ರಾಜಸ್ಥಾನ ಕಾಂಗ್ರೆಸ್ ರ‍್ಯಾಲಿಯಲ್ಲಿ ಮೋದಿ ಪರ ಘೋಷಣೆ! ವಾಸ್ತವವೇನು?

ರಾಜಸ್ಥಾನ ವಿಧಾನಸಭೆಗೆ ಶನಿವಾರ ನಡೆದ ಚುನಾವಣೆಯಲ್ಲಿ ಶೇ.68ಕ್ಕಿಂತಲೂ ಅಧಿಕ ಮಂದಿ ಮತಚಲಾಯಿಸಿದ್ದಾರೆ. ಕೆಲವೊಂದು ಅಹಿತಕರ ಘಟನೆಗಳನ್ನು ಹೊರತುಪಡಿಸಿದರೆ, ರಾಜ್ಯಾದ್ಯಂತ ಮತದಾನ ಶಾಂತಿಯುತವಾಗಿ ನಡೆದಿದೆ ಎಂದು ಚುನಾವಣಾ ಆಯೋಗದ ಮೂಲಗಳು ತಿಳಿಸಿವೆ.

ರಾಜಸ್ಥಾನ ವಿಧಾನಸಭಾ ಚುನಾವಣೆಗಾಗಿ ಕಾಂಗ್ರೆಸ್ ಮತ್ತು ಪ್ರಮುಖ ವಿರೋಧ ಪಕ್ಷವಾದ BJP ಅಬ್ಬರದ ಪ್ರಚಾರ ನಡೆಸಿತ್ತು. ಈ ವೇಳೆ ಕಾಂಗ್ರೆಸ್ ರ‍್ಯಾಲಿಯಲ್ಲಿ ಭಾರತದ ಪ್ರಧಾನಿ ನರೇಂದ್ರ ಮೋದಿ ಪರವಾಗಿ ಘೋಷಣೆಗಳನ್ನು ಕೂಗಲಾಗಿದೆ ಎಂಬ ಹೇಳಿಕೆಯೊಂದಿಗೆ ರಾಜಸ್ಥಾನ ಮುಖ್ಯಮಂತ್ರಿ ಅಶೋಕ್ ಗೆಹ್ಲೋಟ್ ಅವರ ವಿಡಿಯೊ ಸಾಮಾಜಿಕ ಮಾಧ್ಯಮದಲ್ಲಿ ಹರಿದಾಡುತ್ತಿದೆ.

ನವೆಂಬರ್ 22 ರಂದು ಹಾಲಿ ಸಿಎಂ ಅಶೋಕ್ ಗೆಹ್ಲೋಟ್‌ರವರು ಟೋಂಕ್‌ನಲ್ಲಿ ತಮ್ಮ ಕಾಂಗ್ರೆಸ್ ಅಭ್ಯರ್ಥಿಗಳ ಪ್ರಚಾರ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದರು. ಅವರು ಭಾಷಣ ಮಾಡುವ ವೇಳೆ ಸಭಿಕರು ಮೋದಿ ಮೋದಿ ಎಂದು ಕೂಗುವ ಮೂಲಕ ಗೆಹ್ಲೋಟ್ ಭಾಷಣಕ್ಕೆ ಅಡ್ಡಿಪಡಿಸಿ ಅವಮಾನ ಮಾಡಿದ್ದಾರೆ ಎಂದು 17 ಸೆಕೆಂಡ್‌ಗಳ ವಿಡಿಯೋವನ್ನು ಅಸ್ಸಾಂ ಸಿಎಂ ಹಿಮಂತ ಬಿಸ್ವ ಶರ್ಮಾ ಟ್ವಿಟರ್‌ನಲ್ಲಿ ಹಂಚಿಕೊಂಡಿದ್ದಾರೆ.

https://twitter.com/rishibagree/status/1727571044519866498

ಸಾಮಾಜಿಕ ಮಾಧ್ಯಮ ಬಳಕೆದಾರರಾದ ರಿಷಿ ಬಾಗ್ರೀ “ರಾಜಸ್ಥಾನದ ಸಾರ್ವಜನಿಕರು ಮೋದಿ-ಮೋದಿ ಘೋಷಣೆಗಳೊಂದಿಗೆ ಸಿಎಂ ಗೆಹ್ಲೋಟ್ ಅವರನ್ನು ಸ್ವಾಗತಿಸಿದರು” ಎಂಬ ಶೀರ್ಷಿಕೆಯೊಂದಿಗೆ ವಿಡಿಯೊವನ್ನು ಹಂಚಿಕೊಂಡಿದ್ದಾರೆ. ವಿಡಿಯೊದಲ್ಲಿ ಸಿಎಂ ಗೆಹ್ಲೋಟ್ ಮಾತನಾಡಲು ಪ್ರಾರಂಭಿಸುತ್ತಿದ್ದಂತೆ, ಜನಸಮೂಹವು ‘ಮೋದಿ ಮೋದಿ’ ಎಂದು ಘೋಷಣೆ ಮಾಡುತ್ತಿರುವುದು ಕೇಳಿಸುತ್ತದೆ. ಅನೇಕ ಬಳಕೆದಾರರು ಫೇಸ್‌ಬುಕ್‌ನಲ್ಲಿ ಇದೇ ವಿಡಿಯೊ ಹಂಚಿಕೊಂಡು ಗೆಹ್ಲೋಟ್ ಚುನಾವಣಾ ರ‍್ಯಾಲಿಯಲ್ಲಿ ಮೊಳಗಿದ ಮೋದಿ ಪರ ಘೋಷಣೆ ಎಂಬ ಶೀರ್ಷಿಕೆ ನೀಡಿದ್ದಾರೆ. ಹಾಗಿದ್ದರೆ ಪೋಸ್ಟ್‌ನಲ್ಲಿ ಮಾಡಿದ ಪ್ರತಿಪಾದನೆ ನಿಜವೇ ಎಂದು ಪರಿಶೀಲಿಸೋಣ.

ಫ್ಯಾಕ್ಟ್‌ಚೆಕ್ :

ಸಾಮಾಜಿಕ ಮಾಧ್ಯಮಗಳಲ್ಲಿ ಹಂಚಿಕೊಳ್ಳಲಾದ ಪೋಸ್ಟ್ನಲ್ಲಿ ಮಾಡಿದ ಪ್ರತಿಪಾದನೆಯನ್ನು ಪರಿಶೀಲಿಸಲು ಗೂಗಲ್ ರಿವರ್ಸ್ ಇಮೇಜಸ್‌ನಲ್ಲಿ ಸರ್ಚ್ ಮಾಡಿದಾಗ, ಮುಖ್ಯಮಂತ್ರಿ ಗೆಹ್ಲೋಟ್ ಭಾಷಣ ಮಾಡು ವೇಳೆ ಮೋದಿ ಪರ ಘೋಷಣೆ ಕೂಗಲಾಗಿಲ್ಲ ಎಂದು ಎಬಿಪಿ ನ್ಯೂಸ್ ವರದಿ ಮಾಡಿದೆ.

ಗೆಹ್ಲೋಟ್ ಅವರ ಅಧಿಕೃತ ಯೂಟ್ಯೂಬ್ ಚಾನೆಲ್‌ನಲ್ಲಿ ಅವರ ಭಾಷಣದ ದೀರ್ಘ ಆವೃತ್ತಿ ಇದೆ. ವಿಡಿಯೊ ಶೀರ್ಷಿಕೆ ಮತ್ತು ವಿವರಣೆಯ ಪ್ರಕಾರ, ರಾಜಸ್ಥಾನದ ಟೋಂಕ್ ಜಿಲ್ಲೆಯ ಮಾಲ್ಪುರದಲ್ಲಿ ನಡೆದ ಕಾಂಗ್ರೆಸ್ ರ‍್ಯಾಲಿಯಲ್ಲಿ ಗೆಹ್ಲೋಟ್ ಮಾತನಾಡುತ್ತಿದ್ದರು.

ಇದು ಬಿಜೆಪಿ ಐಟಿ ಸೆಲ್ ಎಡಿಟ್ ಮಾಡಿರುವ ನಕಲಿ ವಿಡಿಯೋ ಎಂದು ಸಾಬೀತಾಗಿದೆ. ಅಶೋಕ್ ಗೆಹ್ಲೋಟ್‌ರವರ ಅಧಿಕೃತ ಯೂಟ್ಯೂಬ್ ಚಾನೆಲ್‌ನಲ್ಲಿ ಆ ಚುನಾವಣಾ ಭಾಷಣದ ಲೈವ್ ಮಾಡಲಾಗಿದೆ.  ವಿಡಿಯೋದ 2.13ನೇ ಸೆಕೆಂಡ್‌ನಲ್ಲಿ ಕೆಲವರು ಗದ್ದಲ ಮಾಡುತ್ತಾರೆ. ಆಗ ಗೆಹ್ಲೋಟ್‌ರವರು,  ನಿಲ್ಲಿಸಿ, ನೀವು ಏಕೆ ಬಂದಿದ್ದೀರಿ? ಕಾಂಗ್ರೆಸ್ ಅಭ್ಯರ್ಥಿ ಘಾಸಿ ಲಾಲ್ ಚೌಧರಿ ಅವರನ್ನು ಬೆಂಬಲಿಸುತ್ತೀರೊ, ಇಲ್ಲವೋ ಎಂದು ಪ್ರಶ್ನಸಿದ್ದಾರೆ. ಆಗ ಜನರು ಗದ್ದಲ ನಿಲ್ಲಿಸಿದ್ದಾರೆ. ಆದರೆ ಈ ಸಂದರ್ಭದಲ್ಲಿ ಮೋದಿ ಮೋದಿ ಎಂಬ ಯಾವ ಘೋಷಣೆಗಳು ಸಹ ಕೇಳಿಸುವುದಿಲ್ಲ.

ಲಾಲ್ ಚೌಧರಿ ಎಂಬುವವರು ವೈರಲ್ ವಿಡಿಯೋ ಮತ್ತು ಮೂಲ ವಿಡಿಯೋವನ್ನು ಹಂಚಿಕೊಳ್ಳುವ ಮೂಲಕ ಎಡಿಟ್ ಮಾಡಲಾಗಿದೆ ಎಂದು ತಿಳಿಸಿದ್ದಾರೆ. ಅವರ ಕಚೇರಿಯ ಸಿಬ್ಬಂದಿ, ಗೆಹ್ಲೋಟ್‌ರವರು ಭಾಷಣ ಮಾಡುವಾಗ ಕೆಲವರು ಅಶೋಕ್ ಗೆಹ್ಲೋಟ್ ಜಿಂದಾಬಾದ್ ಎಂದು ಘೋಷಣೆ ಕೂಗಿದ್ದಾರೆ. ಅದರಿಂದ ಭಾಷಣಕ್ಕೆ ಅಡ್ಡಿಯಾಗುತ್ತದೆ ಎಂದು ಸುಮ್ಮನಿರಿಸಲಾಗಿದೆ. ಮೋದಿ ಮೋದಿ ಎಂದು ಘೋಷಣೆ ಕೂಗಿದ್ದಾರೆ ಎಂಬುದು ಸುಳ್ಳು ಎಂದು ಮಾಧ್ಯಮದವರಿಗೆ ಸ್ಪಷ್ಟೀಕರಣ ನೀಡಲಾಗಿದೆ.

ಒಟ್ಟಾರೆಯಾಗಿ ಹೇಳುವುದಾದರೆ, ರಾಜಸ್ಥಾನದ ಮುಖ್ಯಮಂತ್ರಿ ಗೆಹ್ಲೋಟ್‌ರವರು ಭಾಷಣ ಮಾಡುವಾಗ ಕೆಲವರು ಅಶೋಕ್ ಗೆಹ್ಲೋಟ್ ಜಿಂದಾಬಾದ್ ಎಂದು ಘೋಷಣೆ ಕೂಗಿದ ಸಂದರ್ಭದ ವಿಡಿಯೋವನ್ನು ಎಡಿಟ್ ಮಾಡಿ ಮೋದಿ ಪರ ಘೋಷಣೆ ಕೂಗಲಾಗಿದೆ ಎಂದು BJP ಬೆಂಬಲಿಗರು ಸುಳ್ಳು ಪ್ರತಿಪಾದನೆಯೊಂದಿಗೆ ಹಂಚಿಕೊಂಡಿದ್ದಾರೆ. ಆಗಾಗಿ ಪೋಸ್ಟ್‌ನಲ್ಲಿ ಮಾಡಿದ ಪ್ರತಿಪಾದನೆ ತಪ್ಪಾಗಿದೆ.

ನಿಮ್ಮ ಸುತ್ತಮುತ್ತ ಮತ್ತು  ಸಾಮಾಜಿಕ ಜಾಲತಾಣಗಳಲ್ಲಿ ಯಾವುದೇ ಸುದ್ದಿಯು ಸುಳ್ಳು ಎಂದು ನಿಮಗೆ ಸಂದೇಹ ಬಂದಿದ್ದರೆ ಅದನ್ನು Ensuddi.com ವಾಟ್ಸಾಪ್  ನಂ 9108969301 ಗೆ ತಲುಪಿಸಿ. ನಾವು ಫ್ಯಾಕ್ಟ್‌ಚೆಕ್ ಮಾಡಿ ಸತ್ಯ ನಿಮ್ಮೆದುರು ಇಡುತ್ತೇವೆ


ಇದನ್ನು ಓದಿರಿ : ಫ್ಯಾಕ್ಟ್‌ಚೆಕ್ : ಜಪಾನ್‌ನಲ್ಲಿ ಮುಸ್ಲಿಮರಿಗೆ ಬಾಡಿಗೆಗೆ ಮನೆಯನ್ನು ಕೊಡುವುದಿಲ್ಲವೇ?


 

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights