ಮೋದಿ ವಿರುದ್ಧ ದನಿ ಎತ್ತಿದರೆ ಮೋಹನ್ ಭಾಗವತ್‌ ಕೂಡ ಭಯೋತ್ಪಾದಕರಾಗುತ್ತಾರೆ: ರಾಹುಲ್‌ಗಾಂಧಿ

“ಭಾರತದಲ್ಲಿ ಪ್ರಜಾಪ್ರಭುತ್ವವಿಲ್ಲ. ಪ್ರಧಾನ ಮಂತ್ರಿಯ ವಿರುದ್ಧ ದನಿ ಎತ್ತುವವರು, ಸರ್ಕಾರದ ಧೋರಣೆಗಳನ್ನು ಟೀಕಿಸುವವರಿಗೆ ಭಯೋತ್ಪಾದಕರು ಎಂದು ಹಣೆಪಟ್ಟಿ ಕಟ್ಟಲಾಗುತ್ತದೆ. ಅದು RSS‌ ಮುಖ್ಯಸ್ಥರಾದ ಮೋಹನ್ ಭಾಗವತ್ ಆದರೂ ಸರಿಯೇ” ಎಂದು ರಾಹುಲ್‌ಗಾಂಧಿ ಕೇಂದ್ರದ ಬಿಜೆಪಿ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.

“ಪ್ರಧಾನಿ ಮೋದಿ ಕ್ರೋನಿ ಕ್ಯಾಪಿಟಲಿಸ್ಟ್‌ಗಳಿಗಾಗಿ ಹಣ ಸಂಪಾದಿಸುತ್ತಿದ್ದಾರೆ. ಅವರ ವಿರುದ್ಧ ದನಿಯೆತ್ತಲು ಪ್ರಯತ್ನಿಸುವ ರೈತರು, ಕಾರ್ಮಿಕರು ಅಥವಾ ಮೋಹನ್ ಭಾಗವತ್ ಆವರೇ ಆಗಿದ್ದರೂ ಸಹ ಅವರನ್ನೂ ಭಯೋತ್ಪಾದಕರು ಎಂದು ಕರೆಯಲಾಗುತ್ತದೆ” ಎಂದು ಹೇಳಿದ್ದಾರೆ.

“ಭಾರತದಲ್ಲಿ ಯಾವುದೇ ಪ್ರಜಾಪ್ರಭುತ್ವ ಇಲ್ಲ. ನಿಮ್ಮಲ್ಲಿ ಕೆಲವರಿಗೆ ಅದು ಇದೆ ಎನಿಸಿದರೆ, ಅದು ನಿಮ್ಮ ಕಲ್ಪನೆಯಷ್ಟೆ”

ಕೃಷಿ ಕಾನೂನುಗಳ ವಿರುದ್ಧ ದೆಹಲಿಯಲ್ಲಿ ನಡೆಯುತ್ತಿರುವ ಬೃಹತ್ ಪ್ರತಿಭಟನೆಗಳನ್ನು ಕೊನೆಗೊಳಿಸುವ ಸಲುವಾಗಿ ರಾಷ್ಟ್ರಪತಿ ರಾಮನಾಥ್ ಕೋವಿಂದ್ ಮಧ್ಯಪ್ರವೇಸಿಸುವಂತೆ ಒತ್ತಾಯಿಸಲು ಕಾಂಗ್ರೆಸ್ ಕಾರ್ಯಕರ್ತರ ನಿಯೋಗವನ್ನು ಕರೆದುಕೊಂಡು ರಾಹುಲ್ ಗಾಂಧಿ ಹೊರಟಿದ್ದರು. ಈ ಸಂದರ್ಭದಲ್ಲಿ ಮೆರವಣಿಗೆ ಹೊರಟಿದ್ದ ರಾಹುಲ್ ಗಾಂಧಿ ಮತ್ತು ಪ್ರಿಯಾಂಕಾ ಗಾಂಧಿಯವರನ್ನು ಪೊಲೀಸರು ತಡೆದು ಹಲವು ಮುಖಂಡರೂ ಸೇರಿದಂತೆ ಕಾಂಗ್ರೆಸ್ ಕಾರ್ಯಕರ್ತರನ್ನು ವಶಕ್ಕೆ ತೆಗೆದುಕೊಂಡರು.

ಇದನ್ನೂ ಓದಿ: ಸೂಟು-ಬೂಟು ಸರ್ಕಾರದಿಂದ ರೈತರ ಆದಾಯ ಅರ್ಧದಷ್ಟಾಗಿದೆ; ಸ್ನೇಹಿತರ ಆದಾಯ ದುಪ್ಪಟ್ಟಾಗಿದೆ: ರಾಹುಲ್‌ಗಾಂಧಿ

ರಾಷ್ಟ್ರಪತಿಗಳ ಭೇಟಿಯ ನಂತರ ಮಾತನಾಡಿದ ರಾಹುಲ್ ಗಾಂಧಿ, “ಈ ಕಾನೂನುಗಳು ಲಕ್ಷಾಂತರ ರೈತರ ಜೀವನೋಪಾಯವನ್ನು ಕಸಿದುಕೊಳ್ಳುತ್ತವೆ. ಜೊತೆಗೆ ನಾಲ್ಕು ಅಥವಾ ಐದು ಉದ್ಯಮಿಗಳಿಗೆ ಅನುಕೂಲಕರವಾಗುವ ರೀತಿಯಲ್ಲಿ ವಿನ್ಯಾಸಗೊಳಿಸಲಾಗಿದೆ” ಎಂದು ಹೇಳಿದರು.

ಕಾಂಗ್ರೆಸ್‌ನ ಮೂವರು ಮುಖಂಡರಿಗೆ ಮಾತ್ರ ರಾಷ್ಟ್ರಪತಿ ಭವನಕ್ಕೆ ತೆರಳಿ ರಾಷ್ಟ್ರಪತಿ ರಾಮನಾಥ್ ಕೋವಿಂದ್ ಅವರನ್ನು ಭೇಟಿ ಮಾಡುವ ಅವಕಾಶ ದೊರಕಿತ್ತು. ಈ ವೇಳೆ ಕೃಷಿ ಕಾನೂನು ರದ್ದುಗೊಳಿಸುವಂತೆ ಆಗ್ರಹಿಸಿ ಎರಡು ಕೋಟಿ ಹಸ್ತಾಕ್ಷರವಿರುವ ಮನವಿ ಪತ್ರವನ್ನು ರಾಷ್ಟ್ರಪತಿಗೆ ಸಲ್ಲಿಸಿರುವ ರಾಹುಲ್ ಗಾಂಧಿ, ಈ ಕೃಷಿ ಕಾಯ್ದೆಗಳು ರೈತ ವಿರೋಧಿ ಎಂದು ರಾಷ್ಟ್ರಪತಿಗೆ ಮನವರಿಕೆ ಮಾಡಿದ್ದೇನೆ ಎಂದು ಹೇಳಿದರು.

“ಯುವಕರು ಮತ್ತು ಈ ದೇಶದ ಎಲ್ಲಾ ಜನರು ತಿಳಿದುಕೊಳ್ಳಬೇಕಾದ ಅಂಶವೆಂದರೆ, ಪ್ರಧಾನ ಮಂತ್ರಿ ಅಸಮರ್ಥ ವ್ಯಕ್ತಿ. ಅವರಿಗೆ ಏನೂ ತಿಳಿದಿಲ್ಲ. ಅವರು ಕ್ರೋನಿ ಬಂಡವಾಳಶಾಹಿಗಳಿಗೆ ಮಾತ್ರ ಕಿವಿಗೊಡುತ್ತಾರೆ. ಅವರು ಏನು ಹೇಳಿದರೂ ಅದನ್ನೇ ಮಾಡುತ್ತಾರೆ” ಎಂದು ಕಿಡಿ ಕಾರಿದರು.

ಈ ಕೃಷಿ ಕಾಯ್ದೆಗಳನ್ನು ರದ್ದುಗೊಳಿಸುವವರೆಗೂ ರೈತರು ಮನೆಗೆ ಹಿಂದಿರುಗುವುದಿಲ್ಲ ಎಂದು ನಾನು ಪ್ರಧಾನಿಗೆ ಹೇಳಲು ಬಯಸುತ್ತೇನೆ. ಸರ್ಕಾರವು ಸಂಸತ್ತಿನ ಜಂಟಿ ಅಧಿವೇಶನವನ್ನು ಕರೆದು ಈ ಕಾಯ್ದೆಗಳನ್ನು ಹಿಂಪಡೆಯಬೇಕು. ವಿರೋಧ ಪಕ್ಷವು ರೈತರಿಗೆ ಸಾಥ್ ನೀಡಲಿದೆ ಎಂದು ಹೇಳಿದರು.


ಇದನ್ನೂ ಓದಿ: ಕಾಂಗ್ರೆಸ್‌ಗೆ ರಾಹುಲ್ ‌ಗಾಂಧಿ ನಾಯಕತ್ವವು ವಿನಾಶಕಾರಿ ಎಂಬುದು ಮತ್ತೆ ಬಹಿರಂಗವಾಗಿದೆ!

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.