FACT CHECK | ಭಾರತ್ ಅಕ್ಕಿಯನ್ನು ಮುಸ್ಲಿಮರೇ ಹೆಚ್ಚು ಖರೀದಿಸುತ್ತಿದ್ದಾರೆ ಎಂದು ಎಡಿಟ್ ಮಾಡಿದ ಫೋಟೊ ಹಂಚಿಕೊಂಡ BJP ಬೆಂಬಲಿಗರು
ಕೇಂದ್ರ ಸರ್ಕಾರದ ಭಾರತ್ ರೈಸ್‌ಅನ್ನು ಮುಸ್ಲಿಮರು ದೊಡ್ಡ ಮಟ್ಟದಲ್ಲಿ ಖರೀದಿಸುತ್ತಿದ್ದಾರೆ ಎಂದು ಪ್ರತಿಪಾದಿಸಿ ಸಾಮಾಜಿಕ ಮಾಧ್ಯಮಗಳಲ್ಲಿ ಪೋಸ್ಟ್‌ಅನ್ನು ಹಂಚಿಕೊಳ್ಳಲಾಗುತ್ತಿದೆ.
View this post on Instagram
ಸದಾ ಮೋದಿ ವಿರೋಧಿಸುವ ಮುಸ್ಲಿಮರು ಮೋದಿ ಘೋಷಿಸಿದ ಭಾರತ್ ರೈಸ್ ಅನ್ನು ದೊಡ್ಡ ಮಟ್ಟದಲ್ಲಿ ಖರೀದಿಸುತ್ತಿದ್ದಾರೆ. ಸರ್ಕಾರದ ಎಲ್ಲಾ ಸವಲತ್ತುಗಳ ಮೊದಲ ಫಲಾನುಭವಿಗಳು ಇವರೇ ಎಂದು ಪ್ರತಿಪಾದಿಸಿ ಸಾಮಾಜಿಕ ಮಾಧ್ಯಮಗಳಲ್ಲಿ ಹಂಚಿಕೊಳ್ಳುತ್ತಿದ್ದಾರೆ.
ಪೋಸ್ಟ್‌ನಲ್ಲಿ ಪ್ರತಿಪಾದಿಸಿದಂತೆ ಮುಸ್ಲಿಮರು ಮೋದಿಯನ್ನು ವಿರೋಧಿಸುತ್ತಾರೆ, ಆದರೆ ಕೇಂದ್ರ ಸರ್ಕಾರದ ಭಾರತ್ ರೈಸ್ ಯೋಜನೆಯ ಅಕ್ಕಿಯ ಖರೀದಿಯನ್ನು ಮಾಡುತ್ತಾರೆ ಎಂದು ಮುಸ್ಲಿಮರನ್ನು ಗುರಿಯಾಗಿಸಿಕೊಂಡು ವಿಡಿಯೋವನ್ನು ಪ್ರಸಾರ ಮಾಡುತ್ತಿದ್ದಾರೆ. ಹಾಗಿದ್ದರೆ ಪೋಸ್ಟ್‌ನಲ್ಲಿ ಮಾಡಿದ ಪ್ರತಿಪಾದನೆ ನಿಜವೇ ಎಂದು ಪರಿಶೀಲಿಸೋಣ.
ಫ್ಯಾಕ್ಟ್‌ಚೆಕ್ :
ಸಾಮಾಜಿಕ ಮಾಧ್ಯಮಗಳಲ್ಲಿ ಹಂಚಿಕೊಳ್ಳಲಾದ ವಿಡಿಯೋವನ್ನು ಪರಿಶೀಲಿಸಲು ಗೂಗಲ್ ರಿವರ್ಸ್ ಇಮೇಜಸ್‌ನಲ್ಲಿ ಸರ್ಚ್ ಮಾಡಿದಾಗ, ಸಾಮಾಜಿಕ ಮಾಧ್ಯಮಗಳಲ್ಲಿ ಹಲವು ಚಿತ್ರಗಳು ಕಂಡುಬಂದಿದೆ. ಅದನ್ನು ಮತ್ತಷ್ಟು ಪರಿಶೀಲಿಸಿದಾಗ, 2022ರ ಡಿಸೆಂಬರ್ 4 ರಂದು 9gag.com ನಲ್ಲಿ ಅಪ್‌ಲೋಡ್ ಮಾಡಲಾಗಿದೆ.
ಎರಡೂ ಚಿತ್ರಗಳನ್ನು ಹೋಲಿಕೆ ಮಾಡಿ ನೋಡಿದಾಗ, ಇನ್‌ಸ್ಟಾ ಮತ್ತು ಯೂಟ್ಯೂಬ್ ಪೋಸ್ಟ್‌ಗಳಲ್ಲಿ ಬಳಸಲಾದ ಚಿತ್ರವನ್ನು ಎಡಿಟ್ ಮಾಡಲಾಗಿದೆ ಎಂಬುದು ಸ್ಪಷ್ಟವಾಗಿದೆ. ಮೂಲ ಚಿತ್ರದಲ್ಲಿ ಕಂಡುಬರುವ ಸ್ಕೂಟರ್‌ನ ನಂಬರ್ ಪ್ಲೇಟ್‌ನಲ್ಲಿ ಉತ್ತರ ಪ್ರದೇಶದ ನೋಂದಣಿ UP ಸಂಖ್ಯೆಯನ್ನು ಕಾಣಬಹುದು. ವೈರಲ್ ಪೋಸ್ಟ್‌ಗಳಲ್ಲಿ ಚಿತ್ರದಲ್ಲಿ ನಂಬರ್ ಪ್ಲೇಟ್‌ಅನ್ನು ಬ್ಲರ್ ಮಾಡಲಾಗಿದೆ. ಮೇಲಾಗಿ ಬ್ಯಾಗ್‌ನಲ್ಲಿ ಬರೆದಿದ್ದ 29 ರೂ.ಗಳನ್ನು ಕೂಡ ಎಡಿಟ್ ಮಾಡಿ ಸೇರಿಸಲಾಗಿದೆ. ಇದು ಭಾರತ್ ಅಕ್ಕಿಯ ಬೆಲೆ. ಈ ಎರಡು ಚಿತ್ರಗಳ ಹೋಲಿಕೆಯನ್ನು ಮೇಲೆ ನೋಡಬಹುದು.
ಉತ್ತರ ಪ್ರದೇಶದಲ್ಲಿ ಪ್ರಧಾನ ಮಂತ್ರಿ ಗರೀಬ್ ಕಲ್ಯಾಣ್ ಅನ್ನ ಯೋಜನೆಯಡಿ ಅಕ್ಕಿಯನ್ನು ವಿತರಿಸಲು ಯೋಗಿ ಆದಿತ್ಯನಾಥ್ ಮತ್ತು ನರೇಂದ್ರ ಮೋದಿಯವರ ಚಿತ್ರಗಳನ್ನು ಹೊಂದಿರುವ ಪ್ಲಾಸ್ಟಿಕ್ ಚೀಲಗಳನ್ನು ಬಳಸಲಾಗಿತ್ತು. ವೈರಲ್ ಚಿತ್ರದಲ್ಲೂ ಇಂತಹ ಬ್ಯಾಗ್ ಕಾಣಿಸಿಕೊಂಡಿದೆ. ಆದರೆ ಈ ಮೂಲ ಚಿತ್ರ ಯಾರದ್ದು ಎಂಬುದನ್ನು ಪತ್ತೆ ಹಚ್ಚಲು ಸಾಧ್ಯವಾಗಿಲ್ಲ.ವಾಸ್ತವವಾಗಿ ಕರ್ನಾಟಕದಲ್ಲಿ ಬೆಂಗಳೂರು ಮತ್ತು ಇತರೆ ಜಿಲ್ಲೆಗಳಲ್ಲಿ ಮಾರಟ ಮಾಡಲಾಗುತ್ತಿರುವ ಭಾರತ್ ಅಕ್ಕಿಯ ಚೀಲದ ಮೇಲೆ ಮೋದಿ ಚಿತ್ರ ಇಲ್ಲ.
ಪಾರ್ಲಿಮೆಂಟ್ ಚುನಾವಣೆ ಹಿನ್ನಲೆಯಲ್ಲಿ ಕೇಂದ್ರ ಸರ್ಕಾರವು ಬಿಜೆಪಿಯೇತರ ಸರ್ಕಾರ ಇರುವಲ್ಲಿ ಮತದಾರರ ಮೇಲೆ ಪ್ರಭಾವ ಬೀರಲು 29 ರೂ.ಗೆ ಅಕ್ಕಿಯನ್ನು ಭಾರತ್ ರೈಸ್ ಎಂಬ ಹೆಸರಿನಲ್ಲಿ ಮಾರಾಟ ಮಾಡುವ ಮೂಲಕ ಅಕ್ಕಿ ರಾಜಕೀಯ ಮಾಡುತ್ತಿದೆ ಎಂದು ಕಾಂಗ್ರೆಸ್ ಆರೋಪಿಸಿದೆ.
ಒಟ್ಟಾರೆಯಾಗಿ ಹೇಳುವುದಾದರೆ, ಕೇಂದ್ರ ಸರ್ಕಾರದ ಹೆಸರಿನಲ್ಲಿ ಮಾರಾಟಮಾಡಲಾಗುತ್ತಿರುವ ಭಾರತ್ ಅಕ್ಕಿ ಕೆಜಿಗೆ 29 ರೂ ಬೆಲೆಯನ್ನು ನಿಗದಿಪಡಿಸಲಾಗಿದೆ. 29 ರೂ ಕೊಟ್ಟು ಯಾರು ಬೇಕಾದರೂ ಖರೀದಿಸಬಹುದು. ಕೊನೆಗೆ ಅಂಬಾನಿಯೂ ಖರೀದಿಸಬಹುದು. ಹಾಗಿದ್ದಾಗ ಕೆಲವು ಬಿಜೆಪಿ ಬೆಂಬಲಿಗರು ಸಂಬಂಧವಿಲ್ಲದ ಚಿತ್ರವನ್ನು ಎಡಿಟ್ ಮಾಡಿ ಹಂಚಿಕೊಳ್ಳುವ ಮೂಲಕ ಇದರಲ್ಲು ಮುಸ್ಲಿಂ ದ್ವೇಷವನ್ನು ಬಿತ್ತುವ, ಕೋಮು ಸಾಮರಸ್ಯ ಹಾಳು ಮಾಡುವಂತಹ ಕೆಲಸ ಮಾಡುತ್ತಿದ್ದಾರೆ.
ರಾಜಕೀಯ ಏನೇ ಇರಲಿ ದಿನಸಿ ವಸ್ತುಗಳನ್ನು ಕಡಿಮೆ ಬೆಲೆಗೆ ಮಾರಾಟ ಮಾಡಿದರೆ ಬಡವರಿಗೆ ಹೆಚ್ಚು ಅನುಕೂಲ, ಆದರೆ ಅನ್ನಭಾಗ್ಯ ಯೋಜನೆಗಾಗಿ ರಾಜ್ಯ ಸರ್ಕಾರ ಕೇಂದ್ರದ ಬಳಿ ಅಕ್ಕಿಗೆ ಬೇಡಿಕೆ ಇಟ್ಟಾಗ ಲಭ್ಯವಿಲ್ಲದ ಅಕ್ಕಿ ಈಗ ಎಲ್ಲಿಂದ ಬಂತು ಎಂದು ಕರ್ನಾಟಕದ ಜನ ಕೇಳುತ್ತಿದ್ದಾರೆ?
ನಿಮ್ಮ ಸುತ್ತಮುತ್ತ ಮತ್ತು ಸಾಮಾಜಿಕ ಜಾಲತಾಣಗಳಲ್ಲಿ ಯಾವುದೇ ಸುದ್ದಿಯು ಸುಳ್ಳು ಎಂದು ನಿಮಗೆ ಸಂದೇಹ ಬಂದಿದ್ದರೆ ಅದನ್ನು Ensuddi.com ವಾಟ್ಸಾಪ್ ನಂ 9108969301 ಗೆ ತಲುಪಿಸಿ. ನಾವು ಫ್ಯಾಕ್ಟ್‌ಚೆಕ್ ಮಾಡಿ ಸತ್ಯ ನಿಮ್ಮೆದುರು ಇಡುತ್ತೇವೆ
ಇದನ್ನು ಓದಿರಿ : ಫ್ಯಾಕ್ಟ್‌ಚೆಕ್ : ರೈತ ಹೋರಾಟದಲ್ಲಿ ಟ್ರಾಕ್ಟರ್‌ಗಳನ್ನು ಟ್ಯಾಂಕರ್‌ಗಳಂತೆ ವಿನ್ಯಾಸ ಮಾಡಿದ್ದಾರೆಂದು ಸುಳ್ಳು ಸುದ್ದಿ ಹಂಚಿಕೆ