FACT CHECK | ತಿಂಗಳಿಗೆ ಒಬ್ಬರಿಗೆ ರೂ 35 – 40 ಸಾವಿರ ಹಣ ನೀಡಿ ರೈತ ಹೋರಾಟಕ್ಕೆ ಕರೆತರಲಾಗಿದೆ ಎಂದು ಸಂಬಂಧವಿಲ್ಲದ ವಿಡಿಯೋ ಹಂಚಿಕೆ

ರೈತರು ಬೆಳೆದ ಬೆಳೆಗೆ ವೈಜ್ಙಾನಿಕ ಬೆಂಬಲ ಬೆಲೆಗೆ ಕಾನೂನು ಖಾತರಿ (ಎಂಎಸ್‌ಪಿ ವಿಧೇಯಕ) ಸೇರಿದಂತೆ 12 ಬೇಡಿಕೆಗಳನ್ನು ಮುಂದಿಟ್ಟು ರೈತರು ಕೈಗೊಂಡಿರುವ ‘ದಿಲ್ಲಿ ಚಲೋ 2.0 ‘ ಬುಧವಾರ ತೀವ್ರ ಸ್ವರೂಪ ಪಡೆದುಕೊಂಡಿತು. ಪೊಲೀಸರು ಹಾಗೂ ರೈತರ ನಡುವಿನ ಸಂಘರ್ಷದಲ್ಲಿ ಓರ್ವ ಯುವ ರೈತ ಮೃತಪಟ್ಟಿದ್ದು, ಇದುವರೆಗೂ ಪೊಲೀಸರು ಸೇರಿ 160 ಮಂದಿ ಗಾಯಗೊಂಡಿದ್ದಾರೆ. ಈ ನಡುವೆ ರೈತನ ಸಾವಿನ ಹಿನ್ನೆಲೆಯಲ್ಲಿ ಹೋರಾಟಕ್ಕೆ ಎರಡು ದಿನ ತಾತ್ಕಾಲಿಕ ವಿರಾಮ ನೀಡಲಾಗಿದ್ದು, ಫೆಬ್ರವರಿ 29ಕ್ಕೆ ಮುಂದಿನ ತೀರ್ಮಾನಗಳನ್ನು ಘೋಷಿಸಲು ಉದ್ದೇಶಿಸಿದ್ದಾರೆ. ಇದರ ಬೆನ್ನಲ್ಲೆ ಸಾಮಾಜಿಕ ಮಾಧ್ಯಮಗಳಲ್ಲಿ ವಿಡಿಯೋ ವೈರಲ್ ಆಗಿದ್ದು ರೈತರ ಹೋರಾಟದ ಹೆಸರಿನಲ್ಲಿ ದಲ್ಲಾಳಿಗಳು ಬಂದಿದ್ದಾರೆ ನೋಡಿ ಎಂಬ ಬರಹದೊಂದಿಗೆ ಪೋಸ್ಟ್‌ಅನ್ನು ಹಂಚಿಕೊಂಡಿದ್ದಾರೆ.

“ಈ ನಕಲಿ ರೈತ ದಲ್ಲಾಳಿಗಳ ನಿಜ ಉದ್ದೇಶ ಬಹಿರಂಗಪಡಿಸುತ್ತದೆ! ಪಂಜಾಬ್ ಗಡಿ ರಸ್ತೆ ಯಲ್ಲಿ ಕೂತು ತಿಂಗಳಿಗೆ ಎಷ್ಟು ಕೊಡಬೇಕು ಎನ್ನುವ ದರದ ಬಗ್ಗೆ ಚರ್ಚೆಯಾಗುತ್ತಿದೆ. ಎದುರಿಗಿದ್ದವರು ₹ 40,000 ಹೇಳುತ್ತಿದ್ದಾರೆ ಆದರೆ ಹಣ ನೀಡುವ ದಲ್ಲಾಳಿ : ತಿಂಗಳಿಗೆ 35,000 ಎನ್ನುತ್ತಿದ್ದಾನೆ. ಸರಿ, ನಿನ್ನ ಕೃಷಿ ಚೆನ್ನಾಗಿದೆ, ಕೂಲಿಕಾರರು ನಿನಗಾಗಿ ಅಲ್ಲಿ ಕೆಲಸ ಮಾಡುತ್ತಿದ್ದಾರೆ. ಇಲ್ಲಿ ಸುಮ್ಮನೆ ಕುಳಿತರೆ ಊಟ ಸಿಗುತ್ತದೆ, ಮದ್ಯ ಸಿಗುತ್ತದೆ! 35,000 ತೆಗೆದುಕೊಳ್ಳಿ ಎಂದು ಹೇಳುತ್ತಿದ್ದಾನೆ, ಇದು ಅವರ ಅಸಲಿ ಸತ್ಯ, ದೇಶಕ್ಕೆ ತಿಳಿಯುವ ಹಾಗೆ ಇದನ್ನು ಆದಷ್ಟು ರೀಪೋಸ್ಟ್ ಮಾಡಿ. ಅವರ ಉದ್ದೇಶ ರೈತರಿಗೆ ಸಹಾಯ ಮಾಡುವುದಲ್ಲ ಮೋದಿಯವರ ಜನಪ್ರಿಯತೆಯನ್ನು ಕಡಿಮೆ ಮಾಡುವುದು ಎಂದು ಈಗಾಗಲೇ ಹೇಳಿದ್ದಾರೆ” ಎಂದು ಹಂಚಿಕೊಳ್ಳಲಾಗಿದೆ.

ವ್ಯಕ್ತಿಯೊಬ್ಬನನ್ನು ಸುತ್ತುವರೆದಿರುವ ಗುಂಪೊಂದು, ವ್ಯಕ್ತಿಯನ್ನು ಕುರ್ಚಿಯ ಮೇಲೆ ಕುಳಿತುಕೊಳ್ಳುವಂತೆ ಮನವೊಲಿಸುವ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವ್ಯಾಪಕವಾಗಿ ಹರಡುತ್ತಿದೆ. ದೆಹಲಿ ಚಲೋ ರೈತರ ಪ್ರತಿಭಟನೆಯಲ್ಲಿ ಭಾಗವಹಿಸಲು ರೈತರಿಗೆ ಹಣ ನೀಡಲಾಗುತ್ತಿದೆ ಎಂದು ಹೇಳಲಾಗಿದೆ. ಹಾಗಿದ್ದರೆ ಈ ಸುದ್ದಿ ನಿಜವೇ ಎಂದು ಪರಿಶೀಲಿಸೋಣ.

ಫ್ಯಾಕ್ಟ್‌ಚೆಕ್ :

ಸಾಮಾಜಿಕ ಮಾಧ್ಯಮಗಳಲ್ಲಿ ಹಂಚಿಕೊಳ್ಳಲಾದ ವಿಡಿಯೋವನ್ನು ಪರಿಶೀಲಿಸಲು ಕೀಫ್ರೇಮ್‌ಗಳನ್ನು ಬಳಸಿಕೊಂಡು ಗೂಗಲ್ ರಿವರ್ಸ್ ಇಮೇಜಸ್‌ನಲ್ಲಿ ಸರ್ಚ್ ಮಾಡಿದಾಗ, ಹೆಚ್ಚಿನ ರೆಸಲ್ಯೂಶನ್ ಹೊಂದಿರುವ ಆವೃತ್ತಿಯನ್ನು ಜನವರಿ 2024 ರಲ್ಲಿ ಹಲವು ಸಮಾಜಿಕ ಮಾಧ್ಯಮಗಳ ಬಳಕೆದಾರರು ಹಂಚಿಕೊಂಡಿರುವುದನ್ನು ಕಾಣಬಹುದು.

 

View this post on Instagram

 

A post shared by JATTZBLIKE (@jattzblike)

ಟ್ರಾಕ್ಟರ್ ವ್ಯಾಪಾರಕ್ಕೆ ಸಂಬಂಧಿಸಿದಂತೆ ಎರಡು ಗುಂಪು ಪರಸ್ಪರ  ಒಪ್ಪಂದದ ಬಗ್ಗೆ ಚರ್ಚಿಸುವ ಸಂದರ್ಭದಲ್ಲಿ ಈ ವಿಡಿಯೋವನ್ನು ಸೆರೆಹಿಡಿಯಲಾಗಿದೆ. ಆದರೆ ರೈತರು ಪ್ರಾರಂಭಿಸಿದ ದೆಹಲಿ ಚಲೋ ಪ್ರತಿಭಟನೆಯು 13 ಫೆಬ್ರವರಿ 2024 ರಂದು ಪ್ರಾರಂಭವಾಗಿದೆ. ಆದರೆ ವೈರಲ್ ವಿಡಿಯೋ 17 ಜನವರಿ 2024 ರ ಹಿಂದಿನದ್ದಾಗಿದೆ.

ಒಟ್ಟಾರೆಯಾಗಿ ಹೇಳುವುದಾದರೆ, ಸಾಮಾಜಿಕ ಮಾಧ್ಯಮಗಳಲ್ಲಿ ಹಂಚಿಕೊಳ್ಳಲಾದ ವಿಡಿಯೋ ದೆಹಲಿ ಚಲೋ ರೈತರ ಪ್ರತಿಭಟನೆಗೆ ಸಂಬಂಧಿಸಿಲ್ಲ ಎಂಬುದು ಸ್ಪಷ್ಟವಾಗಿದೆ.

ನಿಮ್ಮ ಸುತ್ತಮುತ್ತ ಮತ್ತು ಸಾಮಾಜಿಕ ಜಾಲತಾಣಗಳಲ್ಲಿ ಯಾವುದೇ ಸುದ್ದಿಯು ಸುಳ್ಳು ಎಂದು ನಿಮಗೆ ಸಂದೇಹ ಬಂದಿದ್ದರೆ ಅದನ್ನು Ensuddi.com ವಾಟ್ಸಾಪ್  ನಂ 9108969301 ಗೆ ತಲುಪಿಸಿ. ನಾವು ಫ್ಯಾಕ್ಟ್‌ಚೆಕ್ ಮಾಡಿ ಸತ್ಯ ನಿಮ್ಮೆದುರು ಇಡುತ್ತೇವೆ


ಇದನ್ನು ಓದಿರಿ : FACT CHECK | ಮಸೀದಿಗಳಿಗೆ ಹೋಲಿಸಿದರೆ ದೇವಸ್ಥಾನಗಳಿಗೆ ಹೆಚ್ಚಿನ ವಿದ್ಯುತ್ ಶುಲ್ಕ ವಿಧಿಸಲಾಗುತ್ತಿದೆಯೇ?


 

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights