FACT CHECK | ಮಹಿಳೆಗೆ ಕಿರುಕುಳ ನೀಡಿದ ಯುವಕರು ಮುಸ್ಲಿಮರಲ್ಲ! ಮತ್ತ್ಯಾರು?

ಹಿಂದೂ ದಂಪತಿಗಳ ಮೇಲೆ ಮುಸ್ಲಿಂ ಯುವಕರ ಗುಂಪು ಲೈಂಗಿಕ ಕಿರುಕುಳ ನೀಡುತ್ತಿರುವ ವಿಡಿಯೋ ಎಂದು ಪ್ರತಿಪಾದಿಸಿ ಸಾಮಾಜಿಕ ಮಾಧ್ಯಮಗಳಲ್ಲಿ ವಿಡಿಯೋವನ್ನು ಹಂಚಿಕೊಳ್ಳಲಾಗುತ್ತಿದೆ.

“ಪಶ್ಚಿಮ ಬಂಗಾಳದಲ್ಲಿ  ಹಿಂದೂ ದಂಪತಿಗಳು ಹೊಲ ಗದ್ದೆ ತೋಟ ಗಳ ಕಡೆ  ಹೋದಾಗ, ಮುಸ್ಲಿಮರು ಈ ರೀತಿ ವರ್ತನೆ ಮಾಡುತ್ತಿದ್ದಾರೆ, ಹಿಂದೂಗಳೇ ಈಗಲಾದರೂ ಅರ್ಥ ಮಾಡಿಕೊಳ್ಳಿ , ಈ ದೇಶಕ್ಕೆ ನರೇಂದ್ರ ಮೋದಿ ಯಾಕಿರಬೇಕು ಎಂಬುದನ್ನು. ನರೇಂದ್ರ ಮೋದಿ ಮತ್ತು ಆದಿತ್ಯನಾಥ್ ಇರುವಾಗಲೇನೆ ಈ ರೀತಿ ನಡೆದುಕೊಳ್ಳುತ್ತಿದ್ದಾರೆ, ಇನ್ನು ಒಂದು ವೇಳೆ ನರೇಂದ್ರ ಮೋದಿ ಆದಿತ್ಯನಾಥ ದೇಶದಲ್ಲಿ ಇಲ್ಲ ಎಂದಾದರೆ ಯಾವ ರೀತಿ ನಮ್ಮ ದೇಶ ಇರುತ್ತದೆ ಅನ್ನೋದನ್ನ ಯೋಚನೆ ಮಾಡಿ, ಮುಂದೊಂದು ದಿನ ನಿಮ್ಮ ರಾಜ್ಯದಲ್ಲೂ ಇದೇ ಪರಿಸ್ಥಿತಿ ಬರಬಹುದು” ಎಂಬ ಪ್ರತಿಪಾದನೆಯೊಂದಿಗೆ ಮುಸ್ಲಿಮರನ್ನು ಗುರಿಯಾಗಿಸಿಕೊಂಡು ಪೋಸ್ಟ್‌ಅನ್ನು ಹಂಚಿಕೊಳ್ಳಲಾಗಿದೆ. ಹಾಗಿದ್ದರೆ ಈ ವಿಡಿಯೋದಲ್ಲಿ ನಡೆದಿರುವ ಘಟನೆ ಹಿನ್ನಲೆ ಏನು? ಸತ್ಯಾಸತ್ಯತೆ ಏನು ಎಂದು ಪರಿಶೀಲಿಸೋಣ.

ಫ್ಯಾಕ್ಟ್‌ಚೆಕ್ :

ಸಾಮಾಜಿಕ ಮಾಧ್ಯಮಗಳಲ್ಲಿ ಹಂಚಿಕೊಳ್ಳಲಾದ ಪೋಸ್ಟ್‌ನಲ್ಲಿ ಮಾಡಿದ ಪ್ರತಿಪಾದನೆಯನ್ನು ಪರಿಶೀಲಿಸಲು ಕೀ ವರ್ಡ್ ಸರ್ಚ್ ನಡೆಸಿದಾಗ, ಅಕ್ಟೋಬರ್ 6, 2021ರ ದೈನಿಕ್ ಭಾಸ್ಕರ್ ಪ್ರಕಟಿಸಿದ ಸುದ್ದಿ ವರದಿಯೊಂದು ಲಭ್ಯವಾಗಿದೆ.

ಈ ಲೇಖನದ ಪ್ರಕಾರ, ಬಿಹಾರದ ಸರನ್‌ನಲ್ಲಿ ಈ ಘಟನೆ ಸಂಭವಿಸಿದ್ದು, ಆರು ಜನ ದುಷ್ಕರ್ಮಿಗಳು ಮಹಿಳೆಯೊಬ್ಬರ ಮೇಲೆ  ಲೈಂಗಿಕ ಕಿರುಕುಳ ನೀಡಿದ್ದಾರೆ. ಕೃತ್ಯದಲ್ಲಿ ಭಾಗಿಯಾದ 6 ಜನರನ್ನು ಪೊಲೀಸರು ಬಂದಿಸಿದ್ದಾರೆ ಎಂದು ಹಿಂದೂಸ್ತಾನ್ ಟೈಮ್ಸ್ ಮತ್ತು ನವಭಾರತ್ ಟೈಮ್ಸ್‌ ವರದಿ ಮಾಡಿದೆ. ವಾಸ್ತವವಾಗಿ ಈ ಘಟನೆ 3 ವರ್ಷಗಳ ಹಿಂದೆ ನಡಿದಿದೆ ಎಂಬುದು ಸ್ಪಷ್ಟವಾಗುತ್ತದೆ.

ಈ ವಿಡಿಯೋ 2021 ರಲ್ಲಿ ಬಿಹಾರದಲ್ಲಿ ನಡೆದ ಘಟನೆಯಿಂದ ಬಂದಿದೆ. ಬಿಹಾರದ ಸರನ್ ಜಿಲ್ಲೆಯಲ್ಲಿ ಮಹಿಳೆಯೊಬ್ಬರ ಮೇಲೆ ಕೆಲವರು ಹಲ್ಲೆ ನಡೆಸಿ ಕಿರುಕುಳ ನೀಡಿದ್ದಾರೆ. ಈ ಪ್ರಕರಣದಲ್ಲಿ ಪೊಲೀಸರು ದಾಖಲಿಸಿರುವ ಎಫ್ ಐಆರ್ ಪ್ರಕಾರ ಆರೋಪಿಗಳೆಲ್ಲರೂ ಹಿಂದೂಗಳು ಎಂದು ಉಲ್ಲೇಖಿಸಲಾಗಿದೆ.

ಬಿಹಾರದ ಸರನ್ ಜಿಲ್ಲೆಯಲ್ಲಿ ಮಹಿಳೆಯೊಬ್ಬರಿಗೆ ಕೆಲ ಪುರುಷರು ಕಿರುಕುಳ ನೀಡಿ ಹಲ್ಲೆ ನಡೆಸಿದ್ದಾರೆ. ಘಟನೆಯ ವಿಡಿಯೋ ವೈರಲ್ ಆದ ನಂತರ ಪೊಲೀಸರು ಪ್ರಕರಣ ದಾಖಲಿಸಿಕೊಂಡು ಹಲ್ಲೆಕೋರರನ್ನು ಬಂಧಿಸಿದ್ದಾರೆ. ದರಿಯಾಪುರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದ್ದು ಘಟನೆಗೆ ಸಂಬಂಧಿಸಿದಂತೆ ದಾಖಲಾದ ಎಫ್‌ಐಆರ್‌ನ ಪ್ರತಿಯನ್ನು  ಬಿಹಾರ ಪೊಲೀಸ್ ವೆಬ್‌ಸೈಟ್‌ನಲ್ಲಿ ಅಪ್‌ಲೋಡ್ ಮಾಡಿದ್ದಾರೆ, ಅದನ್ನು ನೀವು ಇಲ್ಲಿ ವೀಕ್ಷಿಸಬಹುದು. ಎಫ್‌ಐಆರ್‌ನ ಪ್ರಕಾರ, ಎಲ್ಲಾ ಆರೋಪಿಗಳು ಹಿಂದೂಗಳು ಮತ್ತು ಪೋಸ್ಟ್‌ನಲ್ಲಿ ಹೇಳಿರುವಂತೆ ಯಾರೊಬ್ಬರು ಮುಸ್ಲಿಮರಲ್ಲ ಎಂಬುದು ಸ್ಪಷ್ಟವಾಗಿದೆ.

ಒಟ್ಟಾರೆಯಾಗಿ ಹೇಳುವುದಾದರೆ, 2021ರಲ್ಲಿ ಬಿಹಾರದ ಸರನ್ ಜಿಲ್ಲೆಯಲ್ಲಿ ಮಹಿಳೆಯೊಬ್ಬರ ಮೇಲೆ ಹಿಂದೂ ಯುವಕರ ಗುಂಪು ಲೈಂಗಿಕ ದೌರ್ಜನ್ಯ ನಡಸಿ ಕಿರುಕುಳ ನೀಡಿತ್ತು. ಈ ಘಟನೆಯಲ್ಲಿ ಭಾಗಿಯಾದ ಯುವಕರು ಮುಸ್ಲಿಮರು ಎಂದು ಸುಳ್ಳು ಮತ್ತು ಕೋಮು ದ್ವೇಷದ ಹಿನ್ನಲೆಯಲ್ಲಿ ವಿಡಿಯೋವನ್ನು ಹಂಚಿಕೊಳ್ಳಲಾಗಿದೆ. ಹಾಗಾಗಿ ಪೋಸ್ಟ್‌ನಲ್ಲಿ ಮಾಡಿದ ಪ್ರತಿಪಾದನೆ ತಪ್ಪಾಗಿದೆ.

ನಿಮ್ಮ ಸುತ್ತಮುತ್ತ ಮತ್ತು ಸಾಮಾಜಿಕ ಜಾಲತಾಣಗಳಲ್ಲಿ ಯಾವುದೇ ಸುದ್ದಿಯು ಸುಳ್ಳು ಎಂದು ನಿಮಗೆ ಸಂದೇಹ ಬಂದಿದ್ದರೆ ಅದನ್ನು Ensuddi.com ವಾಟ್ಸಾಪ್  ನಂ 9108969301 ಗೆ ತಲುಪಿಸಿ. ನಾವು ಫ್ಯಾಕ್ಟ್‌ಚೆಕ್ ಮಾಡಿ ಸತ್ಯ ನಿಮ್ಮೆದುರು ಇಡುತ್ತೇವೆ


ಇದನ್ನು ಓದಿರಿ : FACT CHECK | ತಿಂಗಳಿಗೆ ಒಬ್ಬರಿಗೆ ರೂ 35 – 40 ಸಾವಿರ ಹಣ ನೀಡಿ ರೈತ ಹೋರಾಟಕ್ಕೆ ಕರೆತರಲಾಗಿದೆ ಎಂದು ಸಂಬಂಧವಿಲ್ಲದ ವಿಡಿಯೋ ಹಂಚಿಕೆ


 

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights