FACT CHECK | ಚುನಾವಣೆಯ ವೇಳೆ ಪ್ರಧಾನಿ ನೀಡುವ ಭರವಸೆಗಳಿಗೆ ಅರ್ಥವಿಲ್ಲ ಎಂದು ಹೇಳಿದ್ರಾ ಶಾ
ಬಿಜೆಪಿ ನಾಯಕ ಕೇಂದ್ರ ಗೃಹ ಸಚಿವ ಅಮಿತ್ ಶಾ, ಬಿಜೆಪಿಯ ಚುನಾವಣಾ ಭರವಸೆಗಳನ್ನ ಕುರಿತು ಮಾತುಗಳನ್ನ ಆಡಿದ್ಧಾರೆ ಎನ್ನಲಾಗಿದ 6 ಸೆಕೆಂಡ್‌ಗಳ ಈ ವಿಡಿಯೋ ವೈರಲ್ ಆಗಿದೆ. ಈ ವಿಡಿಯೋದಲ್ಲಿ ಅಮಿತ್ ಶಾ, ‘ಇದಕ್ಕಾಗೇ ನಾನು ಹೆಳೋದು ಗ್ಯಾರಂಟಿಗಳಿಗೆ ಅರ್ಥವಿಲ್ಲ. ಚುನಾವಣೆ ವೇಳೆ ಹೇಳುತ್ತಾರೆ, ನಂತರ ಮರೆಯುತ್ತಾರೆ’ ಎಂದು ವಿಡಿಯೋವೊಂದು ಪ್ರಸಾರವಾಗುತ್ತಿದೆ.
ಪ್ರಧಾನಿ ಮೋದಿಯವರ ಭರವಸೆಗಳು ಕೇವಲ ಚುನಾವಣಾ ಉದ್ದೇಶಕ್ಕಾಗಿ ಮತ್ತು ನಂತರ ಅವರು ನೀಡಿದ ಎಲ್ಲಾ ಭರವಸೆಗಳನ್ನು ಅವರು ಮರೆತುಬಿಡುತ್ತಾರೆ ಎಂದು ಅಮಿತ್ ಶಾ ಹೇಳಿದ್ದಾರೆ ಎಂದು ಪ್ರತಿಪಾದಿಸಿ ಸಾಮಾಜಿಕ ಮಾಧ್ಯಮಗಳ ಬಳಕೆದಾರರು ವಿಡಿಯೊವನ್ನು ಹಂಚಿಕೊಳ್ಳುತ್ತಿದ್ದಾರೆ. ಹಾಗಿದ್ದರೆ ಪೋಸ್ಟ್‌ನಲ್ಲಿ ಮಾಡಿದ ಪ್ರತಪಾದನೆ ನಿಜವೇ ಎಂದು ಪರಿಶೀಲಿಸೋಣ.
ಫ್ಯಾಕ್ಟ್‌ಚೆಕ್ :
ಸಾಮಾಜಿಕ ಮಾಧ್ಯಮಗಳಲ್ಲಿ ಹಂಚಿಕೊಳ್ಳಲಾದ ಪೋಸ್ಟ್‌ನಲ್ಲಿ ಮಾಡಿದ ಪ್ರತಿಪಾದಿಸಿದಂತೆ, ಬಿಜೆಪಿಯ ಅಗ್ರಗಣ್ಯ ನಾಯಕರಲ್ಲಿ ಒಬ್ಬರಾದ ಕೇಂದ್ರ ಗೃಹಸಚಿವ ಅಮಿತ್ ಶಾ 2024 ರ ಸಾರ್ವತ್ರಿಕ ಚುನಾವಣೆಯ ಸಂದರ್ಭದಲ್ಲಿ ತಮ್ಮ ನಾಯಕ ಮತ್ತು ಪಕ್ಷದ ವಿರುದ್ಧ ಇಂತಹ ಮಾತನಾಡುವ ಸಾಧ್ಯತೆ ತೀರಾ ಕಡಿಮೆ. ಹಾಗಾಗಿ ಇದರ ಕೀವರ್ಡ್‌ಗಳನ್ನು ಬಳಸಿಕೊಂಡು ಗೂಗಲ್ ಸರ್ಚ್ ಮಾಡಿದಾಗ, 15 ಮೇ 2024 ರಂದು ಝೀ ನ್ಯೂಸ್‌ಗೆ ಅಮಿತ್ ಶಾ ನೀಡಿದ ಸಂದರ್ಶನ ಲಭ್ಯವಾಗಿದೆ.
ಈ ಸಂದರ್ಶನದಲ್ಲಿ ಅಮಿತ್ ಶಾ ಯುಪಿಎ ಸರ್ಕಾರದ ವೈಫಲ್ಯ ಮತ್ತು ಆರ್ಟಿಕಲ್ 370 ಸೇರಿದಂತೆ ಪಾಕಿಸ್ತಾನ ಮತ್ತು ಜಮ್ಮು ಕಾಶ್ಮೀರ ಸಮಸ್ಯೆ ಬಗ್ಗೆ ಕಾಂಗ್ರೆಸ್ ಮೌನ ಅಪಾಯಕಾರಿ ಎಂದು ಹೇಳಿದ್ದರು. ಅಯೋಧ್ಯೆಯ ರಾಮಮಂದಿರದ ಪ್ರಾಣ ಪ್ರತಿಷ್ಠೆಯಲ್ಲಿ ಕಾಂಗ್ರೆಸ್ ಮತ್ತು ಇಂಡಿಯಾ ಮೈತ್ರಿಕೂಟ ಅಲ್ಪಸಂಖ್ಯಾತರ ಮತಗಳನ್ನು ಕಳೆದುಕೊಳ್ಳುವ ಭಯದಿಂದ ಭಾಗವಹಿಸುತ್ತಿಲ್ಲ ಎಂದು ಆರೋಪಿಸಿದರು.
ಈ ಸಂದರ್ಶನದ 24.40ನೇ ನಿಮಿಷದಲ್ಲಿ ಕಾಂಗ್ರೆಸ್ ಗ್ಯಾರಂಟಿಯನ್ನು ಚೀನಾ ಗ್ಯಾರಂಟಿ ಎಂದಿದ್ದ ಅಮಿತ್ ಶಾ ಹೇಳಿಕೆ ಕುರಿತಾಗಿ ಕೇಳಿದ ಪ್ರಶ್ನೆಗೆ ಪ್ರತಿಕ್ರಿಯೆ ನೀಡುವ ಅಮಿತ್ ಶಾ, ‘ಹೌದು.. ನಾನು ಚೀನಾ ಗ್ಯಾರಂಟಿ ಎಂದು ಹೇಳಿದ್ದೆ. ಅದು ಎಷ್ಟು ಬಾಳಿಕೆ ಬರುತ್ತೆ ಅನ್ನೋದ್ರ ಆಧಾರದ ಮೇಲೆ ನಾನು ಹಾಗೆ ಹೇಳಿದ್ದೆ. ನಾನು ತೆಲಂಗಾಣಕ್ಕೆ ಹೋಗಿದ್ದೆ. ಅಲ್ಲಿನ ಮಹಿಳೆಯರು ಇನ್ನೂ ಕೂಡಾ ಬಾಕಿ 12 ಸಾವಿರ ರೂ. ಹಣಕ್ಕಾಗಿ ಕಾಯುತ್ತಿದ್ದಾರೆ. ರೈತರೂ ಕೂಡಾ ಸಾಲ ಮನ್ನಾಗಾಗಿ ಕಾಯುತ್ತಿದ್ದಾರೆ. ಯುವತಿಯರು ಸ್ಕೂಟರ್‌ಗಾಗಿ ಕಾಯುತ್ತಿದ್ದಾರೆ. ಇವೆಲ್ಲವೂ ರಾಹುಲ್ ಗಾಂಧಿ ನೀಡಿದ್ದ ಭರವಸೆಗಳು, ಇದೀಗ ಎಲ್ಲರೂ ರಾಹುಲ್ ಗಾಂಧಿ ಅವರನ್ನು ಹುಡುಕುತ್ತಿದ್ದಾರೆ’ ಎಂದು ಅಮಿತ್ ಶಾ ಹೇಳುತ್ತಾರೆ.
ಈಗಾಗಲೇ ದಕ್ಷಿಣ ಭಾರತದಲ್ಲಿ ಚುನಾವಣೆ ಮುಗಿದಿದೆ. ರಾಹುಲ್ ಗಾಂಧಿ ಅವರು ಉತ್ತರ ಭಾರತದತ್ತ ಮರಳಿದ್ದಾರೆ. ಎಂದು ಹೇಳುವ ಅಮಿತ್ ಶಾ, ನಂತರದ 26:05ನೇ ನಿಮಿಷದಲ್ಲಿ ಆಡುವ ಮಾತುಗಳೇ ಇದೀಗ ವೈರಲ್ ಆಗಿದೆ. ‘ರಾಹುಲ್ ಗಾಂಧಿ ದಕ್ಷಿಣ ಭಾರತದಲ್ಲಿ ಇದ್ದಾಗ ಅವರು ಭರವಸೆಗಳನ್ನು ನೀಡಿದ್ದರು. ಹೀಗಾಗಿಯೇ ನಾನು ಈ ಗ್ಯಾರಂಟಿಗಳು ಅರ್ಥ ರಹಿತ ಎಂದು ಹೇಳಿದ್ದು. ಅವರು ಚುನಾವಣೆ ವೇಳೆ ಹೇಳುತ್ತಾರೆ, ನಂತರ ಮರೆತು ಬಿಡುತ್ತಾರೆ’ ಎಂದು ಅಮಿತ್ ಶಾ ಹೇಳುತ್ತಾರೆ.
ಒಟ್ಟಾರೆಯಾಗಿ ಹೇಳುವುದಾದರೆ, ಅಮಿತ್ ಶಾ ಅವರು ಕಾಂಗ್ರೆಸ್‌ನವರು ಚುನಾವಣೆ ಸಂದರ್ಭದಲ್ಲಿ ಸುಳ್ಳು ಭರವಸೆಗಳನ್ನು ನೀಡಿ ಬಳಿಕ ಮಾಯವಾಗುತ್ತಾರೆ ಭರವಸೆ ಈಡೇರಿಸುವುದಿಲ್ಲ ಎಂದು ಹೇಳುವುದನ್ನು ಎಡಿಟ್ ಮಾಡಿ ಪ್ರಧಾನಿ ಮೋದಿ ಅಥವಾ ಬಿಜೆಪಿ ಭರವಸೆಗಳನ್ನು ಈಡೇರಿಸುವುದಿಲ್ಲ ಎಂದು ಹೇಳಿದ್ದರೆಂದು ತಪ್ಪಾಗಿ ಹಂಚಿಕೊಳ್ಳಲಾಗಿದೆ. ಹಾಗಾಗಿ ಪೋಸ್ಟ್‌ನಲ್ಲಿ ಮಾಡಿದ ಪ್ರತಿಪಾದನೆ ತಪ್ಪಾಗಿದೆ.
ನಿಮ್ಮ ಸುತ್ತಮುತ್ತ ಮತ್ತು ಸಾಮಾಜಿಕ ಜಾಲತಾಣಗಳಲ್ಲಿ ಯಾವುದೇ ಸುದ್ದಿಯು ಸುಳ್ಳು ಎಂದು ನಿಮಗೆ ಸಂದೇಹ ಬಂದಿದ್ದರೆ ಅದನ್ನು Ensuddi.com ವಾಟ್ಸಾಪ್ ನಂ 9108969301 ಗೆ ತಲುಪಿಸಿ. ನಾವು ಫ್ಯಾಕ್ಟ್‌ಚೆಕ್ ಮಾಡಿ ಸತ್ಯ ನಿಮ್ಮೆದುರು ಇಡುತ್ತೇವೆ
ಇದನ್ನು ಓದಿರಿ : FACT CHECK | ಪ್ರಧಾನಿ ಮೋದಿ ಪ್ರತಿನಿಧಿಸುವ ವಾರಣಾಸಿಯ ಮೆಟ್ರೋ ರೈಲು ಮಾರ್ಗ ನಿಜವಾಗಿಯೂ ಹೀಗಿದೆಯೇ?

