FACT CHECK | ಪ್ರಧಾನಿ ಮೋದಿ ಪ್ರತಿನಿಧಿಸುವ ವಾರಣಾಸಿಯ ಮೆಟ್ರೋ ರೈಲು ಮಾರ್ಗ ನಿಜವಾಗಿಯೂ ಹೀಗಿದೆಯೇ?
ಪ್ರಧಾನಿ ಮೋದಿ ಪ್ರತಿನಿಧಿಸುವ ಲೋಕಸಭಾ ಕ್ಷೇತ್ರವಾದ ವಾರಣಾಸಿಯ ಮೆಟ್ರೋದ ದೃಶ್ಯಗಳು ಎಂದು ಪ್ರತಿಪಾದಿಸಿ ಸಾಮಾಜಿಕ ಮಾಧ್ಯಮಗಳಲ್ಲಿ ಪೋಸ್ಟ್‌ಅನ್ನು ಹಂಚಿಕೊಳ್ಳಲಾಗುತ್ತಿದೆ.
‘ಸಲೀಂ ಅಹಮದ್’ ಎಂಬ ಫೇಸ್‌ಬುಕ್ ಬಳಕೆದಾರರು ಮೇ 15, 2024 ರಂದು “ಅಪ್ನಾ ಬನಾರಸ್ ಧನ್ಯವಾದಗಳು ಮೋದಿ ಜೀ” ಎಂಬ ಶೀರ್ಷಿಕೆಯೊಂದಿಗೆ ಚಿತ್ರವನ್ನು ಪೋಸ್ಟ್ ಮಾಡಿದ್ದಾರೆ (ಆರ್ಕೈವ್ ಲಿಂಕ್). ವೈರಲ್ ಚಿತ್ರಕ್ಕೆ ‘ಗದೌಲಿಯಾ-ಸೋನಾರ್‌ಪುರ್’ ಎಂಬ ಒಕ್ಕಣೆಯನ್ನು ನೀಡಲಾಗಿದೆ. ಹಾಗಿದ್ದರೆ ಈ ದೃಶ್ಯಗಳು ನಿಜವಾಗಿಯೂ ಪ್ರಧಾನಿ ಮೋದಿ ಪ್ರತಿನಿಧಿಸುವ ವಾರಣಾಸಿ ಲೋಕಸಭಾ ಕ್ಷೇತ್ರಕ್ಕೆ ಸಂಬಂಧಿಸಿದೆಯೆ ಎಂದು ಪರಿಶೀಲಿಸೋಣ.
ಫ್ಯಾಕ್ಟ್‌ಚೆಕ್ :
ಈ ಮೆಟ್ರೋ ರೈಲಿನ ಚಿತ್ರ ಯಾವ ದೇಶಕ್ಕೆ ಸಂಬಂಧಿಸಿದ್ದು ಎಂದು ತಿಳಿಯಲು ನಾವು ಗೂಗಲ್ ರಿವರ್ಸ್ ಇಮೇಜ್ ನಲ್ಲಿ ಹುಡುಕಿದಾಗ ವೈರಲ್ ಚಿತ್ರವನ್ನು ಒಳಗೊಂಡ ಅನೇಕ ಮೆಟ್ರೋ ಚಿತ್ರಗಳು ಲಭ್ಯವಾಗಿದೆ. ಫೇಸ್‌ಬುಕ್ ಪುಟ ‘ಎಥಿಯೋಕಾರ್ಮಾರ್ಕೆಟ್‘ ಈ ಚಿತ್ರವನ್ನು ಆಗಸ್ಟ್ 25, 2019 ರಂದು ಪೋಸ್ಟ್ ಮಾಡಿದ್ದು, ಇದು ಜರ್ಮನಿಯದು ಎಂದು ಹೇಳುತ್ತದೆ (ವೆಬ್‌ಸೈಟ್ ಲಿಂಕ್).
ಪ್ರಧಾನಿ ಮೋದಿ ಪ್ರತಿನಿಧಿಸುವ ವಾರಣಾಸಿ ಲೋಕಸಭಾ ಕ್ಷೇತ್ರದ ಮೆಟ್ರೋದ ದೃಶ್ಯಗಳ ಸತ್ಯಾಸತ್ಯತೆಯನ್ನು ಪರಿಶೀಲಿಸಿದಾಗ, ವೈರಲ್ ಪೋಸ್ಟ್ ನಕಲಿ ಎಂದು ಕಂಡುಬಂದಿದೆ. ಜರ್ಮನಿಯ ಹಳೆಯ ಚಿತ್ರವನ್ನು ವಾರಣಾಸಿಯ ಚಿತ್ರ ಎಂದು ಸಾಮಾಜಿಕ ಜಾಲತಾಣಗಳಲ್ಲಿ ಸುಳ್ಳು ಪ್ರಚಾರ ಮಾಡಲಾಗುತ್ತಿದೆ. ಈ ಚಿತ್ರಕ್ಕೂ ವಾರಣಾಸಿಗೂ ಯಾವುದೇ ಸಂಬಂಧವಿಲ್ಲ.
ಹುಡುಕಾಟದ ಸಮಯದಲ್ಲಿ, ಮೇ 2, 2015 ರಂದು ಅಪ್‌ಲೋಡ್ ಮಾಡಲಾದ ವೆಬ್‌ಸೈಟ್‌ನಲ್ಲಿ ಈ ಚಿತ್ರ ಲಭ್ಯವಾಗಿದೆ. ವೈರಲ್ ಚಿತ್ರದಲ್ಲಿರುವ ರೈಲು ಜರ್ಮನಿಯ ವೂಪರ್ಟಲ್‌ನಲ್ಲಿರುವ ಸಸ್ಪೆನ್ಶನ್ ರೈಲ್ವೆ(suspension railway)ಯ ವೀಡಿಯೊದಲ್ಲಿ ಕಂಡುಬಂದಿದೆ.
ವಾರಣಾಸಿಯಲ್ಲಿ ಈ ರೀತಿಯ ಮೆಟ್ರೋ ರೈಲಿನ ವ್ಯವಸ್ಥೆ ಇರುವ ಕುರಿತು ನಾವು ಸಾಕಷ್ಟು ಹುಡುಕಾಟ ನಡೆಸಿದಾಗ, ವೈರಲ್ ಚಿತ್ರವನ್ನು ಹೋಲುವಂತಹ ಸಸ್ಪೆನ್ಶನ್ ರೈಲಿನ ವ್ಯವಸ್ಥೆ ವಾರಣಾಸಿಯಲ್ಲಿ ಇಲ್ಲ. ಆದ್ದರಿಂದ ಜರ್ಮನಿಯ ಸಸ್ಪೆನ್ಶನ್ ರೈಲು ಮಾರ್ಗದ ಚಿತ್ರ ವಾರಣಾಸಿಯದ್ದು ಎಂದು ಕೆಲವರು ಸುಳ್ಳು ಪೋಸ್ಟ್‌ಅನ್ನು ಸಾಮಾಜಿಕ ಮಾಧ್ಯಮಗಳಲ್ಲಿ ಹಂಚಿಕೊಂಡಿರುವುದು ಸ್ಪಷ್ಟವಾಗುತ್ತದೆ.
ಒಟ್ಟಾರೆಯಾಗಿ ಹೇಳುವುದಾದರೆ, ಹೈಟೆಕ್ ಮೆಟ್ರೋ ಚಿತ್ರ ಪ್ರಧಾನಿ ನರೇಂದ್ರ ಮೋದಿ ಪ್ರತಿನಿಧಿಸುವ ಲೋಕಸಭಾ ಕ್ಷೇತ್ರವಾದ ವಾರಣಾಸಿಯದು” ವಾರಣಾಸಿಯ ಅಭಿವೃದ್ಧಿಯನ್ನು ಪ್ರತಿನಿಧಿಸುತ್ತದೆ ಎಂಬ ಸುಳ್ಳು ಹೇಳಿಕೆಗಳೊಂದಿಗೆ ಚಿತ್ರವನ್ನು ವ್ಯಾಪಕವಾಗಿ ಹಂಚಿಕೊಳ್ಳಲಾಗಿದೆ. ವಾಸ್ತವವಾಗಿ ವೈರಲ್ ಚಿತ್ರದಲ್ಲಿ ಕಂಡುಬರುವ ರೈಲು ಮೂಲ ಜರ್ಮನಿಯದ್ದು. ಹಾಗಾಗಿ ಪೋಸ್ಟ್‌ನಲ್ಲಿ ಮಾಡಿದ ಪ್ರತಿಪಾದನೆ ತಪ್ಪಾಗಿದೆ.
ಇತ್ತೀಚೆಗಷ್ಟೇ “ಯುಪಿಎ ಸರ್ಕಾರದಲ್ಲಿ ಕೇವಲ ಮೂರ್ನಾಲ್ಕು ನಗರಗಳಲ್ಲಿ ಮೆಟ್ರೋ ವ್ಯವಸ್ಥೆ ಇತ್ತು ಮೋದಿ ಪ್ರಧಾನಿಯಾದ ನಂತರ ಈಗ 20 ನಗರಗಳಲ್ಲಿ ಮೆಟ್ರೋ ಕಾರ್ಯನಿರ್ವಹಿಸುತ್ತಿದೆ” ಎಂದು ಬಿಜೆಪಿ ಹಂಚಿಕೊಂಡಿರುವ ಪೋಸ್ಟರ್ ಒಂದರಲ್ಲಿ ಸಿಂಗಾಪುರ್‌ನ ಮೆಟ್ರೋ ಚಿತ್ರವನ್ನು ಬಳಸಿಕೊಂಡು ಸಿಕ್ಕಿಬಿದ್ದಿತ್ತು.
ನಿಮ್ಮ ಸುತ್ತಮುತ್ತ ಮತ್ತು ಸಾಮಾಜಿಕ ಜಾಲತಾಣಗಳಲ್ಲಿ ಯಾವುದೇ ಸುದ್ದಿಯು ಸುಳ್ಳು ಎಂದು ನಿಮಗೆ ಸಂದೇಹ ಬಂದಿದ್ದರೆ ಅದನ್ನು Ensuddi.com ವಾಟ್ಸಾಪ್ ನಂ 9108969301 ಗೆ ತಲುಪಿಸಿ. ನಾವು ಫ್ಯಾಕ್ಟ್‌ಚೆಕ್ ಮಾಡಿ ಸತ್ಯ ನಿಮ್ಮೆದುರು ಇಡುತ್ತೇವೆ
ಇದನ್ನು ಓದಿರಿ : FACT CHECK | ಲಿಂಗಾಯತರ ಹೆಸರಿನಲ್ಲಿ ಚರ್ಚ್‌ವೊಂದನ್ನು ಸ್ಥಾಪಿಸಿಲಾಗಿದೆಯೇ? ಈ ಸ್ಟೋರಿ ಓದಿ