FACT CHECK | ಪಂಜಾಬ್‌ನಲ್ಲಿ ಪೊಲೀಸ್ ಅಧಿಕಾರಿಯೊಬ್ಬರು ಮಹಿಳೆಯೊಬ್ಬರಿಗೆ ಕಪಾಳಮೋಕ್ಷ ಮಾಡುವ ವಿಡಿಯೋವನ್ನು ಉತ್ತರ ಪ್ರದೇಶದ್ದು ಎಂದು ತಪ್ಪಾಗಿ ಹಂಚಿಕೆ

ಆಶಿಶ್ ತಿವಾರಿ ಎಂಬ ಐಪಿಎಸ್ ಅಧಿಕಾರಿ ಉತ್ತರ ಪ್ರದೇಶದಲ್ಲಿ ಮಹಿಳೆಯೊಬ್ಬರ ಮೇಲೆ ಹಲ್ಲೆ ನಡೆಸುತ್ತಿರುವ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದೆ. ಸಾಮಾಜಿಕ ಮಾಧ್ಯಮ ಬಳಕೆದಾರರು ಉತ್ತರ ಪ್ರದೇಶ ಸರ್ಕಾರ ಮತ್ತು ಪ್ರಧಾನಿ ಮೋದಿಯನ್ನು ಟೀಕಿಸಿ ಈ ವೀಡಿಯೊವನ್ನು ಹಂಚಿಕೊಳ್ಳುತ್ತಿದ್ದಾರೆ.

ಉತ್ತರಪ್ರದೇಶದ ಐಪಿಎಸ್ ಅಧಿಕಾರಿ ಆಶಿಶ್ ತಿವಾರಿ ಮಹಿಳೆಯೊಬ್ಬರ ಮೇಲೆ ಹಲ್ಲೆ ನಡೆಸುತ್ತಿರುವುದನ್ನು ವೀಡಿಯೊ ಎಂದು ಪ್ರತಿಪಾದಿಸಿ ಹಂಚಿಕೊಳ್ಳಲಾಗುತ್ತಿರುವ ವಿಡಿಯೋದ ಸತ್ಯಾಸತ್ಯೆಯನ್ನು ಪರಿಶೀಲಿಸೋಣ.

ಫ್ಯಾಕ್ಟ್‌ಚೆಕ್ :

ಸಾಮಾಜಿಕ ಮಾಧ್ಯಮಗಳಲ್ಲಿ ಹಂಚಿಕೊಳ್ಳಲಾದ ಪೋಸ್ಟ್‌ನಲ್ಲಿ ಮಾಡಿದ ಪ್ರತಿಪಾದನೆಯನ್ನು ಪರಿಶೀಲಿಸಲು ಗೂಗಲ್ ರಿವರ್ಸ್ ಇಮೇಜಸ್‌ನಲ್ಲಿ ಸರ್ಚ್ ಮಾಡಿದಾಗ, ವಿಡಿಯೋದಲ್ಲಿ ಕಾಣಿಸಿಕೊಂಡಿರುವ ವ್ಯಕ್ತಿ ಯುಪಿ ಪೊಲೀಸ್ ಐಪಿಎಸ್ ಅಧಿಕಾರಿ ಆಶಿಶ್ ತಿವಾರಿ ಅಲ್ಲ ಬದಲಿಗೆ ಪಂಜಾಬ್ ಪೊಲೀಸ್ ಆಶಿಶ್ ಕಪೂರ್ ಎಂಬ ಮಾಹಿತಿ ಲಭ್ಯವಾಗಿದೆ.


ಲಭ್ಯವಾದ  ವರದಿಗಳ ಪ್ರಕಾರ (ಇಲ್ಲಿ ಮತ್ತು ಇಲ್ಲಿ), ಮಹಿಳೆಗೆ ಕಪಾಳಮೋಕ್ಷ ಮಾಡಿದ ವ್ಯಕ್ತಿ ಪಂಜಾಬ್‌ನ ಅಮಾನತುಗೊಂಡ ಎಐಜಿ ಆಶಿಶ್ ಕಪೂರ್ ಎಂದು ಉಲ್ಲೇಖಿಸಲಾಗಿದೆ. ಸಾಮಾಜಿಕ ಮಾಧ್ಯಮಗಳಲ್ಲಿ ಪ್ರಸಾರವಾಗುತ್ತಿರುವ ಘಟನೆ 2018ರಲ್ಲಿ ನಡೆದಿತ್ತು ಎಂದು ವರದಿಯಾಗಿದೆ. ಆದರೆ ಈ ವಿಡಿಯೋ 2023ರಲ್ಲಿ  ಮಹಿಳಾ ವಕೀಲರ ಮೇಲೆ ಕಪಾಳಮೋಕ್ಷ ಮಾಡಿದ್ದ ಈ ದೃಶ್ಯಗಳನ್ನು ನ್ಯಾಯಾಲಯದ ವಿಚಾರಣೆಯ ಸಮಯದಲ್ಲಿ ಅದನ್ನು ಹೈಕೋರ್ಟ್ ನ್ಯಾಯಾಧೀಶರಿಗೆ ಸಾಕ್ಷಿಯಾಗಿ ತೋರಿಸಲಾಗಿತ್ತು.

ಆಶಿಶ್ ಕಪೂರ್ ಪಂಜಾಬ್‌ನ ಜಿರಾಕ್‌ಪುರ ಪೊಲೀಸ್ ಠಾಣೆಯಲ್ಲಿ ಪೂನಂ ರಾಜನ್ ಎಂಬ ಮಹಿಳೆಗೆ ಕಪಾಳಮೋಕ್ಷ ಮಾಡಿದ್ದಾನೆ. ಸುದ್ದಿ ವರದಿಗಳ ಪ್ರಕಾರ, ಅಶಿಶ್ ಕಪೂರ್ ಲಂಚ ಸ್ವೀಕರಿಸಿದ ಆರೋಪ ಹೊತ್ತಿದ್ದರು. ಮಹಿಳೆಯಿಂದ ಒಂದು ಕೋಟಿ ರೂಗೆ ಲಂಚದ ಬೇಡಿಕೆ ಇಟ್ಟಿದ್ದರು ಎನ್ನಲಾಗಿದೆ. ನಂತರ ಪಂಜಾಬ್ ಪೋಲೀಸರಿಂದ ಆತನ ಮೇಲೆ (ಇಲ್ಲಿ ಮತ್ತು ಇಲ್ಲಿ) ‘ಹಲ್ಲೆ ಮತ್ತು ನಿಂದನೆ’ಗಾಗಿ ಪ್ರಕರಣ ದಾಖಲಿಸಲಾಯಿತು.

ಉತ್ತರ ಪ್ರದೇಶ ಪೊಲೀಸರು ತಮ್ಮ ಅಧಿಕೃತ ‘ಎಕ್ಸ್’ ಹ್ಯಾಂಡಲ್ ಮೂಲಕ ಸ್ಪಷ್ಟೀಕರಣವನ್ನೂ ನೀಡಿದ್ದು. ಬಳಕೆದಾರರ ಪ್ರಶ್ನೆಗೆ ಪ್ರತಿಕ್ರಿಯಿಸಿದ ಅವರು, ‘ಈ ವಿಡಿಯೋ ಉತ್ತರ ಪ್ರದೇಶದದ್ದಲ್ಲ, ಪಂಜಾಬ್‌ನ ಮೊಹಾಲಿಯ ಜಿರಾಕ್‌ಪುರ ಪೊಲೀಸ್ ಠಾಣೆ 2018 ರಲ್ಲಿ ನಡೆದ ಘಟನೆಗೆ ಸಂಬಂಧಿಸಿದೆ’ ಎಂದು ಹೇಳಿದ್ದರು.

ಇನ್ನು ಪೋಸ್ಟ್‌ನಲ್ಲಿ ಪ್ರಸ್ತಾಪಿಸಿರುವ ಉತ್ತರಪ್ರದೇಶದ ಅಯೋಧ್ಯಯಲ್ಲಿ ನಡೆದಿದೆ ಎನ್ನಲಾದ ಘಟನೆಗೆ ಸಂಬಂಧಿಸಿದಂತೆ, ಶ್ರದ್ಧಾ ಗುಪ್ತಾ ಎಂಬ ಮಹಿಳೆ ಆತ್ಮಹತ್ಯೆ ಮಾಡಿಕೊಳ್ಳುವ ವೇಳೆ ಪೊಲೀಸ್‌ ಅಧಿಕಾರಿಗಳ ಹೆಸರನ್ನು ಡೆತ್‌ ನೊಟ್‌ನಲ್ಲಿ ಬರೆಯಲಾಗಿದೆ. ಎಂಬ ಮಾಹಿತಿ ಲಭ್ಯವಾಗಿದೆ. (ಇಲ್ಲಿ ಮತ್ತು ಇಲ್ಲಿ). ಶ್ರದ್ಧಾ ತಮ್ಮ ಆತ್ಮಹತ್ಯೆ ಪತ್ರದಲ್ಲಿ ಐಪಿಎಸ್ ಅಧಿಕಾರಿ ಆಶಿಶ್ ತಿವಾರಿ ಮತ್ತು ಇತರ ಇಬ್ಬರ ಹೆಸರಿಸಿದ್ದಾರೆ. ಆದರೆ, ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಆಶಿಶ್ ತಿವಾರಿ ಮಹಿಳೆಯೊಬ್ಬರ ಮೇಲೆ ಹಲ್ಲೆ ನಡೆಸಿದ ಸುದ್ದಿ ವರದಿಗಳು ಲಭ್ಯವಾಗಿಲ್ಲ.

ಒಟ್ಟಾರೆಯಾಗಿ ಹೇಳುವುದಾದರೆ, ಪಂಜಾಬ್‌ನ ಪೊಲೀಸ್ ಅಧಿಕಾರಿಯೊಬ್ಬರು ಪೊಲೀಸ್ ಕಸ್ಟಡಿಯಲ್ಲಿರುವ ಮಹಿಳೆಯ ಮೇಲೆ ಹಲ್ಲೆ ಮಾಡುವ ದೃಶ್ಯಗಳನ್ನು, ಉತ್ತರ ಪ್ರದೇಶದ ಐಪಿಎಸ್ ಅಧಿಕಾರಿಯೊಬ್ಬರು ಮಹಿಳೆಯ ಮೇಲೆ ಹಲ್ಲೆ ಮಾಡುವ ದೃಶ್ಯಗಳನ್ನು ಎಂದು ತಪ್ಪಾಗಿ ಹಂಚಿಕೊಳ್ಳಲಾಗಿದೆ. ಹಾಗಾಗಿ ಪೋಸ್ಟ್‌ನಲ್ಲಿ ಮಾಡಿದ ಪ್ರತಿಪಾದನೆ ತಪ್ಪಾಗಿದೆ.

ನಿಮ್ಮ ಸುತ್ತಮುತ್ತ ಮತ್ತು  ಸಾಮಾಜಿಕ ಜಾಲತಾಣಗಳಲ್ಲಿ ಯಾವುದೇ ಸುದ್ದಿಯು ಸುಳ್ಳು ಎಂದು ನಿಮಗೆ ಸಂದೇಹ ಬಂದಿದ್ದರೆ ಅದನ್ನು Ensuddi.com ವಾಟ್ಸಾಪ್  ನಂ 9108969301 ಗೆ ತಲುಪಿಸಿ. ನಾವು ಫ್ಯಾಕ್ಟ್‌ಚೆಕ್ ಮಾಡಿ ಸತ್ಯ ನಿಮ್ಮೆದುರು ಇಡುತ್ತೇವೆ


ಇದನ್ನು ಓದಿರಿ : FACT CHECK | ರಾಷ್ಟ್ರಪತಿ ಭವನದಲ್ಲಿ ಪ್ರಮಾಣ ವಚನ ಸ್ವೀಕರಿಸುವ ವೇಳೆ ನಿಗೂಢ ಪ್ರಾಣಿ ಕಾಣಿಸಿಕೊಂಡಿದ್ದು ನಿಜವೇ?


 

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights