FACT CHECK | ಮಧ್ಯರಾತ್ರಿಯಿಂದಲೇ ಬ್ಯಾನ್ ಆಗಲಿದೆಯೇ ರೂ 200 ಮುಖಬೆಲೆಯ ನೋಟುಗಳು?

2016 ರ ನವೆಂಬರ್ 8 ರಂದು ಪ್ರಧಾನಿ ನರೇಂದ್ರ ಮೋದಿ ಅವರು ಹಳೆಯ 1,000 ಮತ್ತು 500 ರೂಪಾಯಿಗಳ ನೋಟುಗಳ ಅಮಾನ್ಯೀಕರಣವನ್ನು ಘೋಷಿಸಿದರು. ಭಯೋತ್ಪಾದಕ ನಿಧಿಯನ್ನು ನಿರ್ಮೂಲನೆ ಮಾಡುವುದರ ಜೊತೆಗೆ ಡಿಜಿಟಲ್ ಪಾವತಿಗಳನ್ನು ಉತ್ತೇಜಿಸುವುದು ಮತ್ತು ಕಪ್ಪುಹಣವನ್ನು ತಡೆಯುವುದು ಈ ನಿರ್ಧಾರದ ಹಿಂದಿನ ಪ್ರಮುಖ ಉದ್ದೇಶಗಳಾಗಿದ್ದವು ಎಂದು ಹೇಳಲಾಗಿತ್ತು. ಆದರೆ ಆ ಉದ್ದೇಶಗಳು ಎಷ್ಟರ ಮಟ್ಟಿಗೆ ಈಡೇರಿವೆ ಎಂಬುದು ಬೇರೆ ವಿಚಾರ. ಈಗ ಮತ್ತೆ ರೂ 200 ಮುಖಬೆಲೆಯ ನೋಟುಗಳನ್ನು ಬ್ಯಾನ್ ಮಾಡಲಾಗುತ್ತಿದೆ ಎಂಬ ಸುದ್ದಿ ಸಾಮಾಜಿಕ ಮಾಧ್ಯಮಗಳಲ್ಲಿ ಪ್ರಸಾರವಾಗುತ್ತಿದೆ.

“ಇಂದು ಮಧ್ಯರಾತ್ರಿಯಿಂದಲೇ 200ರೂ ನೋಟು ಬ್ಯಾನ್‌ ಆಗಲಿದೆ. ಈ ಕೂಡಲೇ ಈ ಸಂದೇಶವನ್ನು ನಿಮ್ಮ ಗೆಳೆಯರೊಂದಿಗೆ ಹಂಚಿಕೊಳ್ಳಿ, ಒಂದು ವೇಳೆ ಈ ಮಾಹಿತಿ ನಿಮಗೆ ತಡವಾಗಿ ತಲುಪಿದ್ದರೆ ಏನು ಮಾಡಲು ಸಾಧ್ಯವಿಲ್ಲ” ಎಂಬ ಹೇಳಿಕೆಯೊಂದಿಗೆ ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್‌ವೊಂದು ವೈರಲ್‌ ಆಗಿದೆ. ಈ ಪೋಸ್ಟ್‌ನಲ್ಲಿ ಈ ಹಿಂದೆ 500 ರೂ ನೋಟ್‌ ಬಂದ್‌ ಆಗಲಿದೆ ಎಂಬ ಸಂದೇಶ ಹರಡಿದ ರೀತಿಯಲ್ಲೇ, ಟಿಪ್ಪಣಿಯನ್ನು ಬರೆಯಲಾಗಿದ್ದು, ಇದು ಸಾರ್ವಜನಿಕರನ್ನು ಒಮ್ಮೆ ಗೊಂದಲಕ್ಕೆ ಕೂಡ ಒಳಪಡಿಸಿದೆ.

ಇನ್ನೂ ಹಲವರು ಇದನ್ನು ಮನೋರಂಜನೆಗಾಗಿ ಹಂಚಿಕೊಳ್ಳುತ್ತಿದ್ದು, ಸಾಕಷ್ಟು ಮಂದಿ ಇದಕ್ಕೆ ವಿವಿಧ ರೀತಿಯಾದ ಕಮೆಂಟ್‌ಗಳನ್ನು ಮಾಡುತ್ತಿದ್ದಾರೆ. ಹಲವರು ಇದೊಂದು ಸುಳ್ಳು ಮಾಹಿತಿ ಎಂದು ಕಮೆಂಟ್‌ ಮಾಡುತ್ತಿದ್ದರೆ. ಇನ್ನೂ ಕೆಲವರು ಆದಷ್ಟು ಬೇಗ 200ರೂ ನೋಟು ಬ್ಯಾನ್‌ ಮಾಡಲಾಗುತ್ತದೆ. ಇತ್ತೀಚೆಗೆ ಅದರ ಬಳಕೆ ಕಡಿಮೆಯಾಗಿದೆ ಎಂಬ ವಾದವನ್ನು ಮುಂದಿಟ್ಟಿದ್ದಾರೆ. ಹೀಗೆ ವ್ಯಾಪಕವಾಗಿ ಹಂಚಿಕೊಳ್ಳಲಾಗುತ್ತಿರುವ ಪೋಸ್ಟ್‌ನಲ್ಲಿ ಮಾಡಿದ ಪ್ರತಿಪಾದನೆಯನ್ನು ಪರಿಶೀಲಿಸೋಣ.

ಫ್ಯಾಕ್ಟ್‌ಚೆಕ್‌ :

ಸಾಮಾಜಿಕ ಮಾಧ್ಯಮಗಳಲ್ಲಿ ಹಂಚಿಕೊಳ್ಳಲಾಗುತ್ತಿರುವಂತೆ ರೂ 200 ಮುಖಬೆಲೆಯ ನೋಟನ್ನು ಕೇಂದ್ರ ಸರ್ಕಾರ ಬ್ಯಾನ್‌ ಮಾಡಲಿದೆಯೇ ಎಂದು ಪರಿಶೀಲಿಸಲು ಕೀ ವರ್ಡ್‌ಗಳನ್ನು ಬಳಸಿ ಗೂಗಲ್ ಸರ್ಚ್ ಮಾಡಿದಾಗ, ಅಂತಹ ಯಾವುದೇ ಅಧಿಕೃತ ಪ್ರಕಟೆಗಳನ್ನು ಆರ್‌ಬಿಐ ಆಗಲಿ ಸರ್ಕಾರವಾಗಲಿ ಹೊರಡಿಸಿರುವ ಮಾಹಿತಿ ಲಭ್ಯವಾಗಿಲ್ಲ. ಒಂದು ವೇಳೆ ಈ ಘಟನೆ ನಿಜವೇ ಆಗಿದ್ದರೆ ಆ ಕುರಿತು ವರದಿಗಳು ಪ್ರಕಟವಾಗಬೇಕಿತ್ತು. ಆದರೆ ಇದುವರೆಗೂ ಆ ರೀತಿಯಾದ ಯಾವುದೇ ವರದಿಗಳು ಕಂಡು ಬಂದಿಲ್ಲ.

ಈ ಕುರಿತು ಇನ್ನಷ್ಟು ಪರಿಶೀಲನೆ ನಡೆಸಲು ಭಾರತೀಯ ರಿಸರ್ವ್ ಬ್ಯಾಂಕ್ (RBI) ಅಧಿಕೃತ ವೆಬ್‌ಸೈಟ್ ಅನ್ನು ಪರಿಶೀಲಿಸಲಾಯಿತು. ಇಲ್ಲಿಯೂ ಕೂಡ 200ರೂ ನೋಟ್‌ ಅನ್ನು ನಿಷೇಧಿಸುವ ಕುರಿತು ಯಾವುದೇ ಅಧಿಕೃತ ಆದೇಶಗಳು ಕಂಡು ಬಂದಿಲ್ಲ. ಹೆಚ್ಚಿನ ಮಾಹಿತಿಗಾಗಿ ವೆಬ್‌ಸೈಟ್‌ನಲ್ಲಿ ವಿವಿಧ ಪ್ರಕಟಣೆಗಳನ್ನು ಪರಿಶೀಲಿಸಿದಾಗ ಅಲ್ಲಿಯೂ ಈ ಕುರಿತು ಯಾವುದೇ  ಸುಳಿವು ಸಿಕ್ಕಿಲ್ಲ. ಹಾಗಾಗಿ ವೈರಲ್‌ ವಿಡಿಯೋದಲ್ಲಿ ಹೇಳಲಾದಂತೆ 200 ರೂ ನೋಟು ಬ್ಯಾನ್‌ ಆಗಲಿದೆ ಎಂಬುದಕ್ಕೆ ಯಾವುದೇ ಪುರಾವೆಗಳು ಇಲ್ಲ.

ಒಟ್ಟಾರೆಯಾಗಿ ಹೇಳುವುದಾದರೆ, ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಂತೆ ಮಧ್ಯರಾತ್ರಿಯಿಂದಲೇ 200ರೂ ಮುಖಬೆಲೆಯ ನೋಟು ಬ್ಯಾನ್‌ ಆಗಲಿದೆ ಎಂಬುದು ಸುಳ್ಳು. ಈ ಕುರಿತು ಯಾವುದೇ ಮಾಧ್ಯಮಗಳು ಅಧಿಕೃತ ವರದಿಗಳನ್ನು ಮಾಡಿಲ್ಲ, ಕೇಂದ್ರ ಸರ್ಕಾರದ ಆದೇಶಗಳು ಕಂಡು ಬಂದಿಲ್ಲ, ಹಾಗೂ RBI ನ ಅಧಿಕೃತ ವೆಬ್‌ಸೈಟ್‌ನಲ್ಲಿ ಕೂಡ ಈ ಬಗ್ಗೆ ಪ್ರಕಟಣೆಗಳು ಇಲ್ಲ ಹಾಗಾಗಿ ಪೋಸ್ಟ್‌ನಲ್ಲಿ ಮಾಡಿದ ಪ್ರತಿಪಾದನೆ ತಪ್ಪಾಗಿದೆ.

ನಿಮ್ಮ ಸುತ್ತಮುತ್ತ ಮತ್ತು  ಸಾಮಾಜಿಕ ಜಾಲತಾಣಗಳಲ್ಲಿ ಯಾವುದೇ ಸುದ್ದಿಯು ಸುಳ್ಳು ಎಂದು ನಿಮಗೆ ಸಂದೇಹ ಬಂದಿದ್ದರೆ ಅದನ್ನು Ensuddi.com ವಾಟ್ಸಾಪ್  ನಂ 9108969301 ಗೆ  ತಲುಪಿಸಿ. ನಾವು ಫ್ಯಾಕ್ಟ್‌ಚೆಕ್ ಮಾಡಿ ಸತ್ಯ ನಿಮ್ಮೆದುರು ಇಡುತ್ತೇವೆ


ಇದನ್ನು ಓದಿರಿ : FACT CHECK | ನಾನು ಭಾರತದ ಹಿಂದೂಗಳ ದೊಡ್ಡ ಅಭಿಮಾನಿ ಎಂದು ಹೇಳಿದ್ರಾ ಡೋನಾಲ್ಡ್‌ ಟ್ರಂಪ್‌?


 

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights