FACT CHECK | ಪತ್ರಕರ್ತರ ಪ್ರಶ್ನೆಗೆ ಹೆದರಿ ಓಡಿ ಹೋದ್ರಾ ಮಾಜಿ ಮುಖ್ಯಮಂತ್ರಿ ?

ಸಮಾಜವಾದಿ ಪಕ್ಷದ ನಾಯಕ ಅಖಿಲೇಶ್ ಯಾದವ್ ಪತ್ರಕರ್ತರಿಂದ ತಪ್ಪಿಸಿಕೊಳ್ಳಲು ಗೇಟ್‌ನಿಂದ ಜಿಗಿದು ಹೋಗುತ್ತಿರುವ ಇತ್ತೀಚಿನ ಘಟನೆ ಎಂದು ಪ್ರತಿಪಾದಿಸಿ ವೀಡಿಯೊವನ್ನು ಸಾಮಾಜಿಕ ಮಾಧ್ಯಮದಲ್ಲಿ ಹಂಚಿಕೊಳ್ಳಲಾಗುತ್ತಿದೆ.

ಪತ್ರಕರ್ತರು ಪ್ರಶ್ನೆ ಕೇಳುತ್ತಿದ್ದರಿಂದ ತಪ್ಪಿಸಿಕೊಳ್ಳಲು ಹೀಗೆ ಮಾಡಿದ್ದಾರೆ ಎನ್ನಲಾಗಿದೆ. (ಇಲ್ಲಿ, ಇಲ್ಲಿ ಮತ್ತು ಇಲ್ಲಿ ನೋಡಬಹುದು) ಹಾಗಿದ್ದರೆ ಈ ಪೋಸ್ಟ್‌ನಲ್ಲಿ ಮಾಡಿದ ಪ್ರತಿಪಾದನೆ ನಿಜವೇ ಎಂದು ಪರಿಶೀಲಿಸೋಣ.

ಫ್ಯಾಕ್ಟ್‌ಚೆಕ್ :

ಸಾಮಾಜಿಕ ಮಾಧ್ಯಮಗಳಲ್ಲಿ ಹಂಚಿಕೊಳ್ಳಲಾದ ಪೋಸ್ಟ್‌ನಲ್ಲಿ ಮಾಡಿದ ಪ್ರತಿಪಾದನೆಯನ್ನು ಪರಿಶೀಲಿಸಲು ಗೂಗಲ್ ರಿವರ್ಸ್ ಇಮೇಜಸ್‌ನಲ್ಲಿ ಸರ್ಚ್ ಮಾಡಿದಾಗ, ಅಕ್ಟೋಬರ್ 2023 ರಿಂದ ಈ ವಿಡಿಯೋ ಸಾಮಾಜಿಕ ಮಾಧ್ಯಮಗಳಲ್ಲಿ ಪ್ರಸಾರವಾಗುತ್ತಿರುವ ಮಾಹಿತಿ ಲಭ್ಯವಾಗಿದೆ.

ಈ ಘಟನೆಗೆ ಸಂಬಂಧಿಸಿದಂತೆ ಲಭ್ಯವಾದ ಸುದ್ದಿ ವರದಿಗಳ ಪ್ರಕಾರ, 12 ಅಕ್ಟೋಬರ್, 2023ರಂದು ಸಮಾಜವಾದಿ ಪಕ್ಷದ ನಾಯಕ ಅಖಿಲೇಶ್‌ ಯಾದವ್‌ ಅವರನ್ನು ಜಯಪ್ರಕಾಶ್‌ ನಾರಾಯಣ ಅಂತರರಾಷ್ಟ್ರೀಯ ಕೇಂದ್ರಕ್ಕೆ ಪ್ರವೇಶಿಸದಂತೆ ತಡೆಯಲಾಗಿತ್ತು, ಆದರೆ, ಅವರು ಗೇಟ್ ಹತ್ತಿ ಒಳನುಗ್ಗಿದ ಘಟನೆ ನಡೆದಿದೆ ಎಂದು ವರದಿಯಾಗಿದೆ.

ಸ್ವಾತಂತ್ರ್ಯ ಹೋರಾಟಗಾರ ಜಯಪ್ರಕಾಶ್‌ ನಾರಾಯಣ ಅವರ ಜನ್ಮದಿನದ ಪ್ರಯುಕ್ತ ಗೌರವ ನಮನ ಸಲ್ಲಿಸಲು ಅಖಿಲೇಶ್‌ ಹೊರಟಿದ್ದರು. ಆದರೆ ಭದ್ರತಾ ಅಧಿಕಾರಿಗಳು ಕೇಂದ್ರದಲ್ಲಿ ಕಾಮಗಾರಿ ಪ್ರಗತಿಯಲ್ಲಿದೆ ಎಂದು ಪ್ರವೇಶವನ್ನು ತಡೆದಿದ್ದರು.

ಇದರಿಂದಾಗಿ ಅಖಿಲೇಶ್‌ ಯಾದವ್‌ ಸೇರಿ ಪಕ್ಷದ ಇತರ ನಾಯಕರು ಗೋಡೆ ಮತ್ತು ಗೇಟ್‌ ಹತ್ತಿ ಕೇಂದ್ರಕ್ಕೆ ನುಗ್ಗಿದ್ದಾರೆ. ಪರಿಣಾಮ ಸ್ಥಳದಲ್ಲಿ ಗೊಂದಲದ ವಾತಾವರಣ ನಿರ್ಮಾಣವಾಗಿತ್ತು. ತಕ್ಷಣ ಸ್ಥಳಕ್ಕೆ ಧಾವಿಸಿದ ಪೊಲೀಸರು ಪರಿಸ್ಥಿತಿಯನ್ನು ಶಾಂತಗೊಳಿಸಿದ್ದಾರೆ.

ಈ ಬಗ್ಗೆ ಎಕ್ಸ್‌ನಲ್ಲಿ ಪೋಸ್ಟ್‌ ಹಂಚಿಕೊಂಡಿರುವ ಅಖಿಲೇಶ್‌ ಯಾದವ್‌, ‘ಸಮಾಜವಾದಿ ಚಿಂತಕ ಲೋಕನಾಯಕ ಜಯಪ್ರಕಾಶ ನಾರಾಯಣ ಜನ್ಮದಿನದಂದು ಅವರ ಕೇಂದ್ರಕ್ಕೆ ತೆರಳುವ ಹಾದಿಯನ್ನು ಬಂದ್‌ ಮಾಡಲಾಗಿದೆ. ನಿಜ ಹೇಳಬೇಕೆಂದರೆ, ಜಯಪ್ರಕಾಶ್ ಅವರು ಆರಂಭಿಸಿದ್ದ ಭ್ರಷ್ಟಾಚಾರ, ನಿರುದ್ಯೋಗ, ಹಣದುಬ್ಬರದ ವಿರುದ್ಧದ ಚಳವಳಿಯಂತಹ ಘಟನೆ ಮರುಕಳಿಸುವ ಭಯ ಬಿಜೆಪಿಗೆ ಕಾಡುತ್ತಿದೆ. ಏಕೆಂದರೆ ಬಿಜೆಪಿ ಆಡಳಿತದಲ್ಲಿ ಅತಿ ಹೆಚ್ಚು ಭ್ರಷ್ಟಾಚಾರ, ನಿರುದ್ಯೋಗ ಮತ್ತು ಹಣದುಬ್ಬರ ಸಮಸ್ಯೆಗಳು ತೆಲೆದೋರಿವೆ’ ಎಂದು ಬರೆದುಕೊಂಡಿದ್ದಾರೆ.

ಒಟ್ಟಾರೆಯಾಗಿ ಹೇಳುವುದಾದರೆ, 11 ಅಕ್ಟೋಬರ್ 2023, ಜಯಪ್ರಕಾಶ್‌ ನಾರಾಯಣ ಅಂತರರಾಷ್ಟ್ರೀಯ ಕೇಂದ್ರಕ್ಕೆ ಪ್ರವೇಶಿಸದಂತೆ ತಡೆದ ಪರಿಣಾಮ, ಕೆರಳಿದ ಅಖಿಲೇಶ್‌ ಯಾದವ್‌ ಸೇರಿ ಪಕ್ಷದ ಇತರ ನಾಯಕರು ಗೋಡೆ ಮತ್ತು ಗೇಟ್‌ ಹತ್ತಿ ಕೇಂದ್ರಕ್ಕೆ ನುಗ್ಗಿದ್ದ ಘಟನೆಯನ್ನು, ಅಖಿಲೇಶ್ ಯಾದವ್ ಪರ್ತಕರ್ತರು ಕೇಳಿದ ಪ್ರಶ್ನೆಗಳಿಗೆ ಉತ್ತರಿಸಲಾಗದೆ ಗೇಟ್‌ ಹಾರಿ ತಪ್ಪಿಸಿಕೊಂಡಿದ್ದಾರೆ ಎಂದು ಸುಳ್ಳು ಪ್ರತಿಪಾದನೆಯೊಂದಿಗೆ ಹಂಚಿಕೊಂಡಿದ್ದಾರೆ. ಹಾಗಾಗಿ ಪೋಸ್ಟ್‌ನಲ್ಲಿ ಮಾಡಿದ ಪ್ರತಿಪಾದನೆ ತಪ್ಪಾಗಿದೆ.

ನಿಮ್ಮ ಸುತ್ತಮುತ್ತ ಮತ್ತು  ಸಾಮಾಜಿಕ ಜಾಲತಾಣಗಳಲ್ಲಿ ಯಾವುದೇ ಸುದ್ದಿಯು ಸುಳ್ಳು ಎಂದು ನಿಮಗೆ ಸಂದೇಹ ಬಂದಿದ್ದರೆ ಅದನ್ನು Ensuddi.com ವಾಟ್ಸಾಪ್  ನಂ 9108969301 ಗೆ  ತಲುಪಿಸಿ. ನಾವು ಫ್ಯಾಕ್ಟ್‌ಚೆಕ್ ಮಾಡಿ ಸತ್ಯ ನಿಮ್ಮೆದುರು ಇಡುತ್ತೇವೆ


ಇದನ್ನು ಓದಿರಿ : FACT CHECK | ಮೊಸಳೆಗಳ ಈ ವಿಡಿಯೋ ಗುಜರಾತ್ ಪ್ರವಾಹದ್ದಲ್ಲ! ಮತ್ತೆಲ್ಲಿಯದ್ದು? ಈ ಸ್ಟೋರಿ ಓದಿ


 

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights