FACT CHECK | ಮುಸ್ಲಿಂ ವ್ಯಕ್ತಿ ವಿಮಾನದಲ್ಲಿ ನಮಾಜ್‌ ಮಾಡಿದಕ್ಕೆ ಪ್ರತಿಯಾಗಿ ಹಿಂದೂ ಮಹಿಳೆ ಶಿವನ ಸ್ತೋತ್ರ ಹಾಡಿದ್ದಾರೆ ಎಂಬ ವೈರಲ್ ವಿಡಿಯೋದ ಅಸಲೀಯ್ತೇನು ಗೊತ್ತೇ?

“ವಿಮಾನದಲ್ಲಿ ಟಾಯ್ಲೆಟ್‌ಗೆ ಹೋಗುವ ದಾರಿ ಬಂದ್ ಮಾಡಿ ನಮಾಜ್ ಮಾಡಲು ಶುರು ಮಾಡಿದ್ದರಿಂದ, ಸನಾತನಿ ಮಹಿಳೆಯೊಬ್ಬರು ಶಿವನ ಸ್ತೋತ್ರ ಹಾಡಲು ಶುರು ಮಾಡಿದರು. ಇದು ಅದ್ಭುತವಾಗಿದೆ.. ಜೈ ಶ್ರೀ ರಾಮ್” ಎಂಬ ಹೇಳಿಕೆಯಿರುವ ಪೋಸ್ಟ್‌ವೊಂದು ಫೇಸ್‌ಬುಕ್  ಮತ್ತು ಎಕ್ಸ್‌ನಲ್ಲಿ (ಟ್ವಿಟರ್‌ನಲ್ಲಿ) ಸಖತ್‌ ವೈರಲ್ ಆಗುತ್ತಿದೆ.

ವಿಮಾನದ ಒಳಗೆ ಬಿಳಿ ಕೋಟ್ ಮತ್ತು ಗುಲಾಬಿ ಶರ್ಟ್ ಧರಿಸಿದ ಮಹಿಳೆಯೊಬ್ಬರು ಭಕ್ತಿ ಗೀತೆ ಹಾಡುತ್ತಿರುವುದನ್ನು ವಿಡಿಯೋದಲ್ಲಿ ನೋಡಬಹುದು. ವಿಮಾನದಲ್ಲಿ ವ್ಯಕ್ತಿಯೊಬ್ಬರು ನಮಾಜ್ ಮಾಡುವುದನ್ನು ನೋಡಿದ ಹಿಂದೂ ಮಹಿಳೆ ಪ್ರತಿಯಾಗಿ ಶಿವ ಸ್ತೋತ್ರ ಹಾಡಲು ಪ್ರಾರಂಭಿಸಿದರು ಎಂದು ಹೇಳಲಾಗುತ್ತಿದೆ. ವಿಮಾನದ ಕ್ಯಾಬಿನ್ ಸಿಬ್ಬಂದಿ ಈ ದೃಶ್ಯವನ್ನು ರೆಕಾರ್ಡ್ ಮಾಡುತ್ತಿದ್ದು, ಬಾಲಿವುಡ್‌ನ ಕೇದಾರನಾಥ್ ಸಿನಿಮಾದ ನಮೋ ನಮೋ ಶಂಕರ್ ಹಾಡನ್ನು ಮಹಿಳೆ ಹಾಡುತ್ತಿದ್ದಾರೆ.

ನಾಗೇಶ್ ಪ್ರೀತಮ್ ಎಂಬ ಎಕ್ಸ್ ಬಳಕೆದಾರರು ಸೆಪ್ಟೆಂಬರ್ 9, 2024 ರಂದು ಈ ವೀಡಿಯೊವನ್ನು ಹಂಚಿಕೊಂಡಿದ್ದು, ‘ವಿಮಾನದಲ್ಲಿ ನಮಾಜ್ ಮಾಡಲು ಶುರು ಮಾಡಿದರು, ನಂತರ ಸನಾತನಿ ಮಹಿಳೆಯೊಬ್ಬಳು ಮಹಾದೇವನ ಸ್ತೋತ್ರ ಹಾಡಲು ಶುರು ಮಾಡಿದರು. ಇದು ಅದ್ಭುತವಾಗಿದೆ..! ಜೈ ಶ್ರೀ ರಾಮ್’ ಎಂದು ಬರೆದುಕೊಂಡಿದ್ದಾರೆ.

ಹಾಗೆಯೆ ಫೇಸ್​ಬುಕ್​ನಲ್ಲಿ ದ್ರೋಣ ಎಂಬವರು ‘ವಿಮಾನದಲ್ಲಿ ನಮಾಜ್ ಮಾಡುತಿದ್ದದ್ದನ್ನ ನೋಡಿ ಶಿವನ ನಾಮ ಜಪಿಸಿದ ಹಿಂದೂ ಸಹೋದರಿ. ನಿನ್ನ ಧೈರ್ಯ ಮೆಚ್ಚುಲೇಬೇಕು ಹರ್ ಹರ್ ಮಹಾದೇವ’ ಎಂದು ಬರೆದು ಇದೇ ವೀಡಿಯೊ ಅಪ್ಲೋಡ್ ಮಾಡಿಕೊಂಡಿದ್ದಾರೆ.

ಇದೇ ಹೇಳಿಕೆಯೊಂದಿಗೆ ವೈರಲ್ ಆಗಿರುವ ವೀಡಿಯೊವನ್ನು ನೀವು ಇಲ್ಲಿಇಲ್ಲಿ ನೋಡಬಹುದು. ಹಾಗಿದ್ದರೆ ಈ ಪೋಸ್ಟ್‌ನಲ್ಲಿ ಮಾಡಿದ ಪ್ರತಿಪಾದನೆ ನಿಜವೇ ಎಂದು ಪರಿಶೀಲಿಸೋಣ.

ಫ್ಯಾಕ್ಟ್‌ಚೆಕ್ :

ಸಾಮಾಜಿಕ ಮಾಧ್ಯಮಗಳಲ್ಲಿ ಹಂಚಿಕೊಳ್ಳಲಾಗುತ್ತಿರುವ ವಿಮಾದಲ್ಲಿ ನಮಾಜ್‌ ಮಾಡಿದಕ್ಕೆ ಪ್ರತಿಯಾಗಿ ಹಿಂದೂ ಮಹಿಳೆಯೊಬ್ಬರು ಮಹಾದೇವನ ಸ್ತೋತ್ರ ಹಾಡಲು ಶುರುಮಾಡಿದರು ಎಂದು ಹೇಳಲಾಗುತ್ತಿರುವ ಪೋಸ್ಟ್‌ನಲ್ಲಿ ಮಾಡಿದ ಪ್ರತಿಪಾದನೆಯನ್ನು ಪರಿಶೀಲಿಸಲು ಗೂಗಲ್ ರಿವರ್ಸ್ ಇಮೇಜಸ್‌ನಲ್ಲಿ ಸರ್ಚ್ ಮಾಡಿದಾಗ, ವಿಡಿಯೋದಲ್ಲಿ ಹಾಡುತ್ತಿರುವ ಮಹಿಳೆ ಕಲಾವಿದೆ ಮತ್ತು ಗಾಯಕಿ ನಿಶಾ ಶಿವದಾಸನಿ ಎಂಬ ಮಾಹಿತಿ ಲಭ್ಯವಾಗಿದೆ.

ನಿಶಾ ಅವರು ಇದೇ ವೀಡಿಯೊವನ್ನು ಮತ್ತೊಂದು ಆ್ಯಂಗಲ್​ನಿಂದ ತಮ್ಮ ನಿಶಾ ಶಿವದಾಸನಿ ಯೂಟ್ಯೂಬ್ ಚಾನೆಲ್​ನಲ್ಲಿ ಮಾರ್ಚ್ 8, 2024 ರಂದು ಅಪ್‌ಲೋಡ್ ಮಾಡಿದ್ದಾರೆ. ಜೊತೆಗೆ “ಅಂತರಾಷ್ಟ್ರೀಯ ಮಹಿಳಾ ದಿನಾಚರಣೆ 2024 ರ ಶುಭಾಶಯಗಳು | ನಿಶಾ ಶಿವದಾಸನಿ | ಇಂಡಿಗೋ ಏರ್‌ಲೈನ್ ಧನ್ಯವಾದಗಳು” ಎಂಬ ಶೀರ್ಷಿಕೆಯನ್ನು ನೀಡಿದ್ದಾರೆ.

ನಿಶಾ ಶಿವದಾಸನಿ ಅವರು ವಿಮಾನದಲ್ಲಿರುವ ಎಲ್ಲರ ಸಮ್ಮುಖದಲ್ಲಿ ಅಂತರಾಷ್ಟ್ರೀಯ ಮಹಿಳಾ ದಿನಾಚರಣೆ ಪ್ರಯುಕ್ತ ಈ ಹಾಡು ಹಾಡಿದ್ದಾರೆ. ಈ ಹಾಡಿಗೆ ವಿಮಾನದಲ್ಲಿ ಕುಳಿತಿರುವ ಇತರೆ ಪ್ರಯಾಣಿಕರು ಕೂಡ ಪ್ರೋತ್ಸಾಹ ನೀಡುತ್ತಿರುವುದನ್ನು ನೋಡಬಹುದು.

31 ಮಾರ್ಚ್, 2024 ರಂದು ಡ್ರಂಕ್ ಜರ್ನಲಿಸ್ಟ್‌ ಎಂಬ ಎಕ್ಸ್ ಖಾತೆಯಲ್ಲಿ ಇದೇ ವೈರಲ್ ವಿಡಿಯೋವನ್ನು ಪೋಸ್ಟ್ ಮಾಡಿರುವುದು ಲಭ್ಯವಾಗಿದೆ.

ಇದೀಗ ಈ ವಿಡಿಯೋ ಸುಳ್ಳು ಮಾಹಿತಿಯೊಂದಿಗೆ ವೈರಲ್ ಆಗುತ್ತಿರುವುದನ್ನು ಗಮನಿಸಿದ ಡ್ರಂಕ್‌ ಜರ್ನಲಿಸ್ಟ್‌ ತಂಡವು ಈ ಪೋಸ್ಟ್‌ಗೆ ಪ್ರತಿಕ್ರಿಯಿಸಿದೆ. ‘ಈ ವಿಡಿಯೋಗೂ ನಮಾಜ್​ಗೂ ಯಾವುದೇ ಸಂಬಂಧವಿಲ್ಲ. ಈ ಮಹಿಳೆ ಭಜನೆಯನ್ನು ಹಾಡಿರುವ ವಿಡಿಯೋ ಇದಾಗಿದೆ ಮತ್ತು ಇದಕ್ಕೂ ಮುಸ್ಲಿಮರಿಗೂ ನಮಾಜ್‌ಗೂ ಯಾವುದೇ ಸಂಬಂಧವಿಲ್ಲ’ ಎಂದು ಹೇಳಿದೆ.

ಹಾಗೆಯೆ ನಾವು ಇತ್ತೀಚಿಗೆ ಇಂಡಿಗೋ ಏರ್‌ಲೈನ್ಸ್ ವಿಮಾನದಲ್ಲಿ ಮುಸ್ಲಿಂ ವ್ಯಕ್ತಿಯೊಬ್ಬರು ನಮಾಜ್ ಮಾಡಿದ ಬಗ್ಗೆ ಸುದ್ದಿ ಪ್ರಕಟವಾಗಿದೆಯೆ ಎಂಬ ಗೂಗಲ್ ಸರ್ಚ್ ಮಾಡಿದಾಗ, ಈ ಕುರಿತು ಯಾವುದೇ ವರದಿಗಳು ಲಭ್ಯವಾಗಿಲ್. ಇನ್ನಷ್ಟು ಖಚಿತ ಮಾಹಿತಿಗಾಗಿ  ಬೆಂಗಳೂರಿನ ಇಂಡಿಗೋ ಏರ್‌ಲೈನ್ಸ್ ಅನ್ನು ನ್ಯೂಸ್‌ ಮೀಟರ್‌ ತಂಡ ಸಂಪರ್ಕಿಸಿದಾಗ, ಇತ್ತೀಚಿಗೆ ವಿಮಾನದಲ್ಲಿ ನಮಾಜ್ ಮಾಡಿರುವಂತಹ ಯಾವುದೇ ಘಟನೆ ನಡೆದಿಲ್ಲ ಎಂದು ಇಂಡಿಗೋ ಏರ್‌ಲೈನ್ಸ್ ಪ್ರತಿಕ್ರಿಯಿಸಿದೆ.

ಒಟ್ಟಾರೆಯಾಗಿ ಹೇಳುವುದಾದರೆ, 2024 ರ ಅಂತರಾಷ್ಟ್ರೀಯ ಮಹಿಳಾ ದಿನಾಚರಣೆಯ ಪ್ರಯುಕ್ತ ಮಹಿಳೆಯರು ವಿಮಾನದಲ್ಲಿ ಭಕ್ತಿಗೀತೆ ಹಾಡುವ ವಿಡಿಯೋವನ್ನು, ಮುಸ್ಲಿಂ ವ್ಯಕ್ತಿಯೊಬ್ಬರು ವಿಮಾನದಲ್ಲಿ ನಮಾಜ್ ಮಾಡಿದ್ದಕ್ಕೆ ಪ್ರತಿಯಾಗಿ ಮಹಿಳೆಯೊಬ್ಬರು ಶಿವ ಸ್ತೋತ್ರ ಹಾಡುತ್ತಿದ್ದಾರೆ ಎಂದು ಸುಳ್ಳು ಮತ್ತು ಕೋಮು ನಿರೂಪಣೆಯೊಂದಿಗೆ ಹಂಚಿಕೊಳ್ಳಲಾಗುತ್ತಿದೆ. ಹಾಗಾಗಿ ಪೋಸ್ಟ್‌ನಲ್ಲಿ ಮಾಡಿದ ಪ್ರತಿಪಾದನೆ ತಪ್ಪಾಗಿದೆ.

ನಿಮ್ಮ ಸುತ್ತಮುತ್ತ ಮತ್ತು  ಸಾಮಾಜಿಕ ಜಾಲತಾಣಗಳಲ್ಲಿ ಯಾವುದೇ ಸುದ್ದಿಯು ಸುಳ್ಳು ಎಂದು ನಿಮಗೆ ಸಂದೇಹ ಬಂದಿದ್ದರೆ ಅದನ್ನು Ensuddi.com ವಾಟ್ಸಾಪ್  ನಂ 9108969301 ಗೆ ತಲುಪಿಸಿ. ನಾವು ಫ್ಯಾಕ್ಟ್‌ಚೆಕ್ ಮಾಡಿ ಸತ್ಯ ನಿಮ್ಮೆದುರು ಇಡುತ್ತೇವೆ


ಇದನ್ನು ಓದಿರಿ : FACT CHECK | 90 ದಿನಗಳ ಕಾಲ ಚೀನಾ ವಸ್ತುಗಳನ್ನು ಬಳಸಬೇಡಿ ಎಂದು ಕರೆ ನೀಡಿದ್ರಾ ಪ್ರಧಾನಿ ಮೋದಿ?


 

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights