FACT CHECK | 90 ದಿನಗಳ ಕಾಲ ಚೀನಾ ವಸ್ತುಗಳನ್ನು ಬಳಸಬೇಡಿ ಎಂದು ಕರೆ ನೀಡಿದ್ರಾ ಪ್ರಧಾನಿ ಮೋದಿ?
90 ದಿನಗಳ ಕಾಲ ವಿದೇಶಿ ವಸ್ತುಗಳನ್ನು, ವಿಶೇಷವಾಗಿ ಚೀನಾದಿಂದ ಆಮದು ಮಾಡಿಕೊಳ್ಳುವ ವಸ್ತುಗಳನ್ನು ಖರೀದಿಸದಂತೆ ಪ್ರಧಾನಿ ಮೋದಿ ಭಾರತೀಯರಿಗೆ ಕರೆ ನೀಡಿದ್ದಾರೆ ಎಂದು ಸಾಮಾಜಿಕ ಮಾಧ್ಯಮಗಳಲ್ಲಿ ಪೋಸ್ಟ್‌ವೊಂದು ಪ್ರಸಾರವಾಗುತ್ತಿದೆ.
ಈ ಪೋಸ್ಟ್‌ನ ಪ್ರಕಾರ, ಎಲ್ಲಾ ಭಾರತೀಯರು ಹೀಗೆ ಚೀನಾ ಉತ್ಪನ್ನಗಳನ್ನು ಖರೀದಿ ಮಾಡದಿದ್ದರೆ, ಭಾರತವು ವಿಶ್ವದ ಎರಡನೇ ಶ್ರೀಮಂತ ರಾಷ್ಟ್ರವಾಗಬಹುದು ಮತ್ತು ಅದೇ ಸಮಯದೊಳಗೆ ಭಾರತೀಯ ರೂಪಾಯಿ ಮೌಲ್ಯವು 2 ರೂಪಾಯಿಗೆ ಒಂದು ಯುಎಸ್ ಡಾಲರ್‌ಗೆ ತಲುಪಬಹುದು. ಕಳೆದ ವರ್ಷ ದೀಪಾವಳಿ ಸಂದರ್ಭದಲ್ಲಿ ಸ್ಥಳೀಯ ವಸ್ತುಗಳನ್ನು ಖರೀದಿಸುವುದರಿಂದ ಚೀನೀ ಉತ್ಪನ್ನಗಳ ಬಳಕೆಯಲ್ಲಿ 20% ಇಳಿಕೆಯಾಗಿದೆ ಎಂದು ಈ ಪೋಸ್ಟ್‌ನಲ್ಲಿ ಪ್ರತಿಪಾದಿಸಲಾಗಿದೆ.
ಪ್ರಧಾನಿ ಮೋದಿ ಕರೆ ನೀಡಿದ್ದಾರೆ ಎನ್ನಲಾದ ವೈರಲ್ ಪೋಸ್ಟ್‌ಅನ್ನು ಹಲವರು ಹಂಚಿಕೊಂಡಿದ್ದು, ಇದರಲ್ಲಿ ಮಾಡಿರುವ ಪ್ರತಿಪಾದನೆ ನಿಜವೇ ಎಂದು ಪರಿಶೀಲಿಸೋಣ.
ಫ್ಯಾಕ್ಟ್‌ಚೆಕ್ :
ಸಾಮಾಜಿಕ ಮಾಧ್ಯಮಗಳಲ್ಲಿ ಹಂಚಿಕೊಳ್ಳಲಾದ ಪೋಸ್ಟ್‌ನಲ್ಲಿ ಮಾಡಿದ ಪ್ರತಿಪಾದನೆಯನ್ನು ಪರಿಶೀಲಿಸಲು ಕೀ ವರ್ಡ್ ಬಳಸಿ ಸರ್ಚ್ ಮಾಡಿದಾಗ, ವಿದೇಶಿ ವಸ್ತಗಳ ಬಳಕೆ ಕುರಿತಾಗಿ ಪ್ರಧಾನಿ ಮೋದಿ ಹೇಳಿಕೆಯ ಯಾವುದೇ ಅಧಿಕೃತ ಮಾಹಿತಿ ಲಭ್ಯವಾಗಿಲ್ಲ.
ಇದೇ ಸಂದರ್ಭದಲ್ಲಿ , 1 ನವೆಂಬರ್ 2021 ರ ನ್ಯೂಸ್ 18 ಹಿಂದ್‌ನಲ್ಲಿ ಸಂಬಂಧಿತ ಸುದ್ದಿ ಲೇಖನವೊಂದು ಲಭ್ಯವಾಗಿದೆ. ಈ ಲೇಖನವು ಪ್ರಧಾನಿ ಮೋದಿಯವರು ಸ್ವದೇಶಿ ವಸ್ತುಗಳನ್ನು ಖರೀದಿಸಲು ಮತ್ತು ಸ್ಥಳೀಯ ಉತ್ಪನ್ನಗಳನ್ನು ಉತ್ತೇಜಿಸಲು ಪ್ರೋತ್ಸಾಹಿಸಿದ್ದಾರೆ ಎಂದು ವರದಿ ಮಾಡಿರುವುದು ತಿಳಿದು ಬಂದಿದೆ. ಆದರೆ ಇಲ್ಲಿ ಅವರು ಚೀನಾ ವಸ್ತಗಳ ಕುರಿತು ನೀಡಿದ್ದಾರೆ ಎನ್ನಲಾದ ಹೇಳಿಕೆಯನ್ನು ಉಲ್ಲೇಖಿಸಿಲ್ಲ.
ಈ ಬಗ್ಗೆ ಇನ್ನಷ್ಟು ಪರಿಶೀಲನೆ ನಡೆಸಿದಾಗ 2023 ರ ದೀಪಾವಳಿ ಸಂದರ್ಭದಲ್ಲಿ, ಭಾರತದಲ್ಲಿ ತಯಾರಿಸಿದ ಉತ್ಪನ್ನಗಳನ್ನು ಮಾತ್ರ ಖರೀದಿಸಲು ಜನರನ್ನು ಒತ್ತಾಯಿಸುವ ಪ್ರಧಾನಿ ನರೇಂದ್ರ ಮೋದಿಯವರ ಹೆಸರಿನ ಪತ್ರವೊಂದು ವೈರಲ್ ಆಗಿದೆ. ಆದರೆ, ಮೋದಿ ಹೆಸರಿನಲ್ಲಿ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿರುವ ಈ ಪತ್ರಗಳು ನಕಲಿ ಎಂದು ಪ್ರಧಾನಿ ಕಾರ್ಯಾಲಯ ಸ್ಪಷ್ಟಪಡಿಸಿತ್ತು. ಹೆಚ್ಚುವರಿಯಾಗಿ, ಸುದ್ದಿ ಸಂಸ್ಥೆಗಳು ಸಾಮಾಜಿಕ ಮಾಧ್ಯಮದಲ್ಲಿ ಹರಡುವ ಈ ಮಾಹಿತಿಯು ಸುಳ್ಳು ಎಂದು ದೃಢೀಕರಿಸುವ ಲೇಖನಗಳನ್ನು ಪ್ರಕಟಿಸಿತು.
ಒಟ್ಟಾರೆಯಾಗಿ ಹೇಳುವುದಾದರೆ, ಪ್ರಧಾನಿ ನರೇಂದ್ರ ಮೋದಿ ಅವರು 90 ದಿನಗಳವರೆಗೆ ಚೀನಾದ ವಸ್ತುಗಳನ್ನು ಖರೀದಿಸದಂತೆ ಭಾರತೀಯರಿಗೆ ಕರೆ ನೀಡಿದ್ದಾರೆ ಎಂಬ ಹೇಳಿಕೆಯು ಸುಳ್ಳು. ಅಂತಹ ಯಾವುದೇ ಹೇಳಿಕೆಯನ್ನು ಪ್ರಧಾನಿ ಮೋದಿ ನೀಡಿಲ್ಲ. ಹಾಗಾಗಿ ಪೋಸ್ಟ್‌ನಲ್ಲಿ ಮಾಡಿದ ಪ್ರತಿಪಾದನೆ ತಪ್ಪಾಗಿದೆ.
ನಿಮ್ಮ ಸುತ್ತಮುತ್ತ ಮತ್ತು ಸಾಮಾಜಿಕ ಜಾಲತಾಣಗಳಲ್ಲಿ ಯಾವುದೇ ಸುದ್ದಿಯು ಸುಳ್ಳು ಎಂದು ನಿಮಗೆ ಸಂದೇಹ ಬಂದಿದ್ದರೆ ಅದನ್ನು Ensuddi.com ವಾಟ್ಸಾಪ್ ನಂ 9108969301 ಗೆ ತಲುಪಿಸಿ. ನಾವು ಫ್ಯಾಕ್ಟ್‌ಚೆಕ್ ಮಾಡಿ ಸತ್ಯ ನಿಮ್ಮೆದುರು ಇಡುತ್ತೇವೆ
ಇದನ್ನು ಓದಿರಿ : FACT CHECK | ರಾಹುಲ್ ಗಾಂಧಿ ಭಾರತದವರೇ ? ಅಥವಾ ಪಾಕಿಸ್ತಾನದವರೇ? ಎಂಬ ಲೇಖನವನ್ನು USA ಪ್ರಕಟಿಸಿದೆಯೇ?