FACT CHECK | JNU ವಿದ್ಯಾರ್ಥಿ ಸಂಘದ ನಾಯಕರಾಗಿದ್ದ ಸೀತಾರಾಂ ಯೆಚೂರಿ ಇಂದಿರಾ ಗಾಂಧಿಯಲ್ಲಿ ಕ್ಷಮೆ ಕೇಳಿದ್ದರು ಎಂದು ಸುಳ್ಳು ಪೋಸ್ಟ್‌ ಹಂಚಿಕೆ

ದೀರ್ಘಕಾಲದ ಅನಾರೋಗ್ಯದಿಂದ ಬಳಲುತ್ತಿದ್ದ ಸಿಪಿಐ(ಎಂ) ಪ್ರಧಾನ ಕಾರ್ಯದರ್ಶಿ, ಹಿರಿಯ ನಾಯಕ ಸೀತಾರಾಮ್ ಯೆಚೂರಿ ಅವರು ಗುರುವಾರ ನಿಧನರಾಗಿದ್ದಾರೆ. 72 ವರ್ಷದ ಸೀತಾರಾಂ ಯೆಚೂರಿ ಅವರು ತೀವ್ರ ಉಸಿರಾಟದ ಸೋಂಕಿನಿಂದಾಗಿ ಏಮ್ಸ್ ನ ಐಸಿಯುನಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು. ಆದರೆ ಚಿಕಿತ್ಸೆ ಫಲಕಾರಿಯಾಗದೆ ನಿಧನರಾಗಿದ್ದಾರೆ.

Image

ಸೀತಾರಾಮ್ ಯೆಚೂರಿ ಕುರಿತು ಸಾಮಾಜಿಕ ಮಾಧ್ಯಮಗಳಲ್ಲಿ ಪೋಸ್ಟ್‌ವೊಂದು ವೈರಲ್ ಆಗುತ್ತಿದ್ದು, 1975ರ ತುರ್ತು ಪರಿಸ್ಥಿತಿ. ಇಂದಿರಾಗಾಂಧಿ ದೆಹಲಿ ಪೊಲೀಸರೊಂದಿಗೆ ಜೆಎನ್‌ಯುಗೆ ಪ್ರವೇಶಿಸಿ, ಆಗ ಜೆಎನ್‌ಯು (JNU) ವಿದ್ಯಾರ್ಥಿ ಸಂಘದ ಅಧ್ಯಕ್ಷರಾಗಿದ್ದ ಸಿಪಿಐ ನಾಯಕ ಸೀತಾರಾಮ್ ಯೆಚೂರಿ ಅವರನ್ನು ಕ್ಷಮೆ ಕೇಳಲು ಒತ್ತಾಯಿಸಿ ಅಧ್ಯಕ್ಷ ಸ್ಥಾನಕ್ಕೆ ರಾಜಿನಾಮೆ ನೀಡುವಂತೆ ಒತ್ತಾಯಿಸಿದರು. ಇದು ಇಂದಿರಾ ಗಾಂಧಿ ಅವರ ನಿಜವಾದ ಸರ್ವಾಧಿಕಾರ” ಎಂದು ಬರೆಯಲಾಗಿದೆ.

ಮಾಜಿ ಪ್ರಧಾನಿ ಇಂದಿರಾ ಗಾಂಧಿ ಎದುರು ನಿಂತು ಸೀತಾರಾಂ ಯೆಚೂರಿ ಪತ್ರವನ್ನು ಓದುತ್ತಿರುವುದನ್ನು ಕಾಣಬಹುದು. ತುರ್ತು ಪರಿಸ್ಥಿತಿಯನ್ನು ವಿರೋಧಿಸಿದ್ದಕ್ಕಾಗಿ ಇಂದಿರಾ ಗಾಂಧಿಯವರ ಸಮ್ಮುಖದಲ್ಲಿ ಯೆಚೂರಿ ಕ್ಷಮೆಯಾಚಿಸುತ್ತಿರುವುದನ್ನು ಇದು ಸೂಚಿಸುತ್ತದೆ ಎಂದು ಪ್ರತಿಪಾದಿಸಿ ಹಂಚಿಕೊಳ್ಳಲಾಗಿದೆ. ಹಾಗಿದ್ದರೆ ಈ ಪೋಸ್ಟ್‌ನಲ್ಲಿ ಮಾಡಿದ ಪ್ರತಿಪಾದನೆ ನಿಜವೇ ಎಂದು ಪರಿಶೀಲಿಸೋಣ.

ಫ್ಯಾಕ್ಟ್‌ಚೆಕ್ :

ಸಾಮಾಜಿಕ ಮಾಧ್ಯಮಗಳಲ್ಲಿ ಹಂಚಿಕೊಳ್ಳಲಾದ ಪೋಸ್ಟ್‌ನಲ್ಲಿ ಮಾಡಲಾದ ಪ್ರತಿಪಾದನೆಯನ್ನು ಪರಿಶೀಲಿಸಲು ಗೂಗಲ್ ರಿವರ್ಸ್ ಇಮೇಜಸ್‌ನಲ್ಲಿ ಸರ್ಚ್ ಮಾಡಿದಾಗ, ಸೆಪ್ಟೆಂಬರ್ 12, 2024 ರಂದು ಟೈಮ್ಸ್ ಆಫ್ ಇಂಡಿಯಾದಲ್ಲಿ ಪ್ರಕಟವಾದ ವರದಿಯೊಂದು ಲಭ್ಯವಾಗಿದೆ.’ಫ್ರಂ ರೆಬೆಲ್ ಟು ಐಕಾನ್: ಸೀತಾರಾಂ ಯೆಚೂರಿಯ ಧಿಕ್ಕಾರವು ಇಂದಿರಾ ಗಾಂಧಿಯನ್ನು ಜೆಎನ್‌ಯು ಚಾನ್ಸೆಲರ್ ಆಗಿ ರಾಜಿನಾಮೆ ಮಾಡಿದ್ದು ಹೇಗೆ’ ಎಂಬ ಶೀರ್ಷಿಕೆಯ ವರದಿಯನ್ನು ಕಂಡುಕೊಂಡಿದ್ದೇವೆ.

“ಜೆಎನ್‌ಯುನಲ್ಲಿ ವಿದ್ಯಾರ್ಥಿ ನಾಯಕರಾಗಿ ಸೀತಾರಾಮ್ ಯೆಚೂರಿ ಅವರು ಸೆಪ್ಟೆಂಬರ್ 5, 1977 ರಂದು ಇಂದಿರಾ ಗಾಂಧಿ ಅವರಿಗೆ ವಿಶ್ವವಿದ್ಯಾಲಯದ ಕುಲಪತಿ ಸ್ಥಾನಕ್ಕೆ ರಾಜೀನಾಮೆ ನೀಡಬೇಕೆಂದು ಒತ್ತಾಯಿಸಿ ಸಲ್ಲಿಸಿದ ಜ್ಞಾಪಕ ಪತ್ರವನ್ನು ಓದದಿದ್ದರು” ಎಂದು ಉಲ್ಲೇಖಿಸಲಾಗಿತ್ತು.  ಇನ್ನು CPI(M)ನ ವೆಬ್‌ಸೈಟ್‌ನಲ್ಲಿರುವ ಸೀತಾರಾಮ್ ಯೆಚೂರಿ ಅವರ ಪ್ರೊಫೈಲ್‌ನಲ್ಲಿ ಕೂಡ 1977 ರಲ್ಲಿ JNU ನಲ್ಲಿ ಯೆಚೂರಿ ವಿದ್ಯಾರ್ಥಿಗಳ ಒಕ್ಕೂಟದ ಅಧ್ಯಕ್ಷರಾದರು ಎಂದು ದೃಢಪಡಿಸುತ್ತದೆ. ಯೆಚೂರಿ ಅವರು CPI(M) ಗೆ ಸೇರಿದರು ಮತ್ತು 1975 ರಲ್ಲಿ ತುರ್ತು ಪರಿಸ್ಥಿತಿಯ ಸಮಯದಲ್ಲಿ ಬಂಧಿಸಲ್ಪಟ್ಟರು. ತುರ್ತು ಪರಿಸ್ಥಿತಿಯ ನಂತರವೇ 1977ರಲ್ಲಿ ಜೆಎನ್‌ಯು ವಿದ್ಯಾರ್ಥಿ ಸಂಘದ ಅಧ್ಯಕ್ಷರಾಗಿ ಆಯ್ಕೆಯಾದರು ಎಂಬ ಮಾಹಿತಿ ಕೂಡ ಇದೆ.

“1978 ರಲ್ಲಿ ಯೆಚೂರಿ ನೇತೃತ್ವದಲ್ಲಿ ನಡೆದ ಪ್ರತಿಭಟನೆಯ ನಂತರ ಇಂದಿರಾ ಗಾಂಧಿ ಜವಾಹರಲಾಲ್ ನೆಹರು ವಿಶ್ವವಿದ್ಯಾನಿಲಯದ (JNU) ಕುಲಪತಿ ಸ್ಥಾನಕ್ಕೆ ರಾಜೀನಾಮೆ ನೀಡಿದರು. ಯೆಚೂರಿಯವರು  ಇಂದಿರಾ ವಿರುದ್ಧದ ಆರೋಪಪಟ್ಟಿಯನ್ನು ಓದಿದಾಗ ಅವರ ಮಾತುಗಳನ್ನು ಎಲ್ಲರು ಆಲಿಸುತ್ತಿರುವ ಫೋಟೋ ಎಂಬುದು ಸ್ಪಷ್ಟವಾಗಿದೆ.

ಒಟ್ಟಾರೆಯಾಗಿ ಹೇಳುವುದಾದರೆ, ಇಂದಿರಾ ಗಾಂಧಿ ಜವಾಹರಲಾಲ್ ನೆಹರು ವಿಶ್ವವಿದ್ಯಾನಿಲಯದ ಕುಲಪತಿ ಸ್ಥಾನಕ್ಕೆ ರಾಜೀನಾಮೆ ನೀಡುವಂತೆ ಅಂದಿನ JNU ವಿದ್ಯಾರ್ಥಿ ಸಂಘದ ಅಧ್ಯಕ್ಷರಾಗಿದ್ದ ಸೀತಾರಾಂ ಯೆಚೂರಿ ಪತ್ರವನ್ನು ಎಲ್ಲರ ಸಮ್ಮುಖದಲ್ಲಿ ಓದುತ್ತಿರುವ ಫೋಟೋವನ್ನು ಸುಳ್ಳು ನಿರೂಪಣೆಯೊಂದಿಗೆ,  ಸೀತಾರಂ ಯೆಚೂರಿ ಕ್ಷಮೆ ಕೇಳಿ JNU ವಿದ್ಯಾರ್ಥಿ ಸಂಘದ ಅಧ್ಯಕ್ಷ ಸ್ಥಾನಕ್ಕೆ ರಾಜಿನಾಮೆ ನೀಡುವಂತೆ ಒತ್ತಾಯಿಸಿದ್ದಾರೆ ಎಂದು ತಪ್ಪಾಗಿ ಹಂಚಿಕೊಳ್ಳಲಾಗಿದೆ.

ನಿಮ್ಮ ಸುತ್ತಮುತ್ತ ಮತ್ತು  ಸಾಮಾಜಿಕ ಜಾಲತಾಣಗಳಲ್ಲಿ ಯಾವುದೇ ಸುದ್ದಿಯು ಸುಳ್ಳು ಎಂದು ನಿಮಗೆ ಸಂದೇಹ ಬಂದಿದ್ದರೆ ಅದನ್ನು Ensuddi.com ವಾಟ್ಸಾಪ್  ನಂ 9108969301 ಗೆ ತಲುಪಿಸಿ. ನಾವು ಫ್ಯಾಕ್ಟ್‌ಚೆಕ್ ಮಾಡಿ ಸತ್ಯ ನಿಮ್ಮೆದುರು ಇಡುತ್ತೇವೆ


ಇದನ್ನು ಓದಿರಿ : FACT CHECK | ಬಾಂಗ್ಲಾದೇಶದಲ್ಲಿ ಹಿಂದೂ ಮಹಿಳೆಯರು ಬುರ್ಖಾ ಧರಿಸಿಲ್ಲ ಎಂದು ನಡು ರಸ್ತೆಯಲ್ಲಿ ಹಲ್ಲೆ ಎಂಬ ವಿಡಿಯೋದ ವಾಸ್ತವವೇನು?


 

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights