FACT CHECK | ಬೆಳಗಾವಿಯ ಚಿಕ್ಕೋಡಿಯಲ್ಲಿ ಬೀದಿ ದೀಪದ ಕಂಬಗಳಿಗೆ ಹಾಕಿದ್ದು ಪಾಕ್ ಧ್ವಜವಲ್ಲ ಮತ್ತೇನು?
ಬೆಳಗಾವಿಯ ಚಿಕ್ಕೋಡಿಯ ಬೀದಿ ದೀಪದ ಕಂಬಗಳಲ್ಲಿ ಪಾಕ್ ಧ್ವಜಗಳನ್ನು ಪ್ರದರ್ಶಿಸಲಾಗಿದೆ ಎಂಬ ಹೆಡ್‌ಲೈನ್‌ಗಳೊಂದಿಗೆ ವಿಡಿಯೋಗಳನ್ನು ಹಂಚಿಕೊಳ್ಳಲಾಗಿದೆ.
KA ಕನ್ನಡ NEWS 24×7 ಎಂಬ ಯೂಟ್ಯೂಬ್ ಚಾನೆಲ್‌ನಲ್ಲಿ 27 ಸೆಪ್ಟಂಬರ್ 2024 ರಂದು “ಕರ್ನಾಟಕದ ಚಿಕ್ಕೋಡಿ ಮಿನಿ Pakisthanದಂತೆ ಕಂಡಿದೆ” ಎಂಬ ಶೀರ್ಷಿಕೆಯೊಂದಿಗೆ ವಿಡಿಯೋವನ್ನು ಹಂಚಿಕೊಂಡಿದ್ದಾರೆ. ಈ ವಿಡಿಯೋದಲ್ಲಿ ಬೀದಿ ದೀಪಗಳಿಗೆ ಹಸಿರು ಬಣ್ಣದ ಬಟ್ಟೆಗಳಿಂದ ಅಲಂಕರಿಸಿ ಕಂಬದ ತುದಿಗೆ ಧ್ವಜಗಳನ್ನು ಅಳವಡಿಸಿರುವುದನ್ನು ಕಾಣಬಹುದು.
16 ಸೆಪ್ಟೆಂಬರ್ 2024ರಂದು ಇಂತಹದ್ದೆ ವಿಡಿಯೋವನ್ನುLAXMI TV 3 ಎಂಬ ಫೇಸ್‌ಬುಕ್ ಪೇಜ್‌ನಲ್ಲಿ ಹಂಚಿಕೊಂಡು, ಇದು ಪಾಕಿಸ್ತಾನ ಅಥವಾ ಆಫ್ಘಾನಿಸ್ತಾನ ಅಲ್ಲ, ಅದು ಕರ್ನಾಟಕದ ದಾವಣಗೆರೆ ಜಿಲ್ಲೆ ಎಂಬ ಟೈಟಲ್‌ನೊಂದಿಗೆ ಹಂಚಿಕೊಳ್ಳಲಾಗಿದೆ.
चिक्कोडी, कर्नाटक का नज़ारा जो भी #हिन्दू कांग्रेस को वोट देते हैं उनके लिए पाकिस्तानी और ISIS के झंडे की सलामी
अपने घर की बहू-बेटियों, बहनो और प्रॉपर्टी तैयार रखिएगा, जल्द ही मुस्लिम देश बना देगी ये पाकिस्तान परस्त कांग्रेस! खुलेआम सड़कों पर पाकिस्तानी झंडे फहराना और पुलिस, pic.twitter.com/jrFAt6XQ3R— सच के साथ (@SacchekaBolbala) September 23, 2024
ಕರ್ನಾಟಕದ ಚಿಕ್ಕೋಡಿಯಿಂದ ಒಂದು ದೃಶ್ಯ, ಪಾಕಿಸ್ತಾನಿ ಮತ್ತು ISIS ಧ್ವಜ ವಂದನೆ ಯಾರೇ #ಹಿಂದೂ ಕಾಂಗ್ರೆಸ್ ಗೆ ಮತ ಹಾಕುತ್ತಾರೋ ಅವರಿಗೆ ನಿಮ್ಮ ಸೊಸೆಯಂದಿರು, ಸಹೋದರಿಯರು ಮತ್ತು ಆಸ್ತಿಯನ್ನು ಸಿದ್ಧವಾಗಿಟ್ಟುಕೊಳ್ಳಿ, ಈ ಪಾಕಿಸ್ತಾನದ ಪರವಾದ ಕಾಂಗ್ರೆಸ್ ಶೀಘ್ರದಲ್ಲೇ ದೇಶವನ್ನು ಮುಸ್ಲಿಂ ರಾಷ್ಟ್ರವನ್ನಾಗಿ ಮಾಡುತ್ತದೆ! ಪಾಕಿಸ್ತಾನಿ ಧ್ವಜಗಳನ್ನು ಬೀದಿಗಳಲ್ಲಿ ಮತ್ತು ಪೊಲೀಸರ ಸಮ್ಮುಖದಲ್ಲಿ ಬಹಿರಂಗವಾಗಿ ಹಾರಿಸಲಾಗಿದೆ ಎಂದು ಎಕ್ಸ್ ಖಾತೆ ಪೋಸ್ಟ್‌ಅನ್ನು ಹಂಚಿಕೊಳ್ಳಲಾಗಿದೆ. ಹಾಗಿದ್ದರೆ ಬೆಳಗಾವಿಯ ಚಿಕ್ಕೋಡಿಯಲ್ಲಿ ಪಾಕ್ ಧ್ವಜ ಪ್ರದರ್ಶಿಸಿರುವುದು ನಿಜವೇ ಎಂದು ಪರಿಶೀಲಿಸೋಣ.
ಫ್ಯಾಕ್ಟ್‌ಚೆಕ್ :
ಸಾಮಾಜಿಕ ಮಾಧ್ಯಮಗಳಲ್ಲಿ ಹಂಚಿಕೊಳ್ಳಲಾದ ಪೋಸ್ಟ್‌ನಲ್ಲಿ ಮಾಡಿದ ಪ್ರತಿಪಾದನೆಯನ್ನು ಪರಿಶೀಲಿಸಲು ವೈರಲ್ ವಿಡಿಯೋಗಳಲ್ಲಿ ಕಂಡುಬರುವ ಹಸಿರು ಬಣ್ಣದ ಧ್ವಜಗಳನ್ನು ಸೂಕ್ಷ್ಮವಾಗಿ ಗಮನಿಸಿದಾಗ, ಅವು ಪಾಕಿಸ್ತಾನ ಅಥವಾ ಆಫ್ಘಾನಿಸ್ತಾನದ ಧ್ವಜವಲ್ಲ ಎಂಬುದು ಸ್ಪಷ್ಟವಾಗಿದೆ.
ವೈರಲ್ ಆಗಿರುವ ವಿಡಿಯೋದಲ್ಲಿ ಕಂಡುಬರುವ ಧ್ವಜವನ್ನು ಪಾಕಿಸ್ತಾನದ ರಾಷ್ಟ್ರಧ್ವಜದೊಂದಿಗೆ ಹೋಲಿಸಿದಾಗ, ಅದು ಪಾಕಿಸ್ತಾನದ ಧ್ವಜಕ್ಕಿಂತ ಸಾಕಷ್ಟು ಭಿನ್ನವಾಗಿರುವುದನ್ನು ನಾವು ಕಂಡುಕೊಂಡಿದ್ದೇವೆ.
ವಾಸ್ತವವಾಗಿ ವೈರಲ್ ವಿಡಿಯೋದಲ್ಲಿ ಕಂಡುಬರುವ ಹಸಿರು ಣ್ಣದ ಧ್ವಜಗಳು ಎಂದು ಹೇಳಲಾಗುತ್ತಿರುವ ಬಾವುಟವು ಇಸ್ಲಾಮಿಕ್ ಧಾರ್ಮಿಕ ಧ್ವಜಗಳಾಗಿವೆ ಹೊರತು ಪಾಕಿಸ್ತಾನದ ಧ್ವಜಗಳಲ್ಲ. ಇಸ್ಲಾಮಿಕ್ ಧ್ವಜಕ್ಕೂ ಪಾಕಿಸ್ತಾನದ ಧ್ವಜಕ್ಕೂ ಸಾಕಷ್ಟು ವ್ಯತ್ಯಾಸವಿದೆ. ಇಸ್ಲಾಮಿಕ್ ಧ್ವಜದ ಹಸಿರು ಮೇಲ್ಮೈಯಲ್ಲಿ ಚಂದ್ರ ಮತ್ತು ನಕ್ಷತ್ರವನ್ನು ಹೊಂದಿದ್ದರೆ, ಪಾಕಿಸ್ತಾನದ ಧ್ವಜವು ಚಂದ್ರ ಮತ್ತು ನಕ್ಷತ್ರದೊಂದಿಗೆ ಎಡಭಾಗದಲ್ಲಿ ಬಿಳಿ ಪಟ್ಟಿಯನ್ನು ಹೊಂದಿದೆ. ನೀವು ಪಾಕಿಸ್ತಾನದ ಧ್ವಜ ಮತ್ತು ಇಸ್ಲಾಂ ಧರ್ಮಕ್ಕೆ ಸಂಬಂಧಿಸಿದ ಧ್ವಜಗಳನ್ನು ಕೆಳಗೆ ನೋಡಬಹುದು.
ಬೆಳಗಾವಿ ನಗರ ಮತ್ತು ಜಿಲ್ಲೆಯಾದ್ಯಂತ ನಡೆದ ಈದ್–ಮಿಲಾದ್ ಸಂಭ್ರಮಾಚರಣೆ ಕುರಿತು ಪ್ರಜಾವಾಣಿ ಮಾಡಿರುವ ವರದಿಯಲ್ಲಿ ಮೆರವಣಿಗೆ ಮಾರ್ಗದುದ್ದಕ್ಕೂ ಇಸ್ಲಾಂ ಧರ್ಮದ ಬಾವುಟಗಳು ರಾರಾಜಿಸಿದವು ಎಂದು ವರದಿ ಮಾಡಿದೆ.
ಸಾಮಾಜಿಕ ಮಾಧ್ಯಮಗಳಲ್ಲಿ ಪ್ರಸಾರವಾಗುತ್ತಿರುವ ವಿಡಿಯೋಗಳಿಗೆ ಸಂಬಂಧಿಸಿದಂತೆ ಬೆಳಗಾವಿಯ ಎಸ್‌ಪಿ ಕಚೇರಿ ಮತ್ತು ಚಿಕ್ಕೋಡಿಯ ಡಿವೈಎಸ್‌ಪಿ ಕಚೇರಿಗೆ ಕರೆ ಮಾಡಿ ವಿಚಾರಿಸಿದಾಗ, ಅಂತಹ ಯಾವುದೇ ಘಟನೆ ನಡೆದಿಲ್ಲ ಈದ್ ಹಬ್ಬದ ಸಂದರ್ಭದಲ್ಲಿ ಧಾರ್ಮಿಕ ಸಂಕೇತದ ಧ್ವಜವನ್ನು ಪ್ರದರ್ಶಿಸಿದ್ದರು, ಅದಕ್ಕೆ ನಮ್ಮ ಅನುಮತಿಯನ್ನು ಪಡೆದುಕೊಂಡಿದ್ದರು ಎಂದು ತಿಳಿಸಿದ್ದಾರೆ. ಹೀಗಾಗಿ ಚಿಕ್ಕೋಡಿಯಲ್ಲಿ ಬೀದಿ ದೀಪಗಳಿಗೆ ಅಳವಡಿಸಿದ್ದು ಪಾಕಿಸ್ತಾನ ಧ್ವಜ ಅಲ್ಲ, ಅದು ಇಸ್ಲಾಮಿಕ್ ಧ್ವಜ ಎಂಬುದು ಸ್ಪಷ್ಟವಾಗಿದೆ.
ಇತ್ತೀಚೆಗೆ ಹೈಕೋರ್ಟ್‌ನ ನ್ಯಾಯಮೂರ್ತಿ ವಿ.ಶ್ರೀಶಾನಂದ ಬೆಂಗಳೂರಿನ ಗೋರಿಪಾಳ್ಯ ಕುರಿತಾಗಿ ಪಾಕಿಸ್ತಾನ ಎಂಬ ಪದ ಬಳಕೆ ಮಾಡಿದ್ದಕ್ಕೆ ಸುಪ್ರೀಂ ಕೋರ್ಟ್ ತೀರ್ವ ತರಾಟೆಗೆ ತೆಗೆದುಕೊಂಡಿತ್ತು. ಭಾರತದ ಯಾವುದೇ ಭಾಗವನ್ನೂ ಪಾಕಿಸ್ತಾನ ಎಂದು ಕರೆಯುವಂತಿಲ್ಲ ಎಂದು ಸುಪ್ರೀಂ ಕೋರ್ಟ್ ಹೇಳಿದ್ದನ್ನು ಇಲ್ಲಿ ಸ್ಮರಿಸಬಹುದು. ಹಾಗಿದ್ದರೆ ಇಲ್ಲಿ ಇಸ್ಲಾಮಿಕ್ ಧಾರ್ಮಿಕ ಧ್ವಜಗಳನ್ನು ಪಾಕಿಸ್ತಾನದ ಧ್ವಜ ಎಂದು ಸುಳ್ಳು ಸುದ್ದಿ ಹಂಚಿಕೊಳ್ಳುತ್ತಿರುವವರಿಗೆ ಯಾವ ರೀತಿ ಶಿಕ್ಷೆ ಕೊಡಬಹುದು.
FACT CHECK | ಹಿಂದೂ ಸಮುದಾಯದವರು ಮುಸ್ಲಿಂ ವ್ಯಕ್ತಿಯನ್ನು ಚರ್ಮ ಸುಲಿಯುವಂತೆ ಹೊಡೆದ್ರಾ?