FACT CHECK | ಹಿರಿಯ ನಾಗರಿಕರಿಗೆ ರೈಲು ಪ್ರಯಾಣದಲ್ಲಿ ರಿಯಾಯಿತಿ ಸೌಲಭ್ಯ ಘೋಷಿಸಿದೆಯೇ?

ಕೇಂದ್ರ ಸರ್ಕಾರ ಹಿರಿಯ ನಾಗರಿಕರಿಗೆ ರೈಲು ಪ್ರಯಾಣಕ್ಕೆ ಟಿಕೆಟ್ ಗಳಲ್ಲಿ ರಿಯಾಯಿತಿ ಸೌಲಭ್ಯಗಳನ್ನು ಘೋಷಿಸಿದೆ ಎಂಬಂತೆ ಸಾಮಾಜಿಕ ಮಾಧ್ಯಮದಲ್ಲಿ ಪೋಸ್ಟ್‌ಅನ್ನು ಹಂಚಿಕೊಳ್ಳಲಾಗುತ್ತಿದೆ.

“ಕೇಂದ್ರಸರ್ಕಾರ  ಹಿರಿಯ  ನಾಗರಿಕರಿಗೆ  ರೈಲು  ಪ್ರಯಾಣಕ್ಕೆ  ರಿಯಾಯಿತಿ  ಸೌಲಭ್ಯಗಳನ್ನು ಘೋಷಿಸಿದೆ ಎಂದು ವಾಟ್ಸಾಪ್‌ ಗ್ರೂಪ್‌ಗಳಲ್ಲಿ ಸಂದೇಶವನ್ನು ಹಂಚಿಕೊಳ್ಳಲಾಗುತ್ತಿದೆ.
1. 
ಪುರುಷ ಹಿರಿಯ ನಾಗರಿಕ ವಿನಾಯಿತಿ ವಯಸ್ಸು 60 ವರ್ಷ ಅಥವಾ ಮೇಲ್ಪಟ್ಟವರು 2. ಮಹಿಳಾ ಹಿರಿಯ ನಾಗರಿಕರ ರಿಯಾಯಿತಿ ವಯಸ್ಸು 58 ವರ್ಷಗಳು ಅಥವಾ ಮೇಲ್ಪಟ್ಟವರು 3. ಪುರುಷರಿಗೆ ರೈಲ್ವೇ ಪ್ರಯಾಣ ದರದಲ್ಲಿ 40% ರಿಯಾಯಿತಿ 4 ಮಹಿಳೆಯರಿಗೆ ರೈಲ್ವೆ ಪ್ರಯಾಣ ದರದಲ್ಲಿ 50% ರಿಯಾಯಿತಿ..” ಎಂದಿದೆ. ಹಾಗಿದ್ದರೆ ಈ ಪೋಸ್ಟ್‌ನಲ್ಲಿ ಮಾಡಿದ ಪ್ರತಿಪಾದನೆ ನಿಜವೇ ಎಂದು ಪರಿಶೀಲಿಸೋಣ.

ಫ್ಯಾಕ್ಟ್‌ಚೆಕ್:

ಸಾಮಾಜಿಕ ಮಾಧ್ಯಮಗಳಲ್ಲಿ ಹಂಚಿಕೊಳ್ಳಲಾಗುತ್ತಿರುವ ಪತ್ರಿಕೆಯಲ್ಲಿ ಪ್ರಕಟವಾದಂತಿರುವ ಕ್ಲಿಪ್‌ಅನ್ನು ಗೂಗಲ್ ರಿವರ್ಸ್ ಇಮೇಜಸ್‌ನಲ್ಲಿ ಸರ್ಚ್ ಮಾಡಿದಾಗ, ಏಪ್ರಿಲ್ 1, 2024ರ ಡೆಕ್ಕನ್‌ ಹೆರಾಲ್ಡ್ ನಲ್ಲಿ ಪ್ರಕಟವಾದ ವರದಿಯೊಂದು ಲಭ್ಯವಾಗಿದೆ.

ಸಾಮಾಜಿಕ ಮಾಧ್ಯಮಗಳಲ್ಲಿ ಹಂಚಿಕೊಳ್ಳುತ್ತಿರುವ ಹೇಳಿಕೆ ಭಾಗಶಃ ತಪ್ಪಾಗಿದೆ. ಹಿರಿಯ ನಾಗರಿಕರಿಗೆ ರೈಲ್ವೇ ಟಿಕೆಟ್ ದರದಲ್ಲಿ ಯಾವುದೇ ರಿಯಾಯಿತಿ ಇಲ್ಲ, ಉಳಿದಂತೆ ಅಂಗವಿಕಲರು, ಹಿರಿಯ ನಾಗರಿಕರಿಗೆ ಸ್ಟೇಷನ್‌ ಗಳಲ್ಲಿ ಸೌಕರ್‍ಯ ಮತ್ತು ಹಿರಿಯ ನಾಗರಿಕರಿಗೆ ಲೋವರ್ ಬರ್ತ್ ನೀಡುವ ಸೌಕರ್‍ಯ ಇದೆ ಎಂದು ಕಂಡುಬಂದಿದೆ.

Fact Check: ಕೇಂದ್ರ ಸರ್ಕಾರ ಹಿರಿಯ ನಾಗರಿಕರಿಗೆ ರೈಲು ಪ್ರಯಾಣಕ್ಕೆ ಟಿಕೆಟ್ ಗಳಲ್ಲಿ ರಿಯಾಯಿತಿ ಸೌಲಭ್ಯ ಘೋಷಿಸಿದೆ ಎನ್ನುವುದು ನಿಜವೇ?

ಡೆಕ್ಕನ್‌ ಹೆರಾಲ್ಡ್ ನಲ್ಲಿ ಪ್ರಕಟವಾದ ವರದಿಯ ಪ್ರಕಾರ, “ಮಾರ್ಚ್ 20, 2020 ರಂದು, ಕೋವಿಡ್-19 ಕಾರಣದಿಂದಾಗಿ ದೇಶಾದ್ಯಂತ ಲಾಕ್‌ಡೌನ್ ಘೋಷಿಸಿದ ನಂತರ ರೈಲ್ವೆ ಸಚಿವಾಲಯವು ಹಿರಿಯ ನಾಗರಿಕರಿಗೆ ನೀಡಲಾದ ರೈಲು ದರಗಳಲ್ಲಿನ ರಿಯಾಯಿತಿಗಳನ್ನು ಹಿಂತೆಗೆದುಕೊಂಡಿತು.” ಜೊತೆಗೆ, “ನಾಲ್ಕು ವರ್ಷಗಳ ಹಿಂದೆ ರೈಲು ಪ್ರಯಾಣ ದರದಲ್ಲಿ ರಿಯಾಯಿತಿಯನ್ನು ಹಿಂಪಡೆದ ನಂತರ ಭಾರತೀಯ ರೈಲ್ವೇಯು ಹಿರಿಯ ನಾಗರಿಕರಿಂದ 5,800 ಕೋಟಿ ರೂಪಾಯಿ ಹೆಚ್ಚುವರಿ ಆದಾಯವನ್ನು ಗಳಿಸಿದೆ ಎಂದು ಮಾಹಿತಿ ಹಕ್ಕು ಕಾಯಿದೆಯಡಿ ಪ್ರತಿಕ್ರಿಯೆಗಳು ಬಹಿರಂಗಪಡಿಸಿವೆ.” ಎಂದಿದೆ.

Fact Check: ಕೇಂದ್ರ ಸರ್ಕಾರ ಹಿರಿಯ ನಾಗರಿಕರಿಗೆ ರೈಲು ಪ್ರಯಾಣಕ್ಕೆ ಟಿಕೆಟ್ ಗಳಲ್ಲಿ ರಿಯಾಯಿತಿ ಸೌಲಭ್ಯ ಘೋಷಿಸಿದೆ ಎನ್ನುವುದು ನಿಜವೇ?

ಇದಕ್ಕೆ ಪೂರಕವಾಗಿ ನಾವು ಇನ್ನಷ್ಟು ಶೋಧ ನಡೆಸಿದ್ದು, ಈ ವೇಳೆ, ರೈಲ್ವೇ ವೆಚ್ಚಗಳು ಈಗಾಗಲೇ ಹೆಚ್ಚಾಗಿದ್ದು, ಹಿರಿಯ ನಾಗರಿಕರಿಗೆ ಯಾವುದೇ ರಿಯಾಯಿತಿ ಟಿಕೆಟ್ ನಲ್ಲಿ ಕೊಡಲಾಗುವುದಿಲ್ಲ ಎಂಬುದನ್ನು ರೈಲ್ವೇ ಸಚಿವರಾದ ಅಶ್ವಿನಿ ವೈಷ್ಣವ್ ಸೂಚ್ಯವಾಗಿ ಹೇಳಿದ್ದಾರೆ ಎಂಬುದನ್ನು ಜನವರಿ 3, 2023ರ ಫೈನಾನ್ಸಿಯಲ್‌ ಎಕ್ಸ್ ಪ್ರೆಸ್‌ ವರದಿಯಲ್ಲಿ ನೋಡಿದ್ದೇವೆ.

ಈ ವರದಿಯಲ್ಲಿ “ರೈಲ್ವೆ ಸಚಿವ ಅಶ್ವಿನಿ ವೈಷ್ಣವ್ ಅವರು ಹಿರಿಯ ನಾಗರಿಕರಿಗೆ ಭಾರತೀಯ ರೈಲ್ವೇ ರಿಯಾಯಿತಿಗಳ ಕುರಿತ ದೊಡ್ಡ ಪ್ರಶ್ನೆಗೆ ಉತ್ತರಿಸಿದ್ದಾರೆ. ಕೋವಿಡ್-19 ಸಾಂಕ್ರಾಮಿಕ ರೋಗ ಪ್ರಾರಂಭವಾದಾಗಿನಿಂದ ಈ ಯೋಜನೆಯು ಕಾರ್ಯನಿರ್ವಹಿಸುತ್ತಿಲ್ಲ. ರಿಯಾಯಿತಿಯನ್ನು ಯಾವಾಗ ಮರುಸ್ಥಾಪಿಸಲಾಗುತ್ತದೆ ಎಂಬ ಮಹಾರಾಷ್ಟ್ರದ ಸ್ವತಂತ್ರ ಸಂಸದ ನವನೀತ್ ರಾನಾವ್ ಅವರ ಪ್ರಶ್ನೆಗೆ ಉತ್ತರಿಸಿದ ಸಚಿವರು, ಕಳೆದ ವರ್ಷ ಪ್ರಯಾಣಿಕರ ಸೇವೆಗಳಿಗೆ 59,000 ಕೋಟಿ ರೂ.ಗಳ ಸಬ್ಸಿಡಿಯನ್ನು ನೀಡಲಾಗಿರುವುದರಿಂದ ಅದನ್ನು ಸದ್ಯಕ್ಕೆ ಮರುಸ್ಥಾಪಿಸಲಾಗುವುದಿಲ್ಲ, ಭಾರತೀಯ ರೈಲ್ವೆಯ ಪಿಂಚಣಿ ಮತ್ತು ಸಂಬಳದ ಬಿಲ್‌ಗಳು ತುಂಬ ಇವೆ ಎಂದು ಹೇಳಿದ್ದಾಗಿ ಪಿಟಿಐ ವರದಿ ಮಾಡಿದೆ” ಎಂದಿದೆ.

ಇದೇ ವಿಚಾರದಲ್ಲಿ ನಾವು ಸಂಸದರಾದ ಪ್ರಿಯಾಂಕಾ ಚತುರ್ವೇದಿಯವರ ಎಕ್ಸ್ ಪೋಸ್ಟ್ ಕಂಡುಕೊಂಡಿದ್ದೇವೆ. ಆಗಸ್ಟ್ 3, 2024ರಂದು ಅವರು ಹಿರಿಯ ನಾಗರಿಕರಿಗೆ ರೈಲ್ವೇ ಟಿಕೆಟ್ ನಲ್ಲಿ ರಿಯಾಯಿತಿ ಬಗ್ಗೆ ಪೋಸ್ಟ್ ಮಾಡಿದ್ದು, “ಆದ್ದರಿಂದ ಕೋವಿಡ್ ಸಮಯದಲ್ಲಿ ನಿಲ್ಲಿಸಲಾಗಿದ್ದ ಹಿರಿಯ ನಾಗರಿಕರು ಮತ್ತು ಕ್ರೀಡಾ ನಾಗರಿಕರ ರಿಯಾಯಿತಿಯನ್ನು ಮರುಪ್ರಾರಂಭಿಸದಿರಲು ರೈಲ್ವೆ ನಿರ್ದಿಷ್ಟವಾಗಿ ನಿರ್ಧರಿಸಿದೆ.” ಎಂದು ಬರೆದುಕೊಂಡಿದ್ದಾರೆ. ಈ ಪೋಸ್ಟ್ ನೊಂದಿಗೆ ರಾಜ್ಯಸಭೆಯಲ್ಲಿ ಅವರ ಪ್ರಶ್ನೆಗೆ ರೈಲ್ವೇ ಸಚಿವರು ನೀಡಿದ ಉತ್ತರವನ್ನು ಲಗತ್ತಿಸಿದ್ದಾರೆ.

ಇದರೊಂದಿಗೆ ಜೂನ್‌ 11, 2022ರ ರೈಲ್ವೇ ಸೇವಾ ಎಕ್ಸ್ ಪೋಸ್ಟ್ ಪ್ರತಿಕ್ರಿಯೆಯನ್ನೂ ನಾವು ಗಮನಿಸಿದ್ದೇವೆ. ಇದರಲ್ಲಿ 4 ವರ್ಗಗಳಿಗೆ ಮಾತ್ರ ರೈಲ್ವೇ ರಿಯಾಯಿತಿ ಇದ್ದು, 11 ರೀತಿಯ ರೋಗಿಗಳು, ವಿದ್ಯಾರ್ಥಿಗಳು, ಅಂಗವಿಕಲರಿಗೆ ಇರುವುದಾಗಿ ಇದೆ. ಈ ಪೋಸ್ಟ್ ಇಲ್ಲಿ ನೋಡಬಹುದು.

ಇದರೊಂದಿಗೆ ಕ್ಲೇಮಿನಲ್ಲಿ ಹೇಳಲಾದ ಇತರ ವಿಚಾರಗಳ ಬಗ್ಗೆ ನಾವು ಗಮನಿಸಿದ್ದೇವೆ. ಇದರಲ್ಲಿ ಐಆರ್‍‌ಸಿಟಿಸಿ ಯಾತ್ರಿ ಮಿತ್ರ ಸೇವಾ ಬಗ್ಗೆ ಹೇಳಲಾಗಿದ್ದು, ಇದು ರೈಲ್ವೇ ನಿಲ್ದಾಣಗಳಲ್ಲಿ ವೀಲ್‌ಚೇರ್ ಸೇವೆ ಮತ್ತು ಪೋರ್ಟರ್ ಸೇವೆಗಳನ್ನು ಬುಕ್ ಮಾಡಲು ಯಾತ್ರಿ ಮಿತ್ರ ಸೇವೆಯನ್ನು ಒದಗಿಸುವುದಕ್ಕೆ ಇದೆ. ಇದರ ಬಗ್ಗೆ ಸೆಪ್ಟೆಂಬರ್ 19, 2016ರಂದು ಪಿಐಬಿಗೆ ನೀಡಿದ ಪತ್ರಿಕಾ ಹೇಳಿಕೆಯಲ್ಲಿ ರೈಲ್ವೇ ಸಚಿವಾಲಯ ಹೇಳಿದ ವರದಿಯೊಂದು ಲಭ್ಯವಾಗಿದೆ.

ಇನ್ನು ಹಿರಿಯ ನಾಗರಿಕರಿಗೆ ನೀಡಲಾಗುವ ಲೋವರ್ ಬರ್ತ್ ಅವಕಾಶದ ಬಗ್ಗೆಯೂ ನಾವು ಸೆಪ್ಟೆಂಬರ್ 23, 2022ರ  ಮಿಂಟ್  ವರದಿಯೊಂದು ಲಭ್ಯವಾಗಿದೆ.ವರದಿಯ ಪ್ರಕಾರ, “ಅವಕಾಶವಿದ್ದಲ್ಲಿ ಈ ಸೌಲಭ್ಯವನ್ನು ನೀಡವುದಾಗಿ ಐಆರ್ ಸಿಟಿಸಿ ಹೇಳಿದ್ದಾಗಿ” ವರದಿಯಲ್ಲಿದೆ.

ಒಟ್ಟಾರೆಯಾಗಿ ಹೇಳುವುದಾದರೆ, ಹಿರಿಯ ನಾಗರಿಕರಿಗೆ ರಿಯಾಯಿತಿ ದರದಲ್ಲಿ ರೈಲ್ವೇ ಟಿಕೆಟ್ ಗಳನ್ನು ನೀಡಲಾಗುತ್ತಿದೆ, ಕೇಂದ್ರ ಸರ್ಕಾರ ಹಿರಿಯ ನಾಗರಿಕರಿಗೆ ರೈಲು ಪ್ರಯಾಣಕ್ಕೆ ಟಿಕೆಟ್ ಗಳಲ್ಲಿ ರಿಯಾಯಿತಿ ಸೌಲಭ್ಯ ಘೋಷಿಸಿದೆ ಎಂಬುದು ಸುಳ್ಳು. ಯಾತ್ರಿ ಮಿತ್ರ ಸೇವಾ ಮತ್ತು ಅವಕಾಶವಿದ್ದಲ್ಲಿ ಲೋವರ್ ಬರ್ತ್ ಗಳನ್ನು ಹಿರಿಯ ನಾಗರಿಕರಿಗೆ, ಗರ್ಭಿಣಿಯರು ಮತ್ತು ಅಂಗವಿಕಲರಿಗೆ ನೀಡುವ ವಿಚಾರ ಸರಿಯಾಗಿದೆ. ಹಾಗಾಗಿ ವಾಟ್ಸಾಪ್‌ ನಲ್ಲಿ ಹರಿದಾಡುತ್ತಿರುವ  ಹೇಳಿಕೆ ಭಾಗಶಃ ತಪ್ಪು ಎಂಬುದು ಸ್ಪಷ್ಟವಾಗಿದೆ.

ನಿಮ್ಮ ಸುತ್ತಮುತ್ತ ಮತ್ತು  ಸಾಮಾಜಿಕ ಜಾಲತಾಣಗಳಲ್ಲಿ ಯಾವುದೇ ಸುದ್ದಿಯು ಸುಳ್ಳು ಎಂದು ನಿಮಗೆ ಸಂದೇಹ ಬಂದಿದ್ದರೆ ಅದನ್ನು Ensuddi.com ವಾಟ್ಸಾಪ್  ನಂ 9108969301 ಗೆ ತಲುಪಿಸಿ. ನಾವು ಫ್ಯಾಕ್ಟ್‌ಚೆಕ್ ಮಾಡಿ ಸತ್ಯ ನಿಮ್ಮೆದುರು ಇಡುತ್ತೇವೆ


ಇದನ್ನು ಓದಿರಿ : FACT CHECK | ಗೃಹ ಸಚಿವ ಅಮಿತ್‌ ಶಾ ಹೆಸರು ವಾಂಟೆಡ್ ಲಿಸ್ಟ್‌ನಲ್ಲಿ! ವೈರಲ್ ಪೋಸ್ಟ್‌ನ ಅಸಲೀಯತ್ತೇನು?


 

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights