FACT CHECK | ಭಾರತದ ವಿರುದ್ದ ಮುಸ್ಲಿಂ ಮಕ್ಕಳು ಮಾತನಾಡುತ್ತಿರುವ ವಿಡಿಯೋ ಭಾರತದ್ದಲ್ಲ
ಮಕ್ಕಳಿಬ್ಬರು ಮಾಧ್ಯಮದ ಮುಂದೆ ಮಾತನಾಡುತ್ತಿರುವ ವಿಡಿಯೋವೊಂದು ಸಾಮಾಜಿಕ ಮಾಧ್ಯಮಗಳಲ್ಲಿ ವೈರಲ್ ಆಗಿದೆ. ಇದರಲ್ಲಿ ವರದಿಗಾರನ ಬಳಿ ಮಕ್ಕಳು ಭಾರತದ ವಿರುದ್ಧ ಮಾತನಾಡುತ್ತಿರುವುದನ್ನು ಕಾಣಬಹುದು. ವಿಡಿಯೋದಲ್ಲಿ ಮುಸ್ಲಿಂ ಹುಡುಗನೊಬ್ಬ ವರದಿಗಾರನ ಜೊತೆ ಮಾತನಾಡುವಾಗ “ಭಾರತೀಯರು ಒಂದು ಕಾಲದಲ್ಲಿ ಇದ್ದರು ಎಂದು ಜಗತ್ತಿನಲ್ಲಿ ಯಾವುದೇ ಹೆಸರಿಲ್ಲ. ದೇವರು ಬಯಸಿದರೆ ಆರು ತಿಂಗಳೊಳಗೆ ಅವರು ನಿರ್ಮೂಲನೆ ಮಾಡುತ್ತಾರೆ. ಅವರು ನಮಗೆ ಏನನ್ನೂ ಕೆಟ್ಟದನ್ನು ಮಾಡಲು ಸಾಧ್ಯವಿಲ್ಲ” ಎಂದು ಹೇಳಿದ್ದಾನೆ.

ಮಲ್ಲಿಕಾರ್ಜುನ ಎಂಬ ಎಕ್ಸ್ ಬಳಕೆದಾರರೊಬ್ಬರು ‘‘ಮುಲ್ಲಾ ಅವರಿಂದ ತರಬೇತಿ ಪಡೆದ ಭಾರತೀಯ ಮದ್ರಾಸಾ ವಿದ್ಯಾರ್ಥಿಗಳು. ಇಸ್ಲಾಂ ಮುಸ್ಲಿಂ ಇದರ ಕರಾಳ ಸತ್ಯ. ಇಡೀ ಪ್ರಪಂಚದಲ್ಲಿ ಇವರು ನೆಮ್ಮದಿಯಿಂದ ಇರೋದಿಲ್ಲ. ನೆಮ್ಮದಿಯಾಗಿ ಇರುವವರನ್ನು ನೆಮ್ಮದಿಯಾಗಿ ಬದುಕಲು ಬಿಡುವುದಿಲ್ಲ. ಇಸ್ಲಾಮಿನ ಮುಸ್ಲಿಮರ ಕರಾಳ ಸತ್ಯ ಇದೆ’’ ಎಂಬ ಬರದೊಂದಿಗೆ ವಿಡಿಯೋವನ್ನು ಹಂಚಿಕೊಂಡಿದ್ದಾರೆ.
ಇದೇ ವಿಡಿಯೋ ಹಂಚಿಕೊಂಡ ಫೇಸ್ಬುಕ್ ಬಳಕೆದಾರರೊಬ್ಬರು, ‘‘ಈಗ ಅರ್ಥವಾಯಿತ ಮದ್ರಸಾಗಳಲ್ಲಿ ನೀಡುತ್ತಿರುವ ಶಿಕ್ಷಣದ ಮಹತ್ವ ಏನಂತ… ಎಂದು ಕಳವಳ ವ್ಯಕ್ತಪಡಿಸಿದ್ದಾರೆ. ಹಾಗಿದ್ದರೆ ಈ ವಿಡಿಯೋದ ಅಸಲೀಯತ್ತೇನು ಎಂದು ಪರಿಶೀಲಿಸೋಣ.
ಫ್ಯಾಕ್ಟ್ಚೆಕ್ :
ಈ ವೈರಲ್ ವಿಡಿಯೋ ಕುರಿತು ಸತ್ಯಾಸತ್ಯತೆಗಳನ್ನು ಪರಿಶೀಲಿಸಲು, ವಿಡಿಯೋವನ್ನು ಸೂಕ್ಷ್ಮವಾಗಿ ಗಮನಿಸಿದಾಗ, ವ್ಯಕ್ತಿಯ ಕೈಯಲ್ಲಿರುವ ಮೈಕ್ ಮೇಲೆ D7 NEWS ಎಂದು ಬರೆಯಲಾಗಿದೆ. ಈ ಆಧಾರದ ಮೇಲೆ ಕೀವರ್ಡ್ ಬಳಸಿ ಗೂಗಲ್ನಲ್ಲಿ D7 NEWS ಸರ್ಚ್ ಮಾಡಿದಾಗ D7 NEWS PAKISTAN OFFICIAL ಹೆಸರಿನ ಯೂಟ್ಯೂಬ್ ಚಾನೆಲ್ ಲಭ್ಯವಾಗಿದೆ. ವೈರಲ್ ವಿಡಿಯೋದ ಮೈಕ್ ಹಿಡಿದುಕೊಂಡಿರುವ ವ್ಯಕ್ತಿಯೇ ಈ ಯೂಟ್ಯೂಬ್ ಚಾನೆಲ್ನಲ್ಲಿ ಅಪ್ಲೋಡ್ ಮಾಡಿರುವ ವಿಡಿಯೋದಲ್ಲಿ ನೋಡಬಹುದು.
ಈ ಚಾನೆಲ್ನಲ್ಲಿ ಹುಡುಕಾಟ ನಡೆಸಿದಾಗ ಸದ್ಯ ವೈರಲ್ ಆಗುತ್ತಿರುವ ವೀಡಿಯೊ ಕೂಡ ನಮಗೆ ಸಿಕ್ಕಿದೆ. ಆಗಸ್ಟ್ 31, 2024 ರಂದು ಅಪ್ಲೋಡ್ ಮಾಡಲಾದ ಈ ವೀಡಿಯೊದ ದೀರ್ಘ ಆವೃತ್ತಿಯನ್ನು ನಾವು ಕಂಡುಕೊಂಡಿದ್ದೇವೆ. ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಅವರ ಹೇಳಿಕೆಗೆ ಸಂಬಂಧಿಸಿದಂತೆ ವರದಿಗಾರ ಜನರೊಂದಿಗೆ ಮಾತನಾಡುತ್ತಿರುವುದನ್ನು ಇಲ್ಲಿ ಕಾಣಬಹುದು. ಈ ವೀಡಿಯೊದ 11ನೇ ನಿಮಿಷದಲ್ಲಿ ವೈರಲ್ ವೀಡಿಯೊದಲ್ಲಿರುವ ಕ್ಲಿಪ್ ಇದೆ.
ವರದಿಗಾರ ಜನರ ಬಳಿ, “ಐದು ವರ್ಷಗಳಲ್ಲಿ ನಾವು ಭಾರತದ ಎಲ್ಲಾ ಮುಸ್ಲಿಮರನ್ನು ನಾಶಪಡಿಸುತ್ತೇವೆ ಎಂದು ಅವರು ಹೇಳಿದ್ದಾರೆ. ಅವರು ಮುಸ್ಲಿಮರನ್ನು ನಿರ್ನಾಮ ಮಾಡಲು ಸಾಧ್ಯವೇ?’’ ಎಂದು ಕೇಳುತ್ತಾರೆ. ಈ ಪ್ರಶ್ನೆಗೆ ಜನರು ತಮ್ಮ ಪ್ರತಿಕ್ರಿಯೆಯನ್ನು ನೀಡುತ್ತಿರುವುದು ಈ ವೀಡಿಯೊದಲ್ಲಿದೆ. ಈ ಯೂಟ್ಯೂಬ್ ಚಾನೆಲ್ನಲ್ಲಿ ನೀಡಿದ ಮಾಹಿತಿಯ ಪ್ರಕಾರ, ಇದು ಪಾಕಿಸ್ತಾನದಿಂದ ಬಂದಿದೆ.
ಮುಸ್ಲಿಮರನ್ನು ನಿರ್ಮೂಲನೆ ಮಾಡುವ ಬಗ್ಗೆ ಯೋಗಿ ಆದಿತ್ಯನಾಥ್ ಹೇಳಿಕೆ ನೀಡಿದ್ದಾರೆಯೆ ಎಂದು ಪರಿಶೀಲಿಸಲು ಗೂಗಲ್ ಸರ್ಚ್ ಮಾಡಿದಾಗ, ಯೋಗಿ ಆದಿತ್ಯನಾಥ್ ಮುಸ್ಲಿಂ ಸಮುದಾಯವನ್ನು ತೊಡೆದು ಹಾಕುವ ಬಗೆಗಿನ ಹೇಳಿಕೆಗಳು ಲಭ್ಯವಾಗಿಲ್ಲ.
ಒಟ್ಟಾರೆಯಾಗಿ ಹೇಳುವುದಾದರೆ, ವೈರಲ್ ಆಗಿರುವ ವೀಡಿಯೊ ಭಾರತದಲ್ಲಿ ಚಿತ್ರಿಸಿದ್ದಲ್ಲ, ಬದಲಾಗಿ ಪಾಕಿಸ್ತಾನದಲ್ಲಿ ಚಿತ್ರೀಕರಿಸಿದ್ದು. ಪಾಕಿಸ್ತಾನದ ವಿಡಿಯೋವನ್ನು ಭಾರತೀಯ ಮುಸ್ಲಿಮರೊಂದಿಗೆ ಜೋಡಿಸಿ ಅಪಪ್ರಚಾರ ನಡೆಸಲಾಗುತ್ತಿದೆ. ಹಾಗಾಗಿ ಪೋಸ್ಟ್ನಲ್ಲಿ ಮಾಡಿದ ಪ್ರತಿಪಾದನೆ ತಪ್ಪಾಗಿದೆ.
ನಿಮ್ಮ ಸುತ್ತಮುತ್ತ ಮತ್ತು ಸಾಮಾಜಿಕ ಜಾಲತಾಣಗಳಲ್ಲಿ ಯಾವುದೇ ಸುದ್ದಿಯು ಸುಳ್ಳು ಎಂದು ನಿಮಗೆ ಸಂದೇಹ ಬಂದಿದ್ದರೆ ಅದನ್ನು Ensuddi.com ವಾಟ್ಸಾಪ್ ನಂ 9108969301 ಗೆ ತಲುಪಿಸಿ. ನಾವು ಫ್ಯಾಕ್ಟ್ಚೆಕ್ ಮಾಡಿ ಸತ್ಯ ನಿಮ್ಮೆದುರು ಇಡುತ್ತೇವೆ
ಇದನ್ನು ಓದಿರಿ : FACT CHECK | ಹಿರಿಯ ನಾಗರಿಕರಿಗೆ ರೈಲು ಪ್ರಯಾಣದಲ್ಲಿ ರಿಯಾಯಿತಿ ಸೌಲಭ್ಯ ಘೋಷಿಸಿದೆಯೇ?

