FACT CHECK | ರೈತರ ಪ್ರತಿಭಟನೆಯಲ್ಲಿ ರಾಶಿ ರಾಶಿ ಮದ್ಯದ ಬಾಟಲಿ ಪತ್ತೆಯಾಗಿವೆ ಎಂದು 2021ರ ವಿಡಿಯೋ ಹಂಚಿಕೆ

ದೆಹಲಿ ಗಡಿಯಲ್ಲಿ ನಡೆಯುತ್ತಿರುವ ರೈತ ಹೋರಾಟವನ್ನು ಹತ್ತಿಕ್ಕಲು ಕೇಂದ್ರ ಸರ್ಕಾರ ಇನ್ನಿಲ್ಲದ ಕಸರತ್ತು ನಡೆಸಿದೆ. ಪ್ರತಿಭಟನಾಕಾರರನ್ನು ಚದುರಿಸಲು ಹರಿಯಾಣ ಪೊಲೀಸರು ಅಶ್ರುವಾಯು ಪ್ರಯೋಗಿಸಿದ್ದಾರೆ. ಆದರೆ ರೈತರು ಇದಾವುದಕ್ಕೂ ಜಗ್ಗದೆ ತಮ್ಮ ಪ್ರತಿಭಟನೆಯನ್ನು ಮುಂದುವರೆಸಿದ್ದಾರೆ.

ರೈತ ಹೋರಾಟಕ್ಕೆ ಸಂಬಂಧಿಸಿದಂತೆ ಸಾಮಾಜಿಕ ಮಾಧ್ಯಮಗಳಲ್ಲಿ  ವಿಡಿಯೋವೊಂದು ವೈರಲ್ ಆಗುತ್ತಿದ್ದು,  ರೈತರ ಪ್ರತಿಭಟನೆಯ ಜಾಗದಲ್ಲಿ ರಾಶಿ ರಾಶಿ ಮದ್ಯದ ಬಾಟಲಿಗಳು ಸಿಕ್ಕಿವೆ ಎಂದು ಪ್ರತಿಪಾದಿಸಿ  ಸಾಮಾಜಿಕ ಮಾಧ್ಯಮಗಳಲ್ಲಿ ಪೋಸ್ಟ್‌ಅನ್ನು ಹಂಚಿಕೊಳ್ಳಲಾಗುತ್ತಿದೆ.

ಟಿವಿ 9 ಲೋಗೋದೊಂದಿಗೆ ವ್ಯಕ್ತಿಯೊಬ್ಬ ರೈತರು ನಡೆಸುತ್ತಿರುವ ಹೋರಾಟದಲ್ಲಿ ಮಧ್ಯದ ಬಾಟಲಿಗಳು ಕಂಡುಬಂದಿವೆ ಎಂದು ಹೇಳುತ್ತಿರುವುದನ್ನು ಕೇಳಬಹುದು. “ಇದನ್ನು ನೋಡಿ, ರೈತರ ಗುಂಪಿನಿಂದ ಮದ್ಯದ ಬಾಟಲಿಗಳು ಹೇಗೆ ಹೊರಬರುತ್ತಿವೆ. ಈ ರೈತರು ಕುಡಿದ ಮತ್ತಿನಲ್ಲಿ ಟ್ರ್ಯಾಕ್ಟರ್ ಓಡಿಸುತ್ತಿದ್ದಾರೆ. ಪೊಲೀಸರು ಅವರಿಗೆ ತಿಳಿಹೇಳಲು ಪ್ರಯತ್ನಿಸುತ್ತಿದ್ದಾರೆ ಆದರೆ ರೈತರು ಅವರನ್ನು ಹತ್ತಿಕ್ಕಲು ಪ್ರಯತ್ನಿಸುತ್ತಿದ್ದಾರೆ. ಹಳ್ಳಿಗಾಡಿನ ಮದ್ಯ, ತಿಂಡಿ ಸೇರಿದಂತೆ ಸಾಕಷ್ಟು ಬಾಟಲಿಗಳಿವೆ. ಈ ಜನರು ನಿಜವಾಗಿಯೂ ರೈತರೇ? ಇದು ರೈತರ ಪ್ರತಿಭಟನೆಯೇ? ಎಂದು ಹೇಳುತ್ತಿದ್ದಾನೆ.

ವೈರಲ್ ವಿಡಿಯೋವನ್ನು ಹಂಚಿಕೊಂಡಿರುವ ಹಲಚು ಸಾಮಾಜಿಕ ಮಾಧ್ಯಮದ ಬಳಕೆದಾರರು ಇದೇ ಪ್ರತಿಪಾದನೆಯೊಂದಿಗೆ ಪ್ರಸ್ತುತ ದೆಗಲಿ ಮತ್ತು ಸಂಭು ಗಡಿಯಲ್ಲಿ ನಡೆಯುತ್ತಿರುವ ರೈತರ ಪ್ರತಿಭಟನೆಯದ್ದು ಎಂದು ಹೇಳಲಾಗುತ್ತಿದೆ. ಹಾಗಿದ್ದರೆ ಈ ಪೋಸ್ಟ್‌ನಲ್ಲಿ ಮಾಡಿದ ಪ್ರತಿಪಾದನೆ ನಿಜವೇ ಎಂದು ಪರಿಶೀಲಿಸೋಣ.

ಫ್ಯಾಕ್ಟ್‌ಚೆಕ್ :

ಸಾಮಾಜಿಕ ಮಾಧ್ಯಮಗಳಲ್ಲಿ ಹಂಚಿಕೊಳ್ಳಲಾಗುತ್ತಿರುವ ವಿಡಿಯೋವನ್ನು ಪರಿಶೀಲಿಸಲು ಗೂಗಲ್ ರಿವರ್ಸ್ ಇಮೇಜಸ್‌ನಲ್ಲಿ ಸರ್ಚ್ ಮಾಡಿದಾಗ, 26 ಜನವರಿ 2021 ರಂದು TV9 ಗುಜರಾತಿನ ಟ್ವಿಟರ್ ಹ್ಯಾಂಡಲ್‌ನಲ್ಲಿ ಅಪ್‌ಲೋಡ್ ಮಾಡಿದ ಅದೇ ವಿಡಿಯೋ  ಲಭ್ಯವಾಗಿದೆ. ವರದಿಯ ಪ್ರಕಾರ, ಪೊಲೀಸರು ಟ್ರಾಕ್ಟರ್‌ಗಳಲ್ಲಿ ಇರಿಸಿದ್ದ ಮದ್ಯವನ್ನು ವಶಪಡಿಸಿಕೊಂಡಿದ್ದಾರೆ. ಪೊಲೀಸರೂ ರಸ್ತೆಯಲ್ಲೇ ಕುಳಿತು ಪ್ರತಿಭಟನೆ ನಡೆಸಿದರು.

ಇದಲ್ಲದೆ, ಪೊಲೀಸರು ಟ್ರ್ಯಾಕ್ಟರ್‌ಗಳಿಂದ ಮದ್ಯವನ್ನು ವಶಪಡಿಸಿಕೊಂಡಿದ್ದಾರೆ ಎಂದು ಹೇಳುವ ಅದೇ ವೀಡಿಯೊವನ್ನು ಇನ್ನೊಬ್ಬ ಬಳಕೆದಾರರು ಟ್ವೀಟ್ ಮಾಡಿರುವುದನ್ನು ಕಂಡುಬಂದಿದೆ. ಪ್ರತಿಭಟನಕಾರರು ಅಪಾಯಕಾರಿಯಾಗಿ ಕತ್ತಿಗಳನ್ನು ಬೀಸುವುದು ಮತ್ತು ಮದ್ಯದ ಅಮಲಿನಲ್ಲಿ ಟ್ರ್ಯಾಕ್ಟರ್‌ಗಳನ್ನು ಓಡಿಸುತ್ತಿರುವುದು ಕಂಡುಬಂದಿದೆ.

ಮೇಲಿನ ಸಂಗತಿಗಳಿಂದ ತಿಳಿಯುವುದೇನೆಂದರೆ, ವೈರಲ್ ವೀಡಿಯೊ ಇತ್ತೀಚಿನ ರೈತರ ಪ್ರತಿಭಟನೆಗೆ ಸಂಬಂಧಿಸಿದ್ದಲ್ಲ ಎಂಬುದು ಸ್ಪಷ್ಟವಾಗುತ್ತದೆ. ಈ ವೀಡಿಯೊ 2021 ರ  ಪ್ರತಿಭಟನೆಗೆ ಸಂಬಂಧಿಸಿದ್ದು.

2021 ರ ಜನವರಿಯಲ್ಲಿ ಕೇಂದ್ರ ಸರ್ಕಾರ ಜಾರಿಗೆ ತಂದಂತಹ ಕೃಷಿ ಮಸೂದೆಯ ವಿರುದ್ಧ ಟ್ರಾಕ್ಟರ್ ಪ್ರತಿಭಟನೆಯನ್ನು ನಡೆಸುತ್ತಿರುವಾಗ ರೈತರು ಬ್ಯಾರಿಕೇಡ್‌ಗಳನ್ನು ಮುರಿದು ನವದೆಹಲಿಯ ಕೆಂಪು ಕೋಟೆ ಪ್ರವೇಶಿಸಿದ್ದ ಸಂದರ್ಭವನ್ನು ಇಲ್ಲಿ ಸ್ಮರಿಸಬಹುದು. ರೈತರು ಕೆಂಪು ಕೋಟೆಯ ಮೇಲೆ ಭಾರತದ ತ್ರಿವರ್ಣ ಧ್ವಜದ ಬಳಿ ಮತ್ತೊಂದು ಧ್ವಜವನ್ನು ಹಾರಿಸುತ್ತಿರುವುದು ಕಂಡುಬಂದಿದೆ. ಪರಿಸ್ಥಿತಿಯನ್ನು ನಿಯಂತ್ರಿಸಲು ಪೊಲೀಸರು ಅಶ್ರುವಾಯು ಸಿಡಿಸಿದ್ದರು.

ಒಟ್ಟಾರೆಯಾಗಿ ಹೇಳುವುದಾದರೆ, ಸಾಮಾಜಿಕ ಮಾಧ್ಯಮಗಳಲ್ಲಿ ಹಂಚಿಕೊಳ್ಳಲಾಗುತ್ತಿರುವ ವಿಡಿಯೋ, ಪ್ರಸ್ತುತ ದೆಹಲಿ ಗಡಿಯಲ್ಲಿ ನಡೆಯುತ್ತಿರುವ ರೈತರ ಹೋರಾಟಕ್ಕೆ ಸಂಬಂಧಿಸಿದ್ದಲ್ಲ. ಆದರೆ ಇದನ್ನು ಸುಳ್ಳು ಮಾಹಿತಿಯೊಂದಿಗೆ ರೈತರ ಪ್ರತಿಭಟನೆಯಲ್ಲಿ ಸಾರಾಯಿ ಬಾಟಲಿಗಳ ರಾಶಿ, ಉಗ್ರರಿಗೆ ಹೆಂಡ ಕುಡಿಸಿ ಛೂ ಬಿಟ್ಟ ಕಾಂಗ್ರೆಸ್ ಎಂದು ವಿಡಿಯೋವನ್ನು ಹಂಚಿಕೊಳ್ಳಲಾಗಿದೆ. ಹಾಗಾಗಿ ಪೋಸ್ಟ್‌ನಲ್ಲಿ ಮಾಡಿದ ಪ್ರತಿಪಾದನೆ ತಪ್ಪಾಗಿದೆ.

ನಿಮ್ಮ ಸುತ್ತಮುತ್ತ ಮತ್ತು ಸಾಮಾಜಿಕ ಜಾಲತಾಣಗಳಲ್ಲಿ ಯಾವುದೇ ಸುದ್ದಿಯು ಸುಳ್ಳು ಎಂದು ನಿಮಗೆ ಸಂದೇಹ ಬಂದಿದ್ದರೆ ಅದನ್ನು Ensuddi.com ವಾಟ್ಸಾಪ್  ನಂ 9108969301 ಗೆ ತಲುಪಿಸಿ. ನಾವು ಫ್ಯಾಕ್ಟ್‌ಚೆಕ್ ಮಾಡಿ ಸತ್ಯ ನಿಮ್ಮೆದುರು ಇಡುತ್ತೇವೆ


ಇದನ್ನು ಓದಿರಿ : FACT CHECK | ದೆಹಲಿ ರೈತರ ಹೋರಾಟಕ್ಕೆ ನಕಲಿ ರೈತರನ್ನು ಕರೆತರಲಾಗಿದೆ ಎಂದು ಸಂಬಂಧವಿಲ್ಲದ ಸುಳ್ಳು ವಿಡಿಯೋ ಹಂಚಿಕೆ


 

 

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights