ಫ್ಯಾಕ್ಟ್‌ಚೆಕ್ : ಪೊಲೀಸ್‌ ಮೇಲೆ ಹಲ್ಲೆ ನಡೆಸಿರುವುದು ಡಿಎಂಕೆ ಶಾಸಕ ಮನ್ಸೂರ್ ಮೊಹಮ್ಮದ್‌ ದಿಮಿರ್ ಅಲ್ಲ! ಮತ್ತ್ಯಾರು?

ಶಾಸಕ ಮನ್ಸೂರ್ ಮೊಹಮ್ಮದ್‌ ದಿಮಿರ್ ಅವರು ಪೊಲೀಸ್ ಮೇಲೆ ಹಲ್ಲೆ ನಡೆಸಿದ್ದಾರೆ ಎಂಬ ಹೇಳಿಕೆಯೊಂದಿಗೆ ವಿಡಿಯೋವನ್ನು ಸಾಮಾಜಿಕ ಮಾಧ್ಯಮದಲ್ಲಿ ಹಂಚಿಕೊಳ್ಳಲಾಗುತ್ತಿದೆ.

ಶಾಸಕ ಮನ್ಸೂರ್ ಮೊಹಮ್ಮದ್ ದಿಮಿರ್ ಅವರನ್ನು ನೋಡಿ.  ಪೊಲೀಸರ ಪರಿಸ್ಥಿತಿಯೇ ಹೀಗಿರುವಾಗ ಸಾರ್ವಜನಿಕರ ಪಾಡು ಏನಾಗಿರುತ್ತೆ, ಭಾರತದಾದ್ಯಂತ ಕಾಣುವಂತೆ ಈ ವಿಡಿಯೋ ಶೇರ್ ಮಾಡಿ ಎಂಬ ಹೇಳಿಕೆಯೊಂದಿಗೆ ಪೋಸ್ಟ್‌ಅನ್ನು ಹಂಚಿಕೊಳ್ಳಲಾಗಿದೆ.

ಹಲವು ವಾಟ್ಸಾಪ್‌ ಗುಂಪುಗಳಲ್ಲಿ ವಿಡಿಯೋ ವೈರಲ್ ಆಗುತ್ತಿದಂತೆ, ಕೆಲವು ಸಾಮಾಜಿಕ ಮಾಧ್ಯಮಗಳ ಬಳಕೆದಾರರು ಇದರ ಸತ್ಯಾಸತ್ಯತೆಯನ್ನು ಪರಿಶೀಲಿಸುವಂತೆ ಏನ್‌ಸುದ್ದಿ.ಕಾಂ ಗೆ ವಿನಂತಿಸಿದ್ದಾರೆ. ಹಾಗಿದ್ದರೆ ಈ ಪೋಸ್ಟ್‌ನಲ್ಲಿ ಮಾಡಿದ ಪ್ರತಿಪಾದನೆ ನಿಜವೇ ಎಂದು ಪರಿಶೀಲಿಸೋಣ.

ಫ್ಯಾಕ್ಟ್‌ಚೆಕ್ :

ವಾಟ್ಸಾಪ್‌ ಮತ್ತು ಸಾಮಾಜಿಕ ಮಾಧ್ಯಮಗಳಲ್ಲಿ ಹಂಚಿಕೊಳ್ಳಲಾದ ಪೋಸ್ಟ್‌ನಲ್ಲಿ ಮಾಡಿದ ಪ್ರತಿಪಾದನೆಯನ್ನು ಪರಿಶೀಲಿಸಲು ಗೂಗಲ್ ರಿವರ್ಸ್ ಇಮೇಜಸ್‌ನಲ್ಲಿ ಸರ್ಚ್ ಮಾಡಿದಾಗ, ಅಕ್ಟೋಬರ್ 20, 2018 ರ ANI ಎಕ್ಸ್ ಖಾತೆಯಲ್ಲಿ ಅದೇ ರೀತಿಯ ವಿಡಿಯೋ ಲಭ್ಯವಾಗಿದೆ.

ANI ಟ್ವೀಟ್ ನ ಮಾಹಿತಿ ಪ್ರಕಾರ, ವೈರಲ್ ವಿಡಿಯೋದಲ್ಲಿ ಕಂಡುಬರುವ ಘಟನೆ ಉತ್ತರ ಪ್ರದೇಶದ ಮೀರತ್‌ನಲ್ಲಿ ನಡೆದಿದೆ ಎಂದು ಹೇಳಲಾಗಿದೆ. ಪೊಲೀಸ್ ಅಧಿಕಾರಿ ತನ್ನ ವಕೀಲ ಸ್ನೇಹಿತೆಯೊಂದಿಗೆ ರೆಸ್ಟೋರೆಂಟ್ ಗೆ ಹೋದಾಗ, ಹೋಟೆಲ್‌ನ ಸಿಬ್ಬಂದಿಯೊಂದಿಗೆ ಸಣ್ಣ ಜಗಳ ಆಗಿದೆ. ಅದೇ ಸಂದರ್ಭದಲ್ಲಿ ಹೋಟೆಲ್ಲಿನ ಮಾಲಕ ಮತ್ತು ಬಿಜೆಪಿ ಕೌನ್ಸಿಲರ್ ಆಗಿರುವ ಮನೀಶ್ ಪೊಲೀಸ್‌ ಮೇಲೆ ಹಲ್ಲೆ ನಡೆಸಿದ್ದಾನೆ. ಪ್ರಕರಣದಲ್ಲಿ ಬಿಜೆಪಿ ಕೌನ್ಸಿಲರ್ ನನ್ನು ಬಂಧಿಸಲಾಗಿದೆ ಎಂದು ವರದಿಯಲ್ಲಿ ಉಲ್ಲೇಖಿಸಲಾಗಿದೆ.

ಮತ್ತಷ್ಟು ಸರ್ಚ್ ಮಾಡಿದಾಗ, ಬೇರೆ ಬೇರೆ ಮಾಧ್ಯಮಗಳು ಈ ಬಗ್ಗೆ ಮಾಡಿರುವ ವರದಿ ಲಭ್ಯವಾಗಿದೆ.  ಅವುಗಳನ್ನು ಇಲ್ಲಿಇಲ್ಲಿ ಮತ್ತು ಇಲ್ಲಿ ನೋಡಬಹುದು. ಪೊಲೀಸ್‌ ಮೇಲೆ ದಾಳಿ ನಡೆಸಿದ ವ್ಯಕ್ತಿ ಬಿಜೆಪಿ ಕೌನ್ಸಿಲರ್ ಮನೀಶ್ ಚೌಧರಿ ಎಂದು ವರದಿಯಾಗಿದೆ. ಇನ್ನು ಏಪ್ರಿಲ್ 2021 ರ ವೇಳೆ ಮನೀಶ್ ಚೌಧರಿ ತಲೆಗೆ ಗುಂಡು ತಗುಲಿ ಸಾವನ್ನಪ್ಪಿದ್ದಾರೆ ಎಂದೂ ಮಾಧ್ಯಮ ವರದಿಗಳು ಹೇಳಿವೆ. ಅವುಗಳನ್ನು ಇಲ್ಲಿ ಮತ್ತು ಇಲ್ಲಿ ನೋಡಬಹುದು. ಹಾಗಾಗಿ ಪೊಲೀಸ್‌ ಮೇಲೆ ಹಲ್ಲೆ ನಡೆಸಿದ ವ್ಯಕ್ತಿ ಡಿಎಂಕೆ ಶಾಸಕ ಮನ್ಸೂರ್ ಮೊಹಮ್ಮದ್‌ ದಿಮಿರ್ ಅಲ್ಲ ಎಂಬುದು ಸ್ಪಷ್ಟವಾಗಿದೆ.

ಒಟ್ಟಾರೆಯಾಗಿ ಹೇಳುವುದಾದರೆ, 2018ರಲ್ಲಿ ಘಟನೆ ನಡೆದಿದ್ದು ಮೀರತ್‌ನಲ್ಲಿ ಬಿಜೆಪಿಯ ಕೌನ್ಸಿಲರ್ ಆಗಿದ್ದ ಮನೀಶ್ ಚೌಧರಿ ಎಂಬುವವರು ಪೊಲೀಸ್ ಅಧಿಕಾರಿಯ ಮೇಲೆ ಹಲ್ಲೆ ನಡೆಸಿದ ಹಳೆಯ ವಿಡಿಯೋವನ್ನು, ಡಿಎಂಕೆ ಶಾಸಕ ಮನ್ಸೂರ್ ಮೊಹಮ್ಮದ್‌ ದಿಮಿರ್ ಅವರು ಪೊಲೀಸ್ ಮೇಲೆ ಹಲ್ಲೆ ನಡೆಸಿದ್ದಾರೆ ಎಂದು ಸುಳ್ಳು ಪ್ರತಿಪಾದನೆಯೊಂದಿಗೆ ಹಂಚಿಕೊಳ್ಳಲಾಗಿದೆ. ಹಾಗಾಗಿ ಪೋಸ್ಟ್‌ನಲ್ಲಿ ಮಾಡಿದ ಪ್ರತಿಪಾದನೆ ತಪ್ಪಾಗಿದೆ.

ನಿಮ್ಮ ಸುತ್ತಮುತ್ತ ಮತ್ತು ಸಾಮಾಜಿಕ ಜಾಲತಾಣಗಳಲ್ಲಿ ಯಾವುದೇ ಸುದ್ದಿಯು ಸುಳ್ಳು ಎಂದು ನಿಮಗೆ ಸಂದೇಹ ಬಂದಿದ್ದರೆ ಅದನ್ನು Ensuddi.com ವಾಟ್ಸಾಪ್  ನಂ 9108969301 ಗೆ ತಲುಪಿಸಿ. ನಾವು ಫ್ಯಾಕ್ಟ್‌ಚೆಕ್ ಮಾಡಿ ಸತ್ಯ ನಿಮ್ಮೆದುರು ಇಡುತ್ತೇವೆ


ಇದನ್ನು ಓದಿರಿ : FACT CHECK | ರೈತರ ಪ್ರತಿಭಟನೆಯಲ್ಲಿ ರಾಶಿ ರಾಶಿ ಮದ್ಯದ ಬಾಟಲಿ ಪತ್ತೆಯಾಗಿವೆ ಎಂದು 2021ರ ವಿಡಿಯೋ ಹಂಚಿಕೆ


 

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights