ನಟಿ ರಕುಲ್ ಪ್ರೀತ್ ಸಿಂಗ್ ಅವರಲ್ಲಿ ಜೀ ನ್ಯೂಸ್‌ ಕ್ಷಮೆಯಾಚಿಸಬೇಕು: ಎನ್‌ಬಿಎಸ್‌ಎ

ಡ್ರಗ್ಸ್‌ ಪ್ರಕರಣಕ್ಕೆ ಸಂಬಂಧಿಸಿದಂತೆ ಬಾಲಿವುಡ್ ನಟಿ ರಕುಲ್‌ ಪ್ರೀತ್‌ ಸಿಂಗ್‌ ವಿರುದ್ದ ಅಪಪ್ರಚಾರದ ಸುದ್ದಿಗಳನ್ನು ಪ್ರಸಾರ ಮಾಡಿದ್ದ ಜೀ ನ್ಯೂಸ್‌, ಜೀ 24 ಟಾಸ್, ಜೀ ಹಿಂದೂಸ್ಥಾನಿ, ಟೈಮ್ಸ್‌ ನೌ, ಇಂಡಿಯಾ ಡುಡೆ, ಆಜ್‌ ತಕ್‌, ಇಂಡಿಯಾ ಟಿವಿ, ನ್ಯೂಸ್ ನೇಷನ್, ಮತ್ತು ಎಬಿಪಿ ನ್ಯೂಸ್‌ ಚಾನೆಲ್‌ಗಳು ನಟಿಯ ಬಳಿ ಕ್ಷಮೆ ಕೇಳಬೇಕು ಎಂದು ನ್ಯೂಸ್ ಬ್ರಾಡ್ಕಾಸ್ಟಿಂಗ್ ಸ್ಟ್ಯಾಂಡರ್ಡ್ಸ್ ಅಥಾರಿಟಿ (ಎನ್‌ಬಿಎಸ್‌ಎ) ಆದೇಶಿಸಿರುವುದಾಗಿ ಲೈವ್ ಲಾ ವರದಿ ಮಾಡಿದೆ.

ಚಾನೆಲ್‌ಗಳು ರಕುಲ್ ಪ್ರೀತ್ ಸಿಂಗ್‌ ವಿರುದ್ದ ಮಾಡಿದ್ದ ಸ್ಟೋರಿಗಳ ವಿಡಿಯೋಗಳನ್ನು ತಮ್ಮ ವೆಬ್‌ಸೈಟ್‌, ಯೂಟ್ಯೂಬ್‌ ಮತ್ತು ಸೋಷಿಯಲ್‌ ಮೀಡಿಯಾದಿಂದ ತೆಗೆದು ಹಾಕಬೇಕು. ಏಳು ದಿನಗಳ ಒಳಗೆ ಕ್ಷಮೆಯಾಚಿಸಿ ಸುದ್ದಿ ಪ್ರಚಾರ ಮಾಡಬೇಕು ಎಂದು ಎನ್‌ಬಿಎಸ್‌ಎ ನಿರ್ದೇಶನ ನೀಡಿದೆ.

ನಟಿಯ ವಿರುದ್ಧ ಹ್ಯಾಶ್‌ಟ್ಯಾಗ್‌ ಮತ್ತು ಟ್ಯಾಗ್‌ಲೈನ್‌ಗಳನ್ನು ಬಳಸಿದ್ದಕ್ಕಾಗಿ ಡಿಸೆಂಬರ್ 17ರ ರಾತ್ರಿ 09 ಗಂಟೆಯ ಒಳಗೆ ಕ್ಷಮೆ ಕೋರಿ ಪ್ರಸಾರ ಮಾಡಬೇಕು ಎಂದು ಜೀ ಗ್ರೂಪ್‌ನ ಚಾನೆಲ್‌ಗಳಿಗೆ ಸೂಚಿಸಿದೆ.

ಇದನ್ನೂ ಓದಿ: ಗೋದಿ ಮೀಡಿಯಾ ವಿರುದ್ಧ ಪರ್ಯಾಯ ಕಂಡುಕೊಂಡ ಪಂಜಾಬ್ ಯುವಜನರು!

ಉಳಿದ ಚಾನೆಲ್‌ಗಳೂ ಸಹ ನಟನ ವಿರುದ್ಧ ಹ್ಯಾಶ್‌ಟ್ಯಾಗ್‌, ಟ್ಯಾಗ್‌ಲೈನ್‌ ಮತ್ತು ಚಿತ್ರಗಳನ್ನು ಬಳಸಿದ್ದಕ್ಕಾಗಿ ಚಾನೆಲ್‌ಗಳಿಗೆ ಎಚ್ಚರಿಕೆ ನೀಡಿ, ಸತ್ಯಾಂಶವನ್ನು ಪರಿಶೀಲಿಸದ ಮತ್ತು ಸುಳ್ಳು ಮಾಹಿತಿಗಳನ್ನು ಪ್ರಚಾರ ಮಾಡಬಾರದು ಎಂದು ಎನ್‌ಬಿಎಸ್‌ಎ ವಾರ್ನಿಂಗ್‌ ನೀಡಿದೆ.

ಟೈಮ್ಸ್‌ ನೌ ಪ್ರಸಾರ ಮಾಡಿದ್ದ ಸ್ಟೋರಿಯು ಆಕ್ಷೇಪಾರ್ಹ ಎಂದು ತೋರಿಸಲಿಲ್ಲ. ಆದರೆ, ಹ್ಯಾಶ್‌ಟ್ಯಾಗ್‌ ಮತ್ತು ಟ್ಯಾಗ್‌ಲೈನ್‌ಗಳು ನಟಿಯ ಮೇಲೆ ಆಕ್ರಮಕಾರಿಯಾಗಿದ್ದವು. ಅದೇ ರೀತಿಯಲ್ಲಿ ಇಂಡಿಯಾ ಟಿವಿಯು ನಟಿಯ ಚಿತ್ರಗಳನ್ನು ಆಕ್ಷೇಪಾರ್ಹ ಮತ್ತು ಅಪಪ್ರಚಾರದ ರೀತಿಯಲ್ಲಿ ಬಳಿಸಿಕೊಂಡಿದೆ. ಇಂಡಿಯಾ ಟುಡೆ ಮತ್ತು ಆಜ್ ತಕ್ ಚಾನೆಲ್‌ಗಳು ಬಳಸಿದ ಟ್ಯಾಗ್‌ಲೈನ್‌ಗಳು ಸಂದರ್ಭದ ಎಲ್ಲೆಯನ್ನೂ ಮೀರಿವೆ ಎಂದು ಎನ್‌ಬಿಎಸ್‌ಎ ತಿಳಿಸಿದೆ.

ನಟಿ ರಕುಲ್ ಪ್ರೀತ್ ಸಿಂಗ್ ಅವರು ಡ್ರಗ್ಸ್‌ ಬಳಸುವುದರಲ್ಲಿ ಅಥವಾ ಪೆಡ್ಲಿಂಗ್ ಮಾಡುವುದರಲ್ಲಿ ಭಾಗಿಯಾಗಿದ್ದಾರೆ ಎಂದು ನಟಿ ರಿಯಾ ಚಕ್ರವರ್ತಿ ನಾರ್ಕೋಟಿಕ್ಸ್ ಕಂಟ್ರೋಲ್ ಬ್ಯೂರೋಗೆ ಹೇಳಿಕೆ ನೀಡಿದ್ದರು. ರಿಯಾ ಚಕ್ರವರ್ತಿ ಅವರ ಆರೋಪವನ್ನು ನಟಿ ರಕುಲ್‌ ನಿರಾಕರಿಸಿದ್ದಾರೆ. ಆದರೆ, ಇದನ್ನು ಈ ಹೆಚ್ಚಿನ ಚಾನೆಲ್‌ಗಳು ವರದಿ ಮಾಡಿಲ್ಲ. ಆರೋಪದ ಸುದ್ದಿಯನ್ನಷ್ಟೇ ಪ್ರಸಾರ ಮಾಡಿ, ನಿರಾಕರಣೆಯ ಸುದ್ದಿಯನ್ನು ಪ್ರಸಾರ ಮಾಡದೇ ಇರುವುದು ನಟನ ವಿರುದ್ದ ಜನರಲ್ಲಿ ಅಭಿಪ್ರಾಯ ಮೂಢಿಸಿದಂತಾಗುತ್ತದೆ ಎಂದು ಎನ್‌ಎಸ್‌ಬಿಎ ಅಭಿಪ್ರಾಯ ಪಟ್ಟಿದೆ.

ಕೇಬಲ್ ಟಿವಿ ನೆಟ್‌ವರ್ಕ್ಸ್ ನಿಯಂತ್ರಣ ಕಾಯ್ದೆಯಡಿ ರೂಪಿಸಲಾದ ಪ್ರೋಗ್ರಾಂ ಕೋಡ್ ಅಡಿಯಲ್ಲಿ ಈ ಟಿವಿ ಚಾನೆಲ್‌ಗಳ ವಿರುದ್ಧ ಕ್ರಮಕೈಗೊಳ್ಳಬೇಕೆಂದು ಕೋರಿ ರಕುಲ್ ಸೆಪ್ಟೆಂಬರ್‌ನಲ್ಲಿ ದೆಹಲಿ ಹೈಕೋರ್ಟ್‌ಗೆ ಮೊರೆ ಹೋಗಿದ್ದರು. ಟಿವಿ ಚಾನೆಲ್‌ಗಳ ವಿರುದ್ಧದ ನಟನ ದೂರುಗಳನ್ನು ಪರಿಶೀಲಿಸುವಂತೆ ನ್ಯಾಯಾಲಯವು ಎನ್‌ಬಿಎಸ್‌ಎಗೆ ನಿರ್ದೇಶನ ನೀಡಿತ್ತು.


ಇದನ್ನೂ ಓದಿ: ರೈತರು ಮತ್ತು ‘ಗೋದಿ ಮೀಡಿಯಾ’: ನ್ಯೂಸ್‌ ಚಾನೆಲ್‌ಗಳ ಧೋರಣೆಗಳೇನು ಓದಿ!

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights