FACT CHECK | ದೆಹಲಿ ರೈತರ ಹೋರಾಟಕ್ಕೆ ನಕಲಿ ರೈತರನ್ನು ಕರೆತರಲಾಗಿದೆ ಎಂದು ಸಂಬಂಧವಿಲ್ಲದ ಸುಳ್ಳು ವಿಡಿಯೋ ಹಂಚಿಕೆ

ದೆಹಲಿಯಲ್ಲಿ ರೈತರ ಹೆಸರಲ್ಲಿ ಪ್ರತಿಭಟನೆಗೆ ತಯಾರಾಗುತ್ತಿರುವ ನಕಲಿ ರೈತರು,  ಪ್ರತಿಯೊಬ್ಬನಿಗೂ ದಿನಕ್ಕೆ ರೂ 5000/- ದುಡ್ಡು  ಒಂದು ಬಾಟಲಿ. ಯಾರಿಗೆ ಬೇಡ ಯಾರಿಗೆ ಬೇಕು. ಈಗ ಜನರಿಗೆ ಅರ್ಥ ಆಗಿರಬಹುದು, ಇವರ ಹೋರಾಟದ ಬಂಡವಾಳ ಎಂಬ ಹೇಳಿಕೆಯೊಂದಿಗೆ ವಾಟ್ಸಾಪ್ ಮತ್ತು ಸಾಮಾಜಿಕ ಮಾಧ್ಯಮಗಳಲ್ಲಿ ಪೋಸ್ಟ್‌ಅನ್ನು ಹಂಚಿಕೊಳ್ಳಲಾಗುತ್ತಿದೆ.

ವಾಟ್ಸಾಪ್‌ನಲ್ಲಿ ಹಂಚಿಕೊಂಡಿರುವ 14 ಸೆಕೆಂಡುಗಳ ವಿಡಿಯೋದಲ್ಲಿ ಸಿಖ್ ಸಮುದಾಯದವರು ಇತರರಿಗೆ ತಮ್ಮ ಸಾಂಪ್ರದಾಯಿಕ ತೊಡುಗೆಯಾದ ಟರ್ಬನ್‌ಅನ್ನು  ತೊಡುಸುತ್ತಿರುವುದನ್ನು ಕಾಣಬಹುದು. ಹಾಗಿದ್ದರೆ ಈ ದೃಶ್ಯಗಳು ದೆಹಲಿ ರೈತ ಹೋರಾಟದ ದೃಶ್ಯಗಳೆ ಎಂದು ವಾಟ್ಸಾಪ್ ವಿಡಿಯೋದಲ್ಲಿ ಮಾಡಿದ ಪ್ರತಿಪಾದನೆಯನ್ನು ಪರಿಶೀಲಿಸೋಣ.

ಫ್ಯಾಕ್ಟ್‌ಚೆಕ್ :

ಸಾಮಾಜಿಕ ಮಾಧ್ಯಮಗಳಲ್ಲಿ ಹಂಚಿಕೊಳ್ಳಲಾದ ವಿಡಿಯೋದಲ್ಲಿ ಮಾಡಿದ ಪ್ರತಿಪಾದನೆಯನ್ನು ಪರಿಶೀಲಿಸಲು ವಿಡಿಯೋದ ಕೀ ಫ್ರೇಮ್‌ಗಳನ್ನು ತೆಗೆದು ಗೂಗಲ್ ಸರ್ಚ್ ಮಾಡಿದಾಗ, 6 ಜೂನ್ 2022 ರಂದು ಟ್ರಿಬ್ಯೂನ್ ಇಂಡಿಯಾದ ಸುದ್ದಿ ತಾಣದಲ್ಲಿ ಪ್ರಕಟವಾದ ಸುದ್ದಿಯೊಂದು ಲಭ್ಯವಾಗಿದೆ.

ಟ್ರಿಬ್ಯೂನ್ ವರದಿಯ ಪ್ರಕಾರ, ಪಂಜಾಬಿ ಗಾಯಕ ಸಿಧು ಮೂಸೆವಾಲಾ ಹತ್ಯೆಯ ನಂತರ ಅವರ ಅಭಿಮಾನಿಗಳು ಸಿಧು ಗೌರವಾರ್ಥ ಯುವಕರು ಪೇಟ ಧರಿಸಿ ಪ್ರಾರ್ಥನಾ ಸಭೆಗೆ ಹಾಜರಾಗುವಂತೆ ಒತ್ತಾಯಿಸಿದ್ದಾರೆ ಎಂದು ವರದಿ ಮಾಡಲಾಗಿದೆ.

ಪಂಜಾಬಿ ಗಾಯಕ ಸಿಧು ಮೂಸೆವಾಲಾ ಅವರಿಗೆ ಅಂತಿಮ ನಮನ ಸಲ್ಲಿಸಲು ಪಂಜಾಬ್‌ನ ಮಾನಸಾ ಜಿಲ್ಲೆಯಲ್ಲಿ ನೆರೆದಿದ್ದ ಅಭಿಮಾನಿಗಳು ಮತ್ತು ಇತರರಿಗೆ ತನ್ನ ಮಗನ ನೆನಪಿಗಾಗಿ ಎಲ್ಲರೂ ಸಸಿ ನೆಡುವಂತೆ ಸಿಧು ತಾಯಿ ಮನವಿ ಮಾಡಿದರು.

ಮೂಸೆವಾಲಾ ಅವರಿಗೆ ಅಂತಿಮ ನಮನ ಸಲ್ಲಿಸಲು ಹಿಂದೂ ಮತ್ತು ಮುಸ್ಲಿಂ ಸಮುದಾಯದವರು ಸಿಖ್ ಸಮುದಾಯದ ಸಾಂಪ್ರದಾಯಕ ಪೇಟವನ್ನು ಧರಿಸುವ ಮೂಲಕ ಗೌರವ ಸಲ್ಲಿಸಿದರು ಎಂದು  ‘ಸರ್ದಾರಿಯನ್ ಟ್ರಸ್ಟ್ ಟರ್ಬನ್ ‘ ಫೇಸ್‌ಬುಕ್ ಪೇಜ್‌ನಲ್ಲಿ 2022 ಜೂನ್‌ 10ರಂದು ವಿಡಿಯೋವನ್ನು ಹಂಚಿಕೊಳ್ಳಲಾಗಿದೆ.

2022 ಮೇ 9 ರಂದು ಹಂತಕರ ಗುಂಡಿಗೆ ಬಲಿಯಾದ ಪಂಜಾಬಿನ ಗಾಯಕ ಸಿಧು ಮೂಸೆವಾಲಾ ಅವರ ಅಂತಿಮ ನಮನ ಕಾರ್ಯಕ್ರಮಕ್ಕೆ ಹಾಜರಿದ್ದ ಹಿಂದೂ ಮತ್ತು ಮುಸ್ಲಿಂ ಸಮುದಾಯದ ಅಭಿಮಾನಿಗಳಿಗೆ ಸಿಖ್ ಸಂಪ್ರದಾಯದ ಟರ್ಬನ್ ಪೇಟಾವನ್ನು ತೊಡುತ್ತಿರುವ ದೃಶ್ಯಗಳನ್ನು, ಕೇಂದ್ರ ಸರ್ಕಾರದ ವಿರುದ್ಧ ದೆಹಲಿಯ ಗಡಿ ಭಾಗದಲ್ಲಿ ನಡೆಯುತ್ತಿರುವ ರೈತ ಹೋರಾಟಕ್ಕೆ ಲಿಂಕ್ ಮಾಡಿ ಸುಳ್ಳು ಪ್ರತಿಪಾದನೆಯೊಂದಿಗೆ ರೈತರ ವೇಷ ಧರಿಸಿ ನಕಲಿ ಹೋರಾಟಗಾರರನ್ನು ಹಣ ಕೊಟ್ಟು ಕರೆತಂದಿದ್ದಾರೆ ಎಂದು ಸುಳ್ಳು ಪ್ರತಿಪಾದನೆಯೊಂದಿಗೆ ಹಂಚಿಕೊಂಡಿದ್ದಾರೆ. ಹಾಗಾಗಿ ಪೋಸ್ಟ್‌ನಲ್ಲಿ ಮಾಡಿದ ಪ್ರತಿಪಾದನೆ ತಪ್ಪಾಗಿದೆ.

ನಿಮ್ಮ ಸುತ್ತಮುತ್ತ ಮತ್ತು ಸಾಮಾಜಿಕ ಜಾಲತಾಣಗಳಲ್ಲಿ ಯಾವುದೇ ಸುದ್ದಿಯು ಸುಳ್ಳು ಎಂದು ನಿಮಗೆ ಸಂದೇಹ ಬಂದಿದ್ದರೆ ಅದನ್ನು Ensuddi.com ವಾಟ್ಸಾಪ್  ನಂ 9108969301 ಗೆ ತಲುಪಿಸಿ. ನಾವು ಫ್ಯಾಕ್ಟ್‌ಚೆಕ್ ಮಾಡಿ ಸತ್ಯ ನಿಮ್ಮೆದುರು ಇಡುತ್ತೇವೆ


ಇದನ್ನು ಓದಿರಿ : ಫ್ಯಾಕ್ಟ್‌ಚೆಕ್ : ರೈತ ಹೋರಾಟದಲ್ಲಿ ಟ್ರಾಕ್ಟರ್‌ಗಳನ್ನು ಟ್ಯಾಂಕರ್‌ಗಳಂತೆ ವಿನ್ಯಾಸ ಮಾಡಿದ್ದಾರೆಂದು ಸುಳ್ಳು ಸುದ್ದಿ ಹಂಚಿಕೆ


 

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights