FACT CHECK | ಸೌದಿ ಅರೇಬಿಯಾದಲ್ಲಿ ದೀಪಾವಳಿ ಆಚರಣೆ ಮಾಡಲಾಗಿದೆ ಎಂದು ಹಳೆಯ ಸಂಬಂಧವಿಲ್ಲದ ವಿಡಿಯೋ ಹಂಚಿಕೆ
ಸೌದಿ ಅರೇಬಿಯಾದಲ್ಲಿ ಬೆಳಕಿನ ಹಬ್ಬ ದೀಪಾವಳಿಯನ್ನು ಆಚರಿಸಲಾಗುತ್ತಿದೆ ಎಂಬ ಪ್ರತಿಪಾದನೆಯೊಂದಿಗೆ ಸಾಮಾಜಿಕ ಮಾಧ್ಯಮಗಳಲ್ಲಿ ವಿಡಿಯೋವೊಂದು ಪ್ರಸಾರವಾಗುತ್ತಿದೆ. ಬಾನಂಗಳದಲ್ಲಿ ಪಟಾಕಿಗಳು ಸದ್ದು ಮಾಡುತ್ತಿರುವುದನ್ನು ಪುರುಷರು ಮತ್ತು ಬುರ್ಖಾ ಧರಿಸಿದ ಮಹಿಳೆಯರು ವೀಕ್ಷಿಸಿ ಸಂಭ್ರಮಿಸುತ್ತಿರುವುದನ್ನು ನೋಡಬಹುದು.

‘‘ಸೌದಿ ಅರೇಬಿಯಾ ಕೂಡ ರಾಮನ ಆಗಮನವನ್ನು ಸಂಭ್ರಮಿಸುತ್ತಿದೆ ಎಂಬ ಹೇಳಿಕೆಯೊಂದಿಗೆ ಎಕ್ಸ್ ಬಳಕೆದಾರರೊಬ್ಬರು ವಿಡಿಯೋವನ್ನು ಹಂಚಿಕೊಂಡು, ಇಲ್ಲಿನ ಮತಾಂತರಗೊಂಡ ಜನರಿಗೆ ತೋರಿಸಿ. ಜೈ ಶ್ರೀ ರಾಮ್’’ ಎಂದು ಬರೆದುಕೊಂಡಿದ್ದಾರೆ. ಹಾಗೆಯೆ ಫೇಸ್ಬುಕ್ ಬಳಕೆದಾರರೊಬ್ಬರು ಈ ವೀಡಿಯೊಕ್ಕೆ ‘‘ನಾಗಾಲ್ಯಾಂಡ್ ನಲ್ಲಿ ಹಿಂದೂಗಳು ದೀಪಾವಳಿ ಆಚರಿಸಿದ್ದು ಅಧ್ಭುತ.’’ ಎಂದು ಹೇಳಿಕೊಂಡಿದ್ದಾರೆ. ಹಾಗಿದ್ದರೆ ಪೋಸ್ಟ್ನಲ್ಲಿ ಮಾಡಿದ ಪ್ರತಿಪಾದನೆ ನಿಜವೇ ಎಂದು ಪರಿಶೀಲಿಸೋಣ.
ಫ್ಯಾಕ್ಟ್ಚೆಕ್ :
ಸಾಮಾಜಿಕ ಮಾಧ್ಯಮಗಳಲ್ಲಿ ಹಂಚಿಕೊಳ್ಳುತ್ತಿರುವ ವಿಡಿಯೋದಲ್ಲಿ ತಿಳಿಸಿರುವಂತೆ ಸೌದಿ ಅರೇಬಿಯಾದಲ್ಲಿ ದೀಪಾವಳಿ ಹಬ್ಬವನ್ನು ಆಚರಿಸಲಾಗಿದೆಯೇ ಎಂದು ಪರಿಶೀಲಿಸಲು ಗೂಗಲ್ ರಿವರ್ಸ್ ಇಮೇಜಸ್ನಲ್ಲಿ ಸರ್ಚ್ ಮಾಡಿದಾಗ, ಸೌದಿ ಅರೇಬಿಯಾದಲ್ಲಿ ನಡೆದ ರಾಷ್ಟ್ರೀಯ ದಿನಾಚರಣೆ ವೇಳೆ ತೆಗೆದ ವಿಡಿಯೋ ಎಂಬ ಮಾಹಿತಿ ಲಭ್ಯವಾಗಿದೆ.
ಸೆಪ್ಟೆಂಬರ್ ತಿಂಗಳ ಹಿಂದೆ ಅನೇಕ ಸಾಮಾಜಿಕ ಮಾಧ್ಯಮಗಳ ಬಳಕೆದಾರರು ಇದೇ ವಿಡಿಯೋವನ್ನು ವ್ಯಾಪಕವಾಗಿ ಹಂಚಿಕೊಂಡು ಇದು ಸೌದಿ ಅರೇಬಿಯಾದ 94 ನೇ ರಾಷ್ಟ್ರೀಯ ದಿನದಂದು ಆಚರಣೆ ಮಾಡಿದ ಸಿಡಿಮದ್ದಿನ ಪ್ರದರ್ಶನವಾಗಿದೆ ಎಂದು ಹೇಳಿಕೊಂಡಿದ್ದಾರೆ.
ಎಜಾಜ್ ಖಾನ್ ಎಂಬ ಬಳಕೆದಾರರು ಈ ವೀಡಿಯೊವನ್ನು ಸೆಪ್ಟೆಂಬರ್ 21, 2024 ರಂದು ಪೋಸ್ಟ್ ಮಾಡಿದ್ದಾರೆ. ಹಾಗೆಯೆ ಅನೇಕ ಬಳಕೆದಾರರು 22 ಮತ್ತು 23 ಸೆಪ್ಟೆಂಬರ್ 2024 ರಂದು ಇನ್ಸ್ಟಾಗ್ರಾಮ್ನಲ್ಲಿ ಈ ವೀಡಿಯೊವನ್ನು ಹಂಚಿಕೊಂಡಿದ್ದಾರೆ. ಈ ಬಳಕೆದಾರರು ಈ ವೀಡಿಯೊವನ್ನು ಸೌದಿ ಅರೇಬಿಯಾ ರಾಷ್ಟ್ರೀಯ ದಿನ ಎಂದೂ ವಿವರಿಸಿದ್ದಾರೆ.
ಇದನ್ನು ಆಧಾರವಾಗಿಟ್ಟುಕೊಂಡು ಗೂಗಲ್ ನಲ್ಲಿ ಕೀವರ್ಡ್ ಬಳಸಿ ಗೂಗಲ್ ಸರ್ಚ್ ಮಾಡಿದಾಗ, ಸೆಪ್ಟೆಂಬರ್ 23 ರಂದು, ಸೌದಿ ಅರೇಬಿಯಾದ 94 ನೇ ರಾಷ್ಟ್ರೀಯ ದಿನಾಚರಣೆಯ ಸಂದರ್ಭದಲ್ಲಿ ದೇಶದ ವಿವಿಧ ಭಾಗಗಳಲ್ಲಿ ಪಟಾಕಿ ಸಿಡಿಸಲಾಯಿತು ಎಂದು ಗಲ್ಫ್ ನ್ಯೂಸ್ ವರದಿ ಮಾಡಿರುವುದು ಲಭ್ಯವಾಗಿದೆ.
ಒಟ್ಟಾರೆಯಾಗಿ ಹೇಳುವುದಾದರೆ, ಸೆಪ್ಟಂಬರ್ ತಿಂಗಳಿನಲ್ಲಿ ಸೌದಿ ಅರೇಬಿಯಾದ 94 ನೇ ರಾಷ್ಟ್ರೀಯ ದಿನಾಚರಣೆಯನ್ನು ದೇಶದ ವಿವಿಧ ಭಾಗಗಳಲ್ಲಿ ಆಚರಿಸಲಾದ ವಿಡಿಯೋವನ್ನು, ಸೌದಿ ಅರೇಬಿಯಾದಲ್ಲಿ ಈ ವರ್ಷದ ದೀಪಾವಳಿ ಆಚರಣೆ ಎಂದು ತಪ್ಪಾಗಿ ಹಂಚಿಕೊಳ್ಳಲಾಗಿದೆ. ಹಾಗಾಗಿ ಈ ವೈರಲ್ ವಿಡಿಯೋ ಸೌದಿ ಅರೇಬಿಯಾದಲ್ಲಿ ಈ ವರ್ಷದ ದೀಪಾವಳಿ ಆಚರಣೆಗಳಿಗೆ ಸಂಬಂಧಿಸಿಲ್ಲ ಎಂಬುದು ಸ್ಪಷ್ಟವಾಗಿದೆ.
ನಿಮ್ಮ ಸುತ್ತಮುತ್ತ ಮತ್ತು ಸಾಮಾಜಿಕ ಜಾಲತಾಣಗಳಲ್ಲಿ ಯಾವುದೇ ಸುದ್ದಿಯು ಸುಳ್ಳು ಎಂದು ನಿಮಗೆ ಸಂದೇಹ ಬಂದಿದ್ದರೆ ಅದನ್ನು Ensuddi.com ವಾಟ್ಸಾಪ್ ನಂ 9108969301 ಗೆ ತಲುಪಿಸಿ. ನಾವು ಫ್ಯಾಕ್ಟ್ಚೆಕ್ ಮಾಡಿ ಸತ್ಯ ನಿಮ್ಮೆದುರು ಇಡುತ್ತೇವೆ
ಇದನ್ನು ಓದಿರಿ : FACT CHECK | ಮನೆ ಮುಂದೆ ರಂಗೋಲಿ ಹಾಕುತ್ತಿದ್ದ ಹುಡುಗಿಯರ ಮೇಲೆ ಕಾರು ಚಲಾಯಿಸಿದ ಘಟನೆ ಹಿಂದೆ ಮುಸ್ಲಿಮರ ಕೈವಾಡ ಇದೆಯೇ?

