FACT CHECK | ಮನೆ ಮುಂದೆ ರಂಗೋಲಿ ಹಾಕುತ್ತಿದ್ದ ಹುಡುಗಿಯರ ಮೇಲೆ ಕಾರು ಚಲಾಯಿಸಿದ ಘಟನೆ ಹಿಂದೆ ಮುಸ್ಲಿಮರ ಕೈವಾಡ ಇದೆಯೇ?
ಸೋಶಿಯಲ್ ಮೀಡಿಯಾದಲ್ಲಿ ವಿಡಿಯೋವೊಂದು ವೈರಲ್ ಆಗುತ್ತಿದ್ದು, ಮನೆಯ ಮುಂದೆ ರಂಗೋಲಿ ಹಾಕುತ್ತಿದ್ದ ಇಬ್ಬರು ಹುಡುಗಿಯರ ಮೇಲೆ ನಿಯಂತ್ರಣ ತಪ್ಪಿದ ಕಾರೊಂದು ಏಕಾಏಕಿ ನುಗ್ಗಿರುವುದನ್ನು ಈ ವಿಡಿಯೋದಲ್ಲಿ ಕಾಣಬಹುದು. ಹಿಂದೂ ಸಮುದಾಯದ ಸಹೋದರಿಯರು ಮತ್ತು ಹೆಣ್ಣು ಮಕ್ಕಳನ್ನು ಗುರಿಯಾಗಿಸಿಕೊಂಡು ಈ ಕೃತ್ಯ ಎಸಗಲಾಗಿದೆ ಎಂದು ಪ್ರತಿಪಾದಿಸಿ ಪೋಸ್ಟ್‌ಅನ್ನು ಹಂಚಿಕೊಂಡಿದ್ದಾರೆ.

ನವೆಂಬರ್ 1, 2024 ರಂದು ಫೇಸ್ಬುಕ್ ಬಳಕೆದಾರರೊಬ್ಬರು ಈ ವೀಡಿಯೊವನ್ನು ಹಂಚಿಕೊಂಡು, ‘‘ಇದೆಲ್ಲ ಈ ಜಿಹಾದಿಗಳ ಪ್ಲಾನ್. ಹಿಂದೂಗಳು ಮತ್ತು ಹಿಂದೂಗಳ ಸಹೋದರಿಯರು ಮತ್ತು ಹಿಂದೂಗಳ ಹೆಣ್ಣುಮಕ್ಕಳನ್ನು ಕೊಲ್ಲಲಾಗುತ್ತಿದೆ, ಇದು ಅಪಘಾತ ಎಂದು ಹಿಂದೂಗಳು ಭಾವಿಸುತ್ತಿದ್ದಾರೆ. ಈ ವಿಡಿಯೋ ಎಲ್ಲಿಂದ ಬಂದಿದೆಯೋ ಗೊತ್ತಿಲ್ಲ, ಆದರೆ ಹೆಣ್ಣಿನ ಮೇಲೆ ವಾಹನಗಳನ್ನು ಓಡಿಸುವ ಉದ್ದೇಶವೂ ಅದೇ, ಈ ಮುಸ್ಲಿಂ ಯುವಕರು ಸಂಪೂರ್ಣ ಸಿದ್ದತೆ ಮಾಡಿಕೊಂಡಿದ್ದಾರೆ. ಹಿಂದೂಗಳು ಶಾಂತಿಯುತವಾಗಿ ಮೇಣದ ಬತ್ತಿಗಳನ್ನು ಬೆಳಗಿಸುವುದು ಬಿಟ್ಟು ಬೇರೇನೂ ಮಾಡಲ್ಲ ಅಂತ ಅವರಿಗೂ ಗೊತ್ತು’’ ಎಂದು ಬರೆದುಕೊಂಡಿದ್ದಾರೆ.
ಹಾಗೆಯೆ ಎಕ್ಸ್ ಬಳಕೆದಾರರೊಬ್ಬರು, ‘‘ಜಿಹಾದಿಗಳ ಪಿತೂರಿ ಅರಿಯದೆ ನಾವು ಮೋಸ ಹೋಗುತ್ತಿದ್ದೇವೆ. ಹಿಂದೂ ಹೆಣ್ಣುಮಕ್ಕಳನ್ನು ಆ್ಯಕ್ಸಿಡೆಂಟ್ ಮೂಲಕ ಕೊಲ್ಲಲಾಗುತ್ತಿದೆ, ಇದು ಅಪಘಾತ ಎಂದು ಹಿಂದೂಗಳು ಭಾವಿಸುತ್ತಿದ್ದಾರೆ. ಎಚ್ಚೆತ್ತು ಕೊಳ್ಳಿ ಹಿಂದೂ ಬಾಂಧವರೆ’’ ಎಂದು ಬರೆದು ಇದೇ ವೀಡಿಯೊ ಅಪ್ಲೋಡ್ ಮಾಡಿದ್ದಾರೆ.
ಫ್ಯಾಕ್ಟ್‌ಚೆಕ್ :
ಈ ಸುದ್ದಿಯ ಸತ್ಯಾಸತ್ಯತೆಯನ್ನು ನ್ಯೂಸ್ ಮೀಟರ್ ಪರಿಶೋದಿಸಿದಾಗ ಸುಳ್ಳು ಹೇಳಿಕೆಯೊಂದಿಗೆ ಈ ವೀಡಿಯೊ ವೈರಲ್ ಆಗುತ್ತಿದೆ ಎಂಬುದು ಕಂಡುಬಂದಿದೆ. ಈ ಘಟನೆಯಲ್ಲಿ ಯಾವುದೇ ಕೋಮು ಕೋನವಿಲ್ಲ. ಇಬ್ಬರು ಹುಡುಗಿಯರ ಮೇಲೆ ಕಾರು ಹತ್ತಿಸಿದ ವ್ಯಕ್ತಿಯನ್ನು ಪೊಲೀಸರು ಬಂಧಿಸಿದ್ದು, ಆತ ಹಿಂದೂ ಆಗಿದ್ದಾರೆ.
ಸಾಮಾಜಿಕ ಮಾಧ್ಯಮಗಳಲ್ಲಿ ಹಂಚಿಕೊಳ್ಳಲಾಗುತ್ತಿರುವ ವೈರಲ್ ವಿಡಿಯೋದ ಸ್ಕ್ರೀನ್ ಶಾಟ್ ತೆಗೆದುಕೊಂಡು ಗೂಗಲ್ ರಿವರ್ಸ್ ಇಮೇಜಸ್‌ನಲ್ಲಿ ಸರ್ಚ್ ಮಾಡಿದಾಗ, ಈ ಘಟನೆಯ ಬಗ್ಗೆ ಎಬಿಪಿ ನ್ಯೂಸ್, ಎನ್‌ಬಿಟಿ ಮತ್ತು ಟಿವಿ-9 ಭಾರತವರ್ಷ ಅಕ್ಟೋಬರ್ 29, 2024 ರಂದು ಪ್ರಕಟಿಸಿರುವ ವರದಿ ಲಭ್ಯವಾಗಿದೆ. ವರದಿಯ ಪ್ರಕಾರ, ಈ ಘಟನೆಯಲ್ಲಿ ಆರೋಪಿ ಕಾರು ಚಾಲಕನ ಹೆಸರನ್ನು ತುಷಾರ್ ಅಗರ್ವಾಲ್ ಎಂದು ಉಲ್ಲೇಖಿಸಲಾಗಿದೆ.

‘‘ಇಂದೋರ್‌ನ ಜೈಭವಾನಿ ನಗರದಲ್ಲಿ ಇಬ್ಬರು ಹುಡುಗಿಯರು ನವ್ಯಾ ಪ್ರಜಾಪತ್ ಮತ್ತು ಪ್ರಿಯಾಂಶು ತಮ್ಮ ಮನೆಯ ಹೊರಗೆ ರಂಗೋಲಿ ಹಾಕುತ್ತಿದ್ದರು. ಅಷ್ಟರಲ್ಲಿ ಕಾರು ಚಾಲಕನೊಬ್ಬ ಅತಿವೇಗದಲ್ಲಿ ಬಂದು ಬಾಲಕಿಯರ ಮೇಲೆ ಕಾರು ಚಲಾಯಿಸಿದ್ದಾನೆ. ಕಾರಿನ ಸಂಖ್ಯೆ MP 09 ZW 7287 ಆಗಿದ್ದು, ಇದನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ. ಕಾರು ಮಾಲೀಕನ ಹೆಸರು ತುಷಾರ್ ಅಗರ್ವಾಲ್, ಅವರು ಹುಕುಮಚಂದ್ ಕಾಲೋನಿ ನಿವಾಸಿ. ಘಟನೆ ಬಳಿಕ ಸ್ಥಳದಿಂದ ಪರಾರಿಯಾಗಿದ್ದರೂ ನಂತರ ಆತ ಪೊಲೀಸರ ಕೈಗೆ ಸಿಕ್ಕಿಬಿದ್ದಿದ್ದಾನೆ’’ ಎಂದು ವರದಿಯಲ್ಲಿ ಉಲ್ಲೇಖಿಸಲಾಗಿದೆ.
ಒಟ್ಟಾರೆಯಾಗಿ ಹೇಳುವುದಾದರೆ, ಇಂದೋರ್‌ನ ಜೈಭವಾನಿ ನಗರದಲ್ಲಿ, ತಮ್ಮ ಮನೆಯ ಹೊರಗೆ ರಂಗೋಲಿ ಹಾಕುತ್ತಿದ್ದ ಇಬ್ಬರು ಹುಡುಗಿಯರ ಮೇಲೆ ಕಾರು ಹರಿದು ಗಂಭೀರವಾಗಿ ಗಾಯಗೊಂಡ ಘಟನೆಗೆ ಯಾವುದೇ ಕೋಮು ಆಯಾಮವಿಲ್ಲ. ಘಟನೆ ಸಂಬಂಧ ಕಾರು ಚಾಲಕ ತುಷಾರ್ ಅಗರ್‌ವಾಲ್ ಎಂಬಾತನನ್ನು ಪೊಲೀಸರು ಬಂಧಿಸಿದ್ದಾರೆ. ಹಾಗಾಘಿ ಪೋಸ್ಟ್‌ನಲ್ಲಿ ಮಾಡಿದ ಪ್ರತಿಪಾದನೆ ತಪ್ಪಾಗಿದೆ.
ನಿಮ್ಮ ಸುತ್ತಮುತ್ತ ಮತ್ತು ಸಾಮಾಜಿಕ ಜಾಲತಾಣಗಳಲ್ಲಿ ಯಾವುದೇ ಸುದ್ದಿಯು ಸುಳ್ಳು ಎಂದು ನಿಮಗೆ ಸಂದೇಹ ಬಂದಿದ್ದರೆ ಅದನ್ನು Ensuddi.com ವಾಟ್ಸಾಪ್ ನಂ 9108969301 ಗೆ ತಲುಪಿಸಿ. ನಾವು ಫ್ಯಾಕ್ಟ್‌ಚೆಕ್ ಮಾಡಿ ಸತ್ಯ ನಿಮ್ಮೆದುರು ಇಡುತ್ತೇವೆ
ಇದನ್ನು ಓದಿರಿ : FACT CHECK | ಕರ್ನಾಟಕದಲ್ಲಿ ಮುಸ್ಲಿಂ ವ್ಯಕ್ತಿಯೊಬ್ಬ ಪೊಲೀಸರಿಗೆ ಧಮ್ಕಿ ಹಾಕಿದ್ದಾನೆ ಎಂದು ಸಂಬಂಧವಿಲ್ಲದ ವಿಡಿಯೋ ಹಂಚಿಕೆ

