FACT CHECK | ನನ್ನ ಬಳಿ ಕೋಟಿ ಕೋಟಿ ಹಣವಿದೆ, ನಾನು ಲಂಡನ್‌ಗೆ ಹೋಗಿ ಸೆಟಲ್ ಆಗ್ತೀನಿ ಅಂದ್ರಾ ರಾಹುಲ್ ಗಾಂಧಿ?

ಲೋಕಸಭೆ ವಿರೋಧ ಪಕ್ಷದ ನಾಯಕ ರಾಹುಲ್‌ ಗಾಂಧಿಗೆ ಸಂಬಂಧಿಸಿದಂತೆ ಫೇಸ್‌ಬುಕ್‌ನಲ್ಲಿ ವಿಡಿಯೋವೊಂದು ಪ್ರಸಾರವಾಗುತ್ತಿದ್ದು ನಾನು ಲಂಡನ್‌ಗೆ ಹೋಗಿ ಸೆಟಲ್‌ ಆಗ್ತೀನಿ, ನನ್ನತ್ರ ಕೋಟಿ ಕೋಟಿ ರೂಪಾಯಿ ಇದೆ, ನನ್ನ ಮಕ್ಕಳು ವಿದೇಶದಲ್ಲಿ ಓದ್ತಾರೆ ಎಂದು ರಾಹುಲ್ ಗಾಂಧಿ ಹೇಳುತ್ತಿದ್ದಾರೆ ಎಂದು ಪ್ರತಿಪಾದಿಸಿ ಸಾಮಾಜಿಕ ಮಾಧ್ಯಮಗಳಲ್ಲಿ ಪೋಸ್ಟ್‌ಅನ್ನು ಹಂಚಿಕೊಳ್ಳಲಾಗುತ್ತಿದೆ.

ಕುಮಾರಸ್ವಾಮಿ ಎಂಟಿ ಎಂಬ ಫೇಸ್‌ಬುಕ್‌ ಬಳಕೆದಾರರು ಈ ವಿಡಿಯೋವನ್ನು ಹಂಚಿಕೊಂಡಿದ್ದು, ರಾಹುಲ್‌ ಗಾಂಧಿ ಅವರು ನಾನು ಲಂಡನ್‌ಗೆ ಹೋಗಿ ಸೆಟಲ್‌ ಆಗ್ತೀನಿ, ನನ್ನತ್ರ ಕೋಟಿ ಕೋಟಿ ರೂಪಾಯಿ ಇದೆ, ನನ್ನ ಮಕ್ಕಳು ವಿದೇಶದಲ್ಲಿ ಓದ್ತಾರೆ ಅಂತಾ ಹೇಳ್ತಾರೆ. ಅದಲ್ಲದೇ ವಿಡಿಯೋದ ಕೆಳ ಭಾಗದಲ್ಲಿ, ಅಪ್ಘಾನಿಸ್ತಾನ, ಸಿರಿಯಾ, ಬಾಂಗ್ಲಾದೇಶ ಇತರೇ ಮುಸ್ಲಿಂ ದೇಶಗಳಲ್ಲಿ ಆದಂತೆ, ಬೇರೆ ದೇಶಗಳಿಗೆ ಓಡಿ ಹೋಗ್ತೀರಿ. ನಿಮ್ಮ ನಂಬಿದರೆ ಭಾರತೀಯರ ಕಥೆ ಅಷ್ಟೇ ಎಂದು ಬರೆಯಲಾಗಿದೆ. ಈ 11 ಸೆಕೆಂಡ್‌ಗಳ ವಿಡಿಯೋವನ್ನು ಡಿಸೆಂಬರ್‌ 11 ರಂದು ಫೇಸ್‌ಬುಕ್‌ನಲ್ಲಿ ಹಂಚಿಕೊಳ್ಳಲಾಗಿದ್ದು, ಐದು ಸಾವಿರಕ್ಕೂ ಹೆಚ್ಚು ಲೈಕ್‌ ಪಡೆದಿದ್ದು, 450ಕ್ಕೂ ಹೆಚ್ಚು ಕಮೆಂಟ್‌ಗಳು ಬಂದಿವೆ. 4 ಸಾವಿರಕ್ಕೂ ಹೆಚ್ಚು ಬಾರಿ ಹಂಚಿಕೊಳ್ಳಲಾಗಿದೆ.

ಸಾಮಾಜಿಕ ಮಾಧ್ಯಮಗಳಲ್ಲಿ ಹಂಚಿಕೊಳ್ಳಲಾಗುತ್ತಿರುವ ಈ ವಿಡಿಯೋ ನಿಜವೇ ? ಈ ರೀತಿ ರಾಹುಲ್ ಗಾಂಧಿ ಯಾವಾಗ ಹೇಳಿದ್ದಾರೆ? ಇದರ ಸತ್ಯಾಸತ್ಯತೆ ಏನು ಎಂದು ಪರಿಶೀಲಿಸೋಣ.

ಫ್ಯಾಕ್ಟ್‌ಚೆಕ್ :

ಸಾಮಾಜಿಕ ಮಾಧ್ಯಮಗಳಲ್ಲಿ ವೈರಲ್ ಆಗಿರುವ ರಾಹುಲ್ ಗಾಂಧಿಯವರ ವಿಡಿಯೋದ ಸತ್ಯಾಸತ್ಯತೆಯನ್ನು ಪರಿಶೀಲಿಸಲು, ವಿಡಿಯೋದ ಸ್ಕ್ರೀನ್‌ ಶಾಟ್‌ ತೆಗೆದು ಗೂಗಲ್‌ ರಿವರ್ಸ್‌ ಇಮೇಜಸ್‌ನಲ್ಲಿ ಸರ್ಚ್ ಮಾಡಿದಾಗ, 2019ರಲ್ಲಿ ರಾಹುಲ್‌ ಗಾಂಧಿ ಮಾಡಿದ ಭಾಷಣದ ವಿಡಿಯೋ ಲಭ್ಯವಾಗಿದೆ. 2019 ಅಕ್ಟೋಬರ್‌ 13ರಂದು ಮಹಾರಾಷ್ಟ್ರದ ಲತೂರ್‌ನಲ್ಲಿ ರಾಹುಲ್‌ ಗಾಂಧಿ ಚುನಾವಣೆ ಭಾಷಣದ ವಿಡಿಯೋವನ್ನು ಕೇವಲ 11 ಸೆಕೆಂಡ್‌ ಕಟ್‌ ಮಾಡಿ ವೈರಲ್‌ ಮಾಡಿರುವುದು ಗೊತ್ತಾಗಿದೆ.

ಈ ವಿಡಿಯೋವನ್ನು ಭಾರತೀಯ ರಾಷ್ಟ್ರೀಯ ಕಾಂಗ್ರೆಸ್‌ ತನ್ನ ಅಧಿಕೃತ ಯೂಟ್ಯೂಬ್‌ ಚಾನಲ್‌ನಲ್ಲಿ ಅಪ್‌ಲೋಡ್‌ ಮಾಡಿದೆ. ರಾಹುಲ್‌ ಗಾಂಧಿ ಅವರು ಬ್ಯಾಂಕಿಗೆ ವಂಚನೆ ಎಸಗಿ ವಿದೇಶಕ್ಕೆ ಪರಾರಿಯಾದವರ ಬಗ್ಗೆ ಮಾತನಾಡಿದ್ದು, ಅದನ್ನು ಎಡಿಟ್‌ ಮಾಡಿ ಜನರನ್ನು ದಾರಿ ತಪ್ಪಿಸುವ ಸಲುವಾಗಿ ವೈರಲ್‌ ಮಾಡಲಾಗಿದೆ. ಯೂಟ್ಯೂಬ್‌ನಲ್ಲಿ ಅಪ್‌ಲೋಡ್‌ ಮಾಡಲಾದ ವಿಡಿಯೋದ 15.10 ಸೆಕೆಂಡ್‌ಗಳಿಂದ ರಾಹುಲ್‌ ಗಾಂಧಿ ಅವರು ನೀರವ್‌ ಮೋದಿ ಹಾಗೂ ಮೆಹುಲ್‌ ಚೋಕ್ಸಿ ಬಗ್ಗೆ ಮಾತನಾಡಿದ್ದು, ನೀರವ್‌ ಮೋದಿ, ಮೆಹುಲ್‌ ಚೋಕ್ಸಿ ಯಾವುದೇ ಭಯವಿಲ್ಲದೇ ನಿದ್ದೆ ಮಾಡಬಹುದು. ಏನು ಆಗಲ್ಲ, ನಾನು ಲಂಡನ್‌ಗೆ ಹೋಗ್ತೀನಿ, ನನ್ನ ಮಕ್ಕಳು ಅಮೆರಿಕಕ್ಕೆ ಹೋಗಿ ಹೋಗ್ತಾರೆ, ನನಗೆ ಭಾರತದ ಜೊತೆ ಏನು ಕೆಲಸ ಇಲ್ಲ. ನಾನು ನರೇಂದ್ರ ಮೋದಿ ಸ್ನೇಹಿತ, ನನ್ನ ಬಳಿ ಸಾವಿರಾರು ಕೋಟಿ ರೂ. ಹಣ ಇದೆ, ನಾನು ಯಾವಾಗ ಬೇಕಾದರೂ ಹೋಗಬಹುದು. ಇದು ಭಾರತದ ವಾಸ್ತವ ಎಂದು ರಾಹುಲ್‌ ಗಾಂಧಿ ಹೇಳಿರುವುದನ್ನು ಮೂಲ ವಿಡಿಯೋದಲ್ಲಿ ಕಾಣಬಹುದು. ಅದರಲ್ಲಿ ನಾನು ಲಂಡನ್‌ಗೆ ಹೋಗ್ತೀನಿ, ನನ್ನ ಬಳಿ ಕೋಟಿ ಕೋಟಿ ರೂಪಾಯಿ ಇದೆ, ನನ್ನ ಮಕ್ಕಳು ವಿದೇಶದಲ್ಲಿ ಓದ್ತಾರೆ ಎಂಬ 11 ಸೆಕೆಂಡ್‌ ಭಾಷಣವನ್ನು ಕಟ್‌ ಮಾಡಿ, ಎಡಿಟ್‌ ಮಾಡಿ ವೈರಲ್‌ ಮಾಡಲಾಗಿದೆ.

ಒಟ್ಟಾರೆಯಾಗಿ ಹೇಳುವುದಾದರೆ, 2019 ಅಕ್ಟೋಬರ್‌ 13ರಂದು ಮಹಾರಾಷ್ಟ್ರದ ಲತೂರ್‌ನಲ್ಲಿ ರಾಹುಲ್‌ ಗಾಂಧಿ ಚುನಾವಣೆ ಭಾಷಣದ ಹಳೆಯ ವಿಡಿಯೋವನ್ನು ಎಡಿಟ್‌ ಮಾಡಿ  ಸುಳ್ಳು ಮತ್ತು ತಪ್ಪಾಗಿ ಹಂಚಿಕೊಳ್ಳಲಾಗಿದೆ. ಹಾಗಾಗಿ ಪೋಸ್ಟ್‌ನಲ್ಲಿ ಮಾಡಿದ ಪ್ರತಿಪಾದನೆ ತಪ್ಪಾಗಿದೆ.

ನಿಮ್ಮ ಸುತ್ತಮುತ್ತ ಮತ್ತು ಸಾಮಾಜಿಕ ಜಾಲತಾಣಗಳಲ್ಲಿ ಯಾವುದೇ ಸುದ್ದಿಯು ಸುಳ್ಳು ಎಂದು ನಿಮಗೆ ಸಂದೇಹ ಬಂದಿದ್ದರೆ ಅದನ್ನು Ensuddi.com ವಾಟ್ಸಾಪ್  ನಂ 9108969301 ಗೆ ತಲುಪಿಸಿ. ನಾವು ಫ್ಯಾಕ್ಟ್‌ಚೆಕ್ ಮಾಡಿ ಸತ್ಯ ನಿಮ್ಮೆದುರು ಇಡುತ್ತೇವೆ


ಇದನ್ನು ಓದಿರಿ : FACT CHECK | ಮೋದಿ ಮತ್ತು ಯೋಗಿ ಜೈಲಿನಲ್ಲಿರಬೇಕಿತ್ತು ಎಂದು ಹೇಳಿದ್ರಾ ಪುರಿಯ ಶಂಕರಾಚಾರ್ಯ


 

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights