FACT CHECK | ಮನುಸ್ಮೃತಿಯನ್ನು ಡಾ. ಬಿ. ಆರ್. ಅಂಬೇಡ್ಕರ್ ಹೊಗಳಿದ್ದರೆ?
ಭಾರತ ರತ್ನ ಡಾ. ಬಿ. ಆರ್. ಅಂಬೇಡ್ಕರ್ ಅವರು ಡಿಸೆಂಬರ್ 25, 1927 ರಂದು ಮಹಾಡ್ ಸತ್ಯಾಗ್ರಹದ ಸಮಯದಲ್ಲಿ ಮನುಸ್ಮೃತಿಯನ್ನು ಸಾರ್ವಜನಿಕವಾಗಿ ಸುಟ್ಟುಹಾಕಿದ್ದರು. ಆದ್ದರಿಂದ ಪ್ರತೀವರ್ಷ ಅಂಬೇಡ್ಕರ್ ಅನುಯಾಯಿಗಳು ಸೇರಿದಂತೆ ದೇಶದ ನಾಗರೀಕರು ʼಮನುಸ್ಮೃತಿ ದಹನ ದಿವಸʼವನ್ನು ಆಚರಿಸುತ್ತಾ ಬರುತ್ತಿದ್ದಾರೆ.

ಆದರೆ ಕೆಲವು ದಿನಗಳ ಹಿಂದೆ ಚಕ್ರವರ್ತಿ ಸೂಲಿಬೆಲೆ ತನ್ನ ಸಾಮಾಜಿಕ ಮಾಧ್ಯಮದಲ್ಲಿ “ಬಾಬಾ ಸಾಹೇಬರು ಮನುಸ್ಮೃತಿಯನ್ನು ಹೊಗಳಿದ ಆ ಸಂದರ್ಭ ಗೊತ್ತಾ ನಿಮಗೆ?” ಎಂಬ ಶೀರ್ಷಿಕೆಯಲ್ಲಿ ವಿಡಿಯೋವೊಂದನ್ನು ಹಂಚಿಕೊಂಡಿದ್ದು “ಡಾ. ಬಿ. ಆರ್ ಅಂಬೇಡ್ಕರ್ ಅವರು ಪಾರ್ಲಿಮೆಂಟಿನಲ್ಲಿ ಹಿಂದೂ ಬಿಲ್ ಕೋಡ್ ಕುರಿತು ಚರ್ಚಿಸುವಾಗ ಯಾಜ್ಞವಲ್ಕ್ಯ ಮತ್ತು ಮನುವನ್ನು ಅಂಬೇಡ್ಕರ್ ಅವರು ಹೊಗಳಿದ್ದಾರೆ. ಹಿಂದಿನಿಂದಲೂ ತಂದೆಯ ಆಸ್ತಿಯಲ್ಲಿ ನಾಲ್ಕನೇ ಒಂದು ಭಾಗದಲ್ಲಿ ಮಗಳಿಗೆ ಪಾಲು ಇದೆ ಎಂದು ಪ್ರತಿಪಾದಿಸಿದ್ದನ್ನು ಸಭೆಗೆ ವಿವರಿಸಿದ್ದಾರೆ,” ಈ ಮೂಲಕ ಮನುಸ್ಮೃತಿಯನ್ನು ಹೊಗಳಿದ್ದಾರೆ ಎಂದು ಪ್ರತಿಪಾದಿಸಲಾಗುತ್ತಿದೆ.
ಅಲ್ಲದೆ ಹೊಸದಿಗಂತ ಡಿಜಿಟಲ್ ಮಾಧ್ಯಮದವರು ಸಹ ವಿಡಿಯೋ ಒಂದನ್ನು ಹಂಚಿಕೊಂಡು “ನಿಮಗೆ ಗೊತ್ತಾ..? ಸಂವಿಧಾನದಲ್ಲೂ ಮನುಸ್ಮೃತಿ ಬಳಸಿದ್ದಾರೆ ಅಂಬೇಡ್ಕರ್..!” ಎಂದು ಕೆವಿಎನ್ ಸ್ವಾಮಿ ಅವರು ಪ್ರತಿಪಾದಿಸಿದ್ದಾರೆ.

ಹಾಗಿದ್ದರೆ ಈ ಪ್ರತಿಪಾದನೆ ನಿಜವೇ ? ಯಾವ ಸಂದರ್ಭದಲ್ಲಿ ಮತ್ತು ಯಾವ ಸನ್ನಿವೇಶದಲ್ಲಿ ಡಾ. ಬಾಬಾ ಸಾಹೇಬ್ ಅಂಬೇಡ್ಕರ್ ಅವರು ಯಾಜ್ಞವಲ್ಕ್ಯ ಮತ್ತು ಮನುವನ್ನು ಉಲ್ಲೇಖಿಸಿದ್ದಾರೆ ಮತ್ತು ಮನುಸ್ಮೃತಿಯ ಕುರಿತು ಅಂಬೇಡ್ಕರ್ ಅವರ ಅಭಿಪ್ರಾಯ ಏನಾಗಿತ್ತು ಎಂದು ಪರಿಶೀಲಿಸೋಣ.
ಫ್ಯಾಕ್ಟ್ಚೆಕ್ :
ಅಂಬೇಡ್ಕರ್ ಅವರು ತಮ್ಮ ಪ್ರಸಿದ್ಧ ಕೃತಿ ʼಜಾತಿ ವಿನಾಶʼ ದಲ್ಲಿ, “ಮನುಸ್ಮೃತಿಯನ್ನು ಜಾತಿ ಅಸಮಾನತೆಯನ್ನು ಪ್ರತಿಪಾದಿಸುವ ಮತ್ತು ತಾರತಮ್ಯವನ್ನು ಸಾಂಸ್ಥಿಕಗೊಳಿಸುವ ಪಠ್ಯವಾಗಿ ತೀಕ್ಷ್ಣವಾದ ವಿಮರ್ಶೆಯನ್ನು ಒದಗಿಸುತ್ತಾರೆ. ಅವರು ಮನುಸ್ಮೃತಿಯನ್ನು ಜಾತಿ ವ್ಯವಸ್ಥೆಯ ಮೂಲ ಮತ್ತು ಅಸ್ಪೃಶ್ಯತೆಯ ಮೂಲ ಎಂದು ವಿವರಿಸುತ್ತಾರೆ.”
ಡಾ. ಬಿ. ಆರ್ ಅಂಬೇಡ್ಕರ್ ಅವರು ಮನುಸ್ಮೃತಿಯ ಕಟು ವಿಮರ್ಶಕರಾಗಿದ್ದರು ಎಂದು ಅವರ ಬರಹಗಳಿಂದಲೇ ತಿಳಿದು ಬರುತ್ತದೆ. ಅವರು ತಮ್ಮ ಕೃತಿಗಳಾದ “The Annihilation of Caste” ( ಜಾತಿ ವಿನಾಶ, 1936), “Who Were the Shudras? (ಶೂದ್ರರು ಯಾರು?, 1946)”, “Riddles in Hinduism (ಹಿಂದೂ ಧರ್ಮದಲ್ಲಿನ ಒಗಟುಗಳು,1948)”, “The Revolution and Counter-Revolution in Ancient India (ಪ್ರಾಚೀನ ಭಾರತದಲ್ಲಿ ಕ್ರಾಂತಿ ಮತ್ತು ಪ್ರತಿ-ಕ್ರಾಂತಿ)” ಕೃತಿಗಳಲ್ಲಿ ಮನುಸ್ಮೃತಿಯ ಕುರಿತು ಮತ್ತು ಅದರಲ್ಲಿ ಪ್ರತಿಪಾದಿಸಲಾಗಿರುವ ಕಾನೂನು-ಕಟ್ಟಳೆಗಳ ಕುರಿತು ವಿಸ್ತಾರವಾಗಿ ಬರೆದಿದ್ದಾರೆ.
ತಮ್ಮ ʼಶೂದ್ರರು ಯಾರು?ʼ ಎಂಬ ಪುಸ್ತಕದಲ್ಲಿ,“ಅಂಬೇಡ್ಕರ್ ಅವರು ಶೂದ್ರ ಜಾತಿಯ ಮೂಲವನ್ನು ಪರಿಶೀಲಿಸುತ್ತಾರೆ ಮತ್ತು ಶೂದ್ರರ ಸ್ಥಾನಮಾನವನ್ನು ವ್ಯಾಖ್ಯಾನಿಸುವ ಮತ್ತು ಕೆಳಮಟ್ಟಕ್ಕೆ ತರುವಲ್ಲಿ ಮನುಸ್ಮೃತಿಯ ಪಾತ್ರವನ್ನು ಟೀಕಿಸುತ್ತಾರೆ. ಮನುಸ್ಮೃತಿಯು ಶೂದ್ರರನ್ನು ಶಿಕ್ಷಣ ಮತ್ತು ಅಧಿಕಾರದಿಂದ ಹೊರಗಿಡುವುದನ್ನು ಮಾನ್ಯ ಮಾಡಿದೆ ಎಂದು ಅವರು ವಾದಿಸುತ್ತಾರೆ, ಮತ್ತು ಅವರನ್ನು ಸಾಮಾಜಿಕವಾಗಿ ಕೀಳು ಎಂದು ಅದರಲ್ಲಿ ಬಿಂಬಿಸಲಾಗಿದೆ” ಎನ್ನುತ್ತಾರೆ.
ʼಹಿಂದೂ ಧರ್ಮದಲ್ಲಿನ ಒಗಟುಗಳುʼ ಎಂಬ ಪುಸ್ತಕದಲ್ಲಿ, “ಅಂಬೇಡ್ಕರ್ ಅವರು ಮನುಸ್ಮೃತಿ ಸೇರಿದಂತೆ ಹಿಂದೂ ತತ್ವಶಾಸ್ತ್ರ ಮತ್ತು ಧರ್ಮಗ್ರಂಥಗಳ ವಿವಿಧ ಅಂಶಗಳನ್ನು ಪ್ರಶ್ನಿಸುತ್ತಾರೆ ಮತ್ತು ಟೀಕಿಸುತ್ತಾರೆ. ಅವರು ಪಠ್ಯದಲ್ಲಿನ ವಿರೋಧಾಭಾಸಗಳನ್ನು ಮತ್ತು ಜಾತಿ ದಬ್ಬಾಳಿಕೆ ಮತ್ತು ಪಿತೃಪ್ರಧಾನ ವ್ಯವಸ್ಥೆ ಅಥವಾ ಪಿತೃಪ್ರಭುತ್ವವನ್ನು ಉಳಿಸಿಕೊಳ್ಳುವಲ್ಲಿ ಅದರ ಪಾತ್ರವನ್ನು ಎತ್ತಿ ತೋರಿಸುತ್ತಾರೆ.”
ಅಂಬೇಡ್ಕರ್ ಅವರ ಮತ್ತೊಂದು ಮುಖ್ಯವಾದ ಕೃತಿಯಾದ ʼಪ್ರಾಚೀನ ಭಾರತದಲ್ಲಿ ಕ್ರಾಂತಿ ಮತ್ತು ಪ್ರತಿ-ಕ್ರಾಂತಿʼಯಲ್ಲಿ,“ಮನುಸ್ಮೃತಿಯು ಬೌದ್ಧಧರ್ಮದ ಸಮಾನತೆಯ ತತ್ವಗಳನ್ನು ರದ್ದುಗೊಳಿಸಲು ಮತ್ತು ಬ್ರಾಹ್ಮಣ ಪ್ರಾಬಲ್ಯವನ್ನು ಜಾರಿಗೊಳಿಸಲು ಪ್ರಯತ್ನಿಸಿದ ಪ್ರತಿ-ಕ್ರಾಂತಿಕಾರಿ ಪಠ್ಯವನ್ನು ಹೇಗೆ ಪ್ರತಿನಿಧಿಸುತ್ತದೆ” ಎಂಬುದನ್ನು ವಿವರಿಸುತ್ತಾರೆ.
ಅಂಬೇಡ್ಕರ್ ಅವರು ಮನುಸ್ಮೃತಿಯನ್ನು ಹಿಂದೂ ಸಮಾಜದಲ್ಲಿನ ದಬ್ಬಾಳಿಕೆಯ ಸಾಮಾಜಿಕ ಕ್ರಮದ ಸಂಕೇತವೆಂದು ಪರಿಗಣಿಸಿದರು ಮತ್ತು ನೈತಿಕತೆ ಅಥವಾ ಆಡಳಿತಕ್ಕೆ ಮಾರ್ಗದರ್ಶಿಯಾಗಿ ಅದನ್ನು ಸಂಪೂರ್ಣವಾಗಿ ತಿರಸ್ಕರಿಸಿದರು. ಮನುಸ್ಮೃತಿಯು ಜಾತಿ ಆಧಾರಿತ ಸವಲತ್ತುಗಳನ್ನು ಗಟ್ಟಿಗೊಳಿಸುವ ಮತ್ತು ಬ್ರಾಹ್ಮಣ ಸಂಪ್ರದಾಯದ ವಿರುದ್ಧದ ಭಿನ್ನಾಭಿಪ್ರಾಯವನ್ನು ಹತ್ತಿಕ್ಕುವ ಸಾಧನವಾಗಿತ್ತು ಎಂದು ಅವರು ವಾದಿಸುತ್ತಾರೆ.

ಯಾಜ್ಞವಲ್ಕ್ಯ ಮತ್ತು ಮನುವಿನ ಕುರಿತು
ಮನು ಮತ್ತು ಯಾಜ್ಞವಲ್ಕ್ಯರು ಹಿಂದೂ ಕಾನೂನು ಮತ್ತು ನ್ಯಾಯಶಾಸ್ತ್ರದ ಬೆಳವಣಿಗೆಗೆ ಆರಂಭಿಕ ಕೊಡುಗೆಗಳನ್ನು ನೀಡಿದ್ದಾರೆ ಎಂದು ಅಂಬೇಡ್ಕರ್ ಗಮನಿಸಿದರು. ಅವರು ನಿರ್ದಿಷ್ಟವಾಗಿ,”ಮನುವಿಗೆ ಹೋಲಿಸಿದರೆ ಯಾಜ್ಞವಲ್ಕ್ಯ ಅವರ ಕಾನೂನು ವ್ಯಾಖ್ಯಾನಗಳು ಪ್ರಗತಿಪರವಾಗಿದ್ದವು” ಎಂದಿದ್ದಾರೆ. ಅಂಬೇಡ್ಕರ್ ಅವರು ಮನುಸ್ಮೃತಿಯಲ್ಲಿರುವ ಪ್ರತಿಯೊಂದೂ ಆಕ್ಷೇಪಾರ್ಹವಲ್ಲ ಮತ್ತು ನ್ಯಾಯ ಅಥವಾ ರಾಜ್ಯಕಾರ್ಯಕ್ಕೆ ಸಂಬಂಧಿಸಿದ ಕೆಲವು ತತ್ವಗಳು ಮೌಲ್ಯವನ್ನು ಹೊಂದಿವೆ ಎಂದು ಉಲ್ಲೇಖಿಸಿದ್ದಾರೆ. ಉದಾಹರಣೆಗೆ, “ಯಾಜ್ಞವಲ್ಕ್ಯನ ಸ್ಮೃತಿಯಲ್ಲಿ ಸ್ತ್ರೀಯರ ಉತ್ತರಾಧಿಕಾರದ ನಿಬಂಧನೆಗಳು ಸೀಮಿತವಾಗಿದ್ದರೂ, ಮನುಸ್ಮೃತಿಯಲ್ಲಿದ್ದಕ್ಕಿಂತ ಹೆಚ್ಚು ಮುಂದುವರಿದ ಅಂಶಗಳಿವೆ” ಎಂದಿದ್ದಾರೆ.
ಅಂಬೇಡ್ಕರ್ ಒಮ್ಮೆ “ಪ್ರಾಚೀನ ಭಾರತೀಯ ಇತಿಹಾಸದಲ್ಲಿ ಮನು ಮಹಾನ್ ವ್ಯಕ್ತಿ ಎಂದು ನಾನು ನಿರಾಕರಿಸುವುದಿಲ್ಲ, ಆದರೆ ಅವನ ಕಾನೂನುಗಳು ಇಂದಿನ ಪ್ರಜಾಪ್ರಭುತ್ವ ಸಮಾಜಕ್ಕೆ ಸರಿಹೊಂದುವುದಿಲ್ಲ.” ಎಂದು ಹೇಳಿದ್ದಾರೆ.
ಮನುವಿನ ಅಧಿಕಾರವನ್ನು ಉಲ್ಲೇಖಿಸಿ ಸಂಪ್ರದಾಯವಾದಿಗಳು ಹಿಂದೂ ಕೋಡ್ ಬಿಲ್ ಅನ್ನು ವಿರೋಧಿಸಿದಾಗ, ಹಿಂದೂ ಕಾನೂನುಗಳು ಕಾಲಾನಂತರದಲ್ಲಿ ವಿಕಸನಗೊಂಡಿವೆ ಎಂದು ವಾದಿಸಲು ಅಂಬೇಡ್ಕರ್ ಅವರು ಯಾಜ್ಞವಲ್ಕ್ಯರ ಪ್ರಗತಿಪರ ಅಂಶಗಳನ್ನು ಜಾಣತನದಿಂದ ಬಳಸಿದರು, ಇದು ಹೆಚ್ಚಿನ ಸುಧಾರಣೆಗಳ ಸಾಧ್ಯತೆ ಮತ್ತು ಅಗತ್ಯವನ್ನು ಸಾಬೀತುಪಡಿಸಿತು. ಪ್ರಾಚೀನ ಗ್ರಂಥಗಳಲ್ಲಿಯೂ ಸಹ ಸುಧಾರಣೆಯು ಹಿಂದೂ ನ್ಯಾಯಶಾಸ್ತ್ರದೊಂದಿಗೆ ಸ್ಥಿರವಾಗಿದೆ ಎಂದು ಅವರು ಒತ್ತಿ ಹೇಳಿದರು.
ಚರ್ಚೆಗಳಲ್ಲಿ ಅಂಬೇಡ್ಕರ್ ಅವರ ಪ್ರಮುಖ ವಾದ
“ಮನು ಮತ್ತು ಯಾಜ್ಞವಲ್ಕ್ಯರಂತವರ ಪ್ರಾಚೀನ ಕಾನೂನುಗಳು ಹಿಂದೂ ಸಮಾಜವನ್ನು ರೂಪಿಸುವಲ್ಲಿ ಪಾತ್ರವಹಿಸಿದೆ, ಆದರೆ ಅವರ ಕೃತಿಗಳನ್ನು ದೋಷರಹಿತ ಅಥವಾ ಶಾಶ್ವತವೆಂದು ಪರಿಗಣಿಸಬಾರದು” ಎಂದು ಅಂಬೇಡ್ಕರ್ ವಾದಿಸಿದರು. “ಸಮಾನತೆ ಮತ್ತು ನ್ಯಾಯದ ಮೌಲ್ಯಗಳನ್ನು ಪ್ರತಿಬಿಂಬಿಸಲು ಕಾನೂನುಗಳು ವಿಕಸನಗೊಳ್ಳಬೇಕು”ಎಂದರು. ಹಿಂದೂ ಕೋಡ್ ಬಿಲ್ ಸಕಾರಾತ್ಮಕ ಅಂಶಗಳನ್ನು (ಉದಾಹರಣೆಗೆ, ಯಾಜ್ಞವಲ್ಕ್ಯರ ಪ್ರಗತಿಪರ ಉತ್ತರಾಧಿಕಾರ ಕಾನೂನುಗಳು) ಸಂರಕ್ಷಿಸುವಾಗ ಸಂಪ್ರದಾಯದ ಪ್ರತಿಗಾಮಿ ಅಂಶಗಳನ್ನು (ಉದಾಹರಣೆಗೆ, ಮನುಸ್ಮೃತಿಯ ಜಾತೀಯತೆ ಮತ್ತು ಸ್ತ್ರೀದ್ವೇಷ) ತಿರಸ್ಕರಿಸುತ್ತದೆ ಎಂದು ಅವರು ಪ್ರತಿಪಾದಿಸಿದರು.
“ಮನುಸ್ಮೃತಿಯಲ್ಲಿರುವಂತಹ ಹಳತಾದ ಕಾನೂನುಗಳಿಗೆ ಅಂಟಿಕೊಳ್ಳುವುದು ಪ್ರಜಾಪ್ರಭುತ್ವ ಮತ್ತು ಸಮಾನತೆಯ ಸಮಾಜವಾಗಿ ಭಾರತದ ಪ್ರಗತಿಗೆ ಅಡ್ಡಿಯಾಗುತ್ತದೆ” ಎಂದು ಅಂಬೇಡ್ಕರ್ ಒತ್ತಾಯಿಸಿದರು. ಅಂಬೇಡ್ಕರ್ ಅವರ ಪ್ರಯತ್ನಗಳ ಹೊರತಾಗಿಯೂ, ಹಿಂದೂ ಕೋಡ್ ಬಿಲ್ ಅಂದಿನ ಸಂಪ್ರದಾಯವಾದಿಗಳಿಂದ ತೀವ್ರ ವಿರೋಧವನ್ನು ಎದುರಿಸಿತು ಮತ್ತು ಅಂತಿಮವಾಗಿ ದುರ್ಬಲಗೊಳಿಸಲಾಯಿತು. ಈ ಭ್ರಮನಿರಸನವು 1951 ರಲ್ಲಿ ಅಂಬೇಡ್ಕರ್ ಅವರು ಕಾನೂನು ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡಲು ಕಾರಣವಾಯಿತು. ಆದಾಗ್ಯೂ, ಅವರ ವಾದಗಳು ಹಿಂದೂ ವೈಯಕ್ತಿಕ ಕಾನೂನಿನಲ್ಲಿ ನಂತರದ ಸುಧಾರಣೆಗಳಿಗೆ ಅಡಿಪಾಯವನ್ನು ಹಾಕಿದವು.

ಹಿಂದೂ ಕೋಡ್ ಬಿಲ್ ಚರ್ಚೆಗಳ ಸಂದರ್ಭದಲ್ಲಿ ಡಾ. ಅಂಬೇಡ್ಕರ್ ಅವರು ಮನು ಮತ್ತು ಯಾಜ್ಞವಲ್ಕ್ಯರನ್ನು ಒಪ್ಪಿಕೊಂಡಿರುವುದು ಪ್ರಗತಿಪರ ಸುಧಾರಣೆಗಳಿಗೆ ವ್ಯಾಪಕವಾದ ಸ್ವೀಕಾರವನ್ನು ಪಡೆಯುವ ಕಾರ್ಯತಂತ್ರದ ಪ್ರಯತ್ನವಾಗಿ. ಇದರರ್ಥ ಮನು ಮತ್ತು ಯಾಜ್ಞವಲ್ಕ್ಯರನ್ನು ಪ್ರಶಂಸಿಸಿ ಸಂಪೂರ್ಣವಾಗಿ ಒಪ್ಪಿಕೊಳ್ಳುವುದಾಗಿರಲಿಲ್ಲ. ಜಾತಿ ಮತ್ತು ಲಿಂಗ ತಾರತಮ್ಯವನ್ನು ಮಾನ್ಯಮಾಡುವ ಅವರ ಬೋಧನೆಗಳ ದಬ್ಬಾಳಿಕೆಯ ಅಂಶಗಳನ್ನು ತಿರಸ್ಕರಿಸಿ ಅವರುಗಳ ಐತಿಹಾಸಿಕ ಮಹತ್ವವನ್ನು ಗುರುತಿಸುವುದಾಗಿತ್ತು. ಮತ್ತು ಭಾರತೀಯ ಸಂವಿಧಾನದಲ್ಲಿ ಪ್ರತಿಪಾದಿಸಲಾದ ಸಮಾನತೆ ಮತ್ತು ನ್ಯಾಯದ ತತ್ವಗಳೊಂದಿಗೆ ಹಿಂದೂ ಕಾನೂನನ್ನು ಜೋಡಿಸುವುದು ಅವರ ಅಂತಿಮ ಗುರಿಯಾಗಿತ್ತು.
ಒಟ್ಟಾರೆಯಾಗಿ ಹೇಳುವುದಾದರೆ, ಬಾಬಾ ಸಾಹೇಬ್ ಅಂಬೇಡ್ಕರ್ ಅವರ ಈ ಮೇಲಿನ ಎಲ್ಲಾ ಸೂಕ್ಷ್ಮ ವಿಚಾರಗಳನ್ನು ಮರೆಮಾಚಿ ಅಂಬೇಡ್ಕರ್ ಮನುಸ್ಮೃತಿಯನ್ನು ಹೊಗಳಿದ್ದರು, ಒಪ್ಪಿಕೊಂಡಿದ್ದರು ಮತ್ತು ಸಂವಿಧಾನದಲ್ಲಿ ಮನುಸ್ಮೃತಿಯನ್ನು ಅಳವಡಿಸಿದ್ದಾರೆ ಎಂದು ವಾದಿಸುವುದರಿಂದ ಜನರನ್ನು ದಾರಿತಪ್ಪಿಸುವ ಕ್ರಮ ಎಂದರೆ ತಪ್ಪಾಗಲಾರಾದು. ಹಾಗಾಗಿ ಚಕ್ರವರ್ಥಿ ಸೂಲಿಬೆಲೆ ಹೇಳಿಕೆ ಸುಳ್ಳು ಮತ್ತು ದಾರಿತಪ್ಪಿಸುವಂತಿದೆ.
ನಿಮ್ಮ ಸುತ್ತಮುತ್ತ ಮತ್ತು ಸಾಮಾಜಿಕ ಜಾಲತಾಣಗಳಲ್ಲಿ ಯಾವುದೇ ಸುದ್ದಿಯು ಸುಳ್ಳು ಎಂದು ನಿಮಗೆ ಸಂದೇಹ ಬಂದಿದ್ದರೆ ಅದನ್ನು Ensuddi.com ವಾಟ್ಸಾಪ್ ನಂ 9108969301 ಗೆ ತಲುಪಿಸಿ. ನಾವು ಫ್ಯಾಕ್ಟ್ಚೆಕ್ ಮಾಡಿ ಸತ್ಯ ನಿಮ್ಮೆದುರು ಇಡುತ್ತೇವೆ
ಇದನ್ನು ಓದಿರಿ : FACT CHECK | ಮೊಹಮ್ಮದ್ ಶಮಿ ಮತ್ತು ಸಾನಿಯಾ ಮಿರ್ಜಾ ಜೊತೆಯಾಗಿರುವ ಫೋಟೊದ ಅಸಲೀಯತ್ತೇನು ಗೊತ್ತೇ?

